Powered By Blogger

Monday, 5 September 2011

JIHAD - ISLAMI JIHAD


ಜಿಹಾದ್ ಎಂಬ ಪದದ ನೇರವಾದ ಅರ್ಥವು (direct meaning) ಧರ್ಮಯುದ್ಧವಾಗಿದೆಯೆಂದು ಬಹುತೇಕ ಮಂದಿಯೂ ತಪ್ಪುಕಲ್ಪನೆಯನ್ನಿಟ್ಟುಕೊಂಡಿದ್ದಾರೆ. ಇದಕ್ಕಿರುವ ಮುಖ್ಯ ಕಾರಣವು ಪಾಶ್ಚಾತ್ಯರ ಅಂಧಾನುಕರಣೆಯಾಗಿದೆ.

 

ಉದಾಹರಣೆಗೆ ‘Oxford University Press’ ಪ್ರಕಟಿಸಿದ ‘Oxford Advanced Learner’s Dictionary’ಯಲ್ಲಿ ಜಿಹಾದ್ (Jihad) ಎಂಬ ಪದಕ್ಕೆ ನೀಡಿದ ಅರ್ಥವನ್ನು ಈ ರೀತಿ ಕಾಣಬಹುದು:

 

“holy war fought by Muslims against those who reject Islam”

ಇಸ್ಲಾಮನ್ನು ತಿರಸ್ಕರಿಸುವವರ ವಿರುದ್ಧ ಮುಸ್ಲಿಮರು ಹೋರಾಡುವ ಪವಿತ್ರ ಯುದ್ಧ. (ಪುಟ 673)

 

ಪಾಶ್ಚಾತ್ಯರ ವಿಚಾರಧಾರೆಗಳನ್ನು ಹಾಗೆಯೇ ಭಟ್ಟಿಯಿಳಿಸಿಕೊಳ್ಳುವ ನಮ್ಮವರು ಜಿಹಾದ್‌ನ ವಿಷಯದಲ್ಲಿ ಕೂಡ ಅವರನ್ನು ಅಂಧವಾಗಿ ಅನುಕರಿಸಿದ್ದಾರೆ. ಗದಗದ ಸಂಕೇಶ್ವರ ಪ್ರಿಂಟರ‍್ಸ್ ಪ್ರಕಟಿಸಿದ ಇಂಗ್ಲಿಷ್-ಕನ್ನಡ ಸ್ಟ್ಯಾಂಡರ್ಡ್ ಡಿಕ್ಷನರಿಯಲ್ಲಿ ಇದೇ ರೀತಿಯ ಅರ್ಥ ನೀಡಿರುವುದನ್ನು ಕಾಣಬಹುದು:

ಕಾಫಿರರ ವಿರುದ್ಧ ಮುಸಲ್ಮಾನರ ಧರ್ಮಯುದ್ಧ; ಒಂದು ಮತಸಿದ್ಧಾಂತದ ಪರ ಅಥವಾ ವಿರುದ್ಧ ಹೂಡುವ ಧರ್ಮಯುದ್ಧ. (ಪುಟ 445)

 

ವಾಸ್ತವಿಕವಾಗಿ ಜಗತ್ತಿನ ಮುಂದೆ ಇಸ್ಲಾಮನ್ನು ಕರುಣೆಯಿಲ್ಲದ, ಬರ್ಬರ, ಕಿರಾತಕ ಧರ್ಮವೆಂದು ಬಿಂಬಿಸಲು ಹೆಣಗಾಡುವ ಪಾಶ್ಚಾತ್ಯರ ಒಂದು ತಂತ್ರ ಮಾತ್ರವಾಗಿದೆ ಇದು.

 

ಮಧ್ಯಯುಗದ ಕಾಲದಲ್ಲಿ ಮುಸ್ಲಿಮರ ಮತ್ತು ಯಹೂದಿಗಳ ವಿರುದ್ಧ ದಂಡೆತ್ತಿ ಬಂದ ಕ್ರಿಶ್ಚಿಯನ್ ಸಾಮ್ರಾಟರು ತಮ್ಮ ಆ ಹೋರಾಟವನ್ನು ಅಂದು ಧರ್ಮಯುದ್ಧವೆಂದು ಕರೆದಿದ್ದರು. ಸಲಾಹುದ್ದೀನ್ ಅಯ್ಯೂಬಿಯ ನಾಯಕತ್ವದಲ್ಲಿ ಮುಸ್ಲಿಮ್ ಸೇನೆಯು ಅವರನ್ನು ಹಿಮ್ಮೆಟ್ಟಿಸುವವರೆಗೆ ವರ್ಷಗಳ ಕಾಲ ಅವರು ಲಕ್ಷಾಂತರ ಜನರ ಮಾರಣಹೋಮ ನಡೆಸಿದರು. ಇದು ತದನಂತರ ‘Christian Crusades’ ಅಥವಾ ಶಿಲುಬೆಯುದ್ಧಗಳು ಎಂಬ ಹೆಸರಿನಲ್ಲಿ ಪ್ರಖ್ಯಾತವಾಯಿತು.

