Powered By Blogger

Monday, 5 September 2011

MANGALOREANS FRIEND DELLHI BELLHI IN SAUDI ARABIA

ಕುರ್ ಆನ್ ಮುಸ್ಲಿಮೇತರರನ್ನು ಕೊಲ್ಲುವಂತೆ ಆದೇಶಿಸುತ್ತದೆಯೇ?


ಕುರ್‌ಆನ್‌ನ ಸೂಕ್ತಿಗಳನ್ನು ಸಂದರ್ಭಗಳಿಂದ ಬೇರ್ಪಡಿಸಿ (out of context) ಜನರಲ್ಲಿ ಇಸ್ಲಾಮಿನ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡುವ ಕಾರ್ಯದಲ್ಲಿ ಒಂದು ವರ್ಗವು ಸದಾ ನಿರತವಾಗಿದೆ. ಕಾಫಿರರನ್ನು ಕಂಡಲ್ಲಿ ವಧಿಸಿರಿ ಎಂದು ಕುರ್ ಆನ್ ಹೇಳುತ್ತದೆ ಎಂಬುದಕ್ಕೆ ಪುರಾವೆಯಾಗಿ ಅವರು ಕುರ್‌ಆನಿನ 2ನೇ ಅಧ್ಯಾಯದ 190 ಮತ್ತು 9ನೇ ಅಧ್ಯಾಯದ 5ನೇ ಸೂಕ್ತಿಗಳನ್ನು ತಲೆಬಾಲ ಕತ್ತರಿಸಿ ತೋರಿಸುತ್ತಾರೆ.

2ನೇ ಅಧ್ಯಾಯದ 190-191ನೇ ಸೂಕ್ತಿಗಳು ಹೀಗಿವೆ:

ನಿಮ್ಮೊಂದಿಗೆ ಯುದ್ಧ ಮಾಡುವವರೊಂದಿಗೆ ನೀವೂ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ. ಆದರೆ ನೀವು ಹದ್ದುಮೀರದಿರಿ. ಖಂಡಿತವಾಗಿಯೂ ಹದ್ದುಮೀರುವವರನ್ನು ಅಲ್ಲಾಹು ಇಷ್ಟಪಡುವುದಿಲ್ಲ. ನೀವು ಅವರನ್ನು ಕಂಡಲ್ಲಿ ವಧಿಸಿರಿ ಮತ್ತು ಅವರು ನಿಮ್ಮನ್ನು ಎಲ್ಲಿಂದ ಹೊರಗಟ್ಟಿದರೋ ಅಲ್ಲಿಂದ ನೀವೂ ಅವರನ್ನು ಹೊರಗಟ್ಟಿರಿ. ಕ್ಷೋಭೆಯು ಕೊಲೆಗಿಂತಲೂ ಭೀಕರವಾಗಿದೆ. ಆದರೆ ಮಸ್ಜಿದುಲ್ ಹರಾಮ್‌ನ ಬಳಿಯಲ್ಲಿ ಅವರು ನಿಮ್ಮೊಂದಿಗೆ ಹೋರಾಡುವವರೆಗೆ ನೀವು ಅವರೊಂದಿಗೆ ಹೋರಾಡದಿರಿ. ಅವರೇನಾದರೂ ನಿಮ್ಮ ಮೇಲೆ ದಾಳಿ ಮಾಡಿದರೆ ಅವರನ್ನು ಕೊಂದು ಬಿಡಿರಿ. ಸತ್ಯನಿಷೇಧಿಗಳಿಗೆ ಹೀಗೆ ಪ್ರತಿಫಲವನ್ನು ನೀಡಲಾಗುವುದು. (2/190-191)

ಮೊದಲ ವಚನಗಳಲ್ಲಿ ಶತ್ರುಗಳು ಮುಸ್ಲಿಮರ ವಿರುದ್ಧ ದಾಳಿ ನಡೆಸುವಾಗ ಮುಸ್ಲಿಮರು ಕೈಗೊಳ್ಳಬೇಕಾದ ಕ್ರಮಗಳನ್ನು ವಿವರಿಸಿದ ಬಳಿಕ ಒಂದು ವೇಳೆ ಶತ್ರುಗಳು ಶಾಂತಿಪ್ರಸ್ತಾಪವನ್ನು ಮುಂದಿಟ್ಟರೆ ಅದನ್ನು ಸ್ವೀಕರಿಸಬೇಕೆಂದು ಆ ಬಳಿಕದ ಸೂಕ್ತಿಯಲ್ಲಿ ಕುರ್‌ಆನ್ ಕಲಿಸುತ್ತದೆ:

ಅವರೇನಾದರೂ (ಯುದ್ಧವನ್ನು) ಸ್ಥಗಿತಗೊಳಿಸಿದರೆ ಅಲ್ಲಾಹು ಅತ್ಯಂತ ಕ್ಷಮಿಸುವವನೂ ಕರುಣಾಮಯಿಯೂ ಆಗಿರುವನು. ಗಲಭೆಯು ಇಲ್ಲದಾಗುವವರೆಗೆ ಮತ್ತು ಧರ್ಮವು ಅಲ್ಲಾಹನಿಗಾಗುವವರೆಗೆ ಅವರೊಂದಿಗೆ ಹೋರಾಡಿರಿ. ಅವರೇನಾದರೂ ಸ್ಥಗಿತಗೊಳಿಸಿದರೆ ಆಗ ಅಕ್ರಮಿಗಳ ಹೊರತು ಯಾರ ಮೇಲೂ ಹಗೆತನವನ್ನು ಇಟ್ಟುಕೊಳ್ಳದಿರಿ. (2/192-193)

ಅದೇ ರೀತಿ 9ನೇ ಅಧ್ಯಾಯದ 5ನೇ ಸೂಕ್ತಿಯಲ್ಲಿ ಹೀಗಿದೆ:

ಪವಿತ್ರ ತಿಂಗಳುಗಳು ಕಳೆದರೆ ನೀವು ಬಹುದೇವಾರಾಧಕರನ್ನು ಕಂಡಲ್ಲಿ ವಧಿಸಿರಿ, ಅವರನ್ನು ಸೆರೆಹಿಡಿಯಿರಿ, ಮುತ್ತಿಗೆ ಹಾಕಿರಿ ಮತ್ತು ಅವರಿಗಾಗಿ ಹೊಂಚುಹಾಕಿ ಕುಳಿತುಕೊಳ್ಳಿರಿ. ಅವರೇನಾದರೂ ಪಶ್ಚಾತ್ತಾಪ ಪಟ್ಟು ನಮಾಝನ್ನು ಸಂಸ್ಥಾಪಿಸಿ ಝಕಾತ್ ನೀಡುವುದಾದರೆ ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿರಿ. ಅಲ್ಲಾಹು ಅತ್ಯಂತ ಕ್ಷಮಿಸುವವನೂ ಕರುಣಾಮಯಿಯೂ ಆಗಿರುವನು. (9/5)

ವಿಮರ್ಶಕರು ಆರಿಸಿಕೊಳ್ಳುವ ವಧಾ ಸೂಕ್ತಿಗಳು ಕುರ್‌ಆನಿನಲ್ಲಿ ಇರುವುದು ಈ ಮೇಲೆ ಹೇಳಿದ ರೀತಿಯಾಗಿದೆ. ಈಗ ಈ ಸೂಕ್ತಿಗಳನ್ನು ಸ್ವಲ್ಪ ವಿವರವಾಗಿ ತಿಳಿಯೋಣ.

2ನೇ ಅಧ್ಯಾಯದಲ್ಲಿ ಪ್ರಸ್ತಾಪಿಸಲಾದ ಸೂಕ್ತಿಯು ನಿರಂತರ ದೌರ್ಜನ್ಯಕ್ಕೀಡಾದ ಬಳಿಕ ಮುಸ್ಲಿಮರಿಗೆ ದೊರಕಿದ ಮೊತ್ತಮೊದಲ ಯುದ್ಧಾನುಮತಿಯಾಗಿದ್ದರೆ 9ನೇ ಅಧ್ಯಾಯದಲ್ಲಿರುವ ಸೂಕ್ತಿಗಳು ಅಂದು ಮುಸ್ಲಿಮರು ಮತ್ತು ಬಹುದೇವಾರಾಧಕರ ಮಧ್ಯೆ ಜಾರಿಯಲ್ಲಿದ್ದ ಒಂದು ಕರಾರಿನ ಕುರಿತು ತಿಳಿಸಿಕೊಡುತ್ತದೆ. ಬಹುದೇವಾರಾಧಕರು ಕರಾರಿನ ಶರತ್ತುಗಳನ್ನು ಉಲ್ಲಂಘಿಸಿದಾಗ ತಮ್ಮ ವರ್ತನೆಗಳನ್ನು ತಿದ್ದಿಕೊಳ್ಳಲು ಅವರಿಗೆ ಕಾಲಾವಕಾಶವನ್ನು ನೀಡಲಾಯಿತು. ಅನ್ಯಥಾಃ ಅವರ ಮೇಲೆ ಯುದ್ಧ ಘೋಷಿಸಲಾಗುವುದೆಂದು ಸಾರಲಾಯಿತು.

ಇವೆರಡು ಸೂಕ್ತಿಗಳೂ ಅವತೀರ್ಣಗೊಂಡಿದ್ದು ಯುದ್ಧದ ಹಿನ್ನೆಲೆಯಲ್ಲಾಗಿತ್ತು. ಒಂದು ದೇಶವು ಯುದ್ಧನಿರತವಾಗಿರುವ ಸಂದರ್ಭದಲ್ಲಿ ಆ ದೇಶವು ಅಥವಾ ಅದರ ಸೇನಾಧಿಪತಿಯು ತನ್ನ ಸೈನಿಕರನ್ನು ಹುರಿದುಂಬಿಸುವುದಕ್ಕಾಗಿ ನೀವು ಶತ್ರುಗಳನ್ನು ಕಂಡಲ್ಲಿ ಕೊಲ್ಲಿರಿ ಎಂದು ಆದೇಶಿಸುವುದನ್ನು ಭಯೋತ್ಪಾದನೆಗೆ ಪ್ರೇರಣೆಯೆಂದು ಕರೆಯಲಾದೀತೇ? ಭಾರತ ಮತ್ತು ಪಾಕಿಸ್ಥಾನದ ಮಧ್ಯೆ ಯುದ್ಧ ನಡೆಯುವಾಗ ನಮ್ಮ ಸೇನಾಧಿಪತಿಯು ಪಾಕಿಸ್ಥಾನಿ ಸೈನಿಕರನ್ನು ಕಂಡಲ್ಲಿ ವಧಿಸಿರಿ ಎಂದು ನಮ್ಮ ಸೈನಿಕರಿಗೆ ಆದೇಶಿಸಿದರೆ ಅದು ಪಾಕಿಸ್ಥಾನಿಗಳ ಮೇಲೆ ಭಯೋತ್ಪಾದನೆ ನಡೆಸುವುದಕ್ಕೆ ಪುರಾವೆಯಾದೀತೇ? ಅದೇ ರೀತಿ ಅಮೆರಿಕ ಮತ್ತು ವಿಯಟ್ನಾಂ ಮಧ್ಯೆ ಯುದ್ಧ ನಡೆದಿತ್ತು. ಆ ಸಮಯದಲ್ಲಿ ಅಮೆರಿಕನ್ ಸೇನಾ ಮುಖ್ಯಸ್ಥರು ವಿಯಟ್ನಾಮಿಗಳನ್ನು ಕಂಡಲ್ಲಿ ಕೊಲ್ಲಿರಿ ಎಂದಿದ್ದನ್ನು ಇಂದು ಯಾರಾದರೂ ಯುದ್ಧದ ಹಿನ್ನೆಲೆಯನ್ನು ಮರೆಮಾಚಿಕೊಂಡು ಹೇಳಿದಲ್ಲಿ ಖಂಡಿತವಾಗಿಯೂ ಅದು ಅಮೆರಿಕನ್ ಸೇನಾ ಮುಖ್ಯಸ್ಥರನ್ನು ಒಬ್ಬ ಭಯೋತ್ಪಾದಕ ಅಥವಾ ಕಟುಕನಾಗಿ ಬಿಂಬಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

ಕುರ್‌ಆನ್‌ನಲ್ಲಿರುವ ವಧಾ ಸೂಕ್ತಿಗಳನ್ನು ಇಸ್ಲಾಮಿನ ವಿರುದ್ಧವಾಗಿ ಪ್ರಚಾರ ಮಾಡಿದವರಲ್ಲಿ ಅರುಣ್ ಶೌರಿಯೂ ಒಬ್ಬರು. ತಮ್ಮ ದಿ ವರ್ಲ್ಡ್ ಆಫ್ ಫತ್ವಾಸ್ (The World of Fatwas) ಎಂಬ ಗ್ರಂಥದಲ್ಲಿ ಅವರು ಕುರ್‌ಆನಿನ 9ನೇ ಅಧ್ಯಾಯದ ಇದೇ 5ನೇ ಸೂಕ್ತಿಯನ್ನೇ ಆರಿಸಿರುವರು.

ನೀವು ಬಹುದೇವಾರಾಧಕರನ್ನು ಕಂಡಲ್ಲಿ ಕೊಲ್ಲಿರಿ (ಕುರ್ ಆನ್ 9/5)

ತಮಾಷೆಯೆಂದರೆ ಅವರು 5ನೇ ಸೂಕ್ತಿಯ ಬಳಿಕ 6ನೇ ಸೂಕ್ತಿಯನ್ನು  ಉಲ್ಲೇಖಿಸದೇ ನೇರವಾಗಿ 7ನೇ ಸೂಕ್ತಿಗೆ ಜಿಗಿದಿರುವರು. ಕಾರಣವೇನೆಂದರೆ 6ನೇ ಸೂಕ್ತಿಯಲ್ಲಿ ವಿಮರ್ಶಕರ ದುರ್ವಾದಗಳಿಗೆ ಸಮರ್ಪಕವಾದ ಉತ್ತರವಿದೆ. ಆ ಸೂಕ್ತಿಯಲ್ಲಿ ಅಲ್ಲಾಹು ತನ್ನ ಪ್ರವಾದಿಯೊಂದಿಗೆ ಹೀಗೆ ಆದೇಶಿಸುತ್ತಾನೆ.

ಬಹುದೇವಾರಾಧಕರ (ಶತ್ರುಗಳ) ಪೈಕಿ ಯಾರಾದರೂ ನಿನ್ನೊಂದಿಗೆ ಆಶ್ರಯವನ್ನು ಬೇಡಿದರೆ ಅವನಿಗೆ ಆಶ್ರಯ ನೀಡು. ಅವನು ಅಲ್ಲಾಹನ ವಚನವನ್ನು ಕೇಳುವಂತಾಗಲಿ. ನಂತರ ಅವನನ್ನು ಅವನಿಗೆ ಅತ್ಯಂತ ಸುರಕ್ಷಿತವಾಗಿರುವ ಸ್ಥಳಕ್ಕೆ ತಲುಪಿಸು. ಅದು ಯಾಕೆಂದರೆ ಅವರು ತಿಳುವಳಿಕೆಯಿಲ್ಲದ ಜನತೆಯಾಗಿರುವುದರಿಂದಾಗಿದೆ. (9/6)

ನಾವು ಪ್ರಸ್ತುತ ವಿದ್ಯಮಾನಗಳನ್ನು ಅವಲೋಕಿಸಿದಲ್ಲಿ ಅತ್ಯಂತ ಸೌಮ್ಯ ಹಾಗೂ ಶಾಂತಿಪ್ರಿಯ ಸೇನಾಧಿಕಾರಿ ಕೂಡಾ ಹೆಚ್ಚೆಂದರೆ ಶರಣಾದ ಸೈನಿಕನನ್ನು ಸ್ವತಂತ್ರವಾಗಿ ಓಡಿಹೋಗಲಷ್ಟೇ ಬಿಡುವನು. ಆದರೆ ಅವನನ್ನು ಸುರಕ್ಷಿತ ತಾಣಕ್ಕೆ ತಲಪಿಸಿರಿ ಎಂಬ ಆಜ್ಞೆಯನ್ನು ಎಂದೂ ನೀಡಲಾರ. ಅವನೆಷ್ಟು ಶಾಂತಿಪ್ರಿಯನಾಗಿದ್ದರೂ ಸರಿಯೇ. ಕುರ್‌ಆನ್ ಜಗತ್ತಿಗೆ ಶಾಂತಿ, ಕರುಣೆಯ ಪಾಠವನ್ನು ಕಲಿಸಲು ಅವತೀರ್ಣಗೊಂಡ ಗ್ರಂಥವಾಗಿದೆ. ಆದ್ದರಿಂದಲೇ ಅದು ಶತ್ರುವನ್ನು ಸುರಕ್ಷಿತ ಸ್ಥಳಕ್ಕೆ ತಲಪಿಸರಿ ಎಂದು ಆದೇಶಿಸುತ್ತದೆ. ಕುರ್‌ಆನ್ ವಚನಗಳನ್ನು ಅಸಾಂದರ್ಭಿಕವಾಗಿ ಉಲ್ಲೇಖಿಸುವಾಗ ವಿಮರ್ಶಕರು ಈ ವಚನದ ಹತ್ತಿರ ಕೂಡಾ ಸುಳಿಯುವುದಿಲ್ಲವೆಂಬುದು ಆಶ್ಚರ್ಯಕರವಾಗಿದೆ.

ಇನ್ನು ಇಂದು ಮುಸ್ಲಿಮರ ಪೈಕಿ ಭಯೋತ್ಪಾದನಾ ಕೃತ್ಯಗಳಲ್ಲಿ ನಿರತರಾದವರಿಗೆ ಮುಸ್ಲಿಮೇತರರನ್ನು ವಧಿಸಲು ಕುರ್‌ಆನ್ ನಲ್ಲಿರುವ ಇಂತಹ ಸೂಕ್ತಿಗಳೇ ಪ್ರೇರಣೆ ಎಂಬ ಆರೋಪದ ಕುರಿತು ಹೇಳುವುದಾದರೆ ಇದೊಂದು ಶುದ್ಧ ಸುಳ್ಳು ಹಾಗೂ ಕೆಲವು ಮಾಧ್ಯಮಗಳ ಸೃಷ್ಟಿಯಾಗಿದೆ. ಜಗತ್ತಿನಲ್ಲಿರುವ ಭಯೋತ್ಪಾದಕರೆಲ್ಲರೂ ಮುಸ್ಲಿಮರು ಎಂಬಂತೆ ಬಿಂಬಿಸಲು ಅವರು ನಡೆಸುತ್ತಿರುವ ವಿಫಲ ಯತ್ನವಾಗಿದೆ. ಇದಕ್ಕಾಗಿ ಅವರು ಒಂದು ವಿಶೇಷ ಘೋಷಣೆಯನ್ನೇ ಸೃಷ್ಟಿಸಿಕೊಂಡಿರುವರು. ಮುಸ್ಲಿಮರೆಲ್ಲರೂ ಭಯೋತ್ಪಾದಕರಲ್ಲ. ಆದರೆ ಭಯೋತ್ಪಾದಕರೆಲ್ಲರೂ ಮುಸ್ಲಿಮರು. ಇದೊಂದು ಶುದ್ಧ ವಂಚನೆ. ವಾಸ್ತವಿಕವಾಗಿ ಇಂದು ಎಷ್ಟು ಸ್ಪೋಟ ಪ್ರಕರಣಗಳನ್ನು ನಾವು ಪತ್ರಿಕೆಗಳಲ್ಲಿ ಮುಸ್ಲಿಮ್ ಭಯೋತ್ಪಾದನೆಯೆಂಬ ಶೀರ್ಷಿಕೆಯಲ್ಲಿ ಕಾಣುತ್ತಿರುವೆವೋ ಅವಕ್ಕಿಂತ ಎಷ್ಟೋ ಅಧಿಕ ಸಂಖ್ಯೆಯ ಸ್ಪೋಟ ಪ್ರಕರಣಗಳೂ, ಸಾವು ನೋವುಗಳೂ ಜಗತ್ತಿನಾದ್ಯಂತ ಸಂಭವಿಸುತ್ತಲೇ ಇವೆ. ವ್ಯತ್ಯಾಸವೆಂದರೆ ಇವುಗಳನ್ನು ವೈಭವೀಕರಿಸಲಾಗುತ್ತಿಲ್ಲ. ಭಯೋತ್ಪಾದನೆ, ಆತ್ಮಾಹುತಿ ಬಾಂಬ್ ದಾಳಿ ಎಂಬ ಭೂತಗಳನ್ನು ಹುಟ್ಟು ಹಾಕಿದವರು ಮುಸ್ಲಿಮರು ಎಂಬ ತಪ್ಪುಕಲ್ಪನೆಯು ಪ್ರಚಲಿತದಲ್ಲಿದೆ. ವಾಸ್ತವಿಕವಾಗಿ ಮುಸ್ಲಿಮೇತರ  ಭಯೋತ್ಪಾದಕರು ಜಗತ್ತಿನಾದ್ಯಂತ ನಡೆಸಿದ ನರಮೇಧಗಳನ್ನು ಒಟ್ಟುಗೂಡಿಸಿದರೆ ಮುಸ್ಲಿಮ್ ಭಯೋತ್ಪಾದಕರು ಮಾಡಿದ್ದು ಏನೇನೂ ಇಲ್ಲ ಎಂದು ತಿಳಿಯಬಹುದಾಗಿದೆ. ಆದರೆ ಇತ್ತೀಚೆಗೆ ಭಯೋತ್ಪಾದನಾ ಕೃತ್ಯಗಳಲ್ಲಿ ಮುಸ್ಲಿಮೇತರರ ಹೆಸರುಗಳು ಬಹಿರಂಗಗೊಳ್ಳ ತೊಡಗಿದಾಗ ಅದೇ ಮಾಧ್ಯಮಗಳು ಭಯೋತ್ಪಾದಕರಿಗೆ ಧರ್ಮವಿಲ್ಲ ಎಂಬ ಹೊಸ ಘೋಷಣೆಯನ್ನು ಸೃಷ್ಟಿಸಿದ್ದಾರೆ!

