Saturday, 15 October 2011
ಕಳ್ಳನಿಗೊಂದು ಪಿಳ್ಳೆ ನೆವ-ಎಡ್ಡಿ ಮನೆ ಬಾಗಿಲಲ್ಲಿ ಪೊಲೀಸರು
ಕಳ್ಳನಿಗೊಂದು ಪಿಳ್ಳೆ ನೆವ ಎನ್ನುವ ಗಾದೆಯಂತೆ, ಲೋಕಾಯುಕ್ತರು ಸಲ್ಲಿಸಿದ ಅಕ್ರಮ ಗಣಿಗಾರಿಕೆಯ ಕುರಿತ ವರದಿಯನ್ನು ತಿರಸ್ಕರಿಸುವುದಕ್ಕೆ ಸಾವಿರ ನೆವನಗಳನ್ನು ಹುಡುಕುತ್ತಿದೆ ಸರಕಾರ. ಇದರ ಭಾಗವಾಗಿ, ವರದಿಯಲ್ಲಿನ ಕೆಲವು ಅಂಶಗಳ ಬಗ್ಗೆ ಅದು ಆಕ್ಷೇಪಗಳನ್ನು ಎತ್ತಿದೆ. ಮೇಲ್ನೋಟಕ್ಕೆ, ಸಲಹೆ ನೀಡಿ ಎಂದು ವರದಿಯನ್ನು ಲೋಕಾಯುಕ್ತಕ್ಕೆ ಮರಳಿಸಿದೆಯಾದರೂ, ಲೋಕಾಯುಕ್ತಕ್ಕೆ ಸರಕಾರ ನೀಡಿರುವ ಶೋಕಾಸ್ ನೋಟಿಸ್ ಇದು. ಇವರ ವರದಿಯನ್ನು ಯಾಕೆ ತಿರಸ್ಕರಿಸಬಾರದು ಎನ್ನುವುದಕ್ಕೆ ಸರಕಾರ ಹಾಕಿದ ಪೀಠಿಕೆ. ಗಟ್ಟಿಯಾದರೆ ರೊಟ್ಟಿ, ತೆಳುವಾದರೆ ದೋಸೆ ಎಂಬಂತೆ, ಸರಕಾರ ಸಣ್ಣದಾಗಿ ಲೋಕಾಯುಕ್ತವನ್ನು ಚಿವುಟಿ ನೋಡುತ್ತಿದೆ. ತೀವ್ರ ಪ್ರತಿಕ್ರಿಯೆ ಬಂದರೆ ಸುಮ್ಮಗಾಗಿ ಬಿಡುವುದು, ಯಾವುದೇ ಪ್ರತಿಕ್ರಿಯೆ ಬರಲಿಲ್ಲವೆಂದಾದರೆ ವರದಿಯನ್ನು ತಿರಸ್ಕರಿಸಿ ಬಿಡುವುದು, ಇದು ಸರಕಾರ ಹಾಕಿಕೊಂಡಿರುವ ಕಾರ್ಯತಂತ್ರ.
ಸಂಪುಟ ಇಂತಹದೊಂದು ನಿರ್ಧಾರವನ್ನು ಯಾಕೆ ತಳೆಯಿತು ಎನ್ನುವುದು ನಾಡಿಗೆ ಚೆನ್ನಾಗಿ ಗೊತ್ತಿದೆ. ತನ್ನನ್ನು ತಾನು ರಕ್ಷಿಸಿಕೊಳ್ಳಬೇಕಾದರೆ ಗಣಿ ವರದಿಯನ್ನು ತಿರಸ್ಕರಿಸದೆ ಬೇರೆ ದಾರಿ ಸರಕಾರಕ್ಕಿಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ, ಅಕ್ರಮ ಗಣಿ ವರದಿಯಲ್ಲಿ ಸಿಕ್ಕು ಒದ್ದಾಡುತ್ತಿರುವ ನಾಯಕ ಮಣಿಗಳು ಮತ್ತೆ ಸಾರ್ವಜನಿಕವಾಗಿ ನೆಮ್ಮದಿಯ ಉಸಿರು ಬಿಡಬೇಕಾದರೆ ಲೋಕಾಯುಕ್ತರ ಗಣಿ ವರದಿ ತಿರಸ್ಕಾರವಾಗಲೇಬೇಕು.
