Powered By Blogger

Sunday, 16 October 2011

ಸೂರಿಲ್ಲದ ಕುಟುಂಬಕ್ಕೆ ಬೇಕಿದೆ ಸಹೃದಯಿ ದಾನಿಗಳ ಸಹಾಯ




ಮಂಗಳೂರು : ಇದೊಂದು ಕಡು ಬಡಕುಟುಂಬದ ಕತೆಯಿದು,ಅಂಬ್ಲಮೊಗರು ಗ್ರಾ. ಪಂ. ವ್ಯಾಪ್ತಿಯ ಎಲಿಯಾರುಪದವು ಸಮೀಪವಿರುವ ಬೀಜಮಾರುವಿನಲ್ಲಿ ಆಶ್ರಯಕ್ಕೆ ಮನೆಯಿಲ್ಲದೆ ಅಂಗಡಿ ಯಲ್ಲಿ ತಾತ್ಕಾಲಿಕವಾಗಿ ವಾಸವಿರುವ ಇಕ್ಬಾಲ್ -ಆಯಿಷಾ ದಂಪತಿಗಳ ದಾರುಣ ಕತೆ.
ಇನ್ನೂ ಬುದ್ಧಿ ಬೆಳೆಯದ ಮಕ್ಕಳು, ಬಡತನದಿಂದ ಕಂಗೆಟ್ಟಿರುವ ಕುಟುಂಬ. ಒಂದು ಹೊತ್ತಿನ ಊಟಕ್ಕೆ ಪರದಾಡುವಂತಹ ಸ್ಥಿತಿಯಲ್ಲಿರುವ ನಡುವೆ ಸೂರು ಕಲ್ಪಿ ಸಿದ್ದ ಹಳೆಯದಾಗಿದ್ದ ಮಣ್ಣಿನ ಗೋಡೆಯ ಮನೆ ಕುಸಿದುಬೀಳುವು ದರಿಂದ ಇಡೀ ಕುಟುಂಬವನ್ನೇ ಬೀದಿ ಪಾಲಾಗಿಸಿದೆ.
ದಂಪತಿಗೆ ಆಯಿಷಾ ಬಾನು(11), ಅಬ್ದುಲ್ ರಾಝೀಕ್(9), ಅಬ್ದುಲ್ ರಹಿಮಾನ್ (6), ಬದ್ರುದ್ದೀನ್ (4), ರಾಫಿಲ್ (1) ಎಂಬ ಐವರು ಮಕ್ಕ ಳಿದ್ದು, ತಾಯಿ ಆಯಿಶಮ್ಮ ಜತೆಗೆ ವಾಸಿಸುವ ಕುಟುಂಬ ಇವರದ್ದು. ಕೂಲಿ ಕೆಲಸ ನಿರ್ವಹಿಸುತ್ತಿರುವ ಇಕ್ಬಾಲ್ ಸಂಸಾರದ ಹೊಣೆಯನ್ನು ಕೆಲಸದಿಂದ ಗಳಿಸಿದ ಆದಾಯದಿಂ ದಲೇ ನಿರ್ವಹಿಸುತ್ತಿದ್ದಾರೆ. ಕೆಲಸವಿಲ್ಲದ ಸಮಯದಲ್ಲಿ ಊಟಕ್ಕೂ ತೊಂದರೆ ಯಾದಂತಹ ಕ್ಷಣವೂ ಇದೆ. ಇಂತಹ ಸಂಕಷ್ಟದ ಸಮಯದಲ್ಲಿ ಬರ ಎಂಬಂತೆ ಇವರಿದ್ದ ಮನೆಗೆ ಅಪ್ಪಳಿ ಸಿದ ಸಿಡಿಲು ಮನೆ ಗೋಡೆಯಲ್ಲಿ ಬಿರುಕು ಬಿಟ್ಟಿದೆ. ಆದರೆ ಬಾಡಿಗೆ ಮನೆ ಮಾಡುವ ತಾಕತ್ತಿರದ ಇಕ್ಬಾಲ್ ಮಕ್ಕಳೊಂದಿಗೆ ದೇವರ ದಯೆ ಎಂಬ ಧೈರ್ಯದಿಂದ ಬಿರುಕು ಬಿಟ್ಟ ನಡುವೆ ಅಪಾಯದೊಂದಿಗೆ ಜೀವನ ನಿರ್ವಹಿಸುತ್ತಿದ್ದರು. ಆದರೆ ಮತ್ತೆ ಬಿರುಕು ಜಾಸ್ತಿಯಾಗುತ್ತಿದ್ದಂತೆ ಹೆದರಿದ ಕುಟುಂಬ ಸ್ಥಳೀಯರ ನೆರವಿನಿಂದ ಮನೆ ಸಮೀಪದಲ್ಲಿರುವ ಖಾಲಿಯಿರುವ ಅಂಗಡಿಯಲ್ಲಿ ವಾಸಿಸಲು ಸ್ಥಳಾವಕಾಶವನ್ನು ಪಡೆದುಕೊಂಡಿತು.