 

ಆದರೆ ಧರ್ಮದ ಹೆಸರಿನಲ್ಲಿ ತಮ್ಮ ಪೂರ್ವಿಕರು ನಡೆಸಿದ ಬರ್ಬರ ಹತ್ಯಾ ಕಾಂಡವನ್ನು ತಂತ್ರಪೂರ್ವಕವಾಗಿ ಮರೆಮಾಚುತ್ತಿರುವ ಪಾಶ್ಚಾತ್ಯರು ‘Crusade’ ಎಂಬ ಪದಕ್ಕೆ ಅದೇ ಡಿಕ್ಷನರಿಯಲ್ಲಿ ನೀಡಿದ ಅರ್ಥವನ್ನು ಗಮನಿಸಿ:

 

“anyone of the military expeditions by the European Christian countries to recover the Holy Land from the Muslims in the Middle Ages”

ಮಧ್ಯಯುಗದ ಕಾಲದಲ್ಲಿ ಪವಿತ್ರ ಭೂಮಿಯನ್ನು ಮುಸ್ಲಿಮರಿಂದ ಮರಳಿ ಪಡೆಯುವುದಕ್ಕಾಗಿ ಐರೋಪ್ಯ ಕ್ರೈಸ್ತ ರಾಷ್ಟ್ರಗಳಿಂದ ನಡೆಸಲ್ಪಟ್ಟ ಯಾವುದಾದರೊಂದು ಸೈನಿಕ ದಂಡೆಯಾತ್ರೆ. (ಪುಟ 288)

ಹೇಗಿದೆ ನೋಡಿ!! ನಿಷ್ಪಕ್ಷವಾಗಿ ಚಿಂತಿಸುವ ಓರ್ವ ವ್ಯಕ್ತಿಗೆ ಪಾಶ್ಚಾತ್ಯರ ಈ ಕುಟಿಲತೆಯು ಸುಲಭವಾಗಿ ಮನದಟ್ಟಾಗಬಹುದು. ಜಿಹಾದ್ ಮತ್ತು ಕ್ರುಸೇಡ್ ಗಳ ಮಧ್ಯೆ ಪಾಶ್ಚಾತ್ಯರು ತೋರಿಸುವ ಸ್ಪಷ್ಟವಾದ ಅಂತರ ಮತ್ತು ಪದಕಸರತ್ತುಗಳಿಂದ ತಮ್ಮ ಧರ್ಮವನ್ನು ಅವರು ಸಂರಕ್ಷಿಸುವ ಶೈಲಿಯು ಅದ್ವಿತೀಯವಾಗಿದೆ. ಜಿಹಾದನ್ನು ಅತಿ ಕ್ರೂರವಾಗಿ ವರ್ಣಿಸುವ ಅವರು ಕ್ರುಸೇಡನ್ನು ಅದು ಏನೂ ಅಲ್ಲವೆಂಬಂತೆ ಚಿತ್ರಿಸಿದ್ದಾರೆ!

 

ವಾಸ್ತವಿಕವಾಗಿ ಪಾಶ್ಚಾತ್ಯರು ಹೇಳುವಂತಹ ಅರ್ಥವಾಗಿದೆಯೇ ಜಿಹಾದ್ ಎಂಬ ಪದಕ್ಕಿರುವುದು? ಅಲ್ಲವೆಂದಾದರೆ ಜಿಹಾದ್ ಎಂಬ ಪದದ ನಿಜವಾದ ಅರ್ಥೆವೇನು?