ಸದಾನಂದ ಗೌಡ ಮತ್ತು ಅವರ ಬಳಗ ಯಡಿಯೂರಪ್ಪನವರ ಋಣವನ್ನು ತೀರಿಸುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಬಂದಿದೆ. ನಮ್ಮ ಸರಕಾರಕ್ಕೆ ಮುಖ್ಯ ಸಮಸ್ಯೆಯಿರುವುದೇ ಅಕ್ರಮ ಗಣಿಗಾರಿಕೆಯಲ್ಲಿ ರಾಜಕಾರಣಿಗಳ ಅದರಲ್ಲೂ ಶಾಸಕರ ಮತ್ತು ಸಚಿವರ ಹೆಸರುಗಳನ್ನು ಉಲ್ಲೇಖಿಸಿರುವುದು. ಅವರ ಹೆಸರುಗಳು ಇಲ್ಲದೇ ಇದ್ದಲ್ಲಿ ವರದಿಯನ್ನು ಅದು ಅಂಗೀಕರಿಸಿಯೇ ಬಿಡುತ್ತಿತ್ತೋ ಏನೋ? ಶಾಸಕರು ಮತ್ತು ಸಚಿವರು ಲೋಕಾಯುಕ್ತದ ವ್ಯಾಪ್ತಿಯಲ್ಲಿ ಬರುತ್ತಾರೆಯೇ ಎನ್ನುವುದು ನಮ್ಮ ಸರಕಾರದ ಸಮಸ್ಯೆ.
ಅಕ್ರಮ ಗಣಿಗಾರಿಕೆಯಲ್ಲಿ ಅವರು ಆರೋಪಿಗಳಾಗಿ ನಿಂತಿರುವುದು ಸರಕಾರಕ್ಕೆ ನಾಚಿಕೆಯೆನಿಸಿಲ್ಲ. ಅದಕ್ಕಾಗಿ ಒಂದಿಷ್ಟು ಪಶ್ಚಾತ್ತಾಪವೂ ಇಲ್ಲ. ‘‘ಕಳ್ಳರನ್ನು ಹುಡುಕುವುದು ನಿಮ್ಮ ಕೆಲಸವಲ್ಲ, ಮಾಮೂಲಿ ತಾಲೂಕು ಕಚೇರಿ ಅಧಿಕಾರಿಗಳನ್ನಷ್ಟೇ ದಬಾಯಿಸುವುದು ನಿಮ್ಮ ಕೆಲಸ’’ ಎಂದು ಲೋಕಾಯುಕ್ತಕ್ಕೆ ಮನವರಿಕೆ ಮಾಡಲು ಹೊರಟಿದೆ ಸರಕಾರ. ಅಷ್ಟೇ ಅಲ್ಲ, ಲೋಕಾಯುಕ್ತ ವರದಿಯ ಅಂಗೀಕಾರವನ್ನು ಆದಷ್ಟು ಮುಂದೆ ಎಳೆದೊಯ್ಯುವುದು, ಚುನಾವಣೆಯವರೆಗೂ ಕಣ್ಣಾ ಮುಚ್ಚಾಲೆಯಾಡುತ್ತಾ ದಿನ ದೂಡುವುದು ಸರಕಾರದ ಉದ್ದೇಶ. ಆದುದರಿಂದ, ಕಳ್ಳರನ್ನು ಸೆರಗಿನಲ್ಲಿ ಬಚ್ಚಿಟ್ಟು, ಲೋಕಾಯುಕ್ತದ ತಲೆಯ ಮೇಲೆ ಗೂಬೆ ಕೂರಿಸಲು ಹೊರಟಿದೆ.
ಲೋಕಾಯುಕ್ತ ಕಾರ್ಯವ್ಯಾಪ್ತಿಯ ಬಗ್ಗೆ ಈಗ ಏಕಾಏಕಿ ಅನುಮಾನು ಹುಟ್ಟಿಕೊಳ್ಳುವುದಕ್ಕೆ ಕಾರಣವಾದರೂ ಏನು? ಅಕ್ರಮ ಗಣಿಗಾರಿಕೆಯಲ್ಲಿ ರಾಜಕಾರಣಿಗಳ ಪಾತ್ರವಿರುವುದರಿಂದ ಸಿಬಿಐ ತನಿಖೆಗೆ ಒತ್ತಾಯ ಹೇರಲಾಗಿತ್ತು. ಸಿಬಿಐಯ ಮೇಲೆ ತನಗೆ ನಂಬಿಕೆಯಿಲ್ಲ, ಲೋಕಾಯುಕ್ತಕ್ಕೆ ಒಪ್ಪಿಸುತ್ತೇನೆ ಎಂದು ಹೇಳಿದ್ದೂ ಇದೇ ಸರಕಾರ. ಅದರರ್ಥ ಲೋಕಾಯುಕ್ತದ ಮೇಲೆ ತನಗೆ ನಂಬಿಕೆ ಇದೆ ಎಂದು ತಾನೇ?
