ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಮಂಗಳವಾರ ಸಾಗಿದ ಮುಖಾಮುಖೀಯಲ್ಲಿ ಆಲ್‌ರೌಂಡ್ ನಿರ್ವಹಣೆ ತೋರಿದ ಭಾರತ ತಂಡ ಆಂಗ್ಲರನ್ನು 95 ರನ್ ಅಂತರದಿಂದ ಪರಾಭವಗೊಳಿಸಿದೆ. ಟಾಸ್ ಸೋತು ಬ್ಯಾಟಿಂಗಿಗೆ ಇಳಿದ ಭಾರತ ತಂಡ ಮಧ್ಯಮ ಸರದಿಯ ಕುಸಿತದ ನಡುವೆ ನಾಯಕ ಧೋನಿ ಅವರ ಜವಾಬ್ದಾರಿಯುತ (69 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ಸಹಿತ ಅಜೇಯ 75 ರನ್) ಆಟದೊಂದಿಗೆ ನಿಗದಿತ ೫೦ ಓವರ್ ಗಳಲ್ಲಿ ೮ ವಿಕೆಟಿಗೆ ೨೭೧ ರನ್ ಪೇರಿಸಿತು.
೨೭೨ ರನ್ ಗಳ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಇಂಗ್ಲಂಡ್ ತಂಡ ಭರ್ಜರಿ ಆರಂಭ ಕಂಡರೂ ಅನಂತರ ಭಾರತೀಯ ಸ್ಪಿನ್ನರ್ ಗಳ ಬೌಲಿಂಗಿಗೆ ತತ್ತರಿಸಿ ೩೭ ಓವರ್ ಗಳಲ್ಲಿ ಕೇವಲ ೧೭೬ ರನ್ನಿಗೆ ಸರ್ವಪತನ ಕಂಡಿತು. ರವೀಂದ್ರ ಜಡೇಜ ೩೩ ರನ್ನಿಗೆ ೪ ವಿಕೆಟ್ ಕಿತ್ತು ಆಂಗ್ಲರಿಗೆ ಕಡಿವಾಣ ಹಾಕಿದರೆ, ಆರ್. ಅಶ್ವಿನ್ ೩ ವಿಕೆಟ್ ಪಡೆದರು.
ಇಂಗ್ಲಂಡ್ ತಂಡ ಮೊದಲ ೨೦ ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ೧೨೯ ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ೨೧ನೇ ಓವರ್ ಎಸೆದ ಯುವ ವೇಗಿ ವರುಣ್ ಆರೋನ್ ಕುಕ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವುದರೊಂದಿಗೆ ಆಂಗ್ಲರ ಕುಸಿತಕ್ಕೆ ನಾಂದಿ ಹಾಡಿದರು. ನಂತರ ಸ್ಪಿನ್ನರ್ ಗಳಾದ ಜಡೇಜ-ಅಶ್ವಿನ್ ಜೋಡಿಗೆ ನಲುಗಿದ ಪ್ರವಾಸಿಗಳ ಉಳಿದ ಹತ್ತು ವಿಕೆಟ್‌ಗಳು ಕೇವಲ ೪೭ ರನ್ ಅಂತರದಲ್ಲಿ ಉರುಳಿದವು.
ನಾಲ್ಕು ವಿಕೆಟ್ ಹಾಗೂ ೨೧ ರನ್ ಗಳಿಸಿದ್ದ ರವಿಂದ್ರ ಜಡೇಜ ಪಂದ್ಯ ಶ್ರೇಷ್ಟ ಪ್ರಶಸ್ತಿ ಪಡೆದರೆ, ಸರಣಿಯುದ್ದಕ್ಕೂ ನಾಯಕನ ಆಟವಾಡಿದ ಧೋನಿ ಸರಣಿ ಶ್ರೇಷ್ಟ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಇದೇ ೨೯ ರ ಶನಿವಾರ ಇಂಗ್ಲೆಂಡ್ ವಿರುದ್ದದ ಏಕೈಕ T-೨೦ ಪಂದ್ಯ ನಡೆಯಲಿದೆ.
No comments:
Post a Comment