 

ಜಿಹಾದ್ ಎಂಬುದು ಜಾಹದ ಎಂಬ ಕ್ರಿಯಾಪದದ ಕ್ರಿಯಾಧಾತುವಾಗಿದೆ. ಕ್ರೈಸ್ತರೇ ಸ್ವತಃ ಬರೆದು ಪ್ರಕಟಿಸಿದ ಅಲ್‌ಮುನ್ಜಿದ್ ಎಂಬ ಅರಬಿ ಡಿಕ್ಷನರಿಯಲ್ಲಿ ಇದಕ್ಕೆ ನೀಡಿದ ಅರ್ಥವು ಹೀಗಿದೆ:

جَاهَدَ مُجَاهَدَةً وَجِهَادًا : بَذَلَ وُسْعَهُ . وَمِنَ الْقُرْآنِ :  وَجَاهِدُوا فِي اللهِ حَقَّ جِهَادِهِ  || وَ – الْعَدُوَّ : قَاتَلَهُ مُحَامَاةً عَنِ الدِّينِ . وَالْأَصْلُ بَذَلَ كُلٌّ مِنْهُمَا جُهْدَهُ فِي دَفْعِ صَاحِبِهِ

ಜಾಹದ: ಇದರ ಕ್ರಿಯಾಧಾತುಗಳಾಗಿವೆ ಮುಜಾಹದತ್ ಮತ್ತು ಜಿಹಾದ್. ಇದರ ಅರ್ಥ: ಒರ್ವನು ತನ್ನ ಶ್ರಮವನ್ನು ವ್ಯಯಿಸಿದನು ಎಂದಾಗಿದೆ. ಕುರ್‌ಆನ್‌ನಲ್ಲಿ ಹೀಗಿದೆ: ಅಲ್ಲಾಹನಿಗಾಗಿ ಜಿಹಾದ್ ಮಾಡಬೇಕಾದ ರೀತಿಯಲ್ಲಿ ಜಿಹಾದ್ ಮಾಡಿರಿ (22/77). ಜಾಹದಲ್ ಅದುವ್ವ (ಅವನು ಶತ್ರುವಿನ ವಿರುದ್ಧ ಜಿಹಾದ್ ಮಾಡಿದನು) ಎಂದರೆ: ಧರ್ಮವನ್ನು ಸಂರಕ್ಷಿಸುವುದಕ್ಕಾಗಿ ಶತ್ರುವಿನ ವಿರುದ್ಧ ಹೋರಾಡಿದನು ಎಂದಾಗಿದೆ. ಇದರ ಮೂಲವು (ಶತ್ರುಗಳ ವಿರುದ್ಧ ಜಿಹಾದ್ ಮಾಡುವುದರ ಮೂಲವು) ಇಬ್ಬರು ವ್ಯಕ್ತಿಗಳು ಪರಸ್ಪರ ರಕ್ಷಣೆಗಾಗಿ ತಮ್ಮ ಶ್ರಮವನ್ನು ವ್ಯಯಿಸಿದರು ಎಂಬುದರಿಂದ ಬಂದುದಾಗಿದೆ. (ಪುಟ 106)

 

ಅರೇಬಿಕ್-ಇಂಗ್ಲಿಷ್ ಡಿಕ್ಷನರಿಗಳಲ್ಲಿ ಶ್ರೇಷ್ಠ ಸ್ಥಾನವನ್ನು ಪಡೆದಿರುವ, ಎಂಟು ಭಾಗಗಳಲ್ಲಿ ಪ್ರಕಟಿಸಲ್ಪಟ್ಟಿರುವ ಬೃಹತ್ ಡಿಕ್ಷನರಿಯಾಗಿರುವ ‘Arabic English Lexicon’ನಲ್ಲಿ ಅದರ ಸಂಪಾದಕರಾದ ಎಡ್ವರ್ಡ್ ವಿಲಿಯಂ ಲೇನ್ (Edward William Lane) ಜಿಹಾದ್ ಎಂಬ ಪದದ ನೈಜ ಅರ್ಥವನ್ನು ವಿವರಿಸುವುದನ್ನು ನೋಡಿರಿ:

 “ جِهَادٌ inf. n. of جَاهَدَ , properly signifies The using, or exerting, one’s utmost power, efforts, endeavours, or ability, in contending with an object of disapprobation; and this is of three kinds, namely, a visible enemy, the devil, and one’s self; all of which are included in the term as used in the Kuran xxii. 77.