ಅಂಗಡಿ ಮಾಲೀಕರು ಮನೆ ದುರಸ್ತಿಗೊಳಿಸುವವರೆಗೆ ಅಂಗಡಿಯಲ್ಲಿ ಸ್ಥಳಾವಕಾಶ ನೀಡುವುದಾಗಿ ಮುಂಚಿತವಾಗಿ ತಿಳಿಸಿದ್ದರು. ಆದರೆ ಮಂಗಳವಾರ ತಡರಾತ್ರಿ ಬಿದ್ದಂತಹ ಭಾರೀ ಮಳೆಗೆ ಬಿರುಕು ಕಾಣಿಸಿಕೊಂಡಿದ್ದಂತಹ ಮನೆ ಸಂಪೂರ್ಣವಾಗಿ ಮಣ್ಣುಪಾಲಾಯಿತು. ಇದರೊಂದಿಗೆ ವಾಸಿಸಲು ಜಾಗವನ್ನು ನೀಡಿದ ಅಂಗಡಿ ಮಾಲೀಕರೂ ತಮ್ಮ ಮನೆ ದುರಸ್ತಿ ಕಾರ‍್ಯವಿರುವುದರಿಂದ ಅಂಗಡಿಯನ್ನು ದಿನಗಳೊಳಗೆ ಖಾಲಿ ಮಾಡಲು ತಿಳಿಸಿರುವುದು ಬಡ ಇಕ್ಬಾಲ್‌ಗೆ ದಿಕ್ಕು ತೋಚದಂತಾಗಿದೆ. ಇದಕ್ಕಾಗಿ ಸ್ಥಳೀಯ ಪಂಚಾಯತ್ ಮೊರೆ ಹೋದರಾದರೂ ಸರಿಯಾದ ದಾಖಲೆಗಳಿಲ್ಲದೆ ಸರಕಾರದ ಯಾವುದೇ ಸವಲತ್ತು ಸಿಗದು ಎಂಬ ಹಾರಿಕೆಯ ಉತ್ತರ ಅಧಿಕೃತರಿಂದ ದೊರೆತಿದೆ. ಹಲವು ವರ್ಷಗಳಿಂದ ಇದ್ದಂತಹ ನಮ್ಮ ಕುಟುಂಬಕ್ಕೆ ರೇಷನ್ ಕಾರ್ಡ್, ಡೋರ್ ನಂಬರ್ ಇದೆ. ಆದರೆ ದಾಖಲೆಗಳಿಲ್ಲವೆಂಬುದು ನಮ್ಮಲ್ಲಿ ಆಶ್ಚರ್ಯವುಂಟು ಮಾಡಿದೆ ವಿದ್ಯೆಯಿಲ್ಲದೆ ನಾವಂತೂ ಬಡತನದಿಂದ ಕಂಗಾಲಾಗಿದ್ದೇವೆ, ಆದ್ದರಿಂದ ಮಕ್ಕಳಿಗಾದರೂ ಸರಿಯಾದ ವಿದ್ಯೆ ನೀಡಬೇಕೆಂಬುದು ನನ್ನ ಆಸೆ ಈ ಮೂಲಕವಾದರೂ ಬಡತನವನ್ನು ಹೋಗಲಾಡಿಸಬಹುದು ಎಂಬ ಧೈರ್ಯ ತನ್ನಲ್ಲಿದೆ ಎನ್ನುತ್ತಾರೆ ಇಕ್ಬಾಲ್. ಅದಕ್ಕಾಗಿ ಮನೆಯೊಂದನ್ನು ನಿರ್ಮಿಸಲು ಸಹೃದಯಿ ದಾನಿಗಳು, ಸಂಘ ಸಂಸ್ಥೆಗಳು ಮುಂದೆ ಬರಬೇಕಿದೆ.

No comments:

Post a Comment