ಪ್ರಭಾಕರನ್, ಹಿಟ್ಲರ್, ಮುಸ್ಸಲೋನಿ, ಜಾರ್ಜ್ ಬುಶ್ ಮುಂತಾದ ಜಗದ್ವಿಖ್ಯಾತ ಭಯೋತ್ಪಾದಕರಾರೂ ಮುಸ್ಲಿಮರಲ್ಲ. ಹಾಗಾದರೆ ಇವರನ್ನು ಭಯೋತ್ಪಾದನೆಗೆ ಪ್ರೋತ್ಸಾಹಿಸಿದ್ದಾದರೂ ಏನು? ಅವರ ಧರ್ಮಗ್ರಂಥಗಳೇ? ಇವರನ್ನೇಕೆ ಧರ್ಮದ ಆಧಾರದಲ್ಲಿ ಭಯೋತ್ಪಾದಕರೆಂದು ಕರೆಯಲಾಗುವುದಿಲ್ಲ?

ಇನ್ನು ಒಂದು ಧರ್ಮದ ಗ್ರಂಥದಲ್ಲಿ ಯುದ್ಧದ ಆಜ್ಞೆಗಳು ಇವೆ ಎಂಬ ಕಾರಣಕ್ಕಾಗಿ ಒಂದು ಧರ್ಮವನ್ನು ಭಯೋತ್ಪಾದಕ ಸ್ಥಾನದಲ್ಲಿ ನಿಲ್ಲಿಸುವುದಾದರೆ ಹಿಂದೂ ಗ್ರಂಥಗಳಲ್ಲಿರುವ ಈ ಕೆಳಗಿನ ಯುದ್ಧಾಜ್ಞೆಗಳು ಹಿಂದೂಧರ್ಮವು ಭಯೋತ್ಪಾದನೆಗೆ ಪ್ರೇರಣೆ ನೀಡುತ್ತದೆಂದು ಹೇಳಬಹುದೇ?

ಮಹಾಭಾರತ ಯುದ್ಧದ ಸಂದರ್ಭದಲ್ಲಿ ತನ್ನ ದಾಯಾದಿಗಳ ವಿರುದ್ಧ ಹೋರಾಡಲು ಅರ್ಜುನನು ಹಿಂಜರಿದಾಗ ಅವನಿಗೆ ಶ್ರೀಕೃಷ್ಣನು ನೀಡುವ ಆದೇಶವನ್ನು ಭಗವದ್ಗೀತೆ ಯಲ್ಲಿ (2/37) ಈ ರೀತಿ ಉದ್ಧರಿಸಲಾಗಿದೆ:

हतॊ वा प्राप्स्यसि स्वर्गं
जित्वा वा भॊक्ष्यसॆ महीम् ।
तस्मादुत्तिष्ठ कौन्तॆय
युद्धाय कृतनिश्चयः ॥
सुखदुःखॆ समॆ कृत्वा
लाभालाभौ जयजयौ ।
ततॊ युद्धाय युज्यस्व
नैवं पापमवाप्स्यसि ॥ (ಭಗವದ್ಗೀತೆ ಅಧ್ಯಾಯ 2 ಶ್ಲೋಕ 37-38)

ಒಂದೋ ನೀನು ಯುದ್ಧದಲ್ಲಿ ಕೊಲ್ಲಲ್ಪಟ್ಟರೆ ಸ್ವರ್ಗವನ್ನು ಪಡೆಯುವೆ ಅಥವಾ ಯುದ್ಧದಲ್ಲಿ ಗೆದ್ದರೆ ಪೃಥ್ವಿಯ ರಾಜ್ಯವನ್ನು ಭೋಗಿಸುವೆ ಈ ಕಾರಣದಿಂದ ಹೇ ಅರ್ಜುನನೇ! ನೀನು ಯುದ್ಧಕ್ಕಾಗಿ ನಿಶ್ಚಯಮಾಡಿ ಎದ್ದು ನಿಲ್ಲು. ಜಯ-ಪರಾಜಯ, ಲಾಭ-ಹಾನಿ ಮತ್ತು ಸುಖ ದುಃಖಗಳನ್ನು ಸಮಾನವಾಗಿ ತಿಳಿದುಕೊಂಡು, ಅನಂತರ ಯುದ್ಧಕ್ಕಾಗಿ ಸಿದ್ಧನಾಗು, ಈ ಪ್ರಕಾರ ಯುದ್ಧ ಮಾಡುವುದರಿಂದ ನೀನು ಪಾಪವನ್ನು ಹೊಂದುವುದಿಲ್ಲ.

ಜಯದಯಾಲ ಗೋಯಂದಕಾರವರು ತಮ್ಮ ಶ್ರೀಮದ್ಭಗವದ್ಗೀತೇ-ತತ್ವವಿವೇಚಿನೀ ಟೀಕಾ ಎಂಬ ಗ್ರಂಥದಲ್ಲಿ (ಪುಟ 68) ಈ ಮೇಲಿನ ವಚನವನ್ನು ಹೀಗೆ ವಿವರಿಸಿದ್ದಾರೆ:

ಆರನೇ ಶ್ಲೋಕದಲ್ಲಿ ಅರ್ಜುನನು – ನನಗಾಗಿ ಯುದ್ಧ ಮಾಡುವುದು ಅಥವಾ ಮಾಡದಿರುವುದು ಯಾವುದು ಶ್ರೇಷ್ಠವಾಗಿದೆ ಹಾಗೂ ಯುದ್ಧದಲ್ಲಿ ವಿಜಯವು ನಮಗಾಗುವುದೋ ಅಥವಾ ನಮ್ಮ ಶತ್ರುಗಳಿಗೋ? ಇದರ ನಿರ್ಣಯವನ್ನು ನಾನು ಮಾಡಲಾರೆ; ಎಂಬ ಮಾತನ್ನು ಹೇಳಿದ್ದನು. ಇದಕ್ಕೆ ಉತ್ತರವನ್ನು ಕೊಡುತ್ತಾ ಯುದ್ಧ ಮಾಡುತ್ತಾ ಮಾಡುತ್ತಾ ಸಾಯುವುದರಲ್ಲಿ ಅಥವಾ ವಿಜಯವನ್ನು ಪಡೆಯುವುದರಲ್ಲಿ ಈ ಎರಡರಲ್ಲೂ ಲಾಭವನ್ನು ತೋರಿಸಿಕೊಟ್ಟು ಅರ್ಜುನನಿಗೆ ಯುದ್ಧದ ಶ್ರೇಷ್ಠತೆಯನ್ನು ಭಗವಂತನು ಸಿದ್ಧಪಡಿಸುತ್ತಾನೆ. ಒಂದು ವೇಳೆ ಯುದ್ಧದಲ್ಲಿ ನಿನ್ನ ಶತ್ರುಗಳಿಗೆ ಜಯವುಂಟಾಗಿ ನೀನು ಕೊಲ್ಲಲ್ಪಟ್ಟರೂ ಸಹ ಒಳ್ಳೆಯ ಮಾತೇ ಆಗುತ್ತದೆ; ಏಕೆಂದರೆ ಯುದ್ಧದಲ್ಲಿ ಪ್ರಾಣತ್ಯಾಗ ಮಾಡುವುದರಿಂದ ನಿನಗೆ ಸ್ವರ್ಗ ದೊರೆಯುವುದು ಮತ್ತು ಒಂದು ವೇಳೆ ವಿಜಯಿಯಾದರೆ ಭೂಮಂಡಲದ ರಾಜ್ಯ ಸುಖವನ್ನು ಅನುಭವಿಸುವೆ; ಆದುದರಿಂದ ಎರಡೂ ದೃಷ್ಟಿಗಳಿಂದ ನಿನಗಾದರೋ ಯುದ್ಧ ಮಾಡುವುದೇ ಎಲ್ಲ ಪ್ರಕಾರದಿಂದಲೂ ಶ್ರೇಷ್ಠವಾಗಿದೆ. ಅದಕ್ಕಾಗಿ ನೀನು ಯುದ್ಧಕ್ಕೆ ಕಟಿಬದ್ಧನಾಗಿ ಸಿದ್ಧನಾಗು ಎಂಬುದೇ ಅಭಿಪ್ರಾಯವಾಗಿದೆ. (ಶ್ರೀಮದ್ಭಗವದ್ಗೀತೇ-ತತ್ವವಿವೇಚಿನೀ ಟೀಕಾ ಎಂಬ ಗ್ರಂಥದಲ್ಲಿ ಪುಟ 68)

ಇಲ್ಲಿರುವ ಗಮನಾರ್ಹವಾದ ಸಂಗತಿಯೇನೆಂದರೆ ಶ್ರೀಕೃಷ್ಣನು ಅರ್ಜುನನೊಂದಿಗೆ ಹೋರಾಡಲು ಹುರಿದುಂಬಿಸುವುದು ಅವನ ಸ್ವಂತ ದಾಯಾದಿಗಳೊಂದಿಗಾಗಿದೆ. ಅರ್ಥಾತ್ ಅವನ ಪಿತೃಸಹೋದರ ಪುತ್ರರೊಂದಿಗಾಗಿದೆ. ಒಂದೋ ನೀನು ಅವರನ್ನು ನಾಶ ಮಾಡಬೇಕು ಅಥವಾ ನೀನು ನಾಶವಾಗಬೇಕು. ಆದರೆ ಯುದ್ಧದಿಂದ ನೀನು ಹಿಂಜರಿಯಬಾರದು. ಎರಡರಲ್ಲಿಯೂ ನಿನಗೇ ಒಳಿತೇ ಇದೆ ಎಂದು ಬೋಧಿಸುತ್ತಾನೆ.

ಈ ವಚನದ ಆಧಾರದಲ್ಲಿ ಭಗವದ್ಗೀತೆಯು ಸ್ವಂತ ದಾಯಾದಿಗಳನ್ನೇ ಕೊಲ್ಲಲು ಆದೇಶಿಸುತ್ತದೆ ಎಂದು ಹೇಳಲಾದೀತೇ? ಖಂಡಿತವಾಗಿಯೂ ಸಾಧ್ಯವಿಲ್ಲ. ಏಕೆಂದರೆ ಈ ವಚನದ ಹಿನ್ನೆಲೆ ಯುದ್ಧಭೂಮಿಯಾಗಿದೆ.

ಋಗ್ವೇದದ ಒಂದನೇ ಮಂಡಲ, 132ನೇ ಸೂಕ್ತದ 2ರಿಂದ 6ರವರೆಗಿನ ಋಕ್ಕುಗಳು ಯುದ್ಧ ಮಾಡುವುದನ್ನು ಹುರಿದುಂಬಿಸುತ್ತವೆ. ಉದಾಹರಣೆಗೆ ಅದರ ನಾಲ್ಕನೇ ಋಕ್ಕಿನ ಒಂದು ಭಾಗವನ್ನು ನೋಡಿರಿ:

ಓ ಇಂದ್ರದೇವ, ಯಜ್ಞಾದಿ ಶ್ರೇಷ್ಠ ಕರ್ಮಗಳನ್ನು ಮಾಡುವವರ ಹಿತಕ್ಕೋಸ್ಕರ ನೀನು ಯಜ್ಞವಿರುದ್ಧರನ್ನು ಮತ್ತು ಕ್ರೋಧಯುಕ್ತ ಪಾಪಿಗಳನ್ನು ನಾಶಗೊಳಿಸು.

ಋಗ್ವೇದದ ಈ ವಚನವು ಯಜ್ಞವಿರೋಧಿಗಳನ್ನು ಸಾರ್ವತ್ರಿಕವಾಗಿ ಕೊಲ್ಲಲು ಆದೇಶಿಸುತ್ತದೆ ಎಂದು ಇದರ ಆಧಾರದಲ್ಲಿ ಹೇಳಲು ಸಾಧ್ಯವೇ? ಖಂಡಿತ ಸಾಧ್ಯವಿಲ್ಲ!

ಇದೇ ರೀತಿ ಕುರ್‌ಆನಿನಲ್ಲಿರುವ ವಚನಗಳು ಕೂಡಾ ಯುದ್ಧದ ಹಿನ್ನೆಲೆಯಲ್ಲಿ ಅವತೀರ್ಣಗೊಂಡ ವಚನಗಳಾಗಿವೆ. ಮುಸ್ಲಿಮೇತರರನ್ನು ಸದಾ ಕೊಲ್ಲುತ್ತಿರಬೇಕು ಎಂಬ ಆಶಯವನ್ನು ಈ ವಚನಗಳು ಸಾರುವುದಿಲ್ಲ.

ಇನ್ನು ಮುಸ್ಲಿಮ್ ಭಯೋತ್ಪಾದಕರು ಕುರ್‌ಆನಿನ ಆಧಾರದಿಂದಲೇ ಮುಸ್ಲಿಮೇತರರನ್ನು ಕೊಲ್ಲುತ್ತಿರುವರು ಎಂದು ವಾದಿಸುತ್ತಿರುವವರು ಪ್ರಾರ್ಥನಾ ನಿರತ ಮುಸ್ಲಿಮರ ಮೇಲೆ ಬಾಂಬ್ ಎಸೆದು ಕೊಲ್ಲಲು ಅದೇ ಭಯೋತ್ಪಾದಕರಿಗೆ ಯಾವ ಸೂಕ್ತಿಗಳು ಪ್ರೇರಣೆ ನೀಡಿದವು ಎಂಬುದನ್ನು ಕೂಡಾ ಸ್ಪಷ್ಟಪಡಿಸಿಕೊಡಬೇಕು.

ಸಂಕ್ಷಿಪ್ತವಾಗಿ ಹೇಳುವುದಾದರೆ ಕುರ್‌ಆನ್‌ನಲ್ಲಿ ವಧಾಸೂಕ್ತಿಗಳನ್ನು ವ್ಯಾಖ್ಯಾನಿಸುವಾಗ ಅವುಗಳ ಅವತೀರ್ಣ ಹಿನ್ನೆಲೆಗಳನ್ನು ಅರಿತುಕೊಂಡಿರುವುದು ಕಡ್ಡಾಯವಾಗಿದೆ. ಯಾಕೆಂದರೆ ಕುರ್‌ಆನ್‌ನ ಎಲ್ಲ ವಚನಗಳೂ ಎಲ್ಲ ಸಂದರ್ಭಗಳಲ್ಲೂ ಒಂದೇ ರೀತಿಯಾಗಿ ಅನ್ವಯಿಸುತ್ತದೆ ಎಂದು ಜಗತ್ತಿನ ಒಬ್ಬನೇ ಒಬ್ಬ ಕುರ್‌ಆನ್ ವ್ಯಾಖ್ಯಾನಕಾರನು ಹೇಳಿಲ್ಲ. ಇನ್ನು ಮುಸ್ಲಿಮರ ಪೈಕಿ ಕೆಲವರು ತಮ್ಮ ಸ್ವಾರ್ಥ ಹಿತಾಸಕ್ತಿಗಳಿಗಾಗಿ ಈ ಸೂಕ್ತಿಗಳನ್ನು ದುರುಪಯೋಗಪಡಿಸಿಕೊಂಡರೆ ಅದಕ್ಕೆ ಕುರ್‌ಆನ್ ಹೊಣೆಯಾಗಲಾರದು. ಇಸ್ಲಾಮಿನ ಹೆಸರಿನಲ್ಲಿ ಇಂದು ಕೆಲವರು ನಡೆಸುತ್ತಿರುವ ಭಯೋತ್ಪಾದನೆಯನ್ನು ಮುಸ್ಲಿಮ್ ವಿದ್ವಾಂಸರೆಲ್ಲರೂ ಒಕ್ಕೊರಳಿನಿಂದ ಖಂಡಿಸಿದ್ದಾರೆ.

ಮೈಸೂರ್ ನಲ್ಲಿ ಯುವರಾಜ ಈದ್ ವಿಶೇಷ









ಅಕ್ರಮ ಗಣಿಗಾರಿಕೆ : ಸಿಬಿಐ ದಾಳಿ, ಜನಾರ್ದನ ರೆಡ್ಡಿ ಬಂಧನ


ಬೆಂಗಳೂರು : ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಭಾರೀ ವಿವಾದದಲ್ಲಿ ಸಿಲುಕಿರುವ ಮಾಜಿ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿಯವರನ್ನು ಇಂದು ಬೆಳ್ಳಂಬೆಳಗ್ಗೆ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಇಂದು ಮುಂಜಾನೆಯೇ ಅವರ ಬೆಂಗಳೂರಿನ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಇದೇ ಸಂದರ್ಭ ಓಬಳಾಪುರಂ ಮೈನಿಂಗ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಎಂಬವರನ್ನೂ ಬಂಧಿಸಲಾಗಿದೆ
ಆಂದ್ರಪ್ರದೇಶದ ಮಾಜಿ ಮುಖ್ಯಮಂತ್ರಿ ರೋಸಯ್ಯ ಅವರು ಅಕ್ರಮ ಗಣಿಗಾರಿಕೆ ಕುರಿತಂತೆ ಸಿಬಿಐ ತನಿಖೆಗೆ ಆದೇಶಿಸಿದ್ದರಿಂದ ಸಿಬಿಐ ತಂಡ ಏಕಕಾಲಕ್ಕೆ ಬಳ್ಳಾರಿ ಹಾಗೂ ಬೆಂಗಳೂರು ನಿವಾಸಗಳ ಮೇಲೆ ದಾಳಿ ನಡೆಸಿವೆ ಎಂದು ಮೂಲಗಳು ತಿಳಿಸಿವೆ. ಗಡಿನಾಶ ಗುರುತು, ಅರಣ್ಯ ಕಾಯ್ದೆ ಉಲ್ಲಂಘನೆ ಆರೋಪಗಳ ಹಿನ್ನೆಲೆಯಲ್ಲಿ ಕಾಯ್ದೆ 120 ಹಾಗೂ 120 ‘ಬಿ’ ಕಾಯ್ದೆಯಡಿ ಸಿಬಿಐ ಪ್ರಕರಣ ದಾಖಲಿಸಿದೆ. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತ ವರದಿಯಲ್ಲಿಯೂ ಜನಾರ್ದನ ರೆಡ್ಡಿ ಹೆಸರು ಉಲ್ಲೇಖವಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ.

ಇಸ್ಲಾಮನ್ನು ಹಬ್ಬಿಸಿದ್ದು ಖಡ್ಗವಾಗಿತ್ತೇ?


ಬಲಪ್ರಯೋಗವು ಇಲ್ಲದಿರುತ್ತಿದ್ದರೆ ಇಸ್ಲಾಮ್ ಧರ್ಮಕ್ಕೆ ಜಾಗತಿಕವಾಗಿ ಲಕ್ಷಾಂತರ ಅನುಯಾಯಿಗಳಿರುತ್ತಿರಲಿಲ್ಲ ಎಂಬುದು ಸಾಮಾನ್ಯವಾಗಿ ಮುಸ್ಲಿಮೇತರರಲ್ಲಿರುವ ಒಂದು ಸಂದೇಹವಾಗಿದೆ. ಇದೊಂದು ತಪ್ಪುಕಲ್ಪನೆಯಾಗಿದೆ. ವಾಸ್ತವಿಕವಾಗಿ ಇಸ್ಲಾಮ್ ಹಬ್ಬಿದ್ದು ಖಡ್ಗದಿಂದಾಗಿರಲಿಲ್ಲ. ಬದಲಾಗಿ ಇಸ್ಲಾಮಿನ ಸತ್ಯಸಂಧವಾದ, ವೈಚಾರಿಕವಾದ ಮತ್ತು ತಾರ್ಕಿಕವಾದ ಬೋಧನೆಗಳಾಗಿದ್ದವು ಅದನ್ನು ಜಗತ್ತಿನಾದ್ಯಂತ ಕ್ಷಿಪ್ರವಾಗಿ ಹಬ್ಬಿಸಿದ್ದೆಂದು ಈ ಕೆಳಗೆ ಬೆಟ್ಟು ಮಾಡಿದ ಸಂಗತಿಗಳು ಸ್ಪಷ್ಟವಾಗಿ ಸೂಚಿಸುತ್ತವೆ.

 

1. ಇಸ್ಲಾಮ್ ಎಂದರೆ ಶಾಂತಿಯಾಗಿದೆ:

 

ಇಸ್ಲಾಮ್ ಎಂಬುದು ಸಲಾಮ್ ಎಂಬ ಪದದಿಂದ ಬಂದುದಾಗಿದೆ. ಇದರರ್ಥ ಶಾಂತಿ ಎಂದಾಗಿದೆ. ಓರ್ವನು ತನ್ನ ಇಚ್ಚೆಯನ್ನು ಅಲ್ಲಾಹನಿಗೆ ಸಮರ್ಪಿಸಿದನು ಎಂಬ ಅರ್ಥವೂ ಇದಕ್ಕಿದೆ. ಆದ್ದರಿಂದ ಓರ್ವನು ತನ್ನ ಇಚ್ಚೆಯನ್ನು ಸೃಷ್ಟಿಕರ್ತನಾದ ಅಲ್ಲಾಹನಿಗೆ ಸಮರ್ಪಿಸುವ ಮೂಲಕ ಪಡೆಯುವ ಶಾಂತಿಯಾಗಿದೆ ಇಸ್ಲಾಮ್.