You say, جَاهَدَ الْعَدُوَّ inf. n. as above and مُجَاهَدَةً He fought with the enemy or he encountered the enemy, imposing upon himself difficulty or distress or fatigue, or exerting his power or efforts or endeavours or ability, [or the utmost thereof,] to repel him, his enemy doing the like: and hence جَاهَدَ came to be used by the Muslims to signify generally he fought, warred, or waged war, against unbelievers and the like. You say also, جَاهَدَ فِي سَبِيلِ اللهِ , inf. n. جِهَادٌ and مُجَاهَدَةٌ ,  [He fought, &c., in the way of God; i e., in the cause of religion.] ”

ಜಿಹಾದ್ ಎಂಬುದು ಜಾಹದ ಎಂಬುದರ ಕ್ರಿಯಾಧಾತುವಾಗಿದೆ. ಇದರ ಸರಿಯಾದ ಅರ್ಥವು: ಓರ್ವನು ತನ್ನ ಪರಮವಾದ ಬಲವನ್ನು, ಶ್ರಮವನ್ನು, ಪ್ರಯತ್ನವನ್ನು ಮತ್ತು ಸಾಮರ್ಥ್ಯವನ್ನು ಅನಿಷ್ಟಕರವಾದ ವಸ್ತುವಿನ ವಿರುದ್ಧ ಹೋರಾಡುವುದಕ್ಕಾಗಿ ಬಳಸುವುದು ಅಥವಾ ಪ್ರಯೋಗಿಸುವುದು ಎಂದಾಗಿದೆ. ಈ ಅನಿಷ್ಟಕರವಾದ ವಸ್ತು ಮೂರು ವಿಧಗಳಾಗಿವೆ: ಪ್ರತ್ಯಕ್ಷ ಶತ್ರು, ಪಿಶಾಚಿ ಅಥವಾ ಸ್ವಂತ ಶರೀರ. ಕುರ್‌ಆನ್‌ನ 22/77 ವಚನದಲ್ಲಿ ಬಳಸಿರುವಂತೆ ಇವೆಲ್ಲವೂ ಜಿಹಾದ್ ಎಂಬ ಪದದಲ್ಲಿ ಒಳಪಡುತ್ತವೆ.

ಜಾಹದಲ್ ಅದುವ್ವ (ಅವನು ಶತ್ರುವಿನ ವಿರುದ್ಧ ಜಿಹಾದ್ ಮಾಡಿದನು) ಎಂದರೆ ಅದರ ಅರ್ಥವು: ಅವನು ತನ್ನ ಶರೀರದ ಮೇಲೆ ಕಷ್ಟ, ಯಾತನೆ ಅಥವಾ ಆಯಾಸವನ್ನು ಹೊರಿಸಿ, ಅಥವಾ ತನ್ನ ಬಲ, ಶ್ರಮ, ಪ್ರಯತ್ನ ಮತ್ತು ಸಾಮರ್ಥ್ಯವನ್ನು [ಅಥವಾ ಅವುಗಳ ಪಾರಮ್ಯವನ್ನು] ಪ್ರಯೋಗಿಸಿ, ತನ್ನ ಶತ್ರು ಕೂಡ ಇದೇ ರೀತಿ ತನ್ನ ವಿರುದ್ಧ ಪ್ರಯೋಗಿಸದಿರಲೆಂದು, ಅವನನ್ನು ಹಿಮ್ಮೆಟ್ಟಿಸುವುದಕ್ಕಾಗಿ ಅವನ ವಿರುದ್ಧ ಹೋರಾಡಿದನು ಎಂದಾಗಿದೆ. ಜಿಹಾದ್ ಎಂಬ ಪದಕ್ಕೆ ಈ ಅರ್ಥವಿರುವುದರಿಂದಾಗಿದೆ ಸಾಮಾನ್ಯವಾಗಿ ಅವನು ಅವಿಶ್ವಾಸಿಗಳ ಮತ್ತು ಅವರಂತಿರುವವರ ವಿರುದ್ಧ ಯುದ್ಧ ಮಾಡಿದನು, ಹೋರಾಡಿದನು ಎಂಬುದನ್ನು ಸೂಚಿಸಲು ಮುಸ್ಲಿಮರು ಈ ಪದವನ್ನು ಬಳಸುತ್ತಿರುವುದು. ಜಾಹದ ಫೀ ಸಬೀಲಿಲ್ಲಾಹ್ ಎಂದರೆ ಅದರ ಅರ್ಥವು: ಅವನು ದೇವನ ಮಾರ್ಗದಲ್ಲಿ ಅರ್ಥಾತ್ ಧರ್ಮದ ನಿಮಿತ್ತ ಹೋರಾಡಿದನು ಎಂದಾಗಿದೆ. (2/473)

 

