ಕುರ್ ಆನ್ ಮುಸ್ಲಿಮೇತರರನ್ನು ಕೊಲ್ಲುವಂತೆ ಆದೇಶಿಸುತ್ತದೆಯೇ?
ಕುರ್‌ಆನ್‌ನ ಸೂಕ್ತಿಗಳನ್ನು ಸಂದರ್ಭಗಳಿಂದ ಬೇರ್ಪಡಿಸಿ (out of context) ಜನರಲ್ಲಿ ಇಸ್ಲಾಮಿನ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡುವ ಕಾರ್ಯದಲ್ಲಿ ಒಂದು ವರ್ಗವು ಸದಾ ನಿರತವಾಗಿದೆ. ಕಾಫಿರರನ್ನು ಕಂಡಲ್ಲಿ ವಧಿಸಿರಿ ಎಂದು ಕುರ್ ಆನ್ ಹೇಳುತ್ತದೆ ಎಂಬುದಕ್ಕೆ ಪುರಾವೆಯಾಗಿ ಅವರು ಕುರ್‌ಆನಿನ 2ನೇ ಅಧ್ಯಾಯದ 190 ಮತ್ತು 9ನೇ ಅಧ್ಯಾಯದ 5ನೇ ಸೂಕ್ತಿಗಳನ್ನು ತಲೆಬಾಲ ಕತ್ತರಿಸಿ ತೋರಿಸುತ್ತಾರೆ.
2ನೇ ಅಧ್ಯಾಯದ 190-191ನೇ ಸೂಕ್ತಿಗಳು ಹೀಗಿವೆ:
ನಿಮ್ಮೊಂದಿಗೆ ಯುದ್ಧ ಮಾಡುವವರೊಂದಿಗೆ ನೀವೂ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ. ಆದರೆ ನೀವು ಹದ್ದುಮೀರದಿರಿ. ಖಂಡಿತವಾಗಿಯೂ ಹದ್ದುಮೀರುವವರನ್ನು ಅಲ್ಲಾಹು ಇಷ್ಟಪಡುವುದಿಲ್ಲ. ನೀವು ಅವರನ್ನು ಕಂಡಲ್ಲಿ ವಧಿಸಿರಿ ಮತ್ತು ಅವರು ನಿಮ್ಮನ್ನು ಎಲ್ಲಿಂದ ಹೊರಗಟ್ಟಿದರೋ ಅಲ್ಲಿಂದ ನೀವೂ ಅವರನ್ನು ಹೊರಗಟ್ಟಿರಿ. ಕ್ಷೋಭೆಯು ಕೊಲೆಗಿಂತಲೂ ಭೀಕರವಾಗಿದೆ. ಆದರೆ ಮಸ್ಜಿದುಲ್ ಹರಾಮ್‌ನ ಬಳಿಯಲ್ಲಿ ಅವರು ನಿಮ್ಮೊಂದಿಗೆ ಹೋರಾಡುವವರೆಗೆ ನೀವು ಅವರೊಂದಿಗೆ ಹೋರಾಡದಿರಿ. ಅವರೇನಾದರೂ ನಿಮ್ಮ ಮೇಲೆ ದಾಳಿ ಮಾಡಿದರೆ ಅವರನ್ನು ಕೊಂದು ಬಿಡಿರಿ. ಸತ್ಯನಿಷೇಧಿಗಳಿಗೆ ಹೀಗೆ ಪ್ರತಿಫಲವನ್ನು ನೀಡಲಾಗುವುದು. (2/190-191)
ಮೊದಲ ವಚನಗಳಲ್ಲಿ ಶತ್ರುಗಳು ಮುಸ್ಲಿಮರ ವಿರುದ್ಧ ದಾಳಿ ನಡೆಸುವಾಗ ಮುಸ್ಲಿಮರು ಕೈಗೊಳ್ಳಬೇಕಾದ ಕ್ರಮಗಳನ್ನು ವಿವರಿಸಿದ ಬಳಿಕ ಒಂದು ವೇಳೆ ಶತ್ರುಗಳು ಶಾಂತಿಪ್ರಸ್ತಾಪವನ್ನು ಮುಂದಿಟ್ಟರೆ ಅದನ್ನು ಸ್ವೀಕರಿಸಬೇಕೆಂದು ಆ ಬಳಿಕದ ಸೂಕ್ತಿಯಲ್ಲಿ ಕುರ್‌ಆನ್ ಕಲಿಸುತ್ತದೆ:
ಅವರೇನಾದರೂ (ಯುದ್ಧವನ್ನು) ಸ್ಥಗಿತಗೊಳಿಸಿದರೆ ಅಲ್ಲಾಹು ಅತ್ಯಂತ ಕ್ಷಮಿಸುವವನೂ ಕರುಣಾಮಯಿಯೂ ಆಗಿರುವನು. ಗಲಭೆಯು ಇಲ್ಲದಾಗುವವರೆಗೆ ಮತ್ತು ಧರ್ಮವು ಅಲ್ಲಾಹನಿಗಾಗುವವರೆಗೆ ಅವರೊಂದಿಗೆ ಹೋರಾಡಿರಿ. ಅವರೇನಾದರೂ ಸ್ಥಗಿತಗೊಳಿಸಿದರೆ ಆಗ ಅಕ್ರಮಿಗಳ ಹೊರತು ಯಾರ ಮೇಲೂ ಹಗೆತನವನ್ನು ಇಟ್ಟುಕೊಳ್ಳದಿರಿ. (2/192-193)
ಅದೇ ರೀತಿ 9ನೇ ಅಧ್ಯಾಯದ 5ನೇ ಸೂಕ್ತಿಯಲ್ಲಿ ಹೀಗಿದೆ:
ಪವಿತ್ರ ತಿಂಗಳುಗಳು ಕಳೆದರೆ ನೀವು ಬಹುದೇವಾರಾಧಕರನ್ನು ಕಂಡಲ್ಲಿ ವಧಿಸಿರಿ, ಅವರನ್ನು ಸೆರೆಹಿಡಿಯಿರಿ, ಮುತ್ತಿಗೆ ಹಾಕಿರಿ ಮತ್ತು ಅವರಿಗಾಗಿ ಹೊಂಚುಹಾಕಿ ಕುಳಿತುಕೊಳ್ಳಿರಿ. ಅವರೇನಾದರೂ ಪಶ್ಚಾತ್ತಾಪ ಪಟ್ಟು ನಮಾಝನ್ನು ಸಂಸ್ಥಾಪಿಸಿ ಝಕಾತ್ ನೀಡುವುದಾದರೆ ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿರಿ. ಅಲ್ಲಾಹು ಅತ್ಯಂತ ಕ್ಷಮಿಸುವವನೂ ಕರುಣಾಮಯಿಯೂ ಆಗಿರುವನು. (9/5)
ವಿಮರ್ಶಕರು ಆರಿಸಿಕೊಳ್ಳುವ ವಧಾ ಸೂಕ್ತಿಗಳು ಕುರ್‌ಆನಿನಲ್ಲಿ ಇರುವುದು ಈ ಮೇಲೆ ಹೇಳಿದ ರೀತಿಯಾಗಿದೆ. ಈಗ ಈ ಸೂಕ್ತಿಗಳನ್ನು ಸ್ವಲ್ಪ ವಿವರವಾಗಿ ತಿಳಿಯೋಣ.
2ನೇ ಅಧ್ಯಾಯದಲ್ಲಿ ಪ್ರಸ್ತಾಪಿಸಲಾದ ಸೂಕ್ತಿಯು ನಿರಂತರ ದೌರ್ಜನ್ಯಕ್ಕೀಡಾದ ಬಳಿಕ ಮುಸ್ಲಿಮರಿಗೆ ದೊರಕಿದ ಮೊತ್ತಮೊದಲ ಯುದ್ಧಾನುಮತಿಯಾಗಿದ್ದರೆ 9ನೇ ಅಧ್ಯಾಯದಲ್ಲಿರುವ ಸೂಕ್ತಿಗಳು ಅಂದು ಮುಸ್ಲಿಮರು ಮತ್ತು ಬಹುದೇವಾರಾಧಕರ ಮಧ್ಯೆ ಜಾರಿಯಲ್ಲಿದ್ದ ಒಂದು ಕರಾರಿನ ಕುರಿತು ತಿಳಿಸಿಕೊಡುತ್ತದೆ. ಬಹುದೇವಾರಾಧಕರು ಕರಾರಿನ ಶರತ್ತುಗಳನ್ನು ಉಲ್ಲಂಘಿಸಿದಾಗ ತಮ್ಮ ವರ್ತನೆಗಳನ್ನು ತಿದ್ದಿಕೊಳ್ಳಲು ಅವರಿಗೆ ಕಾಲಾವಕಾಶವನ್ನು ನೀಡಲಾಯಿತು. ಅನ್ಯಥಾಃ ಅವರ ಮೇಲೆ ಯುದ್ಧ ಘೋಷಿಸಲಾಗುವುದೆಂದು ಸಾರಲಾಯಿತು.