ಇದೀಗ ಯಾಕೆ ಲೋಕಾಯುಕ್ತದ ಕಾರ್ಯವೈಖರಿಯ ಕುರಿತಂತೆ ಅಸಮಾಧಾನ ವ್ಯಕ್ತಪಡಿಸುತ್ತಿದೆ? ಅಂದರೆ, ರಾಜಕಾರಣಿಗಳನ್ನು ಮುಟ್ಟದೆ ಕೇವಲ ಅಧಿಕಾರಿಗಳನ್ನಷ್ಟೇ ಆರೋಪಿಗಳನ್ನಾಗಿ ಮಾಡಬೇಕು ಎನ್ನುವುದು ಅಂದಿನ ಸರಕಾರದ ಇಂಗಿತವಾಗಿತ್ತೇ? ಒಂದು ವೇಳೆ ರಾಜಕಾರಣಿಗಳನ್ನು ಆರೋಪಿಗಳನ್ನಾಗಿಸುವ ಅಧಿಕಾರ ಲೋಕಾಯುಕ್ತಕ್ಕೆ ಇಲ್ಲವಾದರೆ ಇಡೀ ತನಿಖೆಗೆ ಅರ್ಥವಾದರೂ ಏನಿದೆ? ಕಾಲಹರಣ ಮಾಡುವುದಕ್ಕಾಗಿ ಹಾಗೂ ಜನರ ಕಣ್ಣಿಗೆ ಮಣ್ಣೆರಚುವುದಕ್ಕಾಗಿ ಲೋಕಾಯುಕ್ತ ಅಕ್ರಮ ಗಣಿಗಾರಿಕೆಯ ಕುರಿತು ತನಿಖೆ ಮಾಡಬೇಕಾಗಿತ್ತೇ?
ಅಕ್ರಮ ಗಣಿಗಾರಿಕೆಗೆ ಸಂಬಂಧ ಪಟ್ಟಂತೆ ತಾನು ತನ್ನ ಮಿತಿಯಲ್ಲೇ ಕೆಲಸ ಮಾಡಿದ್ದೇನೆ ಮತ್ತು ಪ್ರಾಮಾಣಿಕವಾಗಿ ಪಕ್ಷಾತೀತವಾಗಿ ಕೆಲಸ ಮಾಡಿದ್ದೇನೆ ಎನ್ನುವುದನ್ನು ಸಂತೋಷ್ ಹೆಗ್ಡೆ ಪದೇ ಪದೇ ಹೇಳುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲ, ಒಂದು ವೇಳೆ ತಾನು ಕಾನೂನು ಮೀರಿ ವರದಿ ನೀಡಿದ್ದೇ ಆಗಿದ್ದರೆ ಅದನ್ನು ತಿರಸ್ಕರಿಸಿ ಎಂದೂ ಸವಾಲು ಹಾಕಿದ್ದಾರೆ. ಆದರೆ ಎರಡನ್ನೂ ಸ್ವೀಕರಿಸುವ ಸ್ಥಿತಿಯಲ್ಲಿಲ್ಲ ಸರಕಾರ. ಒಂದು ವೇಳೆ ಲೋಕಾಯುಕ್ತ ಕಾನೂನು ವ್ಯಾಪ್ತಿಯನ್ನು ಮೀರಿ ವರದಿ ನೀಡಿದ್ದರೆ, ಧನಂಜಯ ಕುಮಾರ್ ಮತ್ತು ಅವರ ಬಳಗ ಸಂತೋಷ್ ಹೆಗ್ಡೆಯವರ ಬಳಿ ಯಾಕೆ ಓಲೈಸಲು ಹೋಗಬೇಕಾಗಿತ್ತು.
ವರದಿ ಸಲ್ಲಿಸಿದ ಬೆನ್ನಿಗೇ ಅದನ್ನು ತಿರಸ್ಕರಿಸಬಹುದಿತ್ತಲ್ಲ? ಅವರು ವರದಿ ಸಲ್ಲಿಸಿದ ಬೆನ್ನಿಗೇ ಸರಕಾರ ಹೇಳಿಕೆಯನ್ನೂ ನೀಡಬಹುದಿತ್ತು. ಆದರೆ ವರದಿಯಲ್ಲಿ ಸಿಲುಕಿಕೊಂಡಿರುವ ನಮ್ಮ ನಾಯಕರು ಹೊರ ಬರುವುದು ದುಸ್ಸಾಧ್ಯ ಎಂದಾಗ ವರದಿಯನ್ನು ತಿರಸ್ಕರಿಸುವ ಯೋಜನೆಯನ್ನು ಹಾಕಿಕೊಂಡಿದೆ. ಇದು ಅಕ್ಷಮ್ಯ ಮಾತ್ರವಲ್ಲ, ನಾಡಿನ ಜನತೆಗೆ ಬಗೆಯುತ್ತಿರುವ ದ್ರೋಹ ಕೂಡ.