 


2. ಶಾಂತಿಯನ್ನು ಸ್ಥಾಪಿಸಲು ಕೆಲವೊಮ್ಮೆ ಬಲಪ್ರಯೋಗವು ಅನಿವಾರ್ಯವಾಗಿದೆ:

 

ಈ ಜಗತ್ತಿನಲ್ಲಿ ಎಲ್ಲರೂ ಶಾಂತಿ ಮತ್ತು ಸೌಹಾರ್ದತೆಯ ಪರವಾಗಿಲ್ಲ. ಅರ್ಥಾತ್ ತಮ್ಮ ಸ್ಥಾಪಿತ ಹಿತಾಸಕ್ತಿಗಳಿಗಾಗಿ ಶಾಂತಿ ಮತ್ತು ಸೌಹಾರ್ದತೆಯನ್ನು ಕದಡುವ ಜನರೂ ಈ ಜಗತ್ತಿನಲ್ಲಿದ್ದಾರೆ. ಅಪರಾಧಿಗಳ ಮತ್ತು ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಬಲಪ್ರಯೋಗಿಸಿ ದೇಶದಲ್ಲಿ ಶಾಂತಿ ಕಾಪಾಡುವುದಕ್ಕಾಗಿ ನಾವು ಪೊಲೀಸ್ ಬಲವನ್ನು ಹೊಂದಿರುವುದು ಇದರಿಂದಾಗಿದೆ. ಇಸ್ಲಾಮ್ ಶಾಂತಿಯನ್ನು ಉತ್ತೇಜಿಸುತ್ತದೆ. ಅದೇ ಸಮಯ, ಎಲ್ಲಿ ದಬ್ಬಾಳಿಕೆಯಿದೆಯೋ ಅಲ್ಲಿ ಹೋರಾಟ ನಡೆಸುವುದನ್ನು ಇಸ್ಲಾಮ್ ಪ್ರೋತ್ಸಾಹಿಸುತ್ತದೆ. ದಬ್ಬಾಳಿಕೆಯ ವಿರುದ್ಧವಿರುವ ಈ ಹೋರಾಟಕ್ಕೆ ಕೆಲವೊಮ್ಮೆ ಬಲಪ್ರಯೋಗವು ಅನಿವಾರ್ಯವಾಗಿರುತ್ತದೆ. ಆದ್ದರಿಂದ ಇಸ್ಲಾಮಿನಲ್ಲಿ ಬಲಪ್ರಯೋಗ ನಡೆಸಬೇಕಾದುದು ಕೇವಲ ಶಾಂತಿಯನ್ನು ಸ್ಥಾಪಿಸುವುದಕ್ಕೆ ಮಾತ್ರವಾಗಿದೆ.

 

3. ಇತಿಹಾಸ ತಜ್ಞರಾದ De Lacy O’Leary ರವರ ಅಭಿಪ್ರಾಯ:

 

ಇಸ್ಲಾಮ್ ಹಬ್ಬಿದ್ದು ಖಡ್ಗದಿಂದಾಗಿತ್ತು ಎಂಬ ತಪ್ಪುಕಲ್ಪನೆಗೆ ಅತ್ಯಂತ ಸ್ಪಷ್ಟವಾದ ಉತ್ತರವಾಗಿ De Lacy O’Leary ತನ್ನ Islam at the cross road ಎಂಬ ಗ್ರಂಥದಲ್ಲಿ (ಪುಟ 8) ಹೀಗೆಂದಿದ್ದಾರೆ:

 

History makes it clear however, that the legend of fanatical Muslims sweeping through the world and forcing Islam at the point of the sword upon conquered races is one of the most fantastically absurd myth that historians have ever repeated.

 

ಮತಾಂಧ ಮುಸ್ಲಿಮರು ಜಗತ್ತಿನಾದ್ಯಂತ ಆಕ್ರಮಣಗೈದರು ಮತ್ತು ಖಡ್ಗದ ಮೊನೆಯಿಂದ ಬಲಪ್ರಯೋಗ ಮಾಡಿ ಜನಾಂಗಗಳನ್ನು ಜಯಿಸಿದರು ಎಂಬ ದಂತಕಥೆಯು ಇತಿಹಾಸಕಾರರು ಸದಾ ಪುನರಾವರ್ತಿಸಿದ ವಿಚಿತ್ರವಾದ ಹಾಸ್ಯಾಸ್ಪದ ಕಟ್ಟುಕಥೆಯಾಗಿತ್ತೆಂದು ಇತಿಹಾಸವು ಸ್ಪಷ್ಟಗೊಳಿಸಿದೆ.

 

4. ಮುಸ್ಲಿಮರು ಸ್ಪೈನ್ ದೇಶವನ್ನು 800 ವರ್ಷಗಳ ಕಾಲ ಆಳಿದರು:

 

ಮುಸ್ಲಿಮರು ಸ್ಪೈನ್ ದೇಶವನ್ನು 800 ವರ್ಷಗಳ ಕಾಲ ಆಳಿದರು. ಸ್ಪೈನ್‌ನಲ್ಲಿದ್ದ ಮುಸ್ಲಿಮರು ಜನರನ್ನು ಮತಾಂತರಗೊಳಿಸಲು ಎಂದೂ ಖಡ್ಗವನ್ನು ಬಳಸಿರಲಿಲ್ಲ. ನಂತರ ಕ್ರೈಸ್ತ ಶಿಲುಬೆಯೋಧರು (Christian Crusaders) ಬಂದು ಮುಸ್ಲಿಮರನ್ನು ಅಲ್ಲಿಂದ ಅಳಿಸಿ ಹಾಕಿದರು. ಅದಾನ್ (ನಮಾಝ್‌ಗಾಗಿ ಆಹ್ವಾನಿಸುವ ಕರೆ)ಯನ್ನು ಬಹಿರಂಗವಾಗಿ ನೀಡಲು ಅಲ್ಲಿ ಒಬ್ಬನೇ ಒಬ್ಬ ಮುಸ್ಲಿಮನೂ ಇರಲಿಲ್ಲ.

 

5. 14 ಮಿಲಿಯ ಅರಬರು ಅನುವಂಶಿಕ ಕ್ರೈಸ್ತರಾಗಿದ್ದಾರೆ:

 

1400 ವರ್ಷಗಳ ಕಾಲ ಮುಸ್ಲಿಮರು ಅರೇಬಿಯಾದ ಪ್ರಭುಗಳಾಗಿದ್ದರು. ಕೆಲವು ವರ್ಷಗಳ ಕಾಲ ಬ್ರಿಟಿಷರು ಆಳಿದರು ಮತ್ತು ಕೆಲವು ವರ್ಷಗಳ ಕಾಲ ಫ್ರೆಂಚರು ಆಳಿದರು. ಎಲ್ಲರಿಗಿಂತಲೂ ಹೆಚ್ಚಾಗಿ, ಮುಸ್ಲಿಮರು 1400 ವರ್ಷಗಳ ಕಾಲ ಆಳಿದರು. ಆದರೆ ಇಂದೂ ಕೂಡ ಅಲ್ಲಿ 14 ಮಿಲಿಯ ಅನುವಂಶಿಕ ಕ್ರೈಸ್ತರಿದ್ದಾರೆ. ಅರ್ಥಾತ್ ತಲೆಮಾರುಗಳಿಂದ ನೆಲೆಸಿರುವ ಕ್ರೈಸ್ತರು. ಒಂದು ವೇಳೆ ಮುಸ್ಲಿಮರು ಖಡ್ಗವನ್ನು ಬಳಸಿರುತ್ತಿದ್ದರೆ ಅಲ್ಲಿ ಒಬ್ಬನೇ ಒಬ್ಬ ಅರಬ್ ಕ್ರೈಸ್ತನೂ ಇರುತ್ತಿರಲಿಲ್ಲ.

 

6. ಭಾರತದಲ್ಲಿ 80 ಶೇಕಡಕ್ಕಿಂತಲೂ ಹೆಚ್ಚು ಮುಸ್ಲಿಮೇತರರಿದ್ದಾರೆ:

 

ಮುಸ್ಲಿಮರು ಭಾರತವನ್ನು ಸರಾಸರಿ 1000 ವರ್ಷಗಳ ಕಾಲ ಆಳಿದರು. ಅವರು ಬಯಸಿದ್ದರೆ ಭಾರತದಲ್ಲಿರುವ ಪ್ರತಿಯೊಬ್ಬ ಮುಸ್ಲಿಮೇತರನನ್ನೂ ಇಸ್ಲಾಮಿಗೆ ಮತಾಂತರಿಸುವ ಅಧಿಕಾರವು ಅವರಲ್ಲಿತ್ತು. ಇಸ್ಲಾಮ್ ಖಡ್ಗದಿಂದ ಹಬ್ಬಿದ್ದಲ್ಲವೆಂಬುದಕ್ಕೆ ಇಂದು ಭಾರತದಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬ ಮುಸ್ಲಿಮೇತರನೂ ಸಾಕ್ಷಿಯಾಗಿದ್ದಾನೆ.

 

7. ಇಂಡೋನೇಶ್ಯಾ ಮತ್ತು ಮಲೇಶ್ಯಾ:

 

ಜಗತ್ತಿನಲ್ಲಿ ಅತಿಹೆಚ್ಚು ಮುಸ್ಲಿಮರಿರುವ ಒಂದು ದೇಶವಾಗಿದೆ ಇಂಡೋನೇಶ್ಯಾ. ಮಲೇಶ್ಯಾದಲ್ಲಿರುವ ಬಹುಸಂಖ್ಯಾತ ಜನರೂ ಮುಸ್ಲಿಮರಾಗಿದ್ದಾರೆ. ನಾನು ಕೇಳುತ್ತೇನೆ: ಯಾವ ಮುಸ್ಲಿಮ್ ಸೈನ್ಯವು ಅಲ್ಲಿನ ಜನರನ್ನು ಮತಾಂತರಗೊಳಿಸಲು ಇಂಡೋನೇಶ್ಯಾ ಮತ್ತು ಮಲೇಶ್ಯಾಗೆ ಹೋಗಿತ್ತು?

 

8. ಆಫ್ರಿಕಾದ ಪೂರ್ವ ಕರಾವಳಿ:

 

ಅದೇ ರೀತಿ, ಆಫ್ರಿಕಾದ ಪೂರ್ವ ಕರಾವಳಿಯಲ್ಲಿ ಇಸ್ಲಾಮ್ ಕ್ಷಿಪ್ರವಾಗಿ ಹಬ್ಬಿತ್ತು. ನಾನು ಪುನಃ ಕೇಳುತ್ತೇನೆ: ಇಸ್ಲಾಮ್ ಖಡ್ಗದಿಂದ ಹಬ್ಬಿದ್ದಾಗಿದ್ದರೆ ಆಫ್ರಿಕಾದ ಪೂರ್ವ ಕರಾವಳಿಗೆ ಹೋದ ಮುಸ್ಲಿಮ್ ಸೈನ್ಯ ಯಾವುದು?

 

9. ಥಾಮಸ್ ಕಾರ್ಲೈಲ್:

 

ಪ್ರಸಿದ್ಧ ಇತಿಹಾಸ ತಜ್ಞ ಥಾಮಸ್ ಕಾರ್ಲೈಲ್ ತನ್ನ Heroes and Hero worship ಎಂಬ ಗ್ರಂಥದಲ್ಲಿ ಇಸ್ಲಾಮ್ ಖಡ್ಗದ ಮೂಲಕ ಹಬ್ಬಿದ್ದಾಗಿದೆ ಎಂಬ ತಪ್ಪು ತಿಳುವಳಿಕೆಯ ಕುರಿತು ಹೇಳಿದ್ದಾರೆ:

 

The sword indeed, but where will you get your sword? Every new opinion, at its starting is precisely in a minority of one. In one man’s head alone. There it dwells as yet. One man alone of the whole world believes it, there is one man against all men. Then he takes a sword and try to propagate with that, will do little for him. You must get your sword! On the whole, a thing will propagate itself as it can.

ಖಡ್ಗವಾಗಿತ್ತು ನಿಜ, ಆದರೆ ನಿನ್ನ ಖಡ್ಗವನ್ನು ನೀನು ಎಲ್ಲಿಂದ ಪಡೆಯುವೆ? ಪ್ರತಿಯೊಂದು ಹೊಸ ಅಭಿಪ್ರಾಯವು ಅದರ ಆರಂಭ ದೆಸೆಯಲ್ಲಿ ಖಂಡಿತವಾಗಿಯೂ ಓರ್ವನಲ್ಲಿ ಮಾತ್ರವಿರುತ್ತದೆ. ಓರ್ವ ವ್ಯಕ್ತಿಯ ತಲೆಯಲ್ಲಿ ಮಾತ್ರ. ಅದು ಅಲ್ಲಿ ನೆಲೆಯೂರಿರುತ್ತದೆ. ಜಗತ್ತಿನಾದ್ಯಂತ ಕೇವಲ ಅವನು ಮಾತ್ರ ಅದನ್ನು ನಂಬುತ್ತಾನೆ. ಎಲ್ಲ ಜನರಿಗೆ ವಿರುದ್ಧವಾಗಿ ಅವನೊಬ್ಬನು ಮಾತ್ರ. ನಂತರ ಅವನು ಖಡ್ಗವನ್ನೆತ್ತಿ  ಖಡ್ಗದ ಬಲದಿಂದ ಅದನ್ನು ಬೋಧಿಸಲು ಪ್ರಯತ್ನಿಸುತ್ತಾನೆ. ಇದು ಅವನಿಗೆ ಸ್ವಲ್ಪ ಮಾತ್ರವೇ ಪ್ರಯೋಜನಪಡುವುದು. ನೀನು ನಿನ್ನ ಖಡ್ಗವನ್ನು ಪಡೆದುಕೊಳ್ಳಬೇಕು! ಅದಕ್ಕೆ ಸಾಧ್ಯವಾಗುವಂತೆ ತನ್ನಿಂತಾನೇ ಅಖಂಡವಾಗಿ ಬೋಧಿಸುವಂತಹ ಒಂದು ವಸ್ತುವಾಗಿರಬೇಕು ಆ ಖಡ್ಗ.

 

10. ಧರ್ಮದಲ್ಲಿ ಬಲಾತ್ಕಾರವಿಲ್ಲ:

 

ಯಾವ ಖಡ್ಗದಿಂದಾಗಿತ್ತು ಇಸ್ಲಾಮ್ ಹಬ್ಬಿದ್ದು? ಒಂದು ವೇಳೆ ಅಂತಹ ಖಡ್ಗ ಮುಸ್ಲಿಮರ ಬಳಿಯಿದ್ದಿದ್ದರೂ ಅದನ್ನು ಬಳಸಲು ಮುಸ್ಲಿಮರಿಗೆ ಅವಕಾಶವಿಲ್ಲ. ಯಾಕೆಂದರೆ ಕುರ್‌ಆನ್ ಹೇಳುತ್ತದೆ:

 

ಧರ್ಮದಲ್ಲಿ ಯಾವುದೇ ಬಲಾತ್ಕಾರವಿಲ್ಲ. ಸತ್ಯವು ಅಸತ್ಯದಿಂದ ಬೇರ್ಪಟ್ಟು ನಿಂತಿದೆ. (ಕುರ್‌ಆನ್ 2/256)

 

11. ಬುದ್ಧಿಶಕ್ತಿಯ ಖಡ್ಗ:

 

ಅದು ಬುದ್ಧಿಶಕ್ತಿಯ ಖಡ್ಗವಾಗಿತ್ತು. ಜನರ ಹೃದಯಗಳನ್ನು ಮತ್ತು ಮನಗಳನ್ನು ಜಯಿಸಿದ ಖಡ್ಗ. ಕುರ್‌ಆನ್ ಹೇಳುತ್ತದೆ:

 

ಯುಕ್ತಿ ಮತ್ತು ಸುಂದರವಾದ ಬೋಧನೆಯ ಮೂಲಕ ನೀನು ನಿನ್ನ ಪ್ರಭುವಿನ ಮಾರ್ಗದೆಡೆಗೆ (ಜನರನ್ನು) ಆಹ್ವಾನಿಸು. ಮತ್ತು ಅತ್ಯುತ್ತಮವಾದ ರೀತಿಯಲ್ಲಿ ಅವರೊಂದಿಗೆ ತರ್ಕಿಸು. (ಕುರ್‌ಆನ್ 16/125)

 

12. 1934ರಿಂದ 1984ರವರೆಗೆ ಜಾಗತಿಕ ಧರ್ಮಗಳಲ್ಲಿ ವೃದ್ಧಿ:

 

Reader’s Digest ‘Almanac’ ನಲ್ಲಿದ್ದ ಲೇಖನವೊಂದರಲ್ಲಿ 1934ರಿಂದ 1984 ರವರೆಗಿರುವ ಅರ್ಧ ಶತಮಾನದಲ್ಲಿ ಜಗತ್ತಿನ ಅತಿದೊಡ್ಡ ಧರ್ಮಗಳಲ್ಲಿರುವ ಶೇಕಡವಾರು ವೃದ್ಧಿಯ ಅಂಕಿ ಅಂಶಗಳನ್ನು ನೀಡಲಾಗಿತ್ತು. ಈ ಲೇಖನವು The Plain Truth ಎಂಬ ಪತ್ರಿಕೆಯಲ್ಲೂ ಪ್ರಕಟಗೊಂಡಿತ್ತು. ಅದರ ಪ್ರಕಾರ 235% ವೃದ್ಧಿಯೊಂದಿಗೆ ಇಸ್ಲಾಮ್ ಮೊದಲ ಸ್ಥಾನದಲ್ಲಿತ್ತು. ಕ್ರೈಸ್ತ ಧರ್ಮವು ಕೇವಲ 47% ದಷ್ಟು ಮಾತ್ರ ವೃದ್ಧಿಯಾಗಿತ್ತು. ನಾನು ಕೇಳುತ್ತೇನೆ: ಮಿಲಿಯಾಂತರ ಜನರನ್ನು ಇಸ್ಲಾಮಿಗೆ ಪರಿವರ್ತಿಸಿದ ಯಾವ ಯುದ್ಧವು ಈ ಶತಮಾನದಲ್ಲಿ ಜರುಗಿತ್ತು?

 

13. ಅಮೇರಿಕಾ ಮತ್ತು ಯೂರೋಪಿನಲ್ಲಿ ಅತಿವೇಗದಿಂದ ಬೆಳೆಯುತ್ತಿರುವ ಧರ್ಮವಾಗಿದೆ ಇಸ್ಲಾಮ್:

 

ಇಂದು ಅಮೇರಿಕಾದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಧರ್ಮವು ಇಸ್ಲಾಮ್ ಆಗಿದೆ. ಯೂರೋಪಿನಲ್ಲಿ ಕೂಡ ಅತಿವೇಗವಾಗಿ ಇಸ್ಲಾಮ್ ಬೆಳೆಯುತ್ತಿದೆ. ಈ ರೀತಿ ದೊಡ್ಡ ಸಂಖ್ಯೆಯಲ್ಲಿ ಇಸ್ಲಾಮನ್ನು ಸ್ವೀಕರಿಸಲು ಪಾಶ್ಚಾತ್ಯರನ್ನು ಬಲವಂತಗೊಳಿಸುತ್ತಿರುವ ಖಡ್ಗವಾದರೂ ಯಾವುದು?

 

14. Dr. Joseph Adam Pearson:

 

Dr. Joseph Adam Pearson ಹೇಳಿದ್ದಾರೆ:

 

People who worry that nuclear weaponry will one day fall in the hands of the Arabs, fail to realize that the Islamic bomb has been dropped already, it fell the day MUHAMMED (pbuh) was born.

 

ಪರಮಾಣು ಶಸ್ತ್ರವು ಒಂದಿನ ಅರಬರ ಕೈಗೆ ದೊರಕಬಹುದು ಎಂದು ಮರುಗುವ ಜನರು ಇಸ್ಲಾಮಿಕ್ ಬಾಂಬ್ ಈಗಾಗಲೇ ಅವರಲ್ಲಿದೆ ಎಂಬುದನ್ನು ಅರಿತುಕೊಳ್ಳುವಲ್ಲಿ ಎಡವಿದ್ದಾರೆ. ಪ್ರವಾದಿ ಮುಹಮ್ಮದ್(ಸ)ರವರು ಜನಿಸಿದಂದೇ ಅದು ಅವರಿಗೆ ದೊರಕಿದೆ.

ಪ್ರವಾದಿ(ಸ)ರವರು ಅನೇಕ ಬಾರಿ ವಿವಾಹವಾಗಿದ್ದೇಕೆ?


ಇಸ್ಲಾಮಿನ ವಿಮರ್ಶಕರು ಅತಿಹೆಚ್ಚಾಗಿ ಟೀಕಿಸುವ ಅನೇಕ ವಿಷಯಗಳಲ್ಲಿ ಒಂದಾಗಿದೆ ಪ್ರವಾದಿ(ಸ)ರವರ ಬಹುಪತ್ನಿತ್ವ. ಈ ರೀತಿ ಟೀಕಿಸುವ ಅವರ ಮುಖ್ಯ ಉದ್ದೇಶವು ಪ್ರವಾದಿ(ಸ)ರವರನ್ನು ಸ್ತ್ರೀ ಲಂಪಟ ಅಥವಾ ಕಾಮುಕ ಎಂಬಂತೆ ಚಿತ್ರೀಕರಿಸುವುದಾಗಿದೆ ಎಂಬುದರಲ್ಲಿ ಸಂದೇಹವೇ ಇಲ್ಲ.