ಇವೆರಡು ಸೂಕ್ತಿಗಳೂ ಅವತೀರ್ಣಗೊಂಡಿದ್ದು ಯುದ್ಧದ ಹಿನ್ನೆಲೆಯಲ್ಲಾಗಿತ್ತು. ಒಂದು ದೇಶವು ಯುದ್ಧನಿರತವಾಗಿರುವ ಸಂದರ್ಭದಲ್ಲಿ ಆ ದೇಶವು ಅಥವಾ ಅದರ ಸೇನಾಧಿಪತಿಯು ತನ್ನ ಸೈನಿಕರನ್ನು ಹುರಿದುಂಬಿಸುವುದಕ್ಕಾಗಿ ನೀವು ಶತ್ರುಗಳನ್ನು ಕಂಡಲ್ಲಿ ಕೊಲ್ಲಿರಿ ಎಂದು ಆದೇಶಿಸುವುದನ್ನು ಭಯೋತ್ಪಾದನೆಗೆ ಪ್ರೇರಣೆಯೆಂದು ಕರೆಯಲಾದೀತೇ? ಭಾರತ ಮತ್ತು ಪಾಕಿಸ್ಥಾನದ ಮಧ್ಯೆ ಯುದ್ಧ ನಡೆಯುವಾಗ ನಮ್ಮ ಸೇನಾಧಿಪತಿಯು ಪಾಕಿಸ್ಥಾನಿ ಸೈನಿಕರನ್ನು ಕಂಡಲ್ಲಿ ವಧಿಸಿರಿ ಎಂದು ನಮ್ಮ ಸೈನಿಕರಿಗೆ ಆದೇಶಿಸಿದರೆ ಅದು ಪಾಕಿಸ್ಥಾನಿಗಳ ಮೇಲೆ ಭಯೋತ್ಪಾದನೆ ನಡೆಸುವುದಕ್ಕೆ ಪುರಾವೆಯಾದೀತೇ? ಅದೇ ರೀತಿ ಅಮೆರಿಕ ಮತ್ತು ವಿಯಟ್ನಾಂ ಮಧ್ಯೆ ಯುದ್ಧ ನಡೆದಿತ್ತು. ಆ ಸಮಯದಲ್ಲಿ ಅಮೆರಿಕನ್ ಸೇನಾ ಮುಖ್ಯಸ್ಥರು ವಿಯಟ್ನಾಮಿಗಳನ್ನು ಕಂಡಲ್ಲಿ ಕೊಲ್ಲಿರಿ ಎಂದಿದ್ದನ್ನು ಇಂದು ಯಾರಾದರೂ ಯುದ್ಧದ ಹಿನ್ನೆಲೆಯನ್ನು ಮರೆಮಾಚಿಕೊಂಡು ಹೇಳಿದಲ್ಲಿ ಖಂಡಿತವಾಗಿಯೂ ಅದು ಅಮೆರಿಕನ್ ಸೇನಾ ಮುಖ್ಯಸ್ಥರನ್ನು ಒಬ್ಬ ಭಯೋತ್ಪಾದಕ ಅಥವಾ ಕಟುಕನಾಗಿ ಬಿಂಬಿಸುವುದರಲ್ಲಿ ಯಾವುದೇ ಸಂಶಯವಿಲ್ಲ.
ಕುರ್‌ಆನ್‌ನಲ್ಲಿರುವ ವಧಾ ಸೂಕ್ತಿಗಳನ್ನು ಇಸ್ಲಾಮಿನ ವಿರುದ್ಧವಾಗಿ ಪ್ರಚಾರ ಮಾಡಿದವರಲ್ಲಿ ಅರುಣ್ ಶೌರಿಯೂ ಒಬ್ಬರು. ತಮ್ಮ ದಿ ವರ್ಲ್ಡ್ ಆಫ್ ಫತ್ವಾಸ್ (The World of Fatwas) ಎಂಬ ಗ್ರಂಥದಲ್ಲಿ ಅವರು ಕುರ್‌ಆನಿನ 9ನೇ ಅಧ್ಯಾಯದ ಇದೇ 5ನೇ ಸೂಕ್ತಿಯನ್ನೇ ಆರಿಸಿರುವರು.
ನೀವು ಬಹುದೇವಾರಾಧಕರನ್ನು ಕಂಡಲ್ಲಿ ಕೊಲ್ಲಿರಿ (ಕುರ್ ಆನ್ 9/5)
ತಮಾಷೆಯೆಂದರೆ ಅವರು 5ನೇ ಸೂಕ್ತಿಯ ಬಳಿಕ 6ನೇ ಸೂಕ್ತಿಯನ್ನು ಉಲ್ಲೇಖಿಸದೇ ನೇರವಾಗಿ 7ನೇ ಸೂಕ್ತಿಗೆ ಜಿಗಿದಿರುವರು. ಕಾರಣವೇನೆಂದರೆ 6ನೇ ಸೂಕ್ತಿಯಲ್ಲಿ ವಿಮರ್ಶಕರ ದುರ್ವಾದಗಳಿಗೆ ಸಮರ್ಪಕವಾದ ಉತ್ತರವಿದೆ. ಆ ಸೂಕ್ತಿಯಲ್ಲಿ ಅಲ್ಲಾಹು ತನ್ನ ಪ್ರವಾದಿಯೊಂದಿಗೆ ಹೀಗೆ ಆದೇಶಿಸುತ್ತಾನೆ.