ಇಂದು ಸರಕಾರ ಮಾಡಬೇಕಾಗಿರುವುದು, ಲೋಕಾಯುಕ್ತಕ್ಕೆ ಇನ್ನಷ್ಟು ಶಕ್ತಿಯನ್ನು ನೀಡುವ ಕೆಲಸ. ಅಕ್ರಮ ಗಣಿಗಾರಿಕೆಯ ತನಿಖೆಯಲ್ಲಿ ಲೋಕಾಯುಕ್ತ ನಿರ್ವಹಿಸಿದ ಪಾತ್ರವನ್ನು ಗಮನಿಸಿ, ಅದಕ್ಕೆ ಇನ್ನಷ್ಟು ಅಧಿಕಾರವನ್ನು ನೀಡಬೇಕು. ಲೋಕಾಯುಕ್ತದ ಮಿತಿಯ ಲಾಭವನ್ನು ಪಡೆದುಕೊಳ್ಳುವ ಬದಲು, ಆ ಮಿತಿಯನ್ನು ತೆಗೆದು ಹಾಕಿ ಇನ್ನಷ್ಟು ಶಕ್ತಿಯನ್ನು ತುಂಬಬೇಕು. ಇಂದು ನಾಡಿನ ಜನತೆ ಸರಕಾರದಿಂದ ನಿರೀಕ್ಷಿಸುತ್ತಿರುವುದು ಇದು. ಆದರೆ ವಿಪರ್ಯಾಸವೆಂಬಂತೆ, ಅಪರಾಧಿಗಳನ್ನು ಶಿಕ್ಷಿಸುವ ಬದಲು, ಆರೋಪಿಗಳನ್ನು ತೋರಿಸಿಕೊಟ್ಟ ಲೋಕಾಯುಕ್ತವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಸರಕಾರ ಹೊರಟಿದೆ. ಇದು ಖಂಡನಾರ್ಹ. ಸಮಯ ಮುಂದೂಡದೆ ವರದಿಯನ್ನು ಅಂಗೀಕರಿಸಿ ಅಪರಾಧಿಗಳು ಜೈಲು ಸೇರುವುದಕ್ಕೆ ಸರಕಾರ ಸಹಕರಿಸಬೇಕು. ಸರಕಾರಕ್ಕೂ, ನಾಡಿಗೂ ಇದರಿಂದ ಒಳಿತಿದೆ.
ಕಿಂಗ್ ಫಿಷರ್ ವಿಮಾನಕ್ಕೆ ಪೆಟ್ರೋಲ್ ತುಂಬಿಸಲು ಹಣವಿಲ್ಲ. ಬಜ್ಪೆಯಲ್ಲೇ ಉಳಿದ ವಿಮಾನ
ಮಂಗಳೂರು: ನಿನ್ನೆ ಸಂಜೆ ಮುಂಬೈಗೆ ತೆರಳಬೇಕಾದ ವಿಜಯ್ ಮಲ್ಯ ಕಿಂಗ್ ಫಿಷರ್ ವಿಮಾನವು ಇಂಧನದ ಬಾಕಿ ಹಣವನ್ನು ಪಾವತಿಸದ ಕಾರಣ ಬಜಪೆ ವಿಮಾನ ನಿಲ್ದಾಣದಲ್ಲೇ ಬಾಕಿಯಾಗಿರುವ ಘಟನೆ ನಡೆದಿದೆ.ಕಿಂಗ್‌ಪಿಷರ್ ವಿಮಾನಯಾನ ಸಂಸ್ಥೆಯು ಇಂಧನ ಪೂರೈಕೆದಾರರ ಕಂಪೆನಿಗಳಿಗೆ ದೊಡ್ಡ ಮೊತ್ತದ ಹಣ ವನ್ನು ಬಾಕಿ ಉಳಿಸಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಹಲವಾರು ವಿಮಾನ ನಿಲ್ದಾಣಗಳಲ್ಲಿ ಕಿಂಗ್‌ಪಿಷರ್ ವಿಮಾನವು ಇಂಧನ ಕೊರತೆಯ ಕಾರಣ ಸಂಚಾರ ನಡೆಸಲು ಸಾಧ್ಯವಾಗಲಿಲ್ಲ.
