Posted on November 9, 2011 by ಅಶ್ರಫ್ ಮಂಜ್ರಾಬಾದ್, ಸಕಲೇಶಪುರ
ಟ್ರಿಪೋಲಿ : ಲಿಬಿಯಾದ ಮಾಜಿ ಸರ್ವಾಧಿಕಾರಿ ಗಡಾಫಿ ಆಡಳಿತ ಒಂದು ರೀತಿಯಲ್ಲಿ ಲಿಬಿಯಾವನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದ್ದರೆ ಅವರ ರಕ್ಷಣಾ ಶೈಲಿ ಇನ್ನೊಂದು ರೀತಿಯಲ್ಲಿ ವಿಸ್ಮಯ ಮೂಡಿಸುವಂತಿತ್ತು. ಗಡಾಫಿ ಸುತ್ತಲೂ ಸೇನಾ ಸಮವಸ್ತ್ರ ಧರಿಸಿದ ಮಹಿಳಾ ಅಂಗರಕ್ಷಕರು ಇರುತ್ತಿದ್ದರು. ಹಾಗಂತ ಪುರುಷರು ಇರಲಿಲ್ಲ ಅಂತಲ್ಲ. ಪುರುಷ ಅಂಗರಕ್ಷಕರಿಗಿಂತಲೂ ಹೆಚ್ಚಾಗಿ ಮಹಿಳಾ ಅಂಗರಕ್ಷಕಿಯರು ಗಡಾಫಿ ಅಕ್ಕ ಪಕ್ಕ ಕಂಡು ಬರುತ್ತಿದ್ದರು.
ಯಾವುದೇ ಸಾರ್ವಜನಿಕ ಸಮಾರಂಭವಾಗಲೀ ಅಥವಾ ಲಿಬಿಯಾಕ್ಕೆ ಬರುವ ವಿದೇಶೀ ರಾಷ್ಟ್ರದ ಅಧ್ಯಕ್ಷರನ್ನು ಸ್ವಾಗತಿಸುವ ಕಾರ್ಯಕ್ರಮವಾಗಲೀ ಅಲ್ಲಿ ಗಡಾಫಿ ಸುತ್ತ ಮುತ್ತ ಮಹಿಳಾ ಅಂಗರಕ್ಷಕಿಯರು ಇರುತ್ತಿದ್ದರು. ಗಡಾಫಿ ನ್ಯಾಟೋ ಪಡೆ ಹಾಗೂ ಬಂಡುಕೋರರ ಕೈಗೆ ಸಿಕ್ಕು ಹತನಾದ ನಂತರ ಆ ಸುಂದರಿ ಮಹಿಳಾ ಅಂಗರಕ್ಷಕಿಯರು ಏನಾದರು ? ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಬಂಡುಕೋರ ಸೈನಿಕರು ಗಡಾಫಿ ಹತ್ಯೆಯ ನಂತರ ಆತನ ಅಂಗರಕ್ಷಕಿಯರನ್ನೂ ಅತ್ಯಂತ ಭೀಬತ್ಸವಾಗಿ ಕೊಂದಿದ್ದಾರೆ. ಈ ಕುರಿತ ಚಿತ್ರಗಳನ್ನು ವೆಬ್ ಸೈಟ್ ಒಂದು ಬಿಡುಗಡೆ ಮಾಡಿದೆ. ಹೆಚ್ಚಿನ ಚಿತ್ರಗಳಲ್ಲಿ ಆ ಮಹಿಳಾ ಸೈನಿಕರಿಗೆ ಚಿತ್ರಹಿಂಸೆ ಕೊಟ್ಟು ಕೊಂದ ಬರ್ಬರತೆ ಎದ್ದು ಕಾಣುತ್ತಿದೆ. ಈ ರೀತಿ ಬಂಡುಕೋರರು ಗಡಾಫಿ ಜೊತೆಗೆ ಆತನ ಮಹಿಳಾ ಸೈನಿಕರನ್ನೂ ಹತ್ಯೆ ಮಾಡಿ ತಮ್ಮ ಅಮಾನವೀಯ ಮನಸ್ಥಿತಿಯನ್ನು ಪ್ರದರ್ಶಿಸಿದ್ದಾರೆ . ಗಡಾಫಿ ಮಹಿಳಾ ಅಂಗರಕ್ಷಕಿಯೊಬ್ಬಳ ಮೃತ ಚಿತ್ರವನ್ನು ಕೆಳಗೆ ಪ್ರಕಟಿಸಿದ್ದೇವೆ.
ಹೆಚ್ಚಿನ ಚಿತ್ರಗಳು ಪತ್ರಿಕೆಯಲ್ಲಿ ಪ್ರಕಟಿಸುವ ಸ್ಥಿತಿಯಲ್ಲಿ ಇಲ್ಲ. ಅಷ್ಟೊಂದು ಭೀಕರವಾಗಿದೆ. ಆ ಕಾರಣಕ್ಕಾಗಿ ವೆಬ್ ಸೈಟ್ ಬಿಡುಗಡೆ ಮಾಡಿರುವ ಚಿತ್ರಗಳ ಪೈಕಿ ಒಂದು ಚಿತ್ರವನ್ನು ಮಾತ್ರ ಹಾಕಲಾಗಿದೆ.