ಬಹುದೇವಾರಾಧಕರ (ಶತ್ರುಗಳ) ಪೈಕಿ ಯಾರಾದರೂ ನಿನ್ನೊಂದಿಗೆ ಆಶ್ರಯವನ್ನು ಬೇಡಿದರೆ ಅವನಿಗೆ ಆಶ್ರಯ ನೀಡು. ಅವನು ಅಲ್ಲಾಹನ ವಚನವನ್ನು ಕೇಳುವಂತಾಗಲಿ. ನಂತರ ಅವನನ್ನು ಅವನಿಗೆ ಅತ್ಯಂತ ಸುರಕ್ಷಿತವಾಗಿರುವ ಸ್ಥಳಕ್ಕೆ ತಲುಪಿಸು. ಅದು ಯಾಕೆಂದರೆ ಅವರು ತಿಳುವಳಿಕೆಯಿಲ್ಲದ ಜನತೆಯಾಗಿರುವುದರಿಂದಾಗಿದೆ. (9/6)
ನಾವು ಪ್ರಸ್ತುತ ವಿದ್ಯಮಾನಗಳನ್ನು ಅವಲೋಕಿಸಿದಲ್ಲಿ ಅತ್ಯಂತ ಸೌಮ್ಯ ಹಾಗೂ ಶಾಂತಿಪ್ರಿಯ ಸೇನಾಧಿಕಾರಿ ಕೂಡಾ ಹೆಚ್ಚೆಂದರೆ ಶರಣಾದ ಸೈನಿಕನನ್ನು ಸ್ವತಂತ್ರವಾಗಿ ಓಡಿಹೋಗಲಷ್ಟೇ ಬಿಡುವನು. ಆದರೆ ಅವನನ್ನು ಸುರಕ್ಷಿತ ತಾಣಕ್ಕೆ ತಲಪಿಸಿರಿ ಎಂಬ ಆಜ್ಞೆಯನ್ನು ಎಂದೂ ನೀಡಲಾರ. ಅವನೆಷ್ಟು ಶಾಂತಿಪ್ರಿಯನಾಗಿದ್ದರೂ ಸರಿಯೇ. ಕುರ್‌ಆನ್ ಜಗತ್ತಿಗೆ ಶಾಂತಿ, ಕರುಣೆಯ ಪಾಠವನ್ನು ಕಲಿಸಲು ಅವತೀರ್ಣಗೊಂಡ ಗ್ರಂಥವಾಗಿದೆ. ಆದ್ದರಿಂದಲೇ ಅದು ಶತ್ರುವನ್ನು ಸುರಕ್ಷಿತ ಸ್ಥಳಕ್ಕೆ ತಲಪಿಸರಿ ಎಂದು ಆದೇಶಿಸುತ್ತದೆ. ಕುರ್‌ಆನ್ ವಚನಗಳನ್ನು ಅಸಾಂದರ್ಭಿಕವಾಗಿ ಉಲ್ಲೇಖಿಸುವಾಗ ವಿಮರ್ಶಕರು ಈ ವಚನದ ಹತ್ತಿರ ಕೂಡಾ ಸುಳಿಯುವುದಿಲ್ಲವೆಂಬುದು ಆಶ್ಚರ್ಯಕರವಾಗಿದೆ.
ಇನ್ನು ಇಂದು ಮುಸ್ಲಿಮರ ಪೈಕಿ ಭಯೋತ್ಪಾದನಾ ಕೃತ್ಯಗಳಲ್ಲಿ ನಿರತರಾದವರಿಗೆ ಮುಸ್ಲಿಮೇತರರನ್ನು ವಧಿಸಲು ಕುರ್‌ಆನ್ ನಲ್ಲಿರುವ ಇಂತಹ ಸೂಕ್ತಿಗಳೇ ಪ್ರೇರಣೆ ಎಂಬ ಆರೋಪದ ಕುರಿತು ಹೇಳುವುದಾದರೆ ಇದೊಂದು ಶುದ್ಧ ಸುಳ್ಳು ಹಾಗೂ ಕೆಲವು ಮಾಧ್ಯಮಗಳ ಸೃಷ್ಟಿಯಾಗಿದೆ. ಜಗತ್ತಿನಲ್ಲಿರುವ ಭಯೋತ್ಪಾದಕರೆಲ್ಲರೂ ಮುಸ್ಲಿಮರು ಎಂಬಂತೆ ಬಿಂಬಿಸಲು ಅವರು ನಡೆಸುತ್ತಿರುವ ವಿಫಲ ಯತ್ನವಾಗಿದೆ. ಇದಕ್ಕಾಗಿ ಅವರು ಒಂದು ವಿಶೇಷ ಘೋಷಣೆಯನ್ನೇ ಸೃಷ್ಟಿಸಿಕೊಂಡಿರುವರು. ಮುಸ್ಲಿಮರೆಲ್ಲರೂ ಭಯೋತ್ಪಾದಕರಲ್ಲ. ಆದರೆ ಭಯೋತ್ಪಾದಕರೆಲ್ಲರೂ ಮುಸ್ಲಿಮರು. ಇದೊಂದು ಶುದ್ಧ ವಂಚನೆ. ವಾಸ್ತವಿಕವಾಗಿ ಇಂದು ಎಷ್ಟು ಸ್ಪೋಟ ಪ್ರಕರಣಗಳನ್ನು ನಾವು ಪತ್ರಿಕೆಗಳಲ್ಲಿ ಮುಸ್ಲಿಮ್ ಭಯೋತ್ಪಾದನೆಯೆಂಬ ಶೀರ್ಷಿಕೆಯಲ್ಲಿ ಕಾಣುತ್ತಿರುವೆವೋ ಅವಕ್ಕಿಂತ ಎಷ್ಟೋ ಅಧಿಕ ಸಂಖ್ಯೆಯ ಸ್ಪೋಟ ಪ್ರಕರಣಗಳೂ, ಸಾವು ನೋವುಗಳೂ ಜಗತ್ತಿನಾದ್ಯಂತ ಸಂಭವಿಸುತ್ತಲೇ ಇವೆ. ವ್ಯತ್ಯಾಸವೆಂದರೆ ಇವುಗಳನ್ನು ವೈಭವೀಕರಿಸಲಾಗುತ್ತಿಲ್ಲ. ಭಯೋತ್ಪಾದನೆ, ಆತ್ಮಾಹುತಿ ಬಾಂಬ್ ದಾಳಿ ಎಂಬ ಭೂತಗಳನ್ನು ಹುಟ್ಟು ಹಾಕಿದವರು ಮುಸ್ಲಿಮರು ಎಂಬ ತಪ್ಪುಕಲ್ಪನೆಯು ಪ್ರಚಲಿತದಲ್ಲಿದೆ. ವಾಸ್ತವಿಕವಾಗಿ ಮುಸ್ಲಿಮೇತರ ಭಯೋತ್ಪಾದಕರು ಜಗತ್ತಿನಾದ್ಯಂತ ನಡೆಸಿದ ನರಮೇಧಗಳನ್ನು ಒಟ್ಟುಗೂಡಿಸಿದರೆ ಮುಸ್ಲಿಮ್ ಭಯೋತ್ಪಾದಕರು ಮಾಡಿದ್ದು ಏನೇನೂ ಇಲ್ಲ ಎಂದು ತಿಳಿಯಬಹುದಾಗಿದೆ. ಆದರೆ ಇತ್ತೀಚೆಗೆ ಭಯೋತ್ಪಾದನಾ ಕೃತ್ಯಗಳಲ್ಲಿ ಮುಸ್ಲಿಮೇತರರ ಹೆಸರುಗಳು ಬಹಿರಂಗಗೊಳ್ಳ ತೊಡಗಿದಾಗ ಅದೇ ಮಾಧ್ಯಮಗಳು ಭಯೋತ್ಪಾದಕರಿಗೆ ಧರ್ಮವಿಲ್ಲ ಎಂಬ ಹೊಸ ಘೋಷಣೆಯನ್ನು ಸೃಷ್ಟಿಸಿದ್ದಾರೆ!
ಪ್ರಭಾಕರನ್, ಹಿಟ್ಲರ್, ಮುಸ್ಸಲೋನಿ, ಜಾರ್ಜ್ ಬುಶ್ ಮುಂತಾದ ಜಗದ್ವಿಖ್ಯಾತ ಭಯೋತ್ಪಾದಕರಾರೂ ಮುಸ್ಲಿಮರಲ್ಲ. ಹಾಗಾದರೆ ಇವರನ್ನು ಭಯೋತ್ಪಾದನೆಗೆ ಪ್ರೋತ್ಸಾಹಿಸಿದ್ದಾದರೂ ಏನು? ಅವರ ಧರ್ಮಗ್ರಂಥಗಳೇ? ಇವರನ್ನೇಕೆ ಧರ್ಮದ ಆಧಾರದಲ್ಲಿ ಭಯೋತ್ಪಾದಕರೆಂದು ಕರೆಯಲಾಗುವುದಿಲ್ಲ?
ಇನ್ನು ಒಂದು ಧರ್ಮದ ಗ್ರಂಥದಲ್ಲಿ ಯುದ್ಧದ ಆಜ್ಞೆಗಳು ಇವೆ ಎಂಬ ಕಾರಣಕ್ಕಾಗಿ ಒಂದು ಧರ್ಮವನ್ನು ಭಯೋತ್ಪಾದಕ ಸ್ಥಾನದಲ್ಲಿ ನಿಲ್ಲಿಸುವುದಾದರೆ ಹಿಂದೂ ಗ್ರಂಥಗಳಲ್ಲಿರುವ ಈ ಕೆಳಗಿನ ಯುದ್ಧಾಜ್ಞೆಗಳು ಹಿಂದೂಧರ್ಮವು ಭಯೋತ್ಪಾದನೆಗೆ ಪ್ರೇರಣೆ ನೀಡುತ್ತದೆಂದು ಹೇಳಬಹುದೇ?