ನಿನ್ನೆ ಸಂಜೆ ಮಂಗಳೂರಿನಿಂದ ಮುಂಬೈಗೆ ತೆರಳಬೇಕಾಗಿದ್ದ ವಿಮಾನವು ಇಂಧನ ಕಂಪೆನಿಯಾದ ಎಚ್‌ಪಿ ಜೊತೆ ಮಾತುಕತೆ ನಡೆಸಿದ ಬಳಿಕವೂ ಇಂಧನ ತುಂಬಿಸಿಕೊಳ್ಳುವಲ್ಲಿ ವಿಫಲವಾಗಿತ್ತು. ಹೀಗಾಗಿ ಕಿಂಗ್‌ಪಿಷರ್ ಸಿಬ್ಬಂದಿ ಮುಂಬೈ ಪ್ರಯಾಣಿಕರ ಆಕ್ರೋಶ ಎದುರಿಸಬೇಕಾಯಿತು. ಬಳಿಕ ಹತ್ತಿರದ ಪ್ರಯಾಣಿಕರು ಮರಳಿ ಮನೆಗೆ ಸೇರಿಕೊಂಡರೆ ಕೆಲವರಿಗೆ ಹೋಟೆಲ್‌ಗಳಲ್ಲಿ ವಾಸ್ತವ್ಯ ಕಲ್ಪಿಸಲಾಯಿತು.ಕಿಂಗ್ ಫಿಷರ್ ಎಚ್‌ಪಿಸಿಎಲ್ ಸಂಸ್ಥೆಗೆ ಸುಮಾರು ೬೦೦ ಕೋಟಿ ರೂ. ಹಣ ಬಾಕಿ ಇರಿಸಿದೆ ಎನ್ನಲಾಗಿದ್ದು, ಈ ಬೆಳವಣಿಗೆಯಿಂದ ಕಿಂಗ್‌ಫಿಷರ್ ವಿಮಾನ ಯಾನ ಸಂಸ್ಥೆಯ ಅಸ್ತಿತ್ವಕ್ಕೆ ಸಂಚಕಾರ ಉಂಟಾಗಿದೆ ಎನ್ನಲಾಗುತ್ತಿದೆ.
ಪ್ರಶಾಂತ್ ಭೂಷಣ್ ಮೇಲೆ ಹಲ್ಲೆ ನಡೆಸಿದವರನ್ನು ಅಭಿನಂದಿಸಿದ ಬಾಳಾ ಠಾಕ್ರೆ
ಮುಂಬೈ : ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿ , ಟೀಮ್ ಅಣ್ಣಾ ಹಜಾರೆ ಸದಸ್ಯ ಪ್ರಶಾಂತ್ ಭೂಷಣ್ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಶಿವಸೇನೆಯ ಮುಖ್ಯಸ್ಥ ಬಾಳಾ ಠಾಕ್ರೆ ಅಭಿನಂದಿಸಿದ್ದಾರೆ. ಶುಕ್ರವಾರ ಪಕ್ಷದ ಮುಖವಾಣಿ ದೊಪಹರ್ ಕಾ ಸಾಮ್ನಾ ಪತ್ರಿಕೆಯಲ್ಲಿ ಈ ದಾಳಿಯ ವಿಷಯ ಪ್ರಸ್ತಾಪಿಸಿರುವ ಅವರು ಶಹಬ್ಬಾಸ್ ! ನಿಮ್ಮ ಕೃತ್ಯ ಸರಿಯಾಗಿದೆ . ಯಾರು ದೇಶ ವಿಭಜಿಸುವ ಮಾತುಗಳನ್ನು ಆಡುತ್ತಾರೋ ಅವರಿಗೆ ಇದೇ ರೀತಿ ಪಾಠ ಕಲಿಸಬೇಕಿದೆ ಎಂದಿದ್ದಾರೆ.
ದೇಶ ವಿಭಜನೆ ಕುರಿತು ಮಾತನಾಡುವ ಜನಗಳಿಗೆ ಮುಂದಿನ ದಿನಗಳಲ್ಲಿ ಈ ರೀತಿಯ ಕೃತ್ಯದಿಂದ ಹೆದರಿಕೆ ಉಂಟಾಗಲಿದೆ . ಈ ರೀತಿಯ ಮಾತುಗಳನ್ನು ಆಡುವ ಜನರಿಗೆ ಮುಂದಿನ ದಿನಗಳಲ್ಲಿ ಇದೇ ರೀತಿಯ ಪಾಠ ಕಲಿಸಲು ಜನರು ಮುಂದಾಗಬೇಕಿದೆ ಎಂದಿದ್ದಾರೆ. ಕಾಶ್ಮೀರ ಕುರಿತ ಹೇಳಿಕೆ ನೀಡಿದ್ದ ಹಿನ್ನಲೆಯಲ್ಲಿ ಒಬ್ಬ ಶ್ರೀರಾಮ ಸೇನೆ ಮತ್ತು ಇಬ್ಬರು ಭಗತ್ ಸಿಂಗ್ ಕ್ರಾಂತಿ ಸೇನೆಯ ಕಾರ್ಯಕರ್ತರು ಸುಪ್ರೀಂ ಕೋರ್ಟ್ ಆವರಣದಲ್ಲಿರುವ ಭೂಷಣ್ ಕಚೇರಿಗೆ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿದ್ದರು.