ಆದರೆ ವಾಸ್ತವಿಕವಾಗಿ ಪ್ರವಾದಿ(ಸ)ರವರು ಅನೇಕ ಬಾರಿ ವಿವಾಹವಾಗಿದ್ದಾದರೂ ಏಕೆ? ಅವರ ಬಹುವಿವಾಹದ ಹಿಂದೆ ಸಮುದಾಯದ ಉನ್ನತಿಯನ್ನು ಬಯಸುವ ಉದ್ದೇಶವೇನಾದರೂ ಇತ್ತೇ? ಅಥವಾ ಕೇವಲ ಕಾಮೋದ್ರೇಕದಿಂದ ಅವರು ಹಲವಾರು ಬಾರಿ ವಿವಾಹವಾದರೇ?

ಪ್ರವಾದಿ(ಸ)ರವರ ಬಹುಪತ್ನಿತ್ವವನ್ನು ಟೀಕಿಸುವವರಲ್ಲಿ ಹಲವರು ಪ್ರವಾದಿ(ಸ)ರವರು ಐವತ್ತು ಮದುವೆಯಾಗಿದ್ದಾರೆಂದೂ, ಇಪ್ಪತ್ತು ಮದುವೆಯಾಗಿದ್ದಾರೆಂದೂ, ಹದಿನಾರು ಮದುವೆಯಾಗಿದ್ದಾರೆಂದೂ ಹೇಳುತ್ತಾರೆ. ಆದರೆ ಪ್ರವಾದಿ(ಸ)ರವರು ಹನ್ನೆರಡು ಬಾರಿ ಮಾತ್ರವೇ ವಿವಾಹವಾಗಿದ್ದರು. ಅವರ ಮಡದಿಯರ ಹೆಸರುಗಳು ಹೀಗಿವೆ: 1. ಖದೀಜಾ ಬಿನ್ತ್ ಖುವೈಲಿದ್ 2. ಸೌದಾ ಬಿನ್ತ್ ಝಮಅಃ 3. ಆಯಿಶಾ ಬಿನ್ತ್ ಅಬೀಬಕ್ರ್ ಸಿದ್ದೀಕ್ 4. ಹಫ್ಸಾ ಬಿನ್ತ್ ಉಮರ್ ಅಲ್‌ಫಾರೂಕ್ 5. ಝೈನಬ್ ಬಿನ್ತ್ ಖುಝೈಮಃ 6. ಉಮ್ಮು ಸಲಮಾ ಹಿಂದ್ ಬಿನ್ತ್ ಉತ್ಬಾ 7. ಝೈನಬ್ ಬಿನ್ತ್ ಜಹ್‌ಶ್ 8. ಜುವೈರಿಯಾ ಬಿನ್ತ್ ಅಲ್‌ಹಾರಿಸ್ 9. ಸಫಿಯ್ಯಾ ಬಿನ್ತ್ ಹುಯಯ್ಯ್ ಇಬ್ನ್ ಅಖ್ತಬ್ 10. ಉಮ್ಮು ಹಬೀಬಾ ರಮ್ಲಾ ಬಿನ್ತ್ ಅಬೀ ಸುಫ್ಯಾನ್ 11. ಮಾರಿಯಾ ಬಿನ್ತ್ ಶಮ್‌ಊನ್ ಅಲ್‌ಮಿಸ್ರಿಯ್ಯಃ 12. ಮೈಮೂನಾ ಬಿನ್ತ್ ಅಲ್‌ಹಾರಿಸ್.

ಇವರಲ್ಲಿ ಆಯಿಶಾ(ರ)ರವರು ಮಾತ್ರ ಕನ್ಯೆಯರಾಗಿದ್ದರು. ಉಳಿದವರೆಲ್ಲರೂ ವಿಧವೆಯರೋ ವಿವಾಹ ವಿಚ್ಛೇದಿತೆಯರೋ ಆಗಿದ್ದರು. ಪ್ರವಾದಿ(ಸ)ರವರು ಮರಣಹೊಂದಿದಾಗ ಹತ್ತು ಮಂದಿ ಪತ್ನಿಯರನ್ನು ಬಿಟ್ಟಗಲಿದ್ದರು. ಖದೀಜಾ ಮತ್ತು ಝೈನಬ್ ಅವರ ಜೀವಿತಕಾಲದಲ್ಲೇ ಮೃತಪಟ್ಟಿದ್ದರು. ಮಾರಿಯಾರವರ ಹೊರತು ಉಳಿದವರೆಲ್ಲರೂ ಅರಬಿಗಳಾಗಿದ್ದರು. ಮಾರಿಯಾ ಈಜಿಪ್ಟಿನವರಾಗಿದ್ದರು ಮತ್ತು ಕ್ರೈಸ್ತರಾಗಿದ್ದರು. ಸಫಿಯ್ಯಾ ಯಹೂದಿಯಾಗಿದ್ದರು. ಉಳಿದ ಹತ್ತು ಪತ್ನಿಯರೂ ಮುಸ್ಲಿಮರಾಗಿದ್ದರು.

ಪ್ರವಾದಿ(ಸ)ರವರು ಇಷ್ಟೊಂದು ವಿವಾಹವಾಗಿರುವುದು ಯಾತಕ್ಕೆ? ಕಾಮುಕತೆಯಿಂದಲೇ? ಬಹುಶಃ ಇಂತದೊಂದು ಸಣ್ಣ ಸಂದೇಹ ನಮ್ಮಲ್ಲೇ ಅನೇಕರಿಗಿದೆ.

ಆದರೆ ವಾಸ್ತವಿಕವಾಗಿ ಪ್ರವಾದಿ(ಸ)ರವರು ಅನೇಕ ಬಾರಿ ವಿವಾಹವಾಗಿದ್ದು ಕಾಮುಕತೆಯಿಂದಾಗಿರಲಿಲ್ಲವೆಂದು ಅವರ ಜೀವನ ಚರಿತ್ರೆಯನ್ನು ಒಂದು ಬಾರಿಯಾದರೂ ಓದಿರುವ ವ್ಯಕ್ತಿಗೆ ಖಂಡಿತವಾಗಿಯೂ ಅನ್ನಿಸದಿರಲಾರದು. ಯಾಕೆಂದರೆ ಅವರ ಪ್ರತಿಯೊಂದು ವಿವಾಹದ ಹಿಂದೆಯೂ ಒಂದೊಂದು ಮಹಾನ್ ತ್ಯಾಗವಿತ್ತು. ಸಾಮುದಾಯಿಕ ಕ್ಷೇಮದ ಬಯಕೆಯಿತ್ತು. ಒಂದು ಸಿದ್ಧಾಂತವನ್ನು ಉಳಿಸಿ ಬೆಳೆಸುವ ಮಹತ್ವಾಕಾಂಕ್ಷೆಯಿತ್ತು. ಆದರೆ ಈ ಹಿನ್ನೆಲೆಗಳನ್ನು ಪರಾಂಬರಿಸಿ ನೋಡದವರು ಕೇವಲ ಬಾಹ್ಯ ನೋಟದಿಂದಲೇ ವಿಧಿಯನ್ನು ಜಾರಿಗೊಳಿಸಿಬಿಡುತ್ತಾರೆ.

ಪ್ರವಾದಿ(ಸ)ರವರು ಮೊಟ್ಟಮೊದಲು ವಿವಾಹವಾದಾಗ ಅವರ ಪ್ರಾಯವು 25 ಆಗಿತ್ತು. ಆದರೆ ಆಗ ಅವರು ಆರಿಸಿದ ವಧು ಯೌವನವು ತುಂಬಿ ತುಳುಕುತ್ತಿರುವ ಯುವತಿ ಆಗಿರಲಿಲ್ಲ. ಬದಲಾಗಿ ತನಗಿಂತಲೂ 15 ವರ್ಷ ಹಿರಿಯರಾಗಿದ್ದ ಓರ್ವ ವಿಧವೆಯನ್ನಾಗಿತ್ತು! ಅದೂ ಕೂಡ ಈ ಹಿಂದೆ ಎರಡು ಬಾರಿ ವಿವಾಹವಾಗಿದ್ದ ಮತ್ತು ಮಕ್ಕಳನ್ನೂ ಹೊಂದಿದ್ದ 40 ವರ್ಷ ಪ್ರಾಯದ ವಿಧವೆ!! ಅವರಾಗಿದ್ದರು ಖದೀಜಾ ಬಿನ್ತ್ ಖುವೈಲಿದ್. ಮೊಟ್ಟಮೊದಲನೆಯದಾಗಿ ಇಸ್ಲಾಮ್ ಸ್ವೀಕರಿಸಿದ ಸ್ತ್ರೀ.

ಈಗ ಹೇಳಿ, ಕಾಮುಕನಾದ ಯಾವನೇ ವ್ಯಕ್ತಿಯಾದರೂ ಬಿಸಿರಕ್ತವನ್ನು ಹೊಂದಿರುವ ಯೌವನದಲ್ಲಿ ಯಾವ ರೀತಿಯ ವಧುವನ್ನು ಆರಿಸುತ್ತಿದ್ದನು? ಹದಿಹರೆಯದ ಕನ್ಯೆಯನ್ನೇ? ಅಥವಾ ಮಧ್ಯವಯಸ್ಕ ಯುವತಿಯನ್ನೇ? ಅಥವಾ ಎರಡು ಬಾರಿ ವಿವಾಹವಾಗಿರುವ ವಿಧವೆಯನ್ನೇ? ನ್ಯಾಯಯುತವಾದ ಯಾವ ಕಾರಣವೂ ಇಲ್ಲದೆ ಇಸ್ಲಾಮಿನ ಪ್ರವಾದಿಯನ್ನು ಮೂದಲಿಸುವವರು ಇದಕ್ಕೆ ಉತ್ತರಿಸಬೇಕಾಗಿದೆ! ಅಲ್‌ಅಮೀನ್ (ಪ್ರಾಮಾಣಿಕ) ಅಸ್ಸಾದಿಕ್ (ಸತ್ಯಸಂಧ) ಎಂಬ ಪರ್ಯಾಯ ನಾಮಗಳಲ್ಲಿ ಮಕ್ಕಾ ನಿವಾಸಿಗಳ ಮಧ್ಯೆ ಚಿರಪರಿಚಿತರಾಗಿದ್ದ ಮತ್ತು ಅವರು ಗೌರವಾದರಗಳೊಂದಿಗೆ ಕಾಣುತ್ತಿದ್ದ ಮಕ್ಕಾದ ಕಣ್ಮಣಿಯಾಗಿದ್ದ ಮುಹಮ್ಮದ್(ಸ)ರನ್ನು ವಿವಾಹವಾಗಲು ಮಕ್ಕಾದಲ್ಲಿ ಅಂದು ನೂರಾರು ಯುವತಿಯರು ತುದಿಗಾಲಲ್ಲಿ ನಿಂತಿರುವಾಗ ಪ್ರವಾದಿ(ಸ)ರವರು ಮಧ್ಯವಯಸ್ಸನ್ನು ದಾಟಿದ ವಿಧವೆಯನ್ನು ವಿವಾಹವಾಗಿದ್ದಾದರೂ ಏಕೆ?

ಎರಡು ಬಾರಿ ವಿವಾಹವಾಗಿದ್ದ ಖದೀಜಾರನ್ನು ಪ್ರವಾದಿ(ಸ)ರವರು ವಿವಾಹವಾಗಿದ್ದೇನೋ ಸರಿ. ಆದರೆ ಅದು ಅವರ ಸಂಪತ್ತಿನ ಮೇಲಿದ್ದ ವ್ಯಾಮೋಹದಿಂದಾಗಿತ್ತು ಎಂದು ಕೆಲವರು ಇದಕ್ಕೆ ಅಪಸ್ವರ ಎತ್ತಲೂಬಹುದು! ಹಾಗಿದ್ದರೆ ಉಟ್ಟ ಬಟ್ಟೆಯನ್ನು ಬದಲಾಯಿಸುವಂತೆ ಮಡದಿಯರನ್ನು ಬದಲಾಯಿಸುತ್ತಿದ್ದ ಅಂದಿನ ಕಾಲಘಟ್ಟದಲ್ಲಿ ಆ ಸಂಪತ್ತೆಲ್ಲವನ್ನೂ ತನ್ನ ಹೆಸರಿಗೆ ಬರೆದು ಹದಿಹರೆಯದ ಯುವತಿಯರನ್ನು ವಿವಾಹವಾಗಲು ಅವರಿಗೆ ಯಾವ ಅಡ್ಡಿಯೂ ಇದ್ದಿರಲಿಲ್ಲ. ಮಾತ್ರವಲ್ಲದೆ ಅನಾಗರಿಕ ಅರಬಿಗಳ ಸಂಸ್ಕೃತಿ ಕೂಡಾ ಹಾಗೇ ಇತ್ತು.

ಆದರೆ ಅಲ್ಲಾಹನಾಣೆ ಸತ್ಯ! ಖದೀಜಾರವರು ಮರಣಹೊಂದುವವರೆಗೆ ಅರ್ಥಾತ್ ತಮಗೆ 50 ವರ್ಷ ಪ್ರಾಯವಾಗುವವರೆಗೆ 25 ವರ್ಷಗಳ ಕಾಲ ಪ್ರವಾದಿ(ಸ)ರವರು ಬೇರೊಂದು ಹೆಣ್ಣಿನ ಕುರಿತು ಕನಸಿನಲ್ಲೂ ಇಚ್ಛೆಪಟ್ಟಿರಲಿಲ್ಲ. ಮಾತ್ರವಲ್ಲದೆ ಜಗತ್ತಿಗೇ ಮಾದರೀ ಯೋಗ್ಯವಾದ ರೀತಿಯಲ್ಲಿ ಏಕಪತ್ನೀವೃತಸ್ತರಾಗಿ ಸುಮಧುರವಾದ ಯಶಸ್ವೀ ದಾಂಪತ್ಯ ಜೀವನವನ್ನು ಅವರು ಸಾಗಿಸಿದರು. ಅವರ ದಾಂಪತ್ಯವು ಎಷ್ಟು ಚೇತೋಹಾರಿಯಾಗಿತ್ತೆಂದರೆ ಅದರ ಕುರಿತು ಪ್ರವಾದಿ(ಸ)ರವರು ಪ್ರಸ್ತಾಪಿಸಿದಾಗಲೆಲ್ಲಾ ನಮಗೆ ಅಸೂಯೆಯುಂಟಾಗುತ್ತಿತ್ತೆಂದು ಆಯಿಶಾ(ರ)ರವರು ಹೇಳಿದ್ದರು. ಈಗ ಹೇಳಿ, ಕಾಮುಕನಾದ ಓರ್ವ ವ್ಯಕ್ತಿ ಒಬ್ಬಳೇ ಒಬ್ಬಳು ಅದೂ ಈ ಹಿಂದೆ ಎರಡು ಬಾರಿ ವಿವಾಹವಾಗಿದ್ದ, ವಿಧವೆಯಾದ, ಮಕ್ಕಳನ್ನೂ ಹೊಂದಿದ್ದ ಪತ್ನಿಯೊಂದಿಗೆ ಸುದೀರ್ಘ 25 ವರ್ಷಗಳ ದಾಂಪತ್ಯವನ್ನು ಸಾಗಿಸಲು ಸಾಧ್ಯವೇ? ಅದೂ ಕೂಡ ದಂಪತಿಗಳ ಮಧ್ಯೆ ಒಂದಿನಿತೂ ಮನಸ್ತಾಪವುಂಟಾಗದ ರೀತಿಯಲ್ಲಿ?

ಈ ದಾಂಪತ್ಯವು ಇಲ್ಲಿಗೆ ಕೊನೆಗೊಂಡಿತೇ? ಇಲ್ಲ. ತಮ್ಮ 50ನೇ ಪ್ರಾಯದಿಂದ 52ನೇ ಪ್ರಾಯದವರೆಗೆ ಪ್ರವಾದಿ(ಸ)ರವರು ಮೃತಪಟ್ಟ ತನ್ನ ಮಡದಿಯ ಶೋಕಾಚರಣೆಯಲ್ಲೇ ಕಳೆದರು!

ಪ್ರವಾದಿ(ಸ)ರವರು ತದನಂತರ ತಮ್ಮ 52ನೇ ವಯಸ್ಸಿನಿಂದ ತೊಡಗಿ 60ನೇ ವಯಸ್ಸಿನ ಮಧ್ಯಭಾಗದಲ್ಲಿ ಹನ್ನೊಂದು ಮಂದಿಯನ್ನು ವಿವಾಹವಾಗಿದ್ದರು. ಇವು ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಕಾರಣಗಳಿಗಾಗಿ ನಡೆದ ವಿವಾಹಗಳಾಗಿದ್ದವು ಎಂದು ಮುಂದೆ ಓದಿದರೆ ನಿಮಗೆ ತಿಳಿದುಕೊಳ್ಳಬಹುದು.

ಈಗಾಗಲೇ ಹೇಳಿದಂತೆ ಖದೀಜಾರವರ ಮರಣಾನಂತರ ಎರಡು ವರ್ಷಗಳ ಕಾಲ ಅವರು ಒಬ್ಬಂಟಿಯಾಗಿ ಜೀವಿಸಿದ್ದರು. ನಂತರ ಅವರು ಸೌದಾ ಬಿನ್ತ್ ಝಮಅಃರನ್ನು ವಿವಾಹವಾದರು. ಬಹುಶಃ ಸೌದಾರವರು ಹದಿ ಹರೆಯದ ಕನ್ಯೆಯಾಗಿರಬಹುದು ಎಂದು ನೀವು ಊಹಿಸಿದ್ದರೆ ನಿಮ್ಮ ಊಹೆ ಖಂಡಿತ ತಪ್ಪು. ಹಾಗಾದರೆ ಅವರು ನಲ್ವತ್ತು ವರ್ಷದೊಳಗಿನ ವಿಧವೆಯಾಗಿರಬಹುದು ಎಂದು ನೀವು ಭಾವಿಸಿದ್ದರೆ ಅದು ಕೂಡ ತಪ್ಪು. ಯಾಕೆಂದರೆ ಪ್ರವಾದಿ(ಸ)ರವರು ಸೌದಾರವರನ್ನು ವಿವಾಹವಾದಾಗ ಅವರು 65 ವರ್ಷ ಪ್ರಾಯದ ಬಡ ವಿಧವೆಯಾಗಿದ್ದರು!

ತಮ್ಮ 52ನೇ ವಯಸ್ಸಿನಲ್ಲಿ 65 ವರ್ಷದ ಸೌದಾರನ್ನು ಪ್ರವಾದಿ(ಸ)ರವರು ವಿವಾಹವಾಗಿದ್ದು ಖಂಡಿತವಾಗಿಯೂ ಏನಾದರೂ ತೀಟೆಯನ್ನು ತೀರಿಸುವ ಉದ್ದೇಶದಿಂದಾಗಿರಲಿಲ್ಲವೆಂಬುದು ಸ್ಪಷ್ಟ. ಹಾಗಾದರೆ 65 ವರ್ಷದ ವಿಧವೆಯನ್ನು ವಿವಾಹವಾಗಬೇಕಾದ ಅನಿವಾರ್ಯತೆಯು ಪ್ರವಾದಿ(ಸ)ರವರಿಗೇನಿತ್ತು? ಪ್ರವಾದಿ(ಸ) ರವರ ತ್ಯಾಗದ ಮಹತ್ವವು ಇಲ್ಲಿ ನಮಗೆ ಮನದಟ್ಟಾಗುತ್ತದೆ.

ಇಸ್ಲಾಮ್ ಸ್ವೀಕರಿಸಿದ ಮಹಿಳೆಯರಲ್ಲಿ ಮೊಟ್ಟಮೊದಲು ವಿಧವೆಯಾದವರಾಗಿದ್ದರು ಸೌದಾ! ಓರ್ವ ವಿಧವೆಯ ಹೃದಯದ ಆಳದಲ್ಲಿರುವ ವೇದನೆಗಳನ್ನೂ, ಅಬಲೆಯಾಗಿರುವ ಆಕೆಯ ಪರಿಸ್ಥಿತಿಯನ್ನೂ, ಮಾನಸಿಕ ತಳಮಳಗಳನ್ನೂ ಇತರೆಲ್ಲರಿಗಿಂತಲೂ ಚೆನ್ನಾಗಿ ಪ್ರವಾದಿ(ಸ)ರವರು ಅರಿತಿದ್ದರು. ಒಂದು ಸಮೂಹವನ್ನು ಸರ್ವ ದಿಸೆಗಳಿಂದಲೂ ಒಳಿತಿನ ಪಾರಮ್ಯತೆಯೆಡೆಗೆ ಮುನ್ನಡೆಸುವ ನಾಯಕತ್ವವನ್ನು ವಹಿಸಿಕೊಂಡವರಾಗಿದ್ದರು ಅವರು. ಅವರು ಯಾವುದೇ ಒಳಿತನ್ನು ಆದೇಶಿಸಿದರೂ ಇಂದಿನ ಅನೇಕ ಜನನಾಯಕರಂತೆ ಅದನ್ನು ಕೇವಲ ಬಾಯಿಮಾತಿಗೆ ಸೀಮಿತವಾಗಿಸುತ್ತಿರಲಿಲ್ಲ. ಮಾತಿಗೂ ಕೃತಿಗೂ ಅಜಗಜಾಂತರ ವ್ಯತ್ಯಾಸಗಳನ್ನಿಟ್ಟು ಭಂಡ ನಾಯಕನಂತೆ ಮೆರೆದವರಾಗಿರಲಿಲ್ಲ ಅವರು. ಬದಲಾಗಿ ಅವರು ತಮ್ಮ ಅನುಯಾಯಿಗಳಿಗೆ ಏನನ್ನಾದರೂ ಆದೇಶಿಸಿದರೆ ಅದನ್ನು ಮೊಟ್ಟಮೊದಲು ತಮ್ಮ ಜೀವನದಲ್ಲಿ ಪ್ರಾಯೋಗಿಕಗೊಳಿಸುತ್ತಿದ್ದರು. ಅದೇ ರೀತಿ ಏನಾದರೂ ಕೆಡುಕಿನಿಂದ ಅವರು ತಮ್ಮ ಅನುಯಾಯಿಗಳನ್ನು ವಿರೋಧಿಸಿದರೆ ಮೊಟ್ಟಮೊದಲು ಆ ಕೆಡುಕಿನಿಂದ ಸ್ವತಃ ತಾವು ದೂರವಿರುತ್ತಿದ್ದರು.

