Powered By Blogger

Thursday, 6 October 2011

ಅಲ್ಲಾಹು ಮುಸ್ಲಿಮರಿಗೆ ಮಾತ್ರ ದೇವರಲ್ಲ.


ಅಲ್ಲಾಹು! ಈ ಹೆಸರು ಕೇಳಿದೊಡನೆ ಹೆಚ್ಚಿನವರೂ ಅದು ಮುಸ್ಲಿಮರ ದೇವರು ಎಂಬ ತೀರ್ಮಾನಕ್ಕೆ ಬಂದುಬಿಡುತ್ತಾರೆ. ಇದೊಂದು ತಪ್ಪುಕಲ್ಪನೆಯಾಗಿದೆ. ಮುಸ್ಲಿಮರೆಂದರೆ ಅಲ್ಲಾಹನನ್ನು ಮಾತ್ರ ಆರಾಧಿಸುವವರು ಎಂಬುದು ಸತ್ಯವಾಗಿದ್ದರೂ, ಅಲ್ಲಾಹು ಎಂಬುದು ಕೇವಲ ಮುಸ್ಲಿಮರಿಗೆ ಮಾತ್ರ ಮೀಸಲಾದ ದೇವರು ಎಂಬ ಭಾವನೆ ಸರ್ವಥಾ ಸರಿಯಲ್ಲ. ಯಾಕೆಂದರೆ ಅಲ್ಲಾಹನಿಂದ ಅವತೀರ್ಣಗೊಂಡ ಗ್ರಂಥವಾದ ಕುರ್‌ಆನ್, ಅಲ್ಲಾಹನನ್ನು ಪರಿಚಯಿಸುವಾಗ ಮುಸ್ಲಿಮರಿಗೆ ಮಾತ್ರ ಮೀಸಲಾದ ದೇವರು ಎಂಬ ರೀತಿಯಲ್ಲಿ ಪರಿಚಯಿಸುವುದಿಲ್ಲ. ಅಲ್ಲಾಹನನ್ನು ಕುರಿತು ಪ್ರತಿಪಾದಿಸಿದ ಪ್ರವಾದಿಗಳಾರೂ ಅವನನ್ನು ಮುಸ್ಲಿಮರಿಗೆ ಮಾತ್ರ ಮೀಸಲುಗೊಳಿಸಲಿಲ್ಲ. ಅಂತಹ ಒಂದು ಸಂಕುಚಿತ ಭಾವನೆಯು ಯಾವನೇ ಒಬ್ಬ ಮುಸ್ಲಿಮನಿಗೆ ಇದ್ದರೆ ಅದು ಅವನ ಅಜ್ಞಾನವನ್ನಷ್ಟೇ ಸೂಚಿಸುತ್ತದೆ.

ಅಲ್ಲಾಹು ಎಂಬ ಪದಕ್ಕೆ ಕನ್ನಡದಲ್ಲಿ ದೇವರು ಎನ್ನಲಾಗುತ್ತದೆ. ಇಂಗ್ಲಿಷ್‌ನಲ್ಲಿ God ಎನ್ನಲಾಗುತ್ತದೆ. ಉರ್ದುವಿನಲ್ಲಿ ಖುದಾ ಎನ್ನಲಾಗುತ್ತದೆ. ಮಲಯಾಲದಲ್ಲ ದೈವಂ, ತಮಿಳಿನಲ್ಲಿ ಕಡವುಲ್ ಎನ್ನಲಾಗುತ್ತದೆ. ಆದರೆ ಇವುಗಳಾವುದೂ ಅಲ್ಲಾಹ್ ಎಂಬ ಪದಕ್ಕೆ ಸಮರ್ಪಕವಾಗಿ ಸರಿಹೊಂದಲಾರದು. ದೇವ, God, ಖುದಾ, ದೈವಂ, ಕಡವುಲ್ ಇವುಗಳೆಲ್ಲವೂ ಕೇವಲ ಆರಾಧ್ಯ ಎಂಬ ಅರ್ಥವನ್ನಷ್ಟೇ ಸೂಚಿಸುತ್ತವೆ. ಆರಾಧ್ಯ ಎಂಬುದಕ್ಕೆ ಅರಬಿ ಭಾಷೆಯಲ್ಲಿ ಇಲಾಹ್ ಅಥವಾ ಮಅಬೂದ್ ಎಂಬ ಪದವನ್ನು ಬಳಸಲಾಗುತ್ತದೆ. ಆರಾಧಿಸಲ್ಪಡುವ ಯಾವುದೇ ವಸ್ತು ಕೂಡ ಅರಬಿಯಲ್ಲಿ ಇಲಾಹ್ ಆಗಿ ಮಾರ್ಪಡುತ್ತದೆ. ಆದರೆ ಅಲ್ಲಾಹ್ ಎಂಬ ಅರಬಿ ಪದವು ಸಾಕ್ಷಾತ್ ದೇವನು, ನೈಜ ಆರಾಧ್ಯನು, ಆರಾಧನೆಗೆ ಅರ್ಹನಾಗಿರುವವನು ಎಂಬ ಅರ್ಥಗಳನ್ನು ಹೊಂದಿವೆ.