ಹುಣ್ಣಿಮೆ ರಾತ್ರಿಯಲ್ಲಿ ತಾಜ್ ಮಹಲ್ ನಲ್ಲಿ ಪ್ರತ್ಯಕ್ಷಗೊಂಡ ದೀಪಿಕಾ ಪಡುಕೋಣೆ
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರಿಗೆ ತಾಜ್ ಮಹಲ್ ಅಂದರೆ ಅದೇನೋ ಹುಚ್ಚು ಪ್ರೀತಿ, ಅನೇಕ ಬಾರಿ ತಾಜ್ ಗೆ ಭೇಟಿ ಕೊಟ್ಟಿದ್ದಾರೆ. ಆದರೆ ಈ ಸಲ ಭೇಟಿ ಕೊಟ್ಟದ್ದು “ಹುಣ್ಣಿಮೆ ರಾತ್ರಿ”ಯಂದು,ಅದು ಕೂಡ ಒಬ್ಬಳೇ ಅಲ್ಲ ಅವಳ ಜೊತೆ”ಅನಾಮಿಕ”ವ್ಯಕ್ತಿಯೊಬ್ಬರಿದ್ದರು. ಸುಮಾರು ೧ ಘಂಟೆಗಳ ಕಾಲ ತಾಜ್ ರಾತ್ರಿಯ ಸವಿಯನ್ನು ಸವಿದ ದೀಪಿಕಾ “ಅನಾಮಿಕ” ವ್ಯಕ್ತಿಯ ಜೊತೆ ಸಲ್ಲಾಪವಾಡಿದರು.ಆ ಅನಾಮಿಕ ವ್ಯಕ್ತಿ ಯಾರೆಂಬುದು ಇನ್ನೆಷ್ಟೇ ಗೊತ್ತಗಬೇಕಾಗಿದೆ.
ಸಿದ್ದಾರ್ತ್ ಮಲ್ಲ್ಯ ನಿಂದ ದೀಪಿಕಾ ದೂರ ಸರಿದಿದ್ದಾರೆ ಅನ್ನೋದಕ್ಕೆ ಈ ಹುಣ್ಣಿಮೆ ರಾತ್ರಿಯು ಮತ್ತಷ್ಟು ಪುಷ್ಟಿಯನ್ನ ನೀಡಿದೆ. ತಾಜ್ ನಲ್ಲಿ ಹುಣ್ಣಿಮೆ ರಾತ್ರಿ ಬಹಳ ವಿಶೇಷವಾದ ದಿನ ೫೦ ಜೋಡಿ ಗುಂಪಿಗೆ ೩೦ ನಿಮಿಷಗಳ ಕಾಲ ತಾಜ್ ನ ಸೌಂದರ್ಯವನ್ನು ಸವಿಯಲು ಅವಕಾಶ ಮಾಡಿಕೊಡಲಾಗುತ್ತೆ. ಹುಣ್ಣಿಮೆ ರಾತ್ರಿ ಯಲ್ಲಿ ಚೆಂದುಳ್ಳಿ ಚೆಲುವೆ ಜೊತೆ ಕಾಣಿಸಿಕೊಂಡ ಅನಾಮಿಕ ಯಾರಿರಬಹುದು ಅನ್ನೋದು ಸಿದ್ದಾರ್ತ್ ಮಲ್ಯ ಸೇರಿದಂತೆ ಅನೇಕ ಬಾಲಿವುಡ್ ಜನರ ಪ್ರಶ್ನೆ ಕೂಡ ಆಗಿರಬಹುದು.
ಭಾರತೀಯರ ಮನ ಸೆಳೆಯುತ್ತಿರುವ 2,69,999 ಬೆಲೆಯ ನೂತನ ಕಾರು ಹ್ಯುಂಡೈ EON
ಹೈದರಾಬಾದ್ : ಹ್ಯುಂಡೈ ಕಂಪೆನಿ ಭಾರತದಲ್ಲಿ ನೂತನ EON ಕಾರನ್ನು ಬಿಡುಗಡೆ ಮಾಡಿದ್ದು ಕಾರು ಭಾರತೀಯರ ಮನ ಸೆಳೆಯುತ್ತಿದೆ . ಕಾರಿನಲ್ಲಿ ೮೧೪ ಸಿಸಿ ಪೆಟ್ರೋಲ್ ಇಂಜಿನ್ ಅಳವಡಿಸಲಾಗಿದ್ದು ಐದು ಸ್ಪೀಡ್ ಗೇರ್ ಗಳನ್ನು ಹೊಂದಿದೆ. ಪ್ರತೀ ಲೀಟರಿಗೆ ಇಪ್ಪತ್ತೊಂದು ಕಿ.ಮೀ ಮೈಲೇಜ್ ಸಹ ಕೊಡುತ್ತದೆ.