ಓರ್ವ ಮಹಿಳೆ ವಿಧವೆಯಾದರೆ ಅದು ಅವಳ ಇಳಿವಯಸ್ಸಿನಲ್ಲಾಗಿದ್ದರೂ ಕೂಡ ಇಸ್ಲಾಮ್ ಆಕೆಯನ್ನು ಅವಗಣಿಸುವುದಿಲ್ಲ ಎಂಬುದನ್ನು ಜಗತ್ತಿಗೆ ತೋರಿಸಿಕೊಡುವ ತವಕವು ಅವರಲ್ಲಿತ್ತು. ಅದಕ್ಕಾಗಿ ಅವರು ಆರಿಸಿಕೊಂಡ ದಾರಿ ಕೂಡ ಅನುಪಮವಾಗಿತ್ತು. ಒಂದು ವೇಳೆ ಪ್ರವಾದಿ(ಸ)ರವರು ಕಾಮುಕರಾಗಿದ್ದರೆ ತಮ್ಮ ಯಾರಾದರೂ ಅನುಯಾಯಿಗೆ ಕೈಸನ್ನೆ ಮಾಡುವ ಮೂಲಕ ಆ ವಿಧವೆಯನ್ನು ವಿವಾಹವಾಗುವಂತೆ ಅದೇಶಿಸಬಹುದಿತ್ತು!  ಆದರೆ ಅವರು ಹಾಗೆ ಮಾಡದೆ ತಾವೇ ಸ್ವತಃ ವಿವಾಹವಾದರು. ಇದು ಅವರು ಜಗತ್ತಿಗೆ ತೋರಿಸಿಕೊಟ್ಟ ಅನರ್ಘ್ಯವಾದ ತ್ಯಾಗವಾಗಿತ್ತೇ ಹೊರತು ಕಾಮೋದ್ರೇಕ ಶಮನವಾಗಿರಲಿಲ್ಲ. ಇದಾಗಿತ್ತು ಪ್ರವಾದಿ(ಸ)ರವರ ಎರಡನೇ ವಿವಾಹದ ಕಾರಣ.

ಪ್ರವಾದಿ(ಸ)ರವರ ವಿವಾಹಗಳನ್ನು ಎರಡು ವಿಧವಾಗಿ ವಿಂಗಡಿಸಬಹುದು. ಒಂದು ಮುಹಮ್ಮದ್ ಎಂಬ ವ್ಯಕ್ತಿಯಾಗಿ ಅವರು ಮಾಡಿಕೊಂಡ ವಿವಾಹ. ಎರಡು ಮುಹಮ್ಮದ್ ಎಂಬ ಪ್ರವಾದಿಯಾಗಿ ಅವರು ಮಾಡಿಕೊಂಡ ವಿವಾಹಗಳು. ಖದೀಜಾರವರ ವಿವಾಹವು ಮೊದಲ ವಿಧದಲ್ಲಿ ಸೇರಿದರೆ ಉಳಿದ ಹನ್ನೊಂದು ವಿವಾಹಗಳೂ ಎರಡನೆಯ ವಿಧದಲ್ಲಿ ಸೇರುತ್ತವೆ.

ಮತಪ್ರಚಾರ ಕಾರ್ಯದಂಗವಾಗಿ ತನ್ನ ಅನುಯಾಯಿಗಳೊಂದಿಗಿನ ತನ್ನ ಸಂಬಂಧವನ್ನು ಬಲಪಡಿಸುವುದಕ್ಕಾಗಿ ಅವರೊಂದಿಗೆ ವೈವಾಹಿಕ ಸಂಬಂಧಗಳನ್ನು ಸ್ಥಾಪಿಸುವುದು ಅಂದು ಅತ್ಯಗತ್ಯವಾಗಿತ್ತು. ಅದಕ್ಕಾಗಿ ಅವರು ತಮ್ಮ ಅನುಯಾಯಿಗಳಲ್ಲೇ ಶ್ರೇಷ್ಠರಾದ ಅಬೂ ಬಕ್ರ್ ಸಿದ್ದೀಕ್(ರ)ರವರ ಮಗಳಾದ ಆಯಿಶಾರನ್ನು ಮತ್ತು ಉಮರ್ ಇಬ್ನುಲ್ ಖತ್ತಾಬ್(ರ)ರವರ ಮಗಳಾದ ಹಫ್ಸಾರನ್ನು ವಿವಾಹವಾದರು. ಖದೀಜಾರಿಂದಾಗಿ ತನಗುಂಟಾದ ಮಕ್ಕಳಲ್ಲಿ ಈರ್ವರನ್ನು ಉಸ್ಮಾನ್ ಇಬ್ನ್ ಅಪ್ಫಾನ್(ರ)ಗೆ ಮತ್ತು ತಮ್ಮ ಮುದ್ದಿನ ಮಗಳಾದ ಫಾತಿಮಾರನ್ನು ಅಲೀ ಇಬ್ನ್ ಅಬೀ ತಾಲಿಬ್(ರ)ಗೆ ವಿವಾಹ ಮಾಡಿಸಿಕೊಟ್ಟರು. ಪ್ರವಾದಿ(ಸ)ರವರನ್ನು ವಿವಾಹವಾಗುವಾಗ ಹಫ್ಸಾರವರ ಪ್ರಾಯವು 40 ಆಗಿತ್ತು ಮತ್ತು ಅವರು ವಿಧವೆಯಾಗಿದ್ದರು.

ಝೈನಬ್ ಬಿನ್ತ್ ಖುಝೈಮಾರವರ ಪತಿ ಉಹ್ದ್ ಯುದ್ಧದಲ್ಲಿ ಮೃತಪಟ್ಟರು. ತನ್ನಿಮಿತ್ತ ಅವರು ಒಂಟಿಯೂ ಆಶ್ರಯರಹಿತರೂ ಆದರು. ಕೃಶಶರೀರಿಯಾಗಿದ್ದ ಆಕೆಗೆ ಪ್ರವಾದಿ(ಸ)ರವರು ಬಾಳನ್ನು ನೀಡಿದರು. ವಿವಾಹದ ನಂತರ ಕೆಲವೇ ಸಮಯದಲ್ಲಿ ಅವರು ಮೃತಪಟ್ಟರು.

ಉಮ್ಮು ಸಲಮಾ 65 ವರ್ಷ ಪ್ರಾಯದ ವಿಧವೆಯಾಗಿದ್ದರು. ಅಬೂ ಬಕ್ರ್, ಉಮರ್ ಮೊದಲಾದವರ ವಿವಾಹ ಪ್ರಸ್ತಾಪವನ್ನು ಅವರು ತಿರಸ್ಕರಿಸಿದ್ದರು. ಆದರೆ ಪ್ರವಾದಿ(ಸ)ರವರು ವಿವಾಹ ಪ್ರಸ್ತಾಪವಿಟ್ಟಾಗ ಅವರು ಅದನ್ನು ಸ್ವೀಕರಿಸಿದರು.

ಝೈನಬ್ ಬಿನ್ತ್ ಜಹ್‌ಶ್ ಪ್ರವಾದಿ(ಸ)ರವರ ದತ್ತುಪುತ್ರ ಝೈದ್‌ರವರ ಪತ್ನಿಯಾಗಿದ್ದರು. ಝೈದ್ ಆಕೆಗೆ ವಿಚ್ಛೇದನೆ ನೀಡಿದ್ದರಿಂದಾಗಿ ಪ್ರವಾದಿ(ಸ)ರವರು ಆಕೆಯನ್ನು ವಿವಾಹವಾದರು. ಇದು ದತ್ತು ಪುತ್ರರು ತಮ್ಮ ಪತ್ನಿಯರನ್ನು ವಿಚ್ಛೇದಿಸಿದರೆ ಅವರನ್ನು ವಿವಾಹವಾಗುವುದನ್ನು ಇಸ್ಲಾಮ್ ವಿರೋಧಿಸುವುದಿಲ್ಲ ಎಂಬುದನ್ನು ತೋರಿಸಿಕೊಡುವ ಸಲುವಾಗಿತ್ತು.

ಪ್ರವಾದಿ(ಸ)ರವರ ವಿವಾಹಗಳ ಹಿಂದೆ ರಾಜಕೀಯ ಕಾರಣಗಳೂ ಇದ್ದವು. ಯಹೂದ ಪ್ರದೇಶವಾದ ಖೈಬರನ್ನು ಜಯಿಸಿದಾಗ ಅದರ ಅರಸನಾಗಿದ್ದ ಹುಯಯ್ಯ್ ಮತ್ತು ಅವರ ಮಗಳು ಸಫಿಯ್ಯಾ ಮುಸ್ಲಿಮರಿಗೆ ಖೈದಿಗಳಾಗಿ ಲಭಿಸಿದರು. ಶತ್ರು ದೇಶದ ಓರ್ವ ಮಹಿಳೆಯು ಯುದ್ಧಖೈದಿಯಾಗಿ ಲಭಿಸಿದರೆ ಅಂದಿನ ಅನಾಗರಿಕ ಕಾಲದ ಸೇನಾನಾಯಕನು ಏನು ಮಾಡುತ್ತಿದ್ದನು? ಆದರೆ ಪ್ರವಾದಿ(ಸ)ರವರು ಮಾಡಿದ್ದೇನು?

ಹೆಣ್ಣಿನ ಆತ್ಮಾಭಿಮಾನವನ್ನು ಸಂರಕ್ಷಿಸುವುದರಲ್ಲಿ ಪ್ರವಾದಿ(ಸ)ರವರಿಗಿಂತ ಮಿಗಿಲಾದ ವ್ಯಕ್ತಿತ್ವವು ಈ ಜಗತ್ತಿನಲ್ಲಿ ಬೇರಾವುದಾದರೂ ಇದೆಯೇ? ಖಂಡಿತವಾಗಿಯೂ ಇಲ್ಲ. ಅರಸನ ಮಗಳಾದ ಸಫಿಯ್ಯಾರನ್ನು ಕನಿಷ್ಠ ಪಕ್ಷ ತನ್ನ ಯಾರಾದರೂ ಅನುಯಾಯಿಗೆ ವಿವಾಹ ಮಾಡಿಕೊಟ್ಟು ನೆಮ್ಮದಿಯಾಗಿರಬಹುದಿತ್ತು. ಆದರೆ ಪ್ರವಾದಿ(ಸ)ರವರ ಮಾದರಿಯು ಅದಾಗಿರಲಿಲ್ಲ. ಇಸ್ಲಾಮನ್ನು ಪ್ರವೇಶಿಸಿದ ಅರಸನ ಮಗಳನ್ನು ಅಪಮಾನಿಸಲು ಅವರು ಇಚ್ಛೆಪಡಲಿಲ್ಲ. ಇಸ್ಲಾಮಿನಲ್ಲಿ ಓರ್ವ ಹೆಣ್ಣಿಗೆ ಲಭಿಸಬಹುದಾದ ಅತ್ಯುನ್ನತವಾದ ಸ್ಥಾನವಾದ ತನ್ನ ಹೃದಯದರಮನೆಯಲ್ಲಿ ಆಕೆಗೆ ಜಾಗವನ್ನು ನೀಡಿದರು. ಆಕೆಯ ಗೌರವಕ್ಕೆ ಎಳ್ಳಷ್ಟು ಚ್ಯುತಿಯುಂಟಾಗದ ರೀತಿಯಲ್ಲಿ ಆಕೆಯ ಅನುಮತಿಯೊಂದಿಗೆ ಆಕೆಯನ್ನು ವಿವಾಹವಾದರು.

ಜುವೈರಿಯ್ಯಾ ಮತ್ತು ಮಾರಿಯಾರನ್ನು ಪ್ರವಾದಿ(ಸ)ರವರು ವಿವಾಹವಾಗಿದ್ದು ಹೊಸ ಪ್ರದೇಶಗಳೊಂದಿಗೆ ತನ್ನ ಬಾಂಧವ್ಯವನ್ನು ವೃದ್ಧಿಪಡಿಸುವ ಉದ್ದೇಶದಿಂದಾಗಿತ್ತು. ಅವರು ಜುವೈರಿಯ್ಯಾರನ್ನು ವಿವಾಹವಾದಾಗ ಆಕೆಯ ಜನಾಂಗವಾದ ಬನೂ ಮುಸ್ತಲಕ್ ಸಂಪೂರ್ಣವಾಗಿ ಇಸ್ಲಾಮ್ ಸ್ವೀಕರಿಸಿದರು. ಮಾರಿಯಾರನ್ನು ವಿವಾಹವಾದಾಗ ಸಂಪೂರ್ಣ ಈಜಿಪ್ಟ್ ಅವರಿಗೆ ಬೆಂಗಾವಲಾಗಿ ನಿಂತಿತು.

ಆಯಿಶಾರವರ ಹೊರತು ಇತರ ಮಡದಿಯರೆಲ್ಲರೂ ವಿಧವೆಗಳೋ ವಿಚ್ಛೇದಿತೆಯರೋ ಆಗಿದ್ದರೆಂದು ಹೇಳಿದ್ದೆನಲ್ಲವೇ? ಆದ್ದರಿಂದಲೇ ಕೆಲವರು ಅವರ ಬಗ್ಗೆ ಸೊಲ್ಲೆತ್ತದೆ ಆಯಿಶಾರವರ ಮೇಲೆ ತಮ್ಮ ಟೀಕಾಪ್ರಹಾರವನ್ನು ಹರಿಸುತ್ತಾರೆ. ಪ್ರವಾದಿ(ಸ)ರವರು ಆಯಿಶಾರನ್ನು ವಿವಾಹವಾದಾಗ ಆಕೆ ಒಂಬತ್ತು ವರ್ಷದ ಹುಡುಗಿಯಾಗಿದ್ದಳು ಎಂಬುದಾಗಿದೆ ಅವರು ಈ ರೀತಿ ಟೀಕಿಸಲು ಕಾರಣ!

ವಾಸ್ತವಿಕವಾಗಿ ಒಂಬತ್ತು ವರ್ಷದ ಹುಡುಗಿಯನ್ನು ಪ್ರವಾದಿ(ಸ)ರವರು ವಿವಾಹವಾದುದರಲ್ಲಿ ಅಸಂಗತವಾದುದು ಏನೂ ಇಲ್ಲ. ಒಂಬತ್ತು ವರ್ಷದ ಹುಡುಗಿಯರು ಯಾರೂ ಮೆಚ್ಯೂರ್ ಆಗುವುದಿಲ್ಲ ಎಂದೆನ್ನುವವರಿಗೆ ಸಮಕಾಲೀನ ಜಗತ್ತಿನ ಏನೇನೂ ತಿಳಿದಿಲ್ಲವೆಂದೇ ಭಾವಿಸಬೇಕಾಗಿದೆ! ಒಂಬತ್ತು ವರ್ಷವೇಕೆ ಆರೇಳು ವರ್ಷದ ಹೆಣ್ಣು ಮಕ್ಕಳು ಲೈಂಗಿಕತೆಯಲ್ಲಿ ತೊಡಗುವುದು ಅಮೇರಿಕಾದಂತಹ ಮುಂದುವರಿದ ದೇಶಗಳಲ್ಲಿ ನಿತ್ಯಸುದ್ದಿಯಾಗಿದೆ. ಎಂಟು ವರ್ಷ ಪ್ರಾಯದ ಹುಡುಗಿ ಗರ್ಭಧರಿಸುವುದನ್ನು ಆಧುನಿಕ ವೈದ್ಯ ಶಾಸ್ತ್ರವಂತೂ ನಿಷೇಧಿಸಿಲ್ಲ. ಇದಕ್ಕನುಸೃತವಾಗಿ ಇಂತಹ ಚಿಕ್ಕ ವಯಸ್ಸಿನ ಮಕ್ಕಳು ಗರ್ಭಧರಿಸುವುದನ್ನು ಅಪರೂಪಕೊಮ್ಮೆಯಾದರೂ ನಾವು ಆಲಿಸುತ್ತಲೂ ಓದುತ್ತಲೂ ಇದ್ದೇವೆ. ಆದ್ದರಿಂದ ಆಯಿಶಾರನ್ನು ಟೀಕಿಸುವವರ ಉದ್ದೇಶವು ಇಸ್ಲಾಮಿನೊಂದಿಗಿರುವ ಕುರುಡು ದ್ವೇಷವಲ್ಲದೆ ಬೇರೇನೂ ಅಲ್ಲವೆಂದು ಇದರಿಂದ ತಿಳಿದುಕೊಳ್ಳಬಹುದಾಗಿದೆ.

ಪ್ರವಾದಿ(ಸ)ರವರು ಎಳೆಯ ಪ್ರಾಯದ ಆಯಿಶಾರನ್ನು ವಿವಾಹವಾಗಿದ್ದನ್ನು ಅವರ ಪರಮ ಶತ್ರುಗಳಾಗಿದ್ದ ಕುರೈಶರು ಅಂದು ವಿರೋಧಿಸಿರಲಿಲ್ಲ. ಯಾಕೆಂದರೆ ಮರುಭೂಮಿಯ ಹವಾಮಾನ ವೈಪರೀತ್ಯ ದಿಂದಾಗಿ ಹುಡುಗಿಯೊಬ್ಬಳು ಬಹುಬೇಗನೇ ಮೆಚ್ಯೂರ್ ಆಗುತ್ತಾಳೆಂದು ಅನಕ್ಷರಸ್ಥರಾಗಿದ್ದರೂ ಅನುಭವ ಜ್ಞಾನದ ಮೂಲಕ ಆ ಅನಾಗರಿಕ ಅರಬರಿಗೆ ಗೊತ್ತಿತ್ತು! ಇಲ್ಲದಿದ್ದರೆ ತಮಗೆ ಲಭ್ಯವಾಗುವ ಎಲ್ಲಾ ಸಂದರ್ಭಗಳನ್ನೂ ಬಳಸಿ ಅತಿ ಕಠಿಣವಾದ ಶಬ್ಧಗಳಲ್ಲಿ ಪ್ರವಾದಿ(ಸ)ರವರನ್ನು ಟೀಕಿಸುತ್ತಿದ್ದ ಅವರು ಒಂದೇ ಒಂದು ಬಾರಿಯೂ ಆಯಿಶಾರವರ ವಿವಾಹದ ಕುರಿತು ಸೊಲ್ಲೆತ್ತಿರಲಿಲ್ಲ. ಅನಾಗರಿಕ ಅರಬರನ್ನು ಬಿಡಿ. ತಮ್ಮ ಬಳಿ ದೇವಗ್ರಂಥವಿದೆಯೆಂದು ಸ್ವಯಂ ಕೊಚ್ಚಿಕೊಳ್ಳುತ್ತಿದ್ದ ಪ್ರವಾದಿ(ಸ)ರವರ ಕಠಿಣ ಶತ್ರುಗಳಾದ ಅಂದಿನ ಯಹೂದ ಕ್ರೈಸ್ತರಲ್ಲೊಳಪಟ್ಟ ಯಾವೊಬ್ಬನೂ ಕೂಡ ಈ ವಿಷಯದಲ್ಲಿ ಪ್ರವಾದಿ(ಸ)ರವರನ್ನು ಟೀಕಿಸಿರಲಿಲ್ಲ.