ಆದ್ದರಿಂದ ಅಲ್ಲಾಹ್ ಎಂಬುದು ಯಾವುದೇ ಕುಲದೇವನ ನಾಮವಲ್ಲ. ಒಂದು ಜನಾಂಗದ ಆರಾಧ್ಯನಿಗೆ ಮಾತ್ರ ಸೀಮಿತವಾದ ಹೆಸರಲ್ಲ. ಸೃಷ್ಟಿಕರ್ತನೂ, ಸರ್ವಶಕ್ತನೂ, ಜಗತ್ತಿನ ನಿಯಂತ್ರಕನೂ, ಪರಿಪಾಲಕನೂ ಆದ ನೈಜ ಆರಾಧ್ಯನನ್ನು ಸೂಚಿಸಲು ಕುರ್‌ಆನ್‌ನಲ್ಲಿ ಅಲ್ಲಾಹ್ ಎಂಬ ಪದವನ್ನು ಬಳಸಲಾಗಿದೆ. ಅಂದರೆ ಭಾಷೆ, ವರ್ಗ, ವರ್ಣ, ಜಾತಿ, ದೇಶ ಎಂಬ ಯಾವುದೇ ಬೇಧಭಾವವಿಲ್ಲದೆ ಸರ್ವ ಜನರ, ಸಕಲ ವಸ್ತುಗಳ, ಸರ್ವ ಪ್ರಪಂಚಗಳ ಸೃಷ್ಟಿಕರ್ತ, ಸಂರಕ್ಷಕ, ನೈಜ ಒಡೆಯನನ್ನು ಕುರ್‌ಆನ್ ಅಲ್ಲಾಹ್ ಎಂದು ಕರೆಯುತ್ತದೆ.

ಅಲ್ಲಾಹು ಸಕಲ ವಸ್ತುಗಳ ಸೃಷ್ಟಿಕರ್ತನಾಗಿರುವನು, ಅವನು ಎಲ್ಲಾ ವಸ್ತುಗಳ ಮೇಲ್ವಿಚಾರಕನಾಗಿರುವನು. (ಕುರ್‌ಆನ್ 39/62)