ಇಸ್ಲಾಮನ್ನು ತಿರಸ್ಕರಿಸುವವರ (ಮುಸ್ಲಿಮೇತರರ) ವಿರುದ್ಧ ಮಾಡುವ ಪವಿತ್ರ ಯುದ್ಧವಾಗಿದೆ ಜಿಹಾದ್ ಎಂದು ಬರೆದ ಪಾಶ್ಚಾತ್ಯರು ಮತ್ತು ಜಿಹಾದ್ ಎಂಬ ಪದಕ್ಕಿರುವ ನೈಜವಾದ ಅರ್ಥವನ್ನು ಬರೆದ ಅರಬ್ ಕ್ರೈಸ್ತರ ಮಧ್ಯೆಯಿರುವ ಅಗಾಧ ವ್ಯತ್ಯಾಸವನ್ನು ಮತ್ತು ಪರಿಜ್ಞಾನವನ್ನು ಇದರಿಂದ ಕಂಡುಕೊಳ್ಳಬಹುದಾಗಿದೆ.

 

ಆದ್ದರಿಂದ ಅರಬಿ ಭಾಷೆಯಲ್ಲಿ ಜಿಹಾದ್ ಎಂಬುದರ ಅರ್ಥವು ಪರಿಶ್ರಮಿಸುವುದು, ಕಷ್ಟಪಟ್ಟು ಮಾಡುವುದು, ಕಠಿಣವಾಗಿ ಪ್ರಯತ್ನಿಸುವುದು ಎಂದಾಗಿದೆ. ಅಧಿಕ ಶ್ರಮವಿರುವ ಕೆಲಸವನ್ನು ಅರಬಿಯಲ್ಲಿ ಜುಹ್ದ್ ಎನ್ನಲಾಗುತ್ತದೆ. ಇಂಗ್ಲಿಷ್‌ನಲ್ಲಿ hardwork ಎನ್ನಲಾಗುವಂತೆ. ಅರಬಿಯಲ್ಲಿ ಜಿಹಾದ್ ಎಂಬ ಪದಕ್ಕೆ ಧರ್ಮಯುದ್ಧ ಅಥವಾ ಪವಿತ್ರಯುದ್ಧ (holy war) ಎಂಬ ಅರ್ಥವು ಇಲ್ಲವೇ ಇಲ್ಲ. ಇದು ತಮ್ಮ ಕ್ರುಸೇಡನ್ನು ನ್ಯಾಯೀಕರಿಸುವುದಕ್ಕಾಗಿ ಪಾಶ್ಚಾತ್ಯರು ಆವಿಷ್ಕರಿಸಿದ ನವೀನ ಅರ್ಥವಾಗಿದೆ. ಪವಿತ್ರ ಯುದ್ಧವನ್ನು ಅರಬಿಯಲ್ಲಿ ಹರ್ಬುನ್ ಮುಕದ್ದಸತುನ್ ಎನ್ನಲಾಗುತ್ತದೆ.

 

ಎಲಿಯಾಸ್ ಅಂತೋನಿ ಮತ್ತು ಎಡ್ವರ್ಡ್ ಎಲಿಯಾಸ್ ಬರೆದ ‘The School Dictionary’ ಎಂಬ ಇಂಗ್ಲಿಷ್-ಅರೇಬಿಕ್ ಡಿಕ್ಷನರಿಯಲ್ಲಿ crusade ಎಂಬ ಪದಕ್ಕೆ ನೀಡಿದ ಅರ್ಥವನ್ನು ಗಮನಿಸಿ:

حَرْبٌ صَلِيبِيَّةٌ

ಶಿಲುಬೆಯುದ್ಧ (ಪುಟ 70)

 

ಶಿಲುಬೆಯನ್ನು ಮುಂದಿಟ್ಟುಕೊಂಡು ಯುದ್ಧಮಾಡಿದ ಮಧ್ಯಯುಗದ ಕ್ರೈಸ್ತರ ಕ್ರುಸೇಡ್ ಪವಿತ್ರ ಭೂಮಿಯನ್ನು ಮುಸ್ಲಿಮರಿಂದ ಮರಳಿ ಪಡೆಯುವುದಕ್ಕಾಗಿರುವ ಹೋರಾಟವೆಂದು ಸಬೂಬು ನೀಡುವ ಪಾಶ್ಚಾತ್ಯರು ಜಿಹಾದ್ ಎಂಬ ಪದಕ್ಕೆ ಅದರ ನೈಜವಾದ ಅರ್ಥವನ್ನು ಯಾಕೆ ಹೇಳುವುದಿಲ್ಲ? ನಾವು ನಿಷ್ಪಕ್ಷವಾಗಿ ಚಿಂತಿಸಬೇಕಾಗಿದೆ.