ಹಾಗಾದರೆ ಎಳೆಯ ವಯಸ್ಸಿನ ಕನ್ಯೆಯಾದ ಆಯಿಶಾರನ್ನು ತಮ್ಮ ಜೀವನದ ಸಂಧ್ಯಾಕಾಲದಲ್ಲಿ ಪ್ರವಾದಿ(ಸ)ರವರು ವಿವಾಹವಾದುದಾದರೂ ಏಕೆ? ಉತ್ತರ ಸ್ಪಷ್ಟ. ಜಗತ್ತಿನ ಅತಿಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಗಳನ್ನು ನೀವು ತೆರೆದು ನೋಡಿ. ನಿಮಗೆ ಲಭಿಸುವುದು ಕೇವಲ ಅವರ ಬಹಿರಂಗ ಜೀವನದ ಕುರಿತಿರುವ ಸಂಗತಿಗಳು ಮಾತ್ರವಾಗಿದೆ. ಅವರ ಖಾಸಗಿ ಬದುಕು ಮತ್ತು ಮಡದಿಯರೊಂದಿಗಿನ ಸರಸ ಸಲ್ಲಾಪ, ಸಂಭೋಗ ಮುಂತಾದ ಅತ್ಯಂತ ಖಾಸಗಿ ಬದುಕಿನ ಬಗ್ಗೆ ನಿಮಗೆ ಏನಾದರೂ ಮಾಹಿತಿಗಳು ಲಭಿಸುತ್ತದೆಯೇ? ಖಂಡಿತವಾಗಿಯೂ ಇಲ್ಲ. ಹೆಚ್ಚಿನೆಲ್ಲಾ ಮಹಾನ್ ವ್ಯಕ್ತಿಗಳ ಖಾಸಗಿ ಬದುಕನ್ನು ಅನ್ವೇಷಿಸತೊಡಗಿದರೆ ನಮಗೆ ದೊರಕುವ ಫಲಿತಾಂಶಗಳು ಅತ್ಯಂತ ಅರೋಚಕವಾಗಿರಬಹುದೆಂದು ಬೇರೆ ಹೇಳಬೇಕಾಗಿಲ್ಲ! ಆದರೆ ಪ್ರವಾದಿ(ಸ)ರವರ ಜೀವನಚರಿತ್ರೆಯು ಇದಕ್ಕೆ ವ್ಯತಿರಿಕ್ತವಾಗಿದೆ. ಈಗಾಗಲೇ ಹೇಳಿದಂತೆ ಪ್ರವಾದಿ(ಸ)ರವರು ಅಂತ್ಯದಿನದವರೆಗಿರುವ ಮುಸ್ಲಿಮರಿಗೆ ಮಾತ್ರವಲ್ಲ ಸಂಪೂರ್ಣ ಮನುಷ್ಯಕುಲಕ್ಕೆ ಮಾದರಿಯಾಗಬೇಕಾದ ಪ್ರವಾದಿಯಾಗಿ ಅಲ್ಲಾಹನಿಂದ ನಿಯೋಗಿಸಲ್ಪಟ್ಟವರಾಗಿದ್ದರು.  ಆದ್ದರಿಂದ ಅವರ ಬಹಿರಂಗ ಬದುಕು ಹೇಗೆ ಕನ್ನಡಿಯಲ್ಲಿರುವ ಪ್ರತಿಬಿಂಬದಂತೆ ಹಗಲು ಬೆಳಕಿನಷ್ಟು ಸ್ಪಷ್ಟವಾಗಿ ನಮಗೆ ಲಭಿಸಿದೆಯೋ ಅಷ್ಟೇ ಸ್ಪಷ್ಟವಾಗಿ ಅವರ ಅತ್ಯಂತ ಖಾಸಗಿ ಬದುಕಿನ ಮಾಹಿತಿಗಳೂ ನಮಗೆ ಲಭಿಸಿವೆ! ಇದು ಹೇಗೆ ಸಾಧ್ಯವಾಯಿತೆಂದು ನೀವು ಕೇಳಬಹುದು! ಅದು ಆಯಿಶಾ ಮುಂತಾದ ಅವರ ಪತ್ನಿಯರ ಕೊಡುಗೆಯಾಗಿತ್ತು!

ಆಯಿಶಾರವರು ಅತ್ಯಂತ ಬುದ್ಧಿ ಶಾಲಿಯೂ ಚಾಣಾಕ್ಷೆಯೂ ಆಗಿದ್ದರು. ಯಾವೊಂದು ವಿಷಯವನ್ನಾದರೂ ಸೂಕ್ಷ್ಮವಾಗಿ ಗ್ರಹಿಸುವುದರಲ್ಲಿ ಅವರು ಅದ್ವಿತೀಯರಾಗಿದ್ದರು. ಹನ್ನೆರಡು ಮಂದಿ ಮಡದಿಯರಲ್ಲಿ ಪ್ರವಾದಿ(ಸ)ರವರ ಖಾಸಗಿ ಜೀವನವನ್ನು ಆಯಿಶಾರವರಂತೆ ಸೂಕ್ಷ್ಮವಾಗಿ ಕಲಿತವರು ಬೇರೊಬ್ಬರಿರಲಿಲ್ಲ. ಆದ್ದರಿಂದಲೇ ಪ್ರವಾದಿ(ಸ)ರವರ ಖಾಸಗಿ ಜೀವನದ ಕುರಿತು ಮುಸ್ಲಿಮರು ಆದ್ಯತೆಯನ್ನು ನೀಡುವುದು ಆಯಿಶಾರವರು ವರದಿ ಮಾಡುವ ಹದೀಸ್‌ಗಳಿಗಾಗಿದೆ.

ಆಯಿಶಾರವರು ಇನ್ನೂ ಎಳೆಯ ವಯಸ್ಸಿನವರಾಗಿದ್ದುದರಿಂದ ಪ್ರವಾದಿ(ಸ)ರವರ ಮರಣಾನಂತರ ಸುಮಾರು 42 ವರ್ಷಗಳ ಕಾಲ ಅವರು ಜೀವಿಸಿದ್ದರು. ಅವರಷ್ಟು ದೀರ್ಘಕಾಲ ಪ್ರವಾದಿ(ಸ)ರವರ ಬೇರೊಂದು ಪತ್ನಿ ಬದುಕಿರಲಿಲ್ಲ. ಆದ್ದರಿಂದಲೇ ಸಂಭೋಗಕ್ರಿಯೆ ಮುಂತಾದ ಪ್ರವಾದಿ(ಸ)ರವರ ಅತ್ಯಂತ ಖಾಸಗಿ ಬದುಕಿನ ಕುರಿತು ಮಹತ್ವವಾದ ಮಾಹಿತಿಗಳನ್ನು ಅನ್ವೇಷಿಸಿ ಅಸಂಖ್ಯ ಮಂದಿ ಆಯಿಶಾರವರ ಮನೆಗೆ ಧಾವಿಸುತ್ತಿದ್ದರು. ಆದ್ದರಿಂದ ಸುಮಾರು 42 ವರ್ಷಗಳ ಕಾಲ ಅವರು ಈ ಸಮುದಾಯದ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದರು! ಆ ಎಳೆಯ ಪ್ರಾಯದಲ್ಲಿ ಒಂದು ವೇಳೆ ಪ್ರವಾದಿ(ಸ)ರವರು ಆಯಿಶಾರನ್ನು ವಿವಾಹವಾಗದಿರುತ್ತಿದ್ದರೆ ಅದೆಷ್ಟೋ ಉಪಯುಕ್ತವಾದ ಮಾಹಿತಿಗಳು ನಮ್ಮಿಂದ ಮರೆಯಾಗಿರುತ್ತಿತ್ತೋ ಏನೋ! ಆದ್ದರಿಂದ ಆಯಿಶಾರವರ ಎಳೆಯ ಪ್ರಾಯವು ನಮಗೆ ಮಹದುಪಕಾರವನ್ನು ಮಾಡಿದೆಯೆಂದರೆ ಅದೆಂದೂ ಉತ್ಪ್ರೇಕ್ಷೆಯಾಗಲಾರದು.

ಹಾಗಾದರೆ ಆಯಿಶಾರವರಿಗೆ ಸುಮಾರು ಹದಿನೆಂಟು ಪ್ರಾಯವಾಗುವವರೆಗಾದರೂ ಪ್ರವಾದಿ(ಸ)ರವರಿಗೆ ಕಾಯಬಹುದಾಗಿತ್ತಲ್ಲವೇ ಎಂದು ನೀವು ಕೇಳಬಹುದು. ಆದರೆ ಇದೊಂದು ಅಪ್ರಸ್ತುತ ಪ್ರಶ್ನೆಯಾಗಿದೆ. ಯಾಕೆಂದರೆ ಒಂಬತ್ತನೇ ವಯಸ್ಸಿನಲ್ಲಿ ವಿವಾಹವಾದರೂ ಪ್ರವಾದಿ(ಸ)ರವರು ಆಕೆಯೊಂದಿಗೆ ದಾಂಪತ್ಯವನ್ನು ಆರಂಭಿಸಿದ್ದು ಆಕೆಗೆ ಹನ್ನೊಂದು ಪ್ರಾಯ ತುಂಬಿದ ನಂತರವಾಗಿತ್ತು. ಆದ್ದರಿಂದ ಪ್ರವಾದಿ(ಸ)ರವರೊಂದಿಗೆ ಆಯಿಶಾರಿಗೆ ಲಭಿಸಿದ ದಾಂಪತ್ಯ ಬದುಕು ಕೇವಲ ಎಂಟು ವರ್ಷಗಳಷ್ಟು ಮಾತ್ರವಾಗಿದ್ದವು. ಅವರ ವಯಸ್ಸು ಹೆಚ್ಚಿದಂತೆ ಅವರಿಗೆ ಲಭಿಸುವ ದಾಂಪತ್ಯ ಬದುಕು ಕ್ಷೀಣಿಸುತ್ತಲೇ ಸಾಗುತ್ತದೆ. ಹದಿನೆಂಟನೇ ವಯಸ್ಸಿನಲ್ಲಿ ವಿವಾಹವಾಗಿದ್ದರೆ ಅವರಿಗೆ ಲಭಿಸಬಹುದಾದ ದಾಂಪತ್ಯ ಬದುಕು ಕೇವಲ ಒಂದು ವರ್ಷ ಮಾತ್ರವಾಗಿರುತ್ತಿತ್ತು. ಅವರು ಅಷ್ಟೊಂದು ಬುದ್ಧಿಶಾಲಿಯಾಗಿದ್ದೂ ಕೂಡ ಈ ಒಂದು ವರ್ಷದ ಅವಧಿಯಲ್ಲಿ ಪ್ರವಾದಿ(ಸ)ರವರ ಸಂಪೂರ್ಣ ಖಾಸಗಿ ಬದುಕನ್ನು ಕಲಿಯಲು ಅವರಿಗೆ ಖಂಡಿತವಾಗಿಯೂ ಸಾಧ್ಯವಾಗುತ್ತಿರಲಿಲ್ಲ.

ಇದಾಗಿವೆ ಪ್ರವಾದಿ(ಸ)ರವರು ಅನೇಕ ಬಾರಿ ವಿವಾಹವಾಗಲು ಇದ್ದ ಕಾರಣಗಳು. ಪೂರ್ವಗ್ರಹ ಮತ್ತು ಪಕ್ಷಪಾತವನ್ನು ಮಾರು ದೂರವಿಟ್ಟು ಸತ್ಯವನ್ನು ಕಂಡುಕೊಳ್ಳಬೇಕೆಂಬ ಅದಮ್ಯ ಆಕಾಂಕ್ಷೆಯಿರುವ ಯಾವನೇ ವ್ಯಕ್ತಿಗೂ ಪ್ರವಾದಿ(ಸ)ರವರ ವಿವಾಹಗಳಲ್ಲಿ ಯಾವ ಕೊರತೆಯೂ ಕಾಣಲಾರದು.

ಜಗತ್ತು ಕಂಡ ಅದ್ಭುತ ವ್ಯಕ್ತಿ


ಮೋಸೆ, ಯೇಸು, ಝೊರಾಷ್ಟ್ರ, ಅಬ್ರಹಾಮ್ ಮುಂತಾದ ಅನೇಕ ಧಾರ್ಮಿಕ ನಾಯಕರ ಅಸ್ತಿತ್ವ ಮತ್ತು ಅವರ ಬೋಧನೆಗಳ ಕುರಿತು ಇತಿಹಾಸವು ದಾಖಲಿಸಿದೆ. ಮನುಷ್ಯ ಸಮೂಹದ ಮಾರ್ಗದರ್ಶನಕ್ಕಾಗಿ ದೈವಿಕ ಸಂದೇಶಗಳನ್ನು ತಂದಿದ್ದೇವೆಂದು ವಾದಿಸಿದ ಹಲವಾರು ನಕಲಿ ಪ್ರವಾದಿಗಳ ಮತ್ತು ದೇವಮಾನವರ ಕುರಿತು ಕೂಡ ಇತಿಹಾಸವು ಬೆಳಕು ಚೆಲ್ಲುತ್ತದೆ. ಆದರೆ ಇವರೆಲ್ಲರ ಮಧ್ಯೆ ವಿಶೇಷ ವೈಶಿಷ್ಠ್ಯತೆವನ್ನು ಹೊಂದಿರುವ ಅನಕ್ಷರಸ್ಥರಾದ, ದೇವ ಸಂದೇಶಗಳನ್ನು ಮಾನವ ಸಮೂಹಕ್ಕೆ ಪ್ರಾಮಾಣಿಕವಾಗಿ ತಲುಪಿಸಿದ ಮತ್ತು ತನ್ಮೂಲಕ ಮಾನವ ಇತಿಹಾಸದಲ್ಲಿ ಅಭೂತಪೂರ್ವವಾದ ಪರಿವರ್ತನೆಯನ್ನುಂಟುಮಾಡಿದ ಓರ್ವ ವ್ಯಕ್ತಿಯ ಕುರಿತು ಹೆಚ್ಚಿನವರೂ ಅಜ್ಞರಾಗಿದ್ದಾರೆ.

 

ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ (Encyclopedia Britannica) ಆ ವ್ಯಕ್ತಿಯನ್ನು ಹೀಗೆ ವರ್ಣಿಸುತ್ತದೆ:

The most successful of all prophets and religious personalities

ಸರ್ವ ಪ್ರವಾದಿಗಳಲ್ಲಿ ಮತ್ತು ಧಾರ್ಮಿಕ ವ್ಯಕ್ತಿತ್ವಗಳಲ್ಲಿ ಅತ್ಯಂತ ಯಶಸ್ವಿಯಾದವರು.

…..a mass of detail in the early sources shows that he was an honest and upright man who had gained the respect and loyalty of others who were likewise honest and upright men. (Encyclopedia Britannica vol. 12)

…ಅವರು ಪ್ರಾಮಾಣಿಕ ಮತ್ತು ಸರಳ ಜನರ ಗೌರವ ಹಾಗೂ ವಿಶ್ವಾಸವನ್ನು ಗೆದ್ದ ಅತ್ಯಂತ ಪ್ರಾಮಾಣಿಕ ಹಾಗೂ ಸರಳ ವ್ಯಕ್ತಿಯಾಗಿದ್ದರೆಂದು ಪ್ರಾಥಮಿಕ ಮೂಲಗಳಲ್ಲಿರುವ ವಿಪುಲವಾದ ವಿವರಣೆಗಳು ತೋರಿಸುತ್ತವೆ.

 

ಜಾರ್ಜ್ ಬರ್ನಾರ್ಡ್ ಶಾ (George Bernard Shaw) ಬರೆಯುತ್ತಾರೆ:

He must be called the Saviour of humanity.  I believe that if a man like him were to assume the dictatorship of the modern world, he would succeed in solving its problems in a way that would bring it much needed peace and happiness. (The Genuine Islam, Singapore, Vol. 1, No. X 1936)

ಅವರನ್ನು ಮಾನವೀಯತೆಯ ಸಂರಕ್ಷಕನೆಂದೇ ಕರೆಯಬೇಕು. ಅವರಂತಿರುವ ಒಬ್ಬ ವ್ಯಕ್ತಿ ಆಧುನಿಕ ಜಗತ್ತಿನ ಸರ್ವಾಧಿಕಾರವನ್ನು ವಹಿಸಿದರೆ, ಅದಕ್ಕೆ ಅತ್ಯಂತ ಅಗತ್ಯವಿರುವ ಶಾಂತಿ ಮತ್ತು ಸಂತೋಷವನ್ನು ತರುವಂತಹ ರೀತಿಯಲ್ಲಿ ಅದರ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ಅವರು ಯಶಸ್ವಿಯಾಗುವರೆಂದು ನಾನು ನಂಬುತ್ತೇನೆ.

 

ಅವರು ಭೂಮಿಯ ಮೇಲೆ ಕಾಲೂರಿದ ಅತ್ಯಂತ ಗಮನಾರ್ಹ ವ್ಯಕ್ತಿಯಾಗಿದ್ದರು.ಅವರೊಂದು ಧರ್ಮವನ್ನು ಪ್ರಚಾರ ಮಾಡಿದರು, ಒಂದು ರಾಜ್ಯಕ್ಕೆ ಬುನಾದಿ ಹಾಕಿದರು, ಒಂದು ರಾಷ್ಟ್ರವನ್ನು ನಿರ್ಮಿಸಿದರು, ನೀತಿಪೂರ್ವಕವಾದ ನಿಯಮಗಳನ್ನಿಟ್ಟರು, ಅಸಂಖ್ಯ ಸಾಮಾಜಿಕ ಮತ್ತು ರಾಜಕೀಯ ಸುಧಾರಣೆಗಳನ್ನು ಜಾರಿಗೆ ತಂದರು, ತನ್ನ ಬೋಧನೆಗಳನ್ನು ಪ್ರಾಯೋಗಿಕಗೊಳಿಸಲು ಮತ್ತು ಇತರರಿಗೆ ಪ್ರತಿಬಿಂಬಿಸಲು ಒಂದು ಬಲಿಷ್ಠವಾದ ಮತ್ತು ಕ್ರಿಯಾತ್ಮಕವಾದ ಸಮಾಜವನ್ನು ಸ್ಥಾಪಿಸಿದರು.  ಮಾನವ ವಿಚಾರಗಳ ಮತ್ತು ವರ್ತನೆಗಳ ಜಗತ್ತನ್ನೇ ಶಾಶ್ವತವಾಗಿ, ಪರಿಪೂರ್ಣವಾಗಿ ಕ್ರಾಂತೀಕರಿಸಿದರು.

 

ಅವರಾಗಿದ್ದಾರೆ ಮನುಷ್ಯ ವ್ಯಕ್ತಿತ್ವವು ಕಂಡ ಅತಿಶ್ರೇಷ್ಠ ಮಾನವತಾವಾದಿ, ಜಗತ್ತು ಕಂಡ ಅದ್ಭುತ ವ್ಯಕ್ತಿ, ಅವರ ಹೆಸರೇ ಮುಹಮ್ಮದ್(ಸ).

 

ಕ್ರಿ.ಶ. 570ರಲ್ಲಿ ಅರೇಬಿಯಾದಲ್ಲಿ ಜನಿಸಿದ ಮುಹಮ್ಮದ್‌(ಸ)ರವರು ತಮ್ಮ ನಲ್ವತ್ತನೆಯ ವಯಸ್ಸಿನಲ್ಲಿ ಇಸ್ಲಾಮ್ (ಏಕಮೇವದೇವನಿಗೆ ಸಂಪೂರ್ಣ ವಿಧೇಯತೆ) ಎಂಬ ಸತ್ಯಧರ್ಮದ ಪ್ರಚಾರಕಾರ್ಯವನ್ನು ಆರಂಭಿಸಿ ತಮ್ಮ ಅರುವತ್ತಮೂರನೆಯ ವಯಸ್ಸಿನಲ್ಲಿ ಇಹಲೋಕ ಯಾತ್ರೆಯನ್ನು ಮುಗಿಸಿದರು.

 

ಮುಹಮ್ಮದ್‌(ಸ)ರವರು ಕೇವಲ ಇಪ್ಪತ್ತಮೂರು ವರ್ಷಗಳ ತಮ್ಮ ದೌತ್ಯಜೀವನದ ಅತಿಸಂಕ್ಷಿಪ್ತ ಅವಧಿಯಲ್ಲಿ ಸಂಪೂರ್ಣ ಅರಬಿ ಪರ್ಯಾಯ ದ್ವೀಪವನ್ನು ಬಹುದೇವಾರಾಧನೆ, ಅಂಧವಿಶ್ವಾಸ ಮತ್ತು ಸೃಷ್ಟಿಪೂಜೆಯಿಂದ ಏಕದೇವಾರಾಧನೆಯೆಡೆಗೆ, ಜನಾಂಗೀಯ ಕಲಹ ಮತ್ತು ಸಮರಗಳಿಂದ ರಾಷ್ಟ್ರೀಯ ಒಗ್ಗಟ್ಟು ಮತ್ತು ಭಾವೈಕ್ಯತೆಯೆಡೆಗೆ, ಮದ್ಯಪಾನ ಮತ್ತು ವ್ಯಭಿಚಾರದಿಂದ ಸಮಚಿತ್ತತೆ ಮತ್ತು ದೇವಭಕ್ತಿಯೆಡೆಗೆ, ಅನಿರ್ಬಂಧತೆ ಮತ್ತು ಅರಾಜಕತೆಯಿಂದ ಶಿಸ್ತುಬದ್ಧ ಮತ್ತು ಮಾದರೀಯೋಗ್ಯ ಜೀವನದೆಡೆಗೆ, ಪರಿಪೂರ್ಣ ದಿವಾಳಿತ್ವದಿಂದ ನೈತಿಕ ಉತ್ಕೃಷ್ಟತೆಯ ಪಾರಮ್ಯದೆಡೆಗೆ ಪರಿಪೂರ್ಣವಾಗಿ ಪರಿವರ್ತಿಸಿದರು. ಮಾನವ ಚರಿತ್ರೆಯು ಎಂದೂ ಕಂಡರಿಯದ ಅಥವಾ ಆಲಿಸಿರದ ಇಂತಹ ಅಭೂತಪೂರ್ವ ಮತ್ತು ಅಮೂಲಾಗ್ರ ಬದಲಾವಣೆ! ಮತ್ತೆ ಊಹಿಸಿರಿ! ನಂಬಲಸಾಧ್ಯವಾದ ಈ ಅದ್ಭುತಗಳೆಲ್ಲವೂ ಕೇವಲ ಎರಡು ದಶಕಗಳ ಹೃಸ್ವಾವಧಿಯಲ್ಲಿ ಸಂಭವಿಸಿವೆ. 