ವಾಸ್ತವಿಕವಾಗಿ ಕುರ್‌ಆನ್ ಅವತೀರ್ಣಗೊಳ್ಳುವುದಕ್ಕೆ ಮುಂಚೆಯೇ ಅರಬರು ದೇವರನ್ನು ಸೂಚಿಸಲು ಅಲ್ಲಾಹ್ ಎಂಬ ಪದವನ್ನೇ ಬಳಸುತ್ತಿದ್ದರು. ಪ್ರವಾದಿ ಮುಹಮ್ಮದ್(ಸ)ರವರ ತಂದೆಯ ಹೆಸರು ಅಬ್ದುಲ್ಲಾಹ್ ಎಂದಾಗಿತ್ತು. ಇದರರ್ಥ ಅಲ್ಲಾಹನ ದಾಸ ಎಂದಾಗಿದೆ. ತನ್ನ ಮಗನಿಗೆ ಈ ಹೆಸರನ್ನಿಟ್ಟ ಪ್ರವಾದಿ(ಸ)ರವರ ತಾತ ಅಬ್ದುಲ್ ಮುತ್ತಲಿಬ್ ಮುಸ್ಲಿಮನಾಗಿರಲಿಲ್ಲ. ಆದರೂ ಅವರು ತನ್ನ ಮಗನಿಗೆ ಅಬ್ದುಲ್ಲಾಹ್ ಎಂದು ನಾಮಕರಣ ಮಾಡಿದ್ದು ಅರಬರು ದೇವನಾಮವಾಗಿ ಅಲ್ಲಾಹ್ ಎಂಬ ಪದವನ್ನು ಬಳಸುತ್ತಿದ್ದರು ಎಂಬುದಕ್ಕೆ ಸಾಕ್ಷಿಯಾಗಿದೆ. ಅವರು ಅಲ್ಲಾಹನನ್ನು ಪ್ರಾರ್ಥಿಸುವ, ಆರಾಧಿಸುವ ಜೊತೆಯಲ್ಲೇ ಲಾತ, ಉಝ್ಝಾ, ಮನಾತ, ಹುಬಲ್ ಮುಂತಾದ ವಿಗ್ರಹಗಳನ್ನು ಆರಾಧಿಸುತ್ತಿದ್ದರೂ ತನ್ನ ಮಗನಿಗೆ ಅಬ್ದುಲ್ಲಾಹ್ ಎಂದು ಹೆಸರಿಟ್ಟದ್ದು ಸೃಷ್ಟಿಕರ್ತನೂ, ಪರಿಪಾಲಕ ಪ್ರಭುವೂ ಆದ ನೈಜ ಒಡೆಯನನ್ನು, ಸಾಕ್ಷಾತ್ ದೇವನನ್ನು ಸೂಚಿಸಲು ಅವರು ಅಲ್ಲಾಹ್ ಎಂಬ ಪದವನ್ನೇ ಬಳಸುತ್ತಿದ್ದರು ಎಂಬುದರ ಸ್ಪಷ್ಟ ಪುರಾವೆಯಾಗಿದೆ.

ಕುರ್‌ಆನ್ ಕೂಡ ಇದನ್ನು ಸಮರ್ಥಿಸುತ್ತದೆ. ಮಕ್ಕಾ ನಿವಾಸಿಗಳಾದ ಬಹುದೇವಾರಾಧಕರೊಂದಿಗೆ ನಿಮ್ಮ ಸೃಷ್ಟಿಕರ್ತ, ಪ್ರಭು ಯಾರೆಂದು ಪ್ರಶ್ನಿಸಿದರೆ ಅವರು ನೀಡುತ್ತಿದ್ದ ಉತ್ತರವನ್ನು ಕುರ್‌ಆನ್ ಈ ರೀತಿ ವಿವರಿಸುತ್ತದೆ:

ಸಪ್ತ ಗಗನಗಳ ಪ್ರಭು, ಮಹೋನ್ನತವಾದ ಸಿಂಹಾಸನದ ಒಡೆಯನು ಯಾರೆಂದು ತಾವು ಅವರೊಂದಿಗೆ (ಮಕ್ಕಾದ ಬಹುದೇವಾರಾಧಕರೊಂದಿಗೆ) ಕೇಳಿದರೆ ಅವರು ಹೇಳುವರು: ಅಲ್ಲಾಹು. (ಕುರ್‌ಆನ್ 23/86-87)

ಅವರನ್ನು ಸೃಷಿಸಿದ್ದು ಯಾರೆಂದು ತಾವು ಅವರೊಂದಿಗೆ (ಮಕ್ಕಾದಲ್ಲಿರುವ ಬಹುದೇವಾರಾಧಕರೊಂದಿಗೆ) ಪ್ರಶ್ನಿಸಿದರೆ ಖಂಡಿತವಾಗಿಯೂ ಅವರು ಹೇಳುವರು: ಅಲ್ಲಾಹು. (ಕುರ್‌ಆನ್ 43/87)

ಆಕಾಶ ಭೂಮಿಗಳನ್ನು ಸೃಷ್ಟಿಸಿದ್ದು ಯಾರೆಂದು, ಸೂರ್ಯ ಚಂದ್ರರನ್ನು ಆಧೀನಗೊಳಿಸಿದ್ದು ಯಾರೆಂದು ತಾವು ಅವರೊಂದಿಗೆ (ಮಕ್ಕಾದಲ್ಲಿರುವ ಬಹುದೇವಾರಾಧಕರೊಂದಿಗೆ) ಪ್ರಶ್ನಿಸಿದರೆ ಖಂಡಿತವಾಗಿಯೂ ಅವರು ಹೇಳುವರು: ಅಲ್ಲಾಹು. (ಕುರ್‌ಆನ್ 29/61)