 

ವಾಸ್ತವಿಕವಾಗಿ ಇಸ್ಲಾಮೀ ಪ್ರಮಾಣಗಳಲ್ಲಿ ಜಿಹಾದ್ ಎಂಬ ಪದವನ್ನು ಧಾರಾಳವಾಗಿ ಬಳಸಲಾಗಿದೆ. ಪರಿಶ್ರಮಿಸುವುದು, ಕಷ್ಟಪಡುವುದು, ಸ್ವೇಚ್ಛೆಯನ್ನು ಮೆಟ್ಟಿನಿಲ್ಲುವುದು, ಆಪತ್ಕರ ಘಟ್ಟಗಳಲ್ಲಿ ಸತ್ಯವನ್ನು ನುಡಿಯುವುದು, ಮಾತಾಪಿತರ ಸೇವೆಗೈಯುವುದು ಮುಂತಾದ ಅನೇಕ ಕಾರ್ಯಗಳನ್ನು ಇಸ್ಲಾಮ್ ಜಿಹಾದ್ ಎಂದೇ ಬಣ್ಣಿಸುತ್ತದೆ. ಅದೇ ರೀತಿ ಧರ್ಮ ಸಂರಕ್ಷಣೆಗಾಗಿ ಲೇಖನಿಯ ಮೂಲಕ, ನಾಲಗೆಯ ಮೂಲಕ ನಡೆಸುವ ಹೋರಾಟವನ್ನು ಮತ್ತು ಅನಿವಾರ್ಯ ಸಂದರ್ಭಗಳಲ್ಲಿರುವ ಸಶಸ್ತ್ರ ಹೋರಾಟವನ್ನು ಕೂಡ ಜಿಹಾದ್ ಎಂದೇ ಕರೆಯುತ್ತದೆ. ನಾವೀಗಾಗಲೇ ಕಂಡುಕೊಂಡಂತೆ ಸಶಸ್ತ್ರ ಹೋರಾಟವೆಂಬುದು ಜಿಹಾದ್ ಎಂಬ ಪದಕ್ಕಿರುವ ಅನೇಕ ಅರ್ಥಗಳಲ್ಲಿ ಒಂದು ಮಾತ್ರವಾಗಿದೆಯೇ ಹೊರತು ಅದರ ನೇರವಾದ ಅರ್ಥ (direct meaning) ಅಲ್ಲ.

 

ಪ್ರವಾದಿ(ಸ)ರವರು ಹೇಳಿದರು:

ಓರ್ವ ವ್ಯಕ್ತಿ ತನ್ನ ಶರೀರ ಮತ್ತು ಸ್ವೇಚ್ಛೆಯ ವಿರುದ್ಧ ಹೋರಾಡುವುದಾಗಿದೆ ಅತಿಶ್ರೇಷ್ಠ ಜಿಹಾದ್. (ಸಹೀಹುಲ್ ಜಾಮಿಅ ಹದೀಸ್ ನಂ. 1099)

 

ಪ್ರವಾದಿ(ಸ)ರವರು ಹೇಳಿದರು:

ಅಕ್ರಮಿಯಾದ ರಾಜನ ಮುಂದೆ ಸತ್ಯ ಮಾತನ್ನು ಹೇಳುವುದಾಗಿದೆ ಅತಿಶ್ರೇಷ್ಠ ಜಿಹಾದ್. (ಸಹೀಹುಲ್ ಜಾಮಿಅ ಹದೀಸ್ ನಂ. 1100)

 

ಅದೇ ರೀತಿ ಪ್ರವಾದಿ(ಸ)ರವರು ಹೇಳಿದರು:

ಸ್ವೀಕಾರ‍್ಯಯೋಗ್ಯವಾದ ರೀತಿಯಲ್ಲಿ ಹಜ್ ನಿರ್ವಹಿಸುವುದಾಗಿದೆ ಅತಿಶ್ರೇಷ್ಠ ಜಿಹಾದ್. (ಸಹೀಹುಲ್ ಬುಖಾರಿ ಹದೀಸ್ ನಂ. 1448)

 