ಮಹಾಭಾರತ ಯುದ್ಧದ ಸಂದರ್ಭದಲ್ಲಿ ತನ್ನ ದಾಯಾದಿಗಳ ವಿರುದ್ಧ ಹೋರಾಡಲು ಅರ್ಜುನನು ಹಿಂಜರಿದಾಗ ಅವನಿಗೆ ಶ್ರೀಕೃಷ್ಣನು ನೀಡುವ ಆದೇಶವನ್ನು ಭಗವದ್ಗೀತೆ ಯಲ್ಲಿ (2/37) ಈ ರೀತಿ ಉದ್ಧರಿಸಲಾಗಿದೆ:
हतॊ वा प्राप्स्यसि स्वर्गं
जित्वा वा भॊक्ष्यसॆ महीम् ।
तस्मादुत्तिष्ठ कौन्तॆय
युद्धाय कृतनिश्चयः ॥
सुखदुःखॆ समॆ कृत्वा
लाभालाभौ जयजयौ ।
ततॊ युद्धाय युज्यस्व
नैवं पापमवाप्स्यसि ॥ (ಭಗವದ್ಗೀತೆ ಅಧ್ಯಾಯ 2 ಶ್ಲೋಕ 37-38)
ಒಂದೋ ನೀನು ಯುದ್ಧದಲ್ಲಿ ಕೊಲ್ಲಲ್ಪಟ್ಟರೆ ಸ್ವರ್ಗವನ್ನು ಪಡೆಯುವೆ ಅಥವಾ ಯುದ್ಧದಲ್ಲಿ ಗೆದ್ದರೆ ಪೃಥ್ವಿಯ ರಾಜ್ಯವನ್ನು ಭೋಗಿಸುವೆ ಈ ಕಾರಣದಿಂದ ಹೇ ಅರ್ಜುನನೇ! ನೀನು ಯುದ್ಧಕ್ಕಾಗಿ ನಿಶ್ಚಯಮಾಡಿ ಎದ್ದು ನಿಲ್ಲು. ಜಯ-ಪರಾಜಯ, ಲಾಭ-ಹಾನಿ ಮತ್ತು ಸುಖ ದುಃಖಗಳನ್ನು ಸಮಾನವಾಗಿ ತಿಳಿದುಕೊಂಡು, ಅನಂತರ ಯುದ್ಧಕ್ಕಾಗಿ ಸಿದ್ಧನಾಗು, ಈ ಪ್ರಕಾರ ಯುದ್ಧ ಮಾಡುವುದರಿಂದ ನೀನು ಪಾಪವನ್ನು ಹೊಂದುವುದಿಲ್ಲ.
ಜಯದಯಾಲ ಗೋಯಂದಕಾರವರು ತಮ್ಮ ಶ್ರೀಮದ್ಭಗವದ್ಗೀತೇ-ತತ್ವವಿವೇಚಿನೀ ಟೀಕಾ ಎಂಬ ಗ್ರಂಥದಲ್ಲಿ (ಪುಟ 68) ಈ ಮೇಲಿನ ವಚನವನ್ನು ಹೀಗೆ ವಿವರಿಸಿದ್ದಾರೆ:
ಆರನೇ ಶ್ಲೋಕದಲ್ಲಿ ಅರ್ಜುನನು – ನನಗಾಗಿ ಯುದ್ಧ ಮಾಡುವುದು ಅಥವಾ ಮಾಡದಿರುವುದು ಯಾವುದು ಶ್ರೇಷ್ಠವಾಗಿದೆ ಹಾಗೂ ಯುದ್ಧದಲ್ಲಿ ವಿಜಯವು ನಮಗಾಗುವುದೋ ಅಥವಾ ನಮ್ಮ ಶತ್ರುಗಳಿಗೋ? ಇದರ ನಿರ್ಣಯವನ್ನು ನಾನು ಮಾಡಲಾರೆ; ಎಂಬ ಮಾತನ್ನು ಹೇಳಿದ್ದನು. ಇದಕ್ಕೆ ಉತ್ತರವನ್ನು ಕೊಡುತ್ತಾ ಯುದ್ಧ ಮಾಡುತ್ತಾ ಮಾಡುತ್ತಾ ಸಾಯುವುದರಲ್ಲಿ ಅಥವಾ ವಿಜಯವನ್ನು ಪಡೆಯುವುದರಲ್ಲಿ ಈ ಎರಡರಲ್ಲೂ ಲಾಭವನ್ನು ತೋರಿಸಿಕೊಟ್ಟು ಅರ್ಜುನನಿಗೆ ಯುದ್ಧದ ಶ್ರೇಷ್ಠತೆಯನ್ನು