ಆಕಾಶದಿಂದ ಮಳೆನೀರನ್ನು ಇಳಿಸಿ ತನ್ಮೂಲಕ ನಿರ್ಜೀವವಾಗಿದ್ದ ಭೂಮಿಯನ್ನು ಜೀವಂತಗೊಳಿಸಿದ್ದು ಯಾರೆಂದು ತಾವು ಅವರೊಂದಿಗೆ (ಮಕ್ಕಾದಲ್ಲಿರುವ ಬಹುದೇವಾರಾಧಕರೊಂದಿಗೆ) ಕೇಳಿದರೆ ಅವರು ಹೇಳುವರು: ಅಲ್ಲಾಹು. (ಕುರ್‌ಆನ್ 29/63)

ಈ ಮೇಲಿನ ಕುರ್‌ಆನ್ ವಚನಗಳೆಲ್ಲವೂ ಮಕ್ಕಾದಲ್ಲಿದ್ದ ಬಹುದೇವಾರಾಧಕರೂ ಕೂಡ ನೈಜ ಆರಾಧ್ಯನೂ, ಸರ್ವಶಕ್ತನೂ, ಸೃಷ್ಟಿಕರ್ತನೂ ಆದ ಪ್ರಪಂಚದ ಒಡೆಯನನ್ನು ಅಲ್ಲಾಹು ಎಂದೇ ಕರೆಯುತ್ತಿದ್ದರು ಎಂಬುದನ್ನು ಸ್ಪಷ್ಟಪಡಿಸುತ್ತದೆ.

ಅಂದು ಅರೇಬಿಯಾದಲ್ಲಿದ್ದ ಎರಡು ಪ್ರಮುಖ ಧರ್ಮಗಳಾದ ಯಹೂದ ಮತ್ತು ಕ್ರೈಸ್ತ ಧರ್ಮೀಯರೂ ಸಹ ನೈಜ ದೇವನಿಗೆ ಅಲ್ಲಾಹ್ ಎಂಬ ಪದವನ್ನೇ ಬಳಸುತ್ತಿದ್ದರು ಎಂದು ಕುರ್‌ಆನ್ ವಿವರಿಸುತ್ತದೆ.

ಉಝೈರ್ ಅಲ್ಲಾಹನ ಪುತ್ರನೆಂದು (ದೇವಪುತ್ರ) ಯಹೂದರು ಹೇಳಿದರು. ಮಸೀಹ್ (ಯೇಸುಕ್ರಿಸ್ತ) ಅಲ್ಲಾಹನ ಪುತ್ರ ನೆಂದು (ದೇವಪುತ್ರ) ಕ್ರೈಸ್ತರು ಹೇಳಿದರು. (ಕುರ್‌ಆನ್ 9/30)

ಕ್ರೈಸ್ತರ ತ್ರಿಯೇಕತ್ವ ನಂಬಿಕೆಯ ಕುರಿತು ಕುರ್ ಆನ್ ಹೇಳುವುದು ನೋಡಿ:

ಖಂಡಿತವಾಗಿಯೂ ಅಲ್ಲಾಹು ಮೂವರಲ್ಲಿ ಓರ್ವನು ಎಂದು ಹೇಳಿದವರು ಅವಿಶ್ವಾಸಿಗಳಾದರು. ವಾಸ್ತವಿಕವಾಗಿ ಏಕಮೇವ ಆರಾಧ್ಯನಲ್ಲದೆ ಅನ್ಯ ಆರಾಧ್ಯನಿಲ್ಲ. (ಕುರ್‌ಆನ್ 5/43)

ಈ ಎಲ್ಲಾ ವಾಸ್ತವಿಕತೆಗಳ ಅಧ್ಯಯನವು ಅಲ್ಲಾಹ್ ಎಂಬ ದೇವನಾಮವು ಪ್ರವಾದಿ(ಸ)ರವರ ಆಗಮನಕ್ಕಿಂತ ಮುಂಚೆ ಅರಬರು, ಕ್ರೈಸ್ತರು ಮತ್ತು ಯಹೂದರು ನೈಜ ಆರಾಧ್ಯನಿಗಾಗಿ, ಏಕ ದೇವನಿಗಾಗಿ ಬಳಸುತ್ತಿದ್ದ ಪದವಾಗಿತ್ತೆಂಬುದನ್ನು ಸಂಶಯಕ್ಕೆಡೆಯಿಲ್ಲದ ರೀತಿಯಲ್ಲಿ ಸಾಬೀತುಪಡಿಸುತ್ತದೆ.