ಇವು ಕೇವಲ ಕೆಲವು ಉದಾಹರಣೆಗಳು ಮಾತ್ರವಾಗಿವೆ. ಈ ಮೇಲಿನ ಹದೀಸ್ ಗಳಲ್ಲಿ ಜಿಹಾದ್ ಎಂದರೆ ಏನೆಂದು ಪ್ರವಾದಿ(ಸ)ರವರು ಸ್ವತಃ ವಿವರಿಸಿದ್ದಾರೆ. ಅರ್ಥಾತ್ ಇಲ್ಲಿ ಉದಾಹರಣೆಯಾಗಿ ನೀಡಲಾದ ಮೂರು ರೀತಿಯ ಜಿಹಾದ್‌ಗಳನ್ನು ಮಾಡಬೇಕಾದರೆ ಓರ್ವನು ತನ್ನ ಪರಮವಾದ ಬಲವನ್ನು, ಧೈರ್ಯವನ್ನು ಮತ್ತು ಪರಿಶ್ರಮವನ್ನು ಬಳಸಿ ತನ್ನ ಶರೀರದ ವಿರುದ್ಧ, ತನ್ನ ಶತ್ರುವಿನ ವಿರುದ್ಧ ಮತ್ತು ಪಿಶಾಚಿಯ ದುರ್ಬೋಧನೆಗಳ ವಿರುದ್ಧ ಹೋರಾಡಬೇಕಾಗಿದೆ. ಇದರ ಹೊರತು ಮುಸ್ಲಿಮೇತರರನ್ನು ಕೊಲ್ಲುವುದಾಗಿದೆ ಜಿಹಾದ್ ಎಂದು ಅಲ್ಲಾಹನಾಗಲಿ ಪ್ರವಾದಿ(ಸ)ರವರಾಗಲಿ ಎಲ್ಲೂ ಹೇಳಿಲ್ಲ.

 

ಅನಿವಾರ್ಯ ಸಂದರ್ಭಗಳಲ್ಲಿರುವ ಸಶಸ್ತ್ರ ಹೋರಾಟವನ್ನು ಇಸ್ಲಾಮ್ ಜಿಹಾದ್ ಎಂದು ಕರೆದಿದ್ದರೂ ಕೂಡ ಅದು ಮಾತ್ರವಾಗಿದೆ ಜಿಹಾದ್ ಎಂದು ಹೇಳಿಲ್ಲ. ಉದಾಹರಣೆಗೆ ಒಮ್ಮೆ ಪ್ರವಾದಿ(ಸ)ರವರು ಯುದ್ಧಕ್ಕಾಗಿ ಸೈನ್ಯ ಜಮಾವಣೆ ಮಾಡುತ್ತಿದ್ದಾಗ ಓರ್ವ ವ್ಯಕ್ತಿ ಬಂದು ನಾನು ತಮ್ಮೊಂದಿಗೆ ಜಿಹಾದ್‌ನಲ್ಲಿ ಪಾಲ್ಗೊಳ್ಳಲು ಇಚ್ಚಿಸುತ್ತೇನೆ ಎನ್ನುತ್ತಾರೆ. ಆಗ ಪ್ರವಾದಿ(ಸ)ರವರು ಆ ವ್ಯಕ್ತಿಯೊಂದಿಗೆ ನಿನ್ನ ಮಾತಾಪಿತರು ಬದುಕಿದ್ದಾರೆಯೇ ಎಂದು ಕೇಳುತ್ತಾರೆ. ಆ ವ್ಯಕ್ತಿ ಹೌದೆನ್ನುತ್ತಾರೆ. ಆಗ ಪ್ರವಾದಿ(ಸ)ರವರು ಹೇಳುತ್ತಾರೆ:

ಹಾಗಾದರೆ ನಿನ್ನ ಮಾತಾಪಿತರಲ್ಲಿ ನೀನು ಜಿಹಾದ್ ಮಾಡು. (ಸಹೀಹುಲ್ ಬುಖಾರಿ ಹದೀಸ್ ನಂ. 2842)

 

ಅರ್ಥಾತ್ ನೀನು ಪರಮವಾಗಿ ಪರಿಶ್ರಮಿಸಿ ನಿನ್ನ ವೃದ್ಧ ಮಾತಾಪಿತರ ಸೇವೆಗೈಯುವುತ್ತಾ ಬದುಕಿರುವುದಾಗಿದೆ ಸಶಸ್ತ್ರ ಹೋರಾಟ ಮಾಡಿ ಮಡಿಯುವುದಕ್ಕಿಂತಲೂ ನಿನಗಿರುವ ಶ್ರೇಷ್ಠವಾದ ಜಿಹಾದ್ ಎನ್ನುತ್ತಾ ಪ್ರವಾದಿ(ಸ)ರವರು ಆ ವ್ಯಕ್ತಿಯನ್ನು ಹಿಂದಕ್ಕೆ ಕಳುಹಿಸುತ್ತಾರೆ.