ಭಗವಂತನು ಸಿದ್ಧಪಡಿಸುತ್ತಾನೆ. ಒಂದು ವೇಳೆ ಯುದ್ಧದಲ್ಲಿ ನಿನ್ನ ಶತ್ರುಗಳಿಗೆ ಜಯವುಂಟಾಗಿ ನೀನು ಕೊಲ್ಲಲ್ಪಟ್ಟರೂ ಸಹ ಒಳ್ಳೆಯ ಮಾತೇ ಆಗುತ್ತದೆ; ಏಕೆಂದರೆ ಯುದ್ಧದಲ್ಲಿ ಪ್ರಾಣತ್ಯಾಗ ಮಾಡುವುದರಿಂದ ನಿನಗೆ ಸ್ವರ್ಗ ದೊರೆಯುವುದು ಮತ್ತು ಒಂದು ವೇಳೆ ವಿಜಯಿಯಾದರೆ ಭೂಮಂಡಲದ ರಾಜ್ಯ ಸುಖವನ್ನು ಅನುಭವಿಸುವೆ; ಆದುದರಿಂದ ಎರಡೂ ದೃಷ್ಟಿಗಳಿಂದ ನಿನಗಾದರೋ ಯುದ್ಧ ಮಾಡುವುದೇ ಎಲ್ಲ ಪ್ರಕಾರದಿಂದಲೂ ಶ್ರೇಷ್ಠವಾಗಿದೆ. ಅದಕ್ಕಾಗಿ ನೀನು ಯುದ್ಧಕ್ಕೆ ಕಟಿಬದ್ಧನಾಗಿ ಸಿದ್ಧನಾಗು ಎಂಬುದೇ ಅಭಿಪ್ರಾಯವಾಗಿದೆ. (ಶ್ರೀಮದ್ಭಗವದ್ಗೀತೇ-ತತ್ವವಿವೇಚಿನೀ ಟೀಕಾ ಎಂಬ ಗ್ರಂಥದಲ್ಲಿ ಪುಟ 68)
ಇಲ್ಲಿರುವ ಗಮನಾರ್ಹವಾದ ಸಂಗತಿಯೇನೆಂದರೆ ಶ್ರೀಕೃಷ್ಣನು ಅರ್ಜುನನೊಂದಿಗೆ ಹೋರಾಡಲು ಹುರಿದುಂಬಿಸುವುದು ಅವನ ಸ್ವಂತ ದಾಯಾದಿಗಳೊಂದಿಗಾಗಿದೆ. ಅರ್ಥಾತ್ ಅವನ ಪಿತೃಸಹೋದರ ಪುತ್ರರೊಂದಿಗಾಗಿದೆ. ಒಂದೋ ನೀನು ಅವರನ್ನು ನಾಶ ಮಾಡಬೇಕು ಅಥವಾ ನೀನು ನಾಶವಾಗಬೇಕು. ಆದರೆ ಯುದ್ಧದಿಂದ ನೀನು ಹಿಂಜರಿಯಬಾರದು. ಎರಡರಲ್ಲಿಯೂ ನಿನಗೇ ಒಳಿತೇ ಇದೆ ಎಂದು ಬೋಧಿಸುತ್ತಾನೆ.
ಈ ವಚನದ ಆಧಾರದಲ್ಲಿ ಭಗವದ್ಗೀತೆಯು ಸ್ವಂತ ದಾಯಾದಿಗಳನ್ನೇ ಕೊಲ್ಲಲು ಆದೇಶಿಸುತ್ತದೆ ಎಂದು ಹೇಳಲಾದೀತೇ? ಖಂಡಿತವಾಗಿಯೂ ಸಾಧ್ಯವಿಲ್ಲ. ಏಕೆಂದರೆ ಈ ವಚನದ ಹಿನ್ನೆಲೆ ಯುದ್ಧಭೂಮಿಯಾಗಿದೆ.
ಋಗ್ವೇದದ ಒಂದನೇ ಮಂಡಲ, 132ನೇ ಸೂಕ್ತದ 2ರಿಂದ 6ರವರೆಗಿನ ಋಕ್ಕುಗಳು ಯುದ್ಧ ಮಾಡುವುದನ್ನು ಹುರಿದುಂಬಿಸುತ್ತವೆ. ಉದಾಹರಣೆಗೆ ಅದರ ನಾಲ್ಕನೇ ಋಕ್ಕಿನ ಒಂದು ಭಾಗವನ್ನು ನೋಡಿರಿ:
ಓ ಇಂದ್ರದೇವ, ಯಜ್ಞಾದಿ ಶ್ರೇಷ್ಠ ಕರ್ಮಗಳನ್ನು ಮಾಡುವವರ ಹಿತಕ್ಕೋಸ್ಕರ ನೀನು ಯಜ್ಞವಿರುದ್ಧರನ್ನು ಮತ್ತು ಕ್ರೋಧಯುಕ್ತ ಪಾಪಿಗಳನ್ನು ನಾಶಗೊಳಿಸು.