 

ಸುಪ್ರಸಿದ್ಧ ಇತಿಹಾಸ ತಜ್ಞರಾದ ಲಾಮರ್‌ಟೈನ್ (Lamartine) ಮಾನವ ಶ್ರೇಷ್ಠತೆಗಿರುವ ಆವಶ್ಯಕತೆಗಳ ಕುರಿತು ವಿವರಿಸುತ್ತಾ ಹೇಳುತ್ತಾರೆ:

If greatness of purpose, smallness of means and astounding results are the three criteria of human genius, who would dare to compare any great man in modern history with Muhammad?  The most famous men created arms, laws and empires only.  They founded if anything at all, no more than material powers which often crumbled away before their eyes.  This man moved not only armies, legislations, empires, peoples and dynasties, but millions of men in one-third of the then inhabited world; and more than that he moved the altars, the gods, the religions, the ideas, the beliefs and souls….his forbearance in victory, his ambition, which was entirely devoted to one idea and in no manner striving for an empire; his endless prayers, his mystic conversations with God, his death and his triumph after death; all these attest not to an imposter but to a firm conviction which gave him the power to restore a dogma.  This dogma was two-fold, the unity of God and the immateriality of God; the former telling what God is, the latter telling what God is not; the one overthrowing false gods with the sword, the other starting an idea with the words.  Philosopher, orator, apostle, legislator, warrior, conqueror of ideas, restorer of rational dogmas, of a cult without images, the founder of twenty terrestrial empires and of one spiritual empire, that is Muhammad.  As regards all the standards by which human greatness may be measured, we may well ask, is there any man greater than he?  (Lamartine, Historie de la Turquie, Paris, 1854, vol. II,  pp. 276-277)

ಉದ್ದೇಶದ ಪ್ರಾಧಾನ್ಯತೆ, ಉಪಕರಣಗಳ ಮಿತತ್ವ ಮತ್ತು ದಿಗಿಲುಗೊಳಿಸುವಂತಹ ಫಲಿತಾಂಶಗಳು ಓರ್ವ ವ್ಯಕ್ತಿಯ ಶ್ರೇಷ್ಠತೆಯನ್ನು ಅಳೆಯಲು ಮೂರು ಮಾನದಂಡಗಳಾಗಿದ್ದರೆ, ಮುಹಮ್ಮದ್‌ರೊಂದಿಗೆ ಆಧುನಿಕ ಇತಿಹಾಸದ ಯಾವುದೇ ಶ್ರೇಷ್ಠ ವ್ಯಕ್ತಿಯನ್ನು ಹೋಲಿಸಲು ಧೈರ್ಯಪಡುವವರಾರು? ಅತಿಪ್ರಸಿದ್ಧ ವ್ಯಕ್ತಿಗಳು ಕೇವಲ ಶಸ್ತ್ರಾಸ್ತ್ರ, ಕಾನೂನು ಮತ್ತು ಸಾಮ್ರಾಜ್ಯಗಳನ್ನಷ್ಟೇ ನಿರ್ಮಿಸಿದರು.  ಕೊನೆಗೆ ಅವರು ಏನನ್ನಾದರೂ ಸಾಧಿಸಿದ್ದರೆ ಅದು ಅವರ ಕಣ್ಣುಗಳ ಮುಂದೆಯೇ ನಿರಂತರವಾಗಿ ಹೊಸಕಿ ಹಾಕಲ್ಪಡುತ್ತಿದ್ದ ಭೌತಿಕ ಅಧಿಕಾರಗಳಲ್ಲದೆ ಬೇರೇನೂ ಆಗಿರಲಿಲ್ಲ. ಆದರೆ ಈ ವ್ಯಕ್ತಿ (ಮುಹಮ್ಮದ್) ಸೈನ್ಯಗಳನ್ನೂ, ಶಾಸನಗಳನ್ನೂ, ಸಾಮ್ರಾಜ್ಯಗಳನ್ನೂ, ಜನರನ್ನೂ, ರಾಜವಂಶಗಳನ್ನೂ ಮುನ್ನಡೆಸಿದ್ದು ಮಾತ್ರವಲ್ಲದೆ ಅಂದಿನ ಜಾಗತಿಕ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟಿದ್ದ ಕೋಟ್ಯಂತರ ಜನತೆಯನ್ನು ಮುನ್ನಡೆಸಿದ್ದರು. ಅದಕ್ಕಿಂತ ಮಿಗಿಲಾಗಿ ಅವರು (ಜನರಲ್ಲಿ ಮನೆಮಾಡಿದ್ದ) ಬಲಿಪೀಠಗಳು, ದೇವರುಗಳು, ಧರ್ಮಗಳು, ಪರಿಕಲ್ಪನೆಗಳು, ನಂಬಿಕೆಗಳು ಮತ್ತು ಆತ್ಮಗಳೆಲ್ಲವನ್ನೂ ಬದಲಾಯಿಸಿದರು.ಗೆದ್ದಾಗ ಅವರಿಗಿದ್ದ ಆತ್ಮಸಂಯಮ, ಅವರ ಮಹತ್ವಾಕಾಂಕ್ಷೆ, ಎಲ್ಲವನ್ನೂ ಸಂಪೂರ್ಣವಾಗಿ ಒಂದೇ ಗುರಿಯತ್ತ ಸಮರ್ಪಿಸಲಾಗಿತ್ತು. ಇದು ಯಾವುದೇ ರೀತಿಯಲ್ಲೂ ಒಂದು ಸಾಮ್ರಾಜ್ಯ ಸ್ಥಾಪನೆಯತ್ತ ನಡೆಸಿದ ಹೋರಾಟವಾಗಿರಲಿಲ್ಲ. ಅವರ ಕೊನೆಯಿಲ್ಲದ ಪ್ರಾರ್ಥನೆಗಳು, ತನ್ನ ದೇವನೊಡನೆ ನಡೆಸುವ ನಿಗೂಢ ಸಂಭಾಷಣೆಗಳು, ಅವರ ಮರಣ ಮತ್ತು ಮರಣಾನಂತರದ ವಿಜಯ, ಎಲ್ಲವೂ ಅವರೊಬ್ಬ ವಿಶಿಷ್ಠ ವ್ಯಕ್ತಿಯಾಗಲು ಬಯಸಿದ ನಯವಂಚಕನೆಂದು ದೃಢೀಕರಿಸುವುದಿಲ್ಲ. ಬದಲಾಗಿ ಒಂದು ಸಿದ್ಧಾಂತವನ್ನು ಸಂರಕ್ಷಿಸುವುದಕ್ಕಾಗಿ ಅವರಿಗೆ ಶಕ್ತಿ ನೀಡುತ್ತಿರುವ ಒಂದು ಬಲಿಷ್ಠವಾದ ವಿಶ್ವಾಸದಾರ್ಢ್ಯತೆಯು ಅವರಲ್ಲಿತ್ತೆಂಬುದನ್ನು ದೃಢೀಕರಿಸುತ್ತದೆ. ಈ ಸಿದ್ಧಾಂತವು ಎರಡೆಸಲಿನಂತಿದೆ.ದೇವನ ಏಕತ್ವ ಮತ್ತು ದೇವನ ಅಭೌತಿಕತೆ. ಮೊದಲನೆಯದು ದೇವನು ಏನು ಎಂಬುದನ್ನು ಸೂಚಿಸುತ್ತದೆ ಮತ್ತು ಎರಡನೆಯದು ದೇವನು ಏನು ಅಲ್ಲ ಎಂಬುದನ್ನು ಸೂಚಿಸುತ್ತದೆ. ಒಂದು ಖಡ್ಗದೊಂದಿಗೆ ಮಿಥ್ಯ ದೇವರುಗಳನ್ನು ಕಿತ್ತೊಗೆಯುವಾಗ ಮತ್ತೊಂದು ಮಾತುಗಳ ಮೂಲಕ ಚಿಂತನೆಗಳಿಗೆ ಚಾಲನೆ ನೀಡುತ್ತದೆ. ತತ್ವಜ್ಞಾನಿ, ವಾಗ್ಮಿ, ಧರ್ಮಪ್ರಚಾರಕ, ಶಾಸನಕಾರ, ಯೋಧ, ಊಹೆಗಳನ್ನು ದಮನಿಸಿದವನು, ವೈಚಾರಿಕ ಸಿದ್ಧಾಂತಗಳ, ಪ್ರತಿಮೆಗಳಿಲ್ಲದ ಉಪಾಸನಾ ಪದ್ಧತಿಯ ಸಂರಕ್ಷಕ, ಇಪ್ಪತ್ತು ಭೂಸಾಮ್ರಾಜ್ಯಗಳ ಮತ್ತು ಒಂದು ಆಧ್ಯಾತ್ಮಿಕ ಸಾಮ್ರಾಜ್ಯದ ಸ್ಥಾಪಕ, ಅವರೇ ಮುಹಮ್ಮದ್. ಮನುಷ್ಯ ಶ್ರೇಷ್ಠತೆಯನ್ನಳೆಯುವ ಸರ್ವ ಮಾನದಂಡಗಳನ್ನು ಬಳಸಿ ಪರಿಶೋಧಿಸಿದ ನಂತರ ಖಂಡಿತವಾಗಿಯೂ ನಾವು ಕೇಳುವೆವು. ಮುಹಮ್ಮದ್‌ರಿಗಿಂತಲೂ ಶ್ರೇಷ್ಠವಾದ ವ್ಯಕ್ತಿ ಯಾರಾದರೂ ಇದ್ದಾರೆಯೇ?

 

ಈ ಜಗತ್ತು ಅದೆಷ್ಟೋ ಶ್ರೇಷ್ಠ ವ್ಯಕ್ತಿಗಳನ್ನು ಹೊರತಂದಿದೆ. ಆದರೆ ಅವರೆಲ್ಲರೂ ಧಾರ್ಮಿಕ ಚಿಂತನೆ ಅಥವಾ ಸೇನಾ ನಾಯಕತ್ವದಂತಹ ಒಂದೆರಡು ಕ್ಷೇತ್ರಗಳಲ್ಲಿ ಮಾತ್ರ ತಮ್ಮನ್ನು ಪರಿಚಯಿಸಿದ ಏಕಮುಖಿಗಳಾಗಿದ್ದರು. ಜಗತ್ತಿನ ಇಂತಹ ಶ್ರೇಷ್ಠ ವ್ಯಕ್ತಿಗಳ ಜೀವನಶೈಲಿ ಮತ್ತು ಉಪದೇಶಗಳು ಕಾಲಗರ್ಭದಲ್ಲಿ ಮರೆಯಾಗಿ ಹೋಗಿವೆ. ಅವರ ಜನ್ಮ ಸಮಯದಲ್ಲಿ ಮತ್ತು ಸ್ಥಳದಲ್ಲಿ, ಅವರ ಜೀವನದ ರೀತಿನೀತಿಗಳಲ್ಲಿ, ಅವರ ಮತಪ್ರಚಾರಕಾರ್ಯಗಳ ಸ್ವರೂಪ ಮತ್ತು ವಿವರಣೆಗಳಲ್ಲಿ, ಅವರ ಸೋಲು ಗೆಲುವಿನ ಶ್ರೇಣಿ ಮತ್ತು ಪ್ರಮಾಣಗಳಲ್ಲಿ ನೈಜ ಸಂಗತಿಗಳಿಗಿಂತಲೂ ಅಧಿಕವಾಗಿ ಊಹಾಪೋಹಗಳೇ ತುಂಬಿಕೊಂಡಿವೆ. ಮಾತ್ರವಲ್ಲದೆ ಅವರ ಜೀವನಶೈಲಿ ಮತ್ತು ಮತಪ್ರಚಾರ ಕಾರ್ಯಗಳನ್ನು ಸಮಗ್ರವಾಗಿ ಅಥವಾ ನಿಖರವಾಗಿ ಚಿತ್ರೀಕರಿಸುವುದು ಕೂಡ ಅಸಾಧ್ಯವಾಗಿದೆ.  ಆದರೆ ಮುಹಮ್ಮದ್‌(ಸ)ರವರು ಇದಕ್ಕೆ ಭಿನ್ನವಾಗಿದ್ದಾರೆ. ಮನುಷ್ಯ ಕಲ್ಪನೆ ಮತ್ತು ವರ್ತನೆಗಳ ವಿವಿಧ ಸ್ತರಗಳಲ್ಲಿ ಮಾನವೇತಿಹಾಸದ ಪುಟಗಳಲ್ಲಿ ಪೂರ್ಣಚಂದ್ರನಂತೆ ಪ್ರಜ್ವಲಿಸುವವರಾಗಿದ್ದಾರೆ ಅವರು. ಅವರ ಚಿತ್ರವನ್ನಾಗಲಿ ಪ್ರತಿಮೆಯನ್ನಾಗಲಿ ಜಗತ್ತಿನ ಯಾವ ಮೂಲೆಯಲ್ಲೂ ದರ್ಶಿಸಲಸಾಧ್ಯ!

 

ಅವರ ಅತ್ಯಂತ ವೈಯುಕ್ತಿಕವಾದ ಕರ್ಮಗಳಿಂದ ತೊಡಗಿ ಅವರ ಸಾರ್ವಜನಿಕ ಸಂಭಾಷಣೆಗಳ ವರೆಗಿನ ಸರ್ವವನ್ನೂ ಅತಿಸುರಕ್ಷಿತವಾಗಿ ಮತ್ತು ಅತ್ಯಂತ ಪ್ರಾಮಾಣಿಕವಾಗಿ ಇಂದಿನವರೆಗೂ ಸಂರಕ್ಷಿಸಿಡಲಾಗಿದೆ. ಈ ರೀತಿ ಸಂರಕ್ಷಿಸಿಡಲಾದ ದಾಖಲೆಗಳು ಅಧಿಕೃತವಾದುದೆಂದು ಅವರ ವಿಶ್ವಾಸಾರ್ಹ ಅನುವರ್ತಿಗಳು ಮಾತ್ರವಲ್ಲದೆ ಅವರ ಕಟುಟೀಕಾಕಾರರು ಕೂಡ ದೃಢೀಕರಿಸುತ್ತಾರೆ.  ಮನುಷ್ಯ ಸ್ವಭಾವದ ಸರ್ವ ಅನುಕರಣೀಯ ಮಾದರಿಗಳೂ ಅವರಲ್ಲಿ ಪ್ರಚಂಡ ವೈಭವದೊಂದಿಗೆ ಹೊಳೆಯುತ್ತಿದ್ದವು.

 

ಮುಹಮ್ಮದ್‌(ಸ)ರವರು ಓರ್ವ ಧಾರ್ಮಿಕ ಶಿಕ್ಷಕ, ಸಮಾಜ ಸುಧಾರಕ, ನ್ಯಾಯ ನೀತಿಯ ಮಾರ್ಗದರ್ಶಕ, ಆಡಳಿತಾಧಿಕಾರಿ, ಪ್ರಾಮಾಣಿಕ ಗೆಳೆಯ, ಅದ್ಭುತ ಸಹಚರ, ತ್ಯಾಗ ಮನೋಭಾವದ ಪತಿ, ಪ್ರೀತಿವಾತ್ಸಲ್ಯ ತುಂಬಿದ ತಂದೆ ಎಲ್ಲವೂ ಆಗಿದ್ದರು. ಜೀವನದ ಈ ವಿಭಿನ್ನ ಮಗ್ಗಲುಗಳಲ್ಲಿ ಅವರನ್ನು ಮೀರಿದ ಅಥವಾ ಅವರಿಗೆ ಸರಿಸಮಾನರಾದ ಇನ್ನೋರ್ವ ವ್ಯಕ್ತಿ ಮಾನವ ಚರಿತ್ರೆಯಲ್ಲಿಲ್ಲ. ಇಂತಹ ನಂಬಲಸಾಧ್ಯವಾದ ಸಮಗ್ರತೆಯನ್ನು ಸಾಧಿಸಲು ಅವರಿಗಿದ್ದ ನಿಸ್ವಾರ್ಥ ಮನೋಭಾವವೇ ಪ್ರಮುಖ ಕಾರಣವಾಗಿತ್ತು.

 

ಮಹಾತ್ಮಾ ಗಾಂಧಿ (Mahatma Gandhi), ಮುಹಮ್ಮದ್‌(ಸ)ರವರ ವ್ಯಕ್ತಿತ್ವದ ಕುರಿತು ಮಾತನಾಡುತ್ತಾ ಯಂಗ್ ಇಂಡಿಯಾದಲ್ಲಿ ಹೇಳುತ್ತಾರೆ:

I wanted to know the best of one who holds undisputed sway over the hearts of millions of mankind…… I became more than convinced ever that it was not the sword that won a place for Islam in those days in the scheme of life.  It was the rigid simplicity, the utter self-effacement of the Prophet, the scrupulous regard for his pledges, his intense devotion to his friends and followers, his intrepidity, his fearlessness, his absolute trust in God and in his own mission.  These and not the sword carried everything before them and surmounted every obstacle.  When I closed the second volume (of the Prophet’s biography), I was sorry there was not more for me to read of that great life.

ಮಾನವ ಸಮೂಹದ ಕೋಟ್ಯಂತರ ಹೃದಯಗಳಲ್ಲಿ ವಿವಾದರಹಿತವಾಗಿ ಪ್ರಭುತ್ವವನ್ನು ಸ್ಥಾಪಿಸಿದ ಓರ್ವ ಅತ್ಯುನ್ನತ ವ್ಯಕ್ತಿಯ ಕುರಿತು ತಿಳಿಯಬಯಸಿದ್ದೆ…. ಅಂದಿನ ಜೀವನ ರಂಗದಲ್ಲಿ ಇಸ್ಲಾಮಿಗೆ ಸ್ಥಾನವನ್ನು ಗಳಿಸಿಕೊಟ್ಟದ್ದು ಖಡ್ಗವಲ್ಲ ಬದಲಾಗಿ ಪ್ರವಾದಿಯ ತೀವ್ರ ನಿರಾಡಂಬರತೆ, ಪರಿಪೂರ್ಣ ನಿಷ್ಕಾಪಟ್ಯತೆ, ವಾಗ್ದಾನಗಳ ಕುರಿತು ಆತ್ಯಂತಿಕವಾದ ನಿಷ್ಠೆ, ತನ್ನ ಸ್ನೇಹಿತರು ಮತ್ತು ಅನುವರ್ತಿಗಳಿಗೆ ಅವರು ನೀಡುತ್ತಿದ್ದ ತೀವ್ರ ಪರಿಗಣನೆ, ಮತಪ್ರಚಾರ ಕಾರ್ಯದ ಕುರಿತು ಅವರಿಗಿದ್ದ ಎದೆಗಾರಿಕೆ, ನಿರ್ಭಯತೆ ಮತ್ತು ದೇವನಲ್ಲಿದ್ದ ಪರಿಪೂರ್ಣ ನಂಬಿಕೆ ಮತ್ತು ಭರವಸೆಗಳಾಗಿದ್ದವು ಎಂಬ ವಾಸ್ತವಿಕತೆಯನ್ನು ನಾನು ಚೆನ್ನಾಗಿ ಮನದಟ್ಟುಮಾಡಿಕೊಂಡೆ. ಇವುಗಳಾಗಿದ್ದವು ಅವರ ಮುಂದಿದ್ದ ಸರ್ವ ಅಡೆತಡೆಗಳನ್ನು ನಿವಾರಿಸಿದ ಅಸ್ತ್ರವೇ ಹೊರತು ಖಡ್ಗವಾಗಿರಲಿಲ್ಲ. ನಾನು (ಪ್ರವಾದಿ ಜೀವನಚರಿತ್ರೆಯ) ಎರಡನೇ ಭಾಗವನ್ನು ಓದಿ ಮುಚ್ಚಿದಾಗ ಆ ಶ್ರೇಷ್ಠ ಜೀವನದ ಕುರಿತು ಇನ್ನೇನೂ ಓದಲು ಉಳಿದಿಲ್ಲವೆಂದು ಮರುಕಪಟ್ಟಿದ್ದೆ.

 

ಥಾಮಸ್ ಕಾರ್ಲೈಲ್ (Thomas Carlyle) ತನ್ನ Heroes and Hero Worship ನಲ್ಲಿ ಬರೆಯುತ್ತಾರೆ:

how one man single handedly, could weld warring tribes and wandering bedouins into a most powerful and civilized nation in less than two decades?

ಯುದ್ಧನಿರತ ಜನಾಂಗಗಳನ್ನೂ, ಅಲೆಮಾರಿ ಅರಬಿಗಳನ್ನೂ ಎರಡು ದಶಕಗಳಿಗಿಂತಲೂ ಹೃಸ್ವಾವಧಿಯಲ್ಲಿ ಓರ್ವ ವ್ಯಕ್ತಿ ಏಕಾಂಗಿಯಾಗಿ ಒಂದು ಸುದೃಢ ಮತ್ತು ಸುಸಂಸ್ಕೃತ ರಾಷ್ಟ್ರವನ್ನಾಗಿ ಪರಿವರ್ತಿಸಿದ್ದಾದರೂ ಹೇಗೆ?