ಮಾತ್ರವಲ್ಲ, ಕ್ರೈಸ್ತರು ದೈವಿಕ ಗ್ರಂಥವೆಂದು ಪರಿಗಣಿಸುವ ಬೈಬಲ್ ನಲ್ಲಿ ಕೂಡ ಏಕ ಆರಾಧ್ಯನಿಗಾಗಿ ಅಲ್ಲಾಹ್ ಎಂಬ ಪದವನ್ನೇ ಬಳಸಿರುವುದನ್ನು ನಮಗೆ ಕಾಣಬಹುದಾಗಿದೆ. ಆಧುನಿಕ ಅರಬಿ ಕ್ರೈಸ್ತರು ಬಳಸುತ್ತಿರುವ ಅರಬಿ ಭಾಷೆಯಲ್ಲಿರುವ ಬೈಬಲ್ ದೇವನನ್ನು ಸೂಚಿಸಲು ಅಲ್ಲಾಹ್ ಎಂಬ ಪದವನ್ನು ಬಳಸಿರುವುದನ್ನು ನೋಡಿರಿ:

في البدء كان الكلمة ، والكلمة كانت عند الله ، وكان الكلمة الله . هذا كان في البدء عند الله . كل شيئ به كان ، وبغيره لم يكن شيئ مما كان . فيه كانت الحياة ، والحياة كانت نور الناس . والنور يضيئ في الظلمة ، والظلمة لم تدركه .

ಆದಿಯಲ್ಲಿ ವಚನವಿತ್ತು. ವಚನವು ಅಲ್ಲಾಹನ ಬಳಿಯಿತ್ತು. ವಚನವು ಅಲ್ಲಾಹ್ ಆಗಿತ್ತು. ಇವನು (ವಚನವೆಂಬವನು) ಆದಿ ಯಲ್ಲಿ ಅಲ್ಲಾಹನ ಬಳಿಯಿದ್ದನು. ಸಮಸ್ತವೂ ಉಂಟಾದುದು ಇವನಿಂದಾಗಿದೆ. ಉಂಟಾಗಿರುವ ವಸ್ತುಗಳಲ್ಲಿ ಆತನಿಲ್ಲದೆ ಒಂದಾದರೂ ಉಂಟಾಗಿರಲಿಲ್ಲ. ಆತನಲ್ಲಿ ಜೀವವಿತ್ತು. ಜೀವವು ಮಾನವರ ಬೆಳಕಾಗಿದೆ. ಬೆಳಕು ಅಂಧಕಾರದಲ್ಲಿ ಬೆಳಗುತ್ತದೆ ಮತ್ತು ಅಂಧಕಾರವು ಅದನ್ನು ಮಸುಕುಗೊಳಿಸುವುದಿಲ್ಲ. (ಅರಬಿ ಬೈಬಲ್: ಯೋಹಾನನು ಬರೆದ ಸುವಾರ್ತೆ 1:1-5)



ಈ ಎಲ್ಲಾ ವಿವರಣೆಗಳು ಅಲ್ಲಾಹ್ ಎಂಬ ನಾಮವು ಮುಸ್ಲಿಮರಿಗೆ ಮಾತ್ರ ಮೀಸಲಾದ ದೇವರ ಹೆಸರಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿಕೊಡುತ್ತದೆ. ಆದ್ದರಿಂದಲೇ ಸೃಷ್ಟಿಕರ್ತನಾದ, ನೈಜ ಆರಾಧ್ಯನಾದ ಅಲ್ಲಾಹನ ಕುರಿತು ಅರಿಯುವುದು ಮನುಕುಲದ ಮೋಕ್ಷಕ್ಕಿರುವ ಅನಿವಾರ್ಯತೆಯಾಗಿದೆ. ಅವನನ್ನು ಅರಿತು ಅವನನ್ನು ಮಾತ್ರ ಆರಾಧಿಸುವುದರ ಮೂಲಕ ಮಾತ್ರವೇ ಮನುಕುಲದ ಮುಕ್ತಿ ಸಾಧ್ಯ.