ಋಗ್ವೇದದ ಈ ವಚನವು ಯಜ್ಞವಿರೋಧಿಗಳನ್ನು ಸಾರ್ವತ್ರಿಕವಾಗಿ ಕೊಲ್ಲಲು ಆದೇಶಿಸುತ್ತದೆ ಎಂದು ಇದರ ಆಧಾರದಲ್ಲಿ ಹೇಳಲು ಸಾಧ್ಯವೇ? ಖಂಡಿತ ಸಾಧ್ಯವಿಲ್ಲ!
ಇದೇ ರೀತಿ ಕುರ್‌ಆನಿನಲ್ಲಿರುವ ವಚನಗಳು ಕೂಡಾ ಯುದ್ಧದ ಹಿನ್ನೆಲೆಯಲ್ಲಿ ಅವತೀರ್ಣಗೊಂಡ ವಚನಗಳಾಗಿವೆ. ಮುಸ್ಲಿಮೇತರರನ್ನು ಸದಾ ಕೊಲ್ಲುತ್ತಿರಬೇಕು ಎಂಬ ಆಶಯವನ್ನು ಈ ವಚನಗಳು ಸಾರುವುದಿಲ್ಲ.
ಇನ್ನು ಮುಸ್ಲಿಮ್ ಭಯೋತ್ಪಾದಕರು ಕುರ್‌ಆನಿನ ಆಧಾರದಿಂದಲೇ ಮುಸ್ಲಿಮೇತರರನ್ನು ಕೊಲ್ಲುತ್ತಿರುವರು ಎಂದು ವಾದಿಸುತ್ತಿರುವವರು ಪ್ರಾರ್ಥನಾ ನಿರತ ಮುಸ್ಲಿಮರ ಮೇಲೆ ಬಾಂಬ್ ಎಸೆದು ಕೊಲ್ಲಲು ಅದೇ ಭಯೋತ್ಪಾದಕರಿಗೆ ಯಾವ ಸೂಕ್ತಿಗಳು ಪ್ರೇರಣೆ ನೀಡಿದವು ಎಂಬುದನ್ನು ಕೂಡಾ ಸ್ಪಷ್ಟಪಡಿಸಿಕೊಡಬೇಕು.
ಸಂಕ್ಷಿಪ್ತವಾಗಿ ಹೇಳುವುದಾದರೆ ಕುರ್‌ಆನ್‌ನಲ್ಲಿ ವಧಾಸೂಕ್ತಿಗಳನ್ನು ವ್ಯಾಖ್ಯಾನಿಸುವಾಗ ಅವುಗಳ ಅವತೀರ್ಣ ಹಿನ್ನೆಲೆಗಳನ್ನು ಅರಿತುಕೊಂಡಿರುವುದು ಕಡ್ಡಾಯವಾಗಿದೆ. ಯಾಕೆಂದರೆ ಕುರ್‌ಆನ್‌ನ ಎಲ್ಲ ವಚನಗಳೂ ಎಲ್ಲ ಸಂದರ್ಭಗಳಲ್ಲೂ ಒಂದೇ ರೀತಿಯಾಗಿ ಅನ್ವಯಿಸುತ್ತದೆ ಎಂದು ಜಗತ್ತಿನ ಒಬ್ಬನೇ ಒಬ್ಬ ಕುರ್‌ಆನ್ ವ್ಯಾಖ್ಯಾನಕಾರನು ಹೇಳಿಲ್ಲ. ಇನ್ನು ಮುಸ್ಲಿಮರ ಪೈಕಿ ಕೆಲವರು ತಮ್ಮ ಸ್ವಾರ್ಥ ಹಿತಾಸಕ್ತಿಗಳಿಗಾಗಿ ಈ ಸೂಕ್ತಿಗಳನ್ನು ದುರುಪಯೋಗಪಡಿಸಿಕೊಂಡರೆ ಅದಕ್ಕೆ ಕುರ್‌ಆನ್ ಹೊಣೆಯಾಗಲಾರದು. ಇಸ್ಲಾಮಿನ ಹೆಸರಿನಲ್ಲಿ ಇಂದು ಕೆಲವರು ನಡೆಸುತ್ತಿರುವ ಭಯೋತ್ಪಾದನೆಯನ್ನು ಮುಸ್ಲಿಮ್ ವಿದ್ವಾಂಸರೆಲ್ಲರೂ ಒಕ್ಕೊರಳಿನಿಂದ ಖಂಡಿಸಿದ್ದಾರೆ.
No comments:
Post a Comment