ಕಾರಿನ ಒಳಭಾಗದಲ್ಲಿ ಆರಾಮವಾಗಿ ಕೂರಲು ವಿಶಾಲವಾದ ಸ್ಥಳವಾಕಾಶವಿದ್ದು ಲಗೇಜ್ ಇಡಲು ಸೂಕ್ತ ಸ್ಥಳವನ್ನು ಹೊಂದಿದೆ. ಪವರ್ ವಿಂಡೋ , ಒಳಭಾಗದಿಂದಲೇ ಸೆಟ್ ಮಾಡ ಬಹುದಾದ ಮಿರರ್ ,ಸೆಂಟ್ರಲ್ ಲಾಕಿಂಗ್ ವ್ಯವಸ್ಥೆ ಇದ್ದು ಕಾರಿನ ಬೆಲೆ ಕೇವಲ ಎರಡು ಲಕ್ಷದ ಅರವತ್ತೊಂಬತ್ತು ಸಾವಿರದ ಒಂಬೈನೂರ ತೊಂಬತ್ತೊಂಬತ್ತು ರೂಪಾಯಿಯಿಂದ ಪ್ರಾರಂಭವಾಗಲಿದೆ. ವಿಶ್ವ ಕನ್ನಡಿಗ ನ್ಯೂಸ್ ಓದುಗರಿಗಾಗಿ ಈ ನೂತನ ಕಾರಿನ ಕೆಲ ಝಲಕ್ ಅನ್ನು ಇಲ್ಲಿ ಹಾಕಿದ್ದೇವೆ. ಒಮ್ಮೆ ನೋಡಿ …….
ಪ್ರಶಾಂತ್ ಭೂಷಣ್ ಮೇಲೆ ಹಲ್ಲೆ ನಡೆಸಿದ ಆರೋಪಿಗಳಿಗೆ ಜಾಮೀನು
ನವದೆಹಲಿ : ಪ್ರಶಾಂತ್ ಭೂಷಣ್ ಮೇಲೆ ಹಲ್ಲೆ ನಡೆಸಿ ಪೋಲಿಸ್ ಅಧಿಕಾರಿಗಳಿಗೆ ಸಿಕ್ಕಿ ಬಿದ್ದ ಮೂವರು ಆರೋಪಿಗಳಿಗೆ ದೆಹಲಿ ಮೆಟ್ರೋಪಾಲಿನ್ ನ್ಯಾಯಾಲಯ ಜಾಮೀನು ನೀಡಿದೆ. ಆರೋಪಿಗಳ ವಿಚಾರಣೆ ನಡೆಸಿದ ನ್ಯಾಯಾಧೀಶರು ತಲಾ ಇಪ್ಪತ್ತೈದು ಸಾವಿರ ಬಾಂಡ್ ಆಧಾರದ ಮೇಲೆ ಮೂವರೂ ಆರೋಪಿಗಳಿಗೆ ಜಾಮೀನು ನೀಡಿದರು . ಆರೋಪಿಗಳು ಸುಪ್ರೀಂ ಕೋರ್ಟ್ ಪರಿಸರದಲ್ಲಿ ಪ್ರವೇಶಿಸಬಾರದು ಎಂದು ವಿಚಾರಣೆ ನಡೆಸಿದ ನ್ಯಾಯಾಧೀಶ ಸುದೇಶ್ ಕುಮಾರ್ ಆರೋಪಿಗಳಿಗೆ ಸೂಚನೆ ನೀಡಿದರು .
ದೆಹಲಿ ಪೊಲೀಸರು ಪ್ರಶಾಂತ್ ಭೂಷಣ್ ಮೇಲೆ ಹಲ್ಲೆ ನಡೆಸಿದ ದೆಹಲಿ ಶ್ರೀ ರಾಮ ಸೇನೆ ಘಟಕದ ಅಧ್ಯಕ್ಷ ಇಂದರ್ ವರ್ಮಾ , ಭಗತ್ ಸಿಂಗ್ ಕ್ರಾಂತಿ ಸೇನೆಯ ತೇಜಿಂದರ್ ಪಾಲ್ ಸಿಂಗ್ ಬಗ್ಗಾ ಹಾಗೂ ವಿಷ್ಣು ಗುಪ್ತಾ ಅವರನ್ನು ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡಬೇಕೆಂದು ನ್ಯಾಯಾಲಯವನ್ನು ಕೋರಿದರಾದರೂ ನ್ಯಾಯಾಲಯ ಅದನ್ನು ತಿರಸ್ಕರಿಸಿತು. ಎಲ್ಲಾ ಮೂವರು ಆರೋಪಿಗಳು ದೆಹಲಿ ನಿವಾಸಿಗಳಾಗಿದ್ದು ಅವರ ಸಮರ್ಪಕ ವಿಳಾಸ ಪಡೆಯಲಾಗಿದ್ದು ಈಗಾಗಲೇ ಆರೋಪಿಗಳು ಎರಡು ದಿನ ಪೋಲಿಸ್ ವಶದಲ್ಲಿ ಕಳೆದಿದ್ದು ಅವರ ಮೇಲೆ ದಾಖಲಿಸಿದ ಪ್ರಕರಣದ ಅನುಸಾರ ಅದಕ್ಕಿಂತ ಹೆಚ್ಚು ದಿನ ನ್ಯಾಯಾಂಗ ಬಂಧನ ವಿಧಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿತು .
