ಕೊಲ್ಲಂ ( ಕೇರಳ ) : ಪಿಡಿಪಿ ಪಕ್ಷದ ನಾಯಕ ಅಬ್ದುಲ್ ನಾಸಿರ್ ಮದನಿ ಮತ್ತು ಅವರ ಕುಟುಂಬದ ಜೊತೆ ನಡೆದಂತಹ ನ್ಯಾಯ ನಿರಾಕರಣೆ ದೇಶದಲ್ಲಿ ಇನ್ನಾರ ಜೊತೆಯಲ್ಲೂ ಆಗಿಲ್ಲ ಎಂದು ಮಾನವ ಹಕ್ಕುಗಳ ಆಯೋಗದ ಮಾಜಿ ಕಾರ್ಯಾಧ್ಯಕ್ಷ ಡಾ : ಎಸ್ . ಬಲರಾಮನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ . ಜಸ್ಟೀಸ್ ಫಾರ್ ಮದನಿ ಫೋರಂ ಕೊಲ್ಲಂ ನಲ್ಲಿ ಹಮ್ಮಿಕೊಂಡ ಕಾರ್ಯಕ್ರಮವೊಂದರಲ್ಲಿ ಫ್ರೀ ಮದನಿ ಬುಲೆಟಿನ್ ಇಂಗ್ಲೀಷ್ ಆವೃತ್ತಿಯೊಂದನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು .
ಜಸ್ಟೀಸ್ ಫಾರ್ ಮದನಿ ಫೋರಂ ಸಂಘಟನೆಯ ಅಧ್ಯಕ್ಷ ಹಾಗೂ ಮಾಜಿ ಸಂಸದ ಸೆಬಾಸ್ಟಿಯನ್ ಪೌಲ್ ಅಂಗವಿಕಲರಾದ ಮದನಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿ ಕಳೆಯುತ್ತಿದ್ದಾರೆ . ಅವರ ಪರ ವಾದ ಮಾಡುವಂತೆ ಹಲವು ಪ್ರಖ್ಯಾತ ವಕೀಲರನ್ನು ಸಂಪರ್ಕಿಸಿದಾಗ ಅವರು ಕೇಸ್ ತೆಗೆದುಕೊಳ್ಳಲು ನಿರಾಕರಿಸಿದರು . ಈ ಕೇಸ್ ತೆಗೆದುಕೊಂಡರೆ ನ್ಯಾಯಾಲಯದಲ್ಲಿ ಹಾಗೂ ಸಮಾಜದಲ್ಲಿ ಒಂದು ರೀತಿಯ ತಪ್ಪಿತಸ್ಥ ಭಾವನೆಯಿಂದ ಇತರರು ನೋಡುತ್ತಾರೆ ಎಂಬ ಉದ್ದೇಶದಿಂದ ಅವರು ವಕಾಲತ್ತು ವಹಿಸಲು ನಿರಾಕರಿಸಿದರು ಎಂದರು . ಮದನಿ ಅವರನ್ನು ಬೆಂಗಳೂರು ಬಾಂಬ್ ಸ್ಪೋಟದ ಮೂವತ್ತೊಂದನೇ ಆರೋಪಿ ಎಂಬ ಆರೋಪದ ಮೇಲೆ ಆಗಸ್ಟ್ ೨೦೧೦ ರಂದು ಬಂಧಿಸಿ ಬೆಂಗಳೂರಿನ ಜೈಲಿನಲ್ಲಿಡಲಾಗಿದೆ. ಇಲ್ಲಿ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಅವರ ಅರ್ಜಿ ತಿರಸ್ಕೃತವಾದ ಕಾರಣ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲಾಗಿದ್ದು ಇನ್ನೂ ಅದು ವಿಚಾರಣೆಗೆ ಬರಬೇಕಿದೆ.