 

ಕಾರ್ಲೈಲ್ ಮುಂದುವರಿಯುತ್ತಾ ಮುಹಮ್ಮದ್‌(ಸ)ರವರ ವ್ಯಕ್ತಿತ್ವದ ಕುರಿತು ಬರೆಯುತ್ತಾರೆ:

He visited the sick, followed any bier he met, accepted the invitation of slave of dinner, mended his own clothes, milked goats and waited upon himself, relates summarily another tradition: He never withdrew his hand of another man’s palm and turned not before the other hand turned. His household was of the frugalest; his common diet barley, bread and water; sometimes for months there was not a fire once lighted on his hearth.  They recorded with just pride that he would mend his own cloth, his own shoes, patch his own cloak.  A poor, hard toiling, ill provided man; careless of what vulgar men toil for……No emperor with his tiaras was obeyed as this man in a cloak of his own clothing.

ಮುಹಮ್ಮದ್ ರೋಗಿಗಳನ್ನು ಸಂದರ್ಶಿಸುತ್ತಿದ್ದರು, ಯಾರಾದರೂ ಮೃತದೇಹವನ್ನು ಹೊತ್ತೊ ಯ್ಯುವುದನ್ನು ಕಂಡರೆ ಅದನ್ನು ಹಿಂಬಾಲಿಸುತ್ತಿದ್ದರು, ಗುಲಾಮರ ಔತಣದೂಟದ ಆಮಂತ್ರಣಗಳನ್ನು ಸ್ವೀಕರಿಸುತ್ತಿದ್ದರು, ತಮ್ಮ ವಸ್ತ್ರಗಳನ್ನು ತಾವೇ ಹೊಲಿಯುತ್ತಿದ್ದರು, ಆಡುಗಳನ್ನು ತಾವೇ ಸ್ವತಃ ಹಾಲು ಹಿಂಡುತ್ತಿದ್ದರು, ಮತ್ತು ಅವುಗಳನ್ನು ತಾವೇ ಸ್ವತಃ ಮೇಯಿಸುತ್ತಿದ್ದರು. ಇನ್ನೊಂದು ಚರ್ಯೆಯು (ಹದೀಸ್) ಹೀಗೆನ್ನುತ್ತದೆ: ಯಾರಾದರೂ ಹಸ್ತಲಾಘವ ಮಾಡಿದರೆ ಆ ವ್ಯಕ್ತಿ ತನ್ನ ಕೈಯನ್ನು ಹಿಂದಕ್ಕೆಳೆಯುವವರೆಗೆ ಅವರು ತಮ್ಮ ಕೈಯನ್ನು ಹಿಂದೆಳೆಯುತ್ತಿರಲಿಲ್ಲ. ಆ ವ್ಯಕ್ತಿ ತಮ್ಮ ಬಳಿಯಿಂದ ಹೊರಡುವವರೆಗೆ ಅವರು ಅಲ್ಲಿಂದ ಕದಲುತ್ತಿರಲಿಲ್ಲ.  ಅವರ ಕುಟುಂಬವು ಅತ್ಯಂತ ಮಿತವ್ಯಯಿಯಾಗಿತ್ತು, ಅವರ ದೈನಂದಿನ ಆಹಾರ ಗಂಜಿ, ರೊಟ್ಟಿ ಮತ್ತು ನೀರಾಗಿದ್ದವು.  ಕೆಲವೊಮ್ಮೆ ಅವರ ಮನೆಯ ಒಲೆಯಲ್ಲಿ ತಿಂಗಳುಗಳವರೆಗೆ ಬೆಂಕಿಯುರಿಸಲ್ಪಡುತ್ತಿರಲಿಲ್ಲ, ಅವರು ತಮ್ಮ ಬಟ್ಟೆಗಳನ್ನು ತಾವೇ ಸ್ವತಃ ಹೊಲಿಯುತ್ತಿದ್ದರು, ತಮ್ಮ ಚಪ್ಪಲಿಗಳನ್ನು ತಾವೇ ಸ್ವತಃ ಸರಿಪಡಿಸುತ್ತಿದ್ದರು, ತಮ್ಮ ಹರಿದ ಅಂಗಿಯನ್ನು ತಾವೇ ಸ್ವತಃ ತೇಪೆಹಚ್ಚುತ್ತಿದ್ದರೆಂದು ಅವರು (ಅನುಯಾಯಿಗಳು) ಅತ್ಯಂತ ಹೆಮ್ಮೆಯಿಂದ ದಾಖಲಿಸಿದ್ದಾರೆ. ಸಾಮಾನ್ಯ ಜನರು ಪರಿಶ್ರಮಿಸುವಂತೆ ಪರಿಶ್ರಮಿಸುವ ಓರ್ವ ಬಡವ, ಓರ್ವ ಕಠಿಣ ಪರಿಶ್ರಮಿ ಮತ್ತು ಸವಲತ್ತುಗಳಿಲ್ಲದ ವ್ಯಕ್ತಿಯಾಗಿದ್ದರು ಅವರು….. ತಾನೇ ಸ್ವತಃ ತೇಪೆ ಹಚ್ಚಿದ ವಸ್ತ್ರಗಳನ್ನು ಧರಿಸಿದ ಈ ವ್ಯಕ್ತಿಯನ್ನು ಅನುಸರಿಸಿದಂತೆ ಜಗತ್ತಿನ ಯಾವುದೇ ಮಹಾನ್ ಸಾಮ್ರಾಟನನ್ನೂ ಜನರು ಅನುಸರಿಸಿಲ್ಲ.

 

ದೀವಾನ್ ಚಂದ್ ಶರ್ಮಾ (Diwan Chand Sharma) ಬರೆಯುತ್ತಾರೆ:

Muhammad was the soul of kindness, and his influence was felt and never forgotten by those around him.  (D. C. Sharma, The Prophets of the East, Calcutta, 1935.  pp. 12)

ಮುಹಮ್ಮದ್ ಕರುಣೆಯ ಆತ್ಮವಾಗಿದ್ದರು. ಅವರ ಸುತ್ತಮುತ್ತಲ ಜನರು ಅವರ ಪ್ರಭಾವವನ್ನು ಅನುಭವಿಸಿದರು ಮತ್ತು ಅವರದನ್ನು ಮರೆಯಲೇ ಇಲ್ಲ.

 

ಎಡ್ವರ್ಡ್ ಗಿಬ್ಬನ್ ಮತ್ತು ಸೈಮನ್ ಓಕ್ಲಿ (Edward Gibbon & Simon Ockley) ಬರೆಯುತ್ತಾರೆ:

I believe in one God, and Muhammad, apostle of God is the simple and invariable profession of Islam

ನಾನು ಏಕದೇವನಲ್ಲಿ ವಿಶ್ವಾಸವಿಟ್ಟಿದ್ದೇನೆ ಮತ್ತು ಮುಹಮ್ಮದ್ ದೇವನ ಸಂದೇಶವಾಹಕರೆಂದು ವಿಶ್ವಾಸವಿಟ್ಟಿದ್ದೇನೆ, ಇದು ಇಸ್ಲಾಮಿನ ಸರಳ ಮತ್ತು ಸುಸ್ಥಿರವಾದ ಪ್ರಕಟನೆಯಾಗಿದೆ.

The intellectual image of the deity has never been degraded by any visible idol; the honour of the Prophet have never transgressed the measure of human virtues; and his living precepts have restrained the gratitude of this disciples within the bounds of reason and religion. (Edward Gibbon and Simon Ockley, History of the Saracen Empires, London, 1870. p. 54)

ದೇವನ ಬೌದ್ಧಿಕ ರೂಪವನ್ನು ಯಾವುದೇ ಪ್ರತ್ಯಕ್ಷ ಪ್ರತಿಮೆಗಳ ರೂಪದಲ್ಲಿ ಹೀನಾಯಿಸಲಾಗಿಲ್ಲ.  ಪ್ರವಾದಿಯ ಗೌರವವು ಮಾನವ ಸಂಪನ್ನತೆಯ ಮಿತಿಯನ್ನು ಮೀರಿಲ್ಲ. ಅವರ ಜೀವಂತ ನಿಯಮ ನಿರ್ದೇಶನಗಳು ವಿವೇಚನಾಶಕ್ತಿ ಮತ್ತು ಧರ್ಮದ ಚೌಕಟ್ಟಿನೊಳಗೆ ಅವರ ಶಿಷ್ಯರ ಕೃತಜ್ಞತೆಯನ್ನು ಸಂರಕ್ಷಿಸಿದೆ.

 

ಮುಹಮ್ಮದ್‌(ಸ)ರವರು ಓರ್ವ ಮನುಷ್ಯರಲ್ಲದೆ ಬೇರೇನೂ ಆಗಿರಲಿಲ್ಲ. ಅವರೊಂದು ಉದಾತ್ತವಾದ ಧರ್ಮದ ಪ್ರಚಾರಕರಾಗಿದ್ದರು. ಬಹುಜನರೂ ಅಪಾರ್ಥಮಾಡಿಕೊಂಡಿರುವಂತೆ ಅದು ಅವರು ಸ್ವಯಂ ನಿರ್ಮಿಸಿದ ಧರ್ಮವಲ್ಲ. ಬದಲಾಗಿ ಅವರಿಗಿಂತ ಮೊದಲು ನಿಯುಕ್ತರಾಗಿದ್ದ ಪ್ರವಾದಿಗಳೆಲ್ಲರೂ ಬೋಧಿಸಿದ ಅದೇ ಧರ್ಮವಾಗಿತ್ತು.  ಎಲ್ಲಾ ಪ್ರವಾದಿಗಳೂ ತಮ್ಮ ಸಮೂಹಗಳಿಗೆ ಬೋಧಿಸಿದಂತೆ ಅವರೂ ಕೂಡ ಏಕೈಕನಾದ ದೇವನನ್ನು ಮಾತ್ರ ಆರಾಧಿಸಬೇಕು, ಅವನೊಂದಿಗೆ ಮಾತ್ರ ಪ್ರಾರ್ಥಿಸಬೇಕು, ಅವನ ನಿಯಮನಿರ್ದೇಶನಕ್ಕನುಸೃತವಾಗಿ ಜೀವನವನ್ನು ಸರಿಪಡಿಸಿ ಮುನ್ನಡೆಸಬೇಕು ಎಂದು ಬೋಧಿಸಿದ್ದರು. 

 

ಭಾರತದ ಪ್ರಸಿದ್ಧ ಕವಯಿತ್ರಿಯಾದ ಸರೋಜಿನಿ ನಾಯ್ಡು (Sarojini Naidu) ಇಸ್ಲಾಮಿನಲ್ಲಿ ದೇವನ ಮುಂದೆ ನಿಲ್ಲುವ ಸಮಾನತೆಯ ನೋಟವನ್ನು ವೀಕ್ಷಿಸುತ್ತಾ ಹೇಳುತ್ತಾರೆ:

It was the first religion that preached and practiced democracy for, in the mosque, when the call for prayer is sounded and worshippers are gathered together, the democracy of Islam is embodied five times a day when the peasant and the king kneel side by side and proclaim: “God Alone is Great.”  I have been struck over and over again by this indivisible unity of Islam that makes man instinctively a brother.  (S. Naidu, Ideals of Islam, vide speeches & writings, Madras, 1918, p 169)

ಪ್ರಜಾಪ್ರಭುತ್ವವನ್ನು ಬೋಧಿಸಿ ಪ್ರಾಯೋಗಿಕಗೊಳಿಸಿದ ಪ್ರಪ್ರಥಮ ಧರ್ಮವಾಗಿದೆ ಇಸ್ಲಾಮ್.  ಮಸೀದಿಯಿಂದ ಪ್ರಾರ್ಥನೆಗಾಗಿ ಕರೆಯಲ್ಪಟ್ಟಾಗ ಭಕ್ತರೆಲ್ಲರೂ ಸಾಲುಸಾಲಾಗಿ ಸೇರಿ, ರೈತ ರಾಜನೆಂಬ ವ್ಯತ್ಯಾಸವಿಲ್ಲದೆ ಭುಜಕ್ಕೆ ಭುಜ ಸೇರಿಸಿ, ದೇವನ ಮುಂದೆ ಸಾಷ್ಟಾಂಗವೆರಗುತ್ತಾ ದೇವನೊಬ್ಬನೇ ದೊಡ್ಡವನು ಎನ್ನುವಾಗ ಇಸ್ಲಾಮಿನ ಪ್ರಜಾಪ್ರಭುತ್ವ ದೈನಿಕವಾಗಿ ಐದು ಬಾರಿ ಗೋಚರಿಸುತ್ತದೆ.  ಮನುಷ್ಯನನ್ನು ಜನ್ಮತಃ ಸಹೋದರನಾಗಿ ಪರಿಗಣಿಸುವ ಇಸ್ಲಾಮಿನ ಈ ಅವಿಭಾಜಿತ ಐಕ್ಯತೆಯು ನನ್ನನ್ನು ಬಾರಿಬಾರಿಗೂ ದಿಗ್ಭ್ರಮೆಗೊಳಿಸುತ್ತಿದೆ.

 

ಪ್ರೊ. ಹರ್‌ಗ್ರೋಂಜೆ (Prof. Hurgronje)ಯವರ ಮಾತುಗಳಲ್ಲಿ:

the league of nations founded by the Prophet of Islam put the principle of international unity and human brotherhood on such universal foundations as to show candle to other nations…… the fact is that no nations of the world can show a parallel to what Islam has done towards the realization of the idea of the League of Nations

ಇಸ್ಲಾಮಿನ ಪ್ರವಾದಿಯಿಂದ ಶೋಧಿಸಲ್ಪಟ್ಟ ರಾಷ್ಟ್ರಗಳ ಒಕ್ಕೂಟವು ಇತರ ರಾಷ್ಟ್ರಗಳಿಗೆ ಬೆಳಕು ತೋರಿಸುವ ಅಂತಹ ಜಾಗತಿಕ ಪ್ರತಿಷ್ಠಾನಗಳಿಗೆ ಅಂತರಾಷ್ಟ್ರೀಯ ಐಕ್ಯತೆ ಮತ್ತು ಮಾನವ ಭಾತೃತ್ವದ ತತ್ವವನ್ನು ಕಲಿಸಿಕೊಟ್ಟಿತ್ತು… ರಾಷ್ಟ್ರಗಳ ಒಕ್ಕೂಟದ ಕಲ್ಪನೆಯನ್ನು ಸಾಧಿಸಲು ಇಸ್ಲಾಮ್ ಮಾಡಿದ್ದಕ್ಕೆ ಸಮಾನಾಂತರವಾದ ಒಂದು ಪ್ರಯತ್ನ ಮಾಡಲು ಜಗತ್ತಿನ ಯಾವುದೇ ರಾಷ್ಟ್ರಕ್ಕೆ ಸಾಧ್ಯವಿಲ್ಲವೆಂಬುದು ವಾಸ್ತವಿಕತೆಯಾಗಿದೆ.

 

ತಮ್ಮ ಜೀವನಶೈಲಿ ಮತ್ತು ಬೋಧನೆಗಳು ಇತಿಹಾಸದ ಗರ್ಭಗಳಲ್ಲಿ ಹುದುಗಿಹೋದಂತಹ ವ್ಯಕ್ತಿಗಳನ್ನು ದೈವತ್ವಕ್ಕೇರಿಸಲು ಜಗತ್ತು ಒಮ್ಮೆಯೂ ನಿರಾಕರಿಸಿಲ್ಲ. ಈ ಎಲ್ಲಾ ವ್ಯಕ್ತಿಗಳು ಮುಹಮ್ಮದ್‌(ಸ)ರವರು ಸಾಧಿಸಿದ ಒಂದಂಶವನ್ನಾದರೂ ಸಾಧಿಸಿಲ್ಲವೆಂಬುದು ಐತಿಹಾಸಿಕವಾಗಿ ರುಜುವಾತಾಗಿದೆ.  ಮುಹಮ್ಮದ್‌(ಸ)ರವರ ಪ್ರತಿಯೊಂದು ಶ್ರಮವೂ ಮನುಷ್ಯರನ್ನು ಏಕದೇವಾರಾಧನೆಯೆಡೆಗೆ ಮತ್ತು ದೈವಿಕ ಶಾಸನಗಳಿಗೆ ವಿಧೇಯರಾಗಿ ಪರಸ್ಪರ ಸಹೋದರರಾಗಿ ಜೀವಿಸುವಂತೆ ಮಾಡುವ ಏಕೈಕ ಉದ್ದೇಶದಿಂದಾಗಿತ್ತು. ಅವರೆಂದೂ ತಮ್ಮನ್ನು ದೇವಪುತ್ರರೆಂದಾಗಲಿ, ದೇವಾವತಾರವೆಂದಾಗಲಿ, ದೇವಮಾನವನೆಂದಾಗಲಿ ವಾದಿಸಿಲ್ಲ. ಅವರ ಅನುಚರರೂ ಅವರನ್ನು ಆ ರೀತಿ ಪರಿಗಣಿಸಿಲ್ಲ. ಅವರು ಅಂದೂ ಇಂದೂ ದೇವಸಂದೇಶವಾಹಕ (Messenger of God) ಎಂದೇ ಪರಿಗಣಿಸಲ್ಪಟ್ಟಿದ್ದಾರೆ.

 

ಮೈಕಲ್ ಎಚ್ ಹಾರ್ಟ್ (Michael H Hart), ಮಾನವ ಕಲ್ಯಾಣಕ್ಕಾಗಿ ಶ್ರಮಿಸಿದವರನ್ನು ಪರಸ್ಪರ ತುಲನೆಗೊಳಿಸಿ, ಮುಹಮ್ಮದ್‌(ಸ)ರವರಿಗೆ ಮೊಟ್ಟಮೊದಲ ಸ್ಥಾನವನ್ನು ನೀಡುತ್ತಾರೆ.  ನಂತರ ಅದಕ್ಕಿರುವ ಕಾರಣವನ್ನು ವಿಶದೀಕರಿಸುತ್ತಾರೆ:

My choice of Muhammad to lead the list of the world’s most influential persons may surprise some readers and may be questioned by others, but he was the only man in history who was supremely successful on both the religious and secular levels.  (M. H. Hart, The 100: A Ranking of the Most Influential Persons in History, New York, 1978, pp. 33)

ಜಗತ್ತಿನ ಅತಿಪ್ರಭಾವಶಾಲಿ ವ್ಯಕ್ತಿಗಳ ಯಾದಿಯಲ್ಲಿ ನಾನು ಮುಹಮ್ಮದ್‌ರವರ ಹೆಸರನ್ನು ಮೊಟ್ಟಮೊದಲು ಸೂಚಿಸಿರುವುದು ಅನೇಕರನ್ನು ವಿಸ್ಮಯಗೊಳಿಸಬಹುದು ಮತ್ತು ಇನ್ನಿತರರನ್ನು ಪ್ರಶ್ನಿಸುವಂತೆ ಮಾಡಬಹುದು.  ಆದರೆ ಇತಿಹಾಸದಲ್ಲಿ ಧಾರ್ಮಿಕ ಮತ್ತು ಧರ್ಮಾತೀತ ಮಟ್ಟಗಳಲ್ಲಿ ಪೂರ್ಣ ಯಶಸ್ಸು ಸಾಧಿಸಿದವರು ಅವರೊಬ್ಬರೇ ಆಗಿದ್ದಾರೆ.

 

ಇಂದು ಹದಿನಾಲ್ಕು ಶತಮಾನಗಳ ಬಳಿಕ ಮುಹಮ್ಮದ್‌(ಸ)ರವರ ಜೀವನಶೈಲಿ ಮತ್ತು ಬೋಧನೆಗಳು ಯಾವುದೇ ಮಾರ್ಪಾಟುಗಳಿಲ್ಲದೆ, ತಿದ್ದುಪಡಿಗೊಳಗಾಗದೆ ಅಂದಿನ ಅದೇ ರೂಪದಲ್ಲಿ ಸಂರಕ್ಷಿಸಲ್ಪಟ್ಟಿದೆ.  ಅವರು ಜೀವಂತವಿದ್ದಾಗ ಆ ಬೋಧನೆಗಳಿಂದ ಮನುಷ್ಯಕಾಯಿಲೆಗಳು ದೂರವಾದಂತೆ ಇಂದೂ ಸಹ ಅದು ಅಷ್ಟೇ ಭರವಸೆಯನ್ನು ಹೊಂದಿದೆ.  ಇದು ಮುಹಮ್ಮದ್‌(ಸ)ರವರ ಅನುಯಾಯಿಗಳ ವಾದವಲ್ಲ.  ಬದಲಾಗಿ ಇತಿಹಾಸದಿಂದ ರುಜುವಾತಾದ ವಾಸ್ತವಿಕ ಸಂಗತಿಯಾಗಿದೆ. 

 

ಕಳೆದ ಹದಿನಾಲ್ಕು ನೂರು ಸಂವತ್ಸರಗಳಿಂದ ಕೋಟ್ಯಂತರ ಜನರ ಹೃದಯಗಳ ಮೇಲೆ ಪರಿವರ್ತನೆಯ ಪ್ರಭಾವವನ್ನು ಬೀರಿದ ಆ ಮಹಾನ್ ವ್ಯಕ್ತಿಯ ಕುರಿತು ತಿಳಿದುಕೊಳ್ಳುವ ಸರದಿ ಈಗ ನಿಮ್ಮದಾಗಿರಲೂಬಹುದು. ನೀವದಕ್ಕೆ ಸನ್ನದ್ಧರಾಗಿದ್ದೀರೆಂದಾದರೆ ಖಂಡಿತವಾಗಿಯೂ ಅದು ನಿಮ್ಮ ಬದುಕನ್ನೇ ಪರಿವರ್ತಿಸಲು ಪರ್ಯಾಪ್ತವಾಗಿದೆ.