ಕೇವಲ 1,700 ರೂ ಗೆ ಟ್ಯಾಬ್ಲೆಟ್ ಕಂಪ್ಯೂಟರ್ !!
ನವದೆಹಲಿ : ವಾಣಿಜ್ಯ ಉತ್ಪನ್ನವಾಗಿ, ಸಬ್ಸಿಡಿಯಿಲ್ಲದೆಯೂ ಮೂರು ಸಾವಿರ ಬೆಲೆಯಲ್ಲಿ ಜನರಿಗೆ ಲಭ್ಯವಾಗುವ ನಿರೀಕ್ಷೆಯಿರುವ ಆಕಾಶ್ ಟ್ಯಾಬ್ಲೆಟ್ ಸಾಧನ, ಬಿಡುಗಡೆಯಾಗಿ ಸುದ್ದಿಯಲ್ಲಿದೆ. ವಾಣಿಜ್ಯ ಮಾದರಿಯಲ್ಲಿ ಸೆಲ್‌ಪೋನ್ ಮಾಡೆಮ್ ಇರುವ ಕಾರಣ, ಇದರಲ್ಲಿ ಅಂತರ್ಜಾಲವನ್ನು ಮೊಬೈಲ್ ಜಾಲದ ಮೂಲಕವೂ ಪಡೆಯಬಹುದು. ಸರಕಾರಕ್ಕೆ ಒದಗಿಸುವ ಮಾದರಿಯಲ್ಲಿ ವೈ-ಫೈ ಮೂಲಕ ಅಂತರ್ಜಾಲ ಪಡೆಯಬೇಕಷ್ಟೆ. ಆಂಡ್ರಾಯಿಡ್ ಆಪರೇಟಿಂಗ್ ವ್ಯವಸ್ಥೆ ಹೊಂದಿದ ಟ್ಯಾಬ್ಲೆಟ್ ಇನ್ನೆರಡು ತಿಂಗಳಲ್ಲಿ ಮಾರಾಟಕ್ಕೆ ಲಭ್ಯವಾಗಬಹುದು. ಡೇಟಾವಿಂಡ್ ಕಂಪೆನಿಯಿದನ್ನು ತಯಾರಿಸಿದೆ. ಚೀನೀ ಬಿಡಿಭಾಗಗಳೇ ಅದು ಅಗ್ಗವಾಗಿರುವ ಗುಟ್ಟು. ವಿದ್ಯಾರ್ಥಿಗಳಿಗೆ ವಿನಾಯಿತಿ ದರ 1,700 ರುಪಾಯಿ. ಆಕಾಶ್ ಹೆಸರಿನ ಈ ಟ್ಯಾಬ್ಲೆಟ್ ಯಾವಾಗ ಕೈ ಸೇರುತ್ತದೆ ಎಂದು ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದಾರೆ.
ಆಕಾಶ್ ವಿಶೇಷತೆಗಳು : 256 ಎಂಬಿ RAM, 7 ಇಂಚಿನ ಟಚ್ ಸ್ಕ್ರೀನ್ ಡಿಸ್ ಪ್ಲೇ, ನಿಸ್ತಂತು ಇಂಟರ್ ನೆಟ್ ಸೌಲಭ್ಯ, ಮಲ್ಟಿಮೀಡಿಯಾ ಪ್ಲೇಯರ್, ಕೀಬೋರ್ಡ್ ಕೂಡ ಜೋಡಿಸಬಹುದು, 2 ಜಿಬಿ ಇನ್ ಬಿಲ್ಟ್ ಮೆಮೊರಿ, 32 ಜಿಬಿ ವರೆಗೆ ವಿಸ್ತರಿಸಬಹುದು, ಬ್ಯಾಟರಿ ಬ್ಯಾಕಪ್ 3 ಗಂಟೆ.
ಜಗತ್ತಿಗೆ ಅತೀ ಅಗ್ಗದ ನ್ಯಾನೊ ಕಾರು ಪರಿಚಯಿಸಿಕೊಟ್ಟ ನಮ್ಮ ದೇಶ ಇದೀಗ ಅಗ್ಗದ ಟ್ಯಾಬ್ಲೆಟ್ ಕಂಪ್ಯೂಟರ್ ಕೂಡಾ ಪರಿಚಯಿಸಲು ಹೊರಟಿರುವುದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವ ಸಂಗತಿಯಾಗಿದೆ.
Subscribe to:
Posts (Atom)