Powered By Blogger

Thursday, 13 October 2011

ಹಜ್ ನಿರ್ವಹಿಸಲು ತಲುಪಿದ ಮೂವತ್ತನಾಲ್ಕು ಸಾವಿರಕ್ಕೂ ಅಧಿಕ ಭಾರತೀಯರು



ಜಿದ್ದಾ  ( ಸೌದಿ ಅರೇಬಿಯಾ) :ಪವಿತ್ರ ಹಜ್ ನಿರ್ವಹಿಸಲು ಭಾರತದಿಂದ ಒಟ್ಟು ಮೂವತ್ತನಾಲ್ಕು ಸಾವಿರದ ಏಳುನೂರ ಎರಡು ಯಾತ್ರಿಗಳು ಈಗಾಗಲೇ ಸೌದಿ ಅರೇಬಿಯಾಕ್ಕೆ ಬಂದಿಳಿದಿದ್ದಾರೆ . ಭಾರತದ ವಿವಿಧ ನಗರಗಳಿಂದ ಒಟ್ಟು ನೂರ ಇಪ್ಪತ್ತೇಳು ಭಾರತೀಯ  ವಿಮಾನಗಳಲ್ಲಿ ಈ ಯಾತ್ರಿಕರು ಬಂದಿದ್ದು ಇವರ ಪೈಕಿ ಶನಿವಾರದವರೆಗೆ ೧೮೨೩ ಯಾತ್ರಿಗಳು ಮಕ್ಕಾ ನಗರದಲ್ಲೂ ೩೨೮೭೯ ಯಾತ್ರಿಗಳು ಮದೀನಾ ನಗರದಲ್ಲೂ ಇದ್ದಾರೆ ಎಂದು ಇಲ್ಲಿನ ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ . ಮೊದಲು ಬಂದ ಹಲವು ಯಾತ್ರಿಗಳು ಈಗಾಗಲೇ ಮಕ್ಕಾ ನಗರದಿಂದ ಮದೀನಾ ನಗರಕ್ಕೆ ಪ್ರಯಾಣಿಸಿದ್ದಾರೆ.
ಮಂಗಳೂರಿನಿಂದ ಬಂದ ಹಜ್ ತಂಡದಲ್ಲಿ ಒಟ್ಟು ೧೬೦ ಯಾತ್ರಾರ್ಥಿಗಳಿದ್ದು , ನವದೆಹಲಿಯಿಂದ ಬಂದ ಯಾತ್ರಾರ್ಥಿಗಳ ಸಂಖ್ಯೆ ಅಧಿಕವಾಗಿದೆ. ಸರ್ಕಾರಿ ಹಜ್ ಸಮಿತಿಯ ಮುಖಾಂತರ ಮತ್ತು ಹಲವು ಖಾಸಗಿ ಹಜ್ ಅಪರೇಟರ್ ಕಂಪೆನಿಗಳ ಮೂಲಕ ಈ ಯಾತ್ರಾರ್ಥಿಗಳು ಮಕ್ಕಾ ತಲುಪಿದ್ದಾರೆ.  ವಿಶ್ವದ ಬಹುತೇಕ ರಾಷ್ಟ್ರಗಳಿಂದ ಹಜ್ ಯಾತ್ರಾರ್ಥಿಗಳು ಮಕ್ಕಾ ಮದೀನಾ ತಲುಪಿದ್ದು ಈಗಾಗಲೇ ಅನಧಿಕೃತವಾಗಿ ಪಾಸ್ ಇಲ್ಲದೇ ಮಕ್ಕಾ ನಗರ ಪ್ರವೇಶಿಸುವುದನ್ನು ತಡೆಗಟ್ಟಲು ಮಕ್ಕಾ ಪ್ರವೇಶ ದ್ವಾರದಲ್ಲಿ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ. ಹಜ್ ನಿರ್ವಹಿಸಲು ಅನುಮತಿ ಪತ್ರ ಹೊಂದಿರುವವರಿಗೆ ಮಾತ್ರ ಮಕ್ಕಾ ನಗರಕ್ಕೆ ಪ್ರವೇಶ ನೀಡಲಾಗುತ್ತಿದೆ.

No comments:

Post a Comment