Posted on December 17, 2011 by ವಿಶ್ವ ಕನ್ನಡಿಗ ನ್ಯೂಸ್
ಬೆಂಗಳೂರು :ವಿಧಾನ ಸಭೆಯಲ್ಲಿ ಯುವತಿಯರ ಅಪಹರಣ ಪ್ರಕರಣ ಪ್ರಸ್ತಾಪಿಸಿದ ಪುತ್ತೂರು ಶಾಸಕಿ ಮಲ್ಲಿಕಾ ಪ್ರಸಾದ್ ಹೇಳಿಕೆಯಿಂದ ಕರಾವಳಿ ಜಿಲ್ಲೆಯ ಬಿಜೆಪಿ ಸದಸ್ಯರು ಮತ್ತು ಕಾಂಗ್ರೆಸ್ ಸದಸ್ಯರು ಪರಸ್ಪರ ಮಾತಿನ ಚಕಮಕಿ ನಡೆಸಿದರು. ಬಿಜೆಪಿ ಸದಸ್ಯರು ಹಿಂದು ಯುವತಿಯರನ್ನು ಮುಸ್ಲಿಂ ಯುಕವರು ನಂಬಿಸಿ ಮತಾಂತರ ಮಾಡುತ್ತಿದ್ದಾರೆ ಎಂದು ಆಪಾದಿಸಿದರೆ, ಕಾಂಗ್ರೆಸ್ ಸದಸ್ಯರು ಕೋಮುಭಾವನೆ ಪ್ರಚೋದಿಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಶೂನ್ಯ ವೇಳೆಯಲ್ಲಿ ಪುತ್ತೂರು ಶಾಸಕಿ ಮಲ್ಲಿಕಾ ಪ್ರಸಾದ್ ವಿಷಯ ಪ್ರಸ್ತಾಪಿಸಿ, ಕರಾವಳಿ ಜಿಲ್ಲೆಗಳಲ್ಲಿ ಯುವತಿಯರ ಅಪಹರಣ ಪ್ರಕರಣಗಳು ಹೆಚ್ಚಾಗಿವೆ. ಈ ವರ್ಷದ ಜನವರಿಯಿಂದ ನವೆಂಬರ್ ಅಂತ್ಯಕ್ಕೆ ೮೪ ಯುವತಿಯರು ನಾಪತ್ತೆಯಾಗಿದ್ದಾರೆ. ಇವರಲ್ಲಿ ೬೯ ಯುವತಿಯರು ಕಾಣಿಸಿಕೊಂಡಿದ್ದು, ಅವರೆಲ್ಲರೂ ಪ್ರೀತಿ, ಪ್ರೇಮದ ಬಲೆಗೆ ಬಿದ್ದಿರುವುದು ಕಂಡು ಬಂತು. ಅಲ್ಲದೇ ಇದೇ ಸೋಗಿನಲ್ಲಿ ಯುವಕರು ಯುವತಿಯರ ಮಾರಾಟದಲ್ಲೂ ತೊಡಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಉಪಸಭಾಧ್ಯಕ್ಷ ಯೋಗೀಶ್ ಭಟ್, ಸರ್ಕಾರ ಈ ಬಗ್ಗೆ ಗಂಭೀರ ಕ್ರಮ ಜರುಗಿಸಬೇಕು. ಇದೊಂದು ಸಮಸ್ಯೆಯಾಗಿದೆ ಎಂದು ಹೇಳಿದರು. ಇದಕ್ಕೆ ಕಾಂಗ್ರೆಸ್‌ನ ರಮಾನಾಥ ರೈ, ಇದು ಕೋಮು ಸೌಹಾರ್ದತೆ ಹದಗೆಡಿಸುವ ಪ್ರಯತ್ನವಾಗಿದೆ. ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂದು ಆಪಾದಿಸಿ ಹಲ್ಲೆ ನಡೆಸಲಾಗುತ್ತಿದೆ. ಹೀಗೆ ಹಲ್ಲೆಗೊಳಗಾದವರು ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಒತ್ತಾಯಿಸಿದರು. ಇದಕ್ಕೆ ಅಭಯ್ ಚಂದ್ರಜೈನ್ ಮತ್ತಿತರರು ಧನಿಗೂಡಿಸಿದರು.
ಸುಳ್ಯ ಶಾಸಕ ಎಸ್. ಅಂಗಾರ, ಲವ್ ಜಿಹಾದಿ ಹೆಸರಿನಲ್ಲಿ ಹಿಂದೂ ಯುವತಿಯರ ಅಪಹರಣ ನಡೆಯುತ್ತಿದೆ. ನಿನ್ನೆ ನಮ್ಮ ಕ್ಷೇತ್ರದಲ್ಲಿ ಇಂತಹ ಪ್ರಕರಣದ ಬಗ್ಗೆ ಮಾಹಿತಿ ನೀಡಲು ಮುಂದಾದಾಗ ಚುನಾಯಿತ ಪ್ರತಿನಿಧಿ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರಿದರು. ಸುಳ್ಯದಲ್ಲಿ ನಡೆದ ಜಾರ್ಖಂಡ್ ಮೂಲದ ವೇಶ್ಯಾವೃತ್ತಿ ಯುವತಿಯರ ಜೊತೆಗೆ ಸಿಕ್ಕಿ ಬಿದ್ದ ಮುಸ್ಲಿಂ ಯುವಕರ ವಿಷಯ ಮುಂದಿಟ್ಟು ಈ ಮೂಲಕ ಲವ್ ಜಿಹಾದ್ ವಿಷಯಕ್ಕೆ ಮತ್ತೆ ಜೀವ ತುಂಬುವ ಪ್ರಯತ್ನವನ್ನು ಅಂಗಾರ ಮಾಡಿದರು.
ಕಳೆದ ಬಾರಿ ಸಹ ಜಿಲ್ಲೆಯಲ್ಲಿ ಇದೇ ರೀತಿ ಹುಡುಗಿಯರು ಲವ್ ಜಿಹಾದಿಗೆ ಸಿಕ್ಕಿ ಪರಾರಿಯಾಗಿದ್ದಾರೆ ಎಂದು ಇದೇ ಸಂಘಟನೆಗಳು ಆರೋಪಿಸಿದಾಗ ಬರೋಬ್ಬರಿ ಸುಮಾರು ಇಪ್ಪತ್ತೆಂಟು ಯುವತಿಯರ ಲವ್ ಮಾಡಿ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ ಸರಣಿ ಹಂತಕ ಸಯನೈಡ್ ಮೋಹನ ಸಿಕ್ಕಿ ಬಿದ್ದದ್ದನ್ನು ಸ್ಮರಿಸಬಹುದು . ಇದೀಗ ಮತ್ತೆ ಲವ್ ಜಿಹಾದಿಗೆ ಜೀವ ತುಂಬುವ ಮರು ಪ್ರಯತ್ನಗಳು ನಡೆಯುತ್ತಿವೆ .