 

ಆದ್ದರಿಂದ ಸಂಕ್ಷಿಪ್ತವಾಗಿ ಹೇಳುವುದಾದರೆ ಓರ್ವ ವ್ಯಕ್ತಿಯು ತನ್ನ ಪರಮವಾದ ಪರಿಶ್ರಮವನ್ನು ಬಳಸಿ ಅಲ್ಲಾಹನ ತೃಪ್ತಿಯನ್ನು ಆಗ್ರಹಿಸುತ್ತಾ ಮಾಡುವ ಪ್ರತಿಯೊಂದು ಸತ್ಕರ್ಮವನ್ನೂ ಇಸ್ಲಾಮ್ ಜಿಹಾದ್ ಎಂದೇ ಕರೆದಿದೆ. ಕುರ್‌ಆನ್ ಹೇಳುತ್ತದೆ:

 

ನಮಗೋಸ್ಕರ (ಅಲ್ಲಾಹನಿಗೋಸ್ಕರ) ಜಿಹಾದ್ ಮಾಡುವವರನ್ನು ನಾವು ನಮ್ಮ ಮಾರ್ಗಗಳೆಡೆಗೆ ಖಂಡಿತವಾಗಿಯೂ ಮುನ್ನಡೆಸುವೆವು. ಖಂಡಿತವಾಗಿಯೂ ಅಲ್ಲಾಹು ಸತ್ಕರ್ಮ ಗೈಯುವವರ ಜೊತೆಗಿದ್ದಾನೆ. (29/69)

 

ಇಲ್ಲಿ ಅಲ್ಲಾಹನಿಗೋಸ್ಕರ ಜಿಹಾದ್ ಮಾಡುವುದು ಎಂದರೆ ಮುಸ್ಲಿಮೇತರರನ್ನು ಕೊಲ್ಲುವುದಾಗಲಿ, ಅವರ ವಿರುದ್ಧ ಧರ್ಮಯುದ್ಧವನ್ನು ಸಾರುವುದಾಗಲಿ ಅಲ್ಲ. ಬದಲಾಗಿ ಅಲ್ಲಾಹನ ತೃಪ್ತಿಯನ್ನು ಬಯಸುತ್ತಾ ಪರಮವಾಗಿ ಪರಿಶ್ರಮಿಸಿ ಸತ್ಕರ್ಮಗಳನ್ನು ಮಾಡುವುದಾಗಿದೆಯೆಂದು ಜಿಹಾದ್‌ಗೆ ಧರ್ಮಯುದ್ಧ ಅಥವಾ ಪವಿತ್ರಯುದ್ಧವೆಂದು ಅರ್ಥ ನೀಡುವವರು ಅರಿತುಕೊಳ್ಳಬೇಕು.

 

ಮುಖ ಎಂದು ಹೇಳುವಾಗ ಯಾವ ರೀತಿ ಅದು ಎರಡು ಕಣ್ಣುಗಳು, ಎರಡು ಕಿವಿಗಳು, ಮೂಗು, ಬಾಯಿ ಇತ್ಯಾದಿಗಳನ್ನು ಹೊಂದಿರುತ್ತದೆಯೋ ಮತ್ತು ಮುಖ ಎಂದರೆ ಅದು ಕೇವಲ ಮೂಗು ಎಂದು ಯಾವ ರೀತಿ ಅರ್ಥ ನೀಡಲು ಸಾಧ್ಯವಿಲ್ಲವೋ ಅದೇ ರೀತಿ ಅನಿವಾರ್ಯ ಸಂದರ್ಭಗಳಲ್ಲಿರುವ ಸಶಸ್ತ್ರ ಹೋರಾಟವು ಜಿಹಾದ್‌ನ ಒಂದು ಅಂಗವಾಗಿದ್ದರೂ ಕೂಡ ಜಿಹಾದ್ ಎಂದರೆ ಕೇವಲ ಸಶಸ್ತ್ರ ಹೋರಾಟವೆಂದು ಅರ್ಥ ನೀಡಲು ಸಾಧ್ಯವಿಲ್ಲ.

No comments:

Post a Comment