Powered By Blogger

Saturday, 29 October 2011

ಭಟ್ಕಳ : ಅಡ್ವಾಣಿಯ ರಥಯಾತ್ರೆಯಲ್ಲಿ ಹಿಂದುಗಳು ಯಾರೂ ಭಾಗವಹಿಸಬೇಡಿ – ಶ್ರೀರಾಮ ಸೇನೆ ಕರೆ


ಭಟ್ಕಳ : ಭಟ್ಕಳದ ಮೂಲಕ ಹಾದು ಹೋಗುವ ಅಡ್ವಾಣಿಯ ರಥಯಾತ್ರೆಗೆ ಶ್ರೀ ರಾಮ ಸೇನೆ ಬೆಂಬಲ ನೀಡುವುದಿಲ್ಲ ಎಂದು ಶ್ರೀರಾಮ ಸೇನೆಯ ಭಟ್ಕಳ ಘಟಕ ಹೇಳಿದೆ. ಗುರುವಾರದಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಅಡ್ವಾಣಿಯವರಿಗೆ ದೇಶದ ಹಿತಾಸಕ್ತಿಗಿಂತ ಪಕ್ಷದ ಹಿತಾಸಕ್ತಿ ಮುಖ್ಯವಾಗಿದೆ. ಅವರು ರಥಯಾತ್ರೆಯ ನಾಟಕವಾಡಿ ಓಟ್ ಬ್ಯಾಂಕನ್ನು ಗಟ್ಟಿಗೊಳಿಸುತ್ತಿದ್ದಾರೆ. ಅಡ್ವಾಣಿಯ ರಥಯಾತ್ರೆಯಲ್ಲಿ ಹಿಂದುಗಳು ಯಾರೂ  ಭಾಗವಹಿಸಕೂಡದು ಎಂದು ಶ್ರೀರಾಮ ಸೇನೆಯ ಭಟ್ಕಳ ಘಟಕವು ಕರೆ ನೀಡಿದೆ.

ಅಡ್ವಾಣಿಯು ಹಿಂದು ಮತ್ತು ರಾಮನ ಹೆಸರಿನಲ್ಲಿ ಹಲವಾರು ಯಾತ್ರೆಗಳನ್ನು ಮಾಡಿದ್ದಾರೆ. ಇದರಿಂದ ಹಿಂದು ಧರ್ಮಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಬದಲಾಗಿ ತಾವು ರಾಜಕೀಯ ಲಾಭವನ್ನು ಗಳಿಸಿಕೊಂಡಿದ್ದಾರೆ. ಬಿಜೆಪಿ ಮತ್ತು ಸಂಘ ಪರಿವಾರಗಳಿಗೆ ಹಿಂದು ಧರ್ಮದ ರಕ್ಷಣೆಯ ಕುರಿತಂತೆ ಯಾವುದೇ ಹಿತಾಸಕ್ತಿಯಿಲ್ಲ. ಬದಲಾಗಿ ಈ ರೀತಿಯ ಯಾತ್ರೆಗಳ ಮೂಲಕ ಬಿಜೆಪಿಗೆ ಓಟ್ ಬ್ಯಾಂಕ್ ದೊರೆತಿದೆ ಎಂದರು. ಡಾ.ಚಿತ್ತರಂಜನ್ ಕೊಲೆಯಾದ ಸಂದರ್ಭ ಭಟ್ಕಳಕ್ಕೆ ಬಂದ ಅಡ್ವಾಣಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ 24 ಗಂಟೆಗಳ ಒಳಗಾಗಿ ಕೊಲೆ ಆರೋಪಿಗಳನ್ನು ಪತ್ತೆ ಹಚ್ಚುವುದಾಗಿ ಹೇಳಿಕೆ ನೀಡಿದ್ದರು. ಅದರ ನಂತರ ಕೇಂದ್ರ ಹಾಗೂ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೂ ಏನನ್ನು ಮಾಡಲು ಸಾಧ್ಯವಾಗಿಲ್ಲ ಎಂದು ಶ್ರೀರಾಮಸೇನೆ ಆಪಾದಿಸಿದೆ . ಪತ್ರಿಕಾಗೋಷ್ಠಿಯಲ್ಲಿ  ಶ್ರೀರಾಮ ಸೇನೆಯ ಮುಖಂಡ ಶಂಕರ್ ನಾಯ್ಕ, ಸುರೇಶ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

No comments:

Post a Comment