Powered By Blogger

Tuesday, 18 October 2011

ಈ ಸಂಭಾಷಣೆ...ಪ್ರೇಮ ಸಂಭಾಷಣೆ...!


 ಹುಡುಗ ಮಲಗುವುದಕ್ಕೆ ಅಂತಾ ಎಲ್ಲಾ ಸಿದ್ದ ಮಾಡಿಕೊಂಡಿರುತ್ತಾನೆ. ಬೆಳಗ್ಗೆಯಿಂದ ದುಡಿದು ಸಾಕಾಗಿ ಹೋಗಿರುತ್ತದೆ. ಕಣ್ಣು ಬಿಡಲು ಆಗದಷ್ಟು ನಿದ್ದೆ. ಆಗ ಅವನ ಲವರ್ ಪೋನ್ ಮಾಡ್ತಾಳೆ.
 ಅವಳು ಅವನಿಗೆ ಎಂದಿನಂತೆ ಮಿಸ್ಡ್ ಕಾಲ್ ಕೊಟ್ಟಳು. ಅವನೂ ಸಹ ಎಂದಿನಂತೆ ಆ ಕಡೆಯಿಂದ ಕಾಲ್ ಮಾಡಿದ. ಇದ್ದದ್ದು ಬರೀ 20ರೂಪಾಯಿ ಕರೆನ್ಸಿ.
ಗಮನಿಸಿ : ಈ ಸಂಭಾಷಣೆಯಲ್ಲಿನ ಬ್ರ್ಯಾಕೆಟ್ ಒಳಗಿರುವುದು ಹುಡುಗ ತನ್ನಂತಾನೇ ಮಾತಾಡಿಕೊಳ್ಳುವುದು.


ಅವಳು: ಹಲೋ..

ಅವನು: (ಅಯ್ಯೋ ದೇವರೇ...ಇವತ್ತೇನು ಗ್ರಹಚಾರ ಕಾದಿದೆಯೋ? ನಿದ್ದೆ ನೆಗೆದು ಬಿದ್ದು ಹೋಯ್ತು) ಹೈ, ಏನೇ ಸಮಾಚಾರ...?

ಅವಳು: ಏನೂ ಇಲ್ಲ...ಹೀಗೇ ಕಾಲ್ ಮಾಡಿದೆ...

ಅವನು: (ದೆವ್ವ ಓಡಾಡೋ ಟೈಂನಲ್ಲಿ, ಹೂಂ......ನೀನೆಲ್ಲಿ ಕಾಲ್ ಮಾಡ್ತೀಯ?  ಕರೆನ್ಸಿ ಖಾಲಿ ಆಗುತ್ತೆ ಅಂತಾ...ಬರೀ ಮಿಸ್ಡ್ ಕಾಲ್ ತಾನೇ ಕೊಟ್ಟಿದ್ದು... ಜುಗ್ಗಿ. ಎಲ್ಲಿ ಹೋಗುತ್ತೆ ಮನೆತನದ ಬುದ್ದಿ) ಸರೀ..ನೀನೇನ್ ಮಾಡ್ತಿದ್ದೆ ನನ್ನ ಡಾರ್ಲಿಂಗ್?

ಅವಳು: ಈಗ ತಾನೇ ಊಟ ಮುಗಿಸ್ದೆ... ನೀನೇನು ಮಾಡ್ತಿದ್ದೀಯಾ?

ಅವನು
: ನಂದೂ ಈಗ ತಾನೇ ಊಟ ಮುಗೀತು...ಈಗ..."ಏನ್ ಹುಡ್ಗೀರೋ ...ಯಾಕಿಂಗಾಡ್ತೀರೋ?" ಹಾಡು ಕೇಳ್ತಿದೀನಿ ಎಫ್ಎಂನಲ್ಲಿ.

ಅವಳು
: ಸಖತ್ ಹಾಡಲ್ವ?

(ಆಗ ಅವಳು ರಣಧೀರ ಚಿತ್ರದಿಂದ ಹಾಡೊಂದನ್ನ ಗುನುಗ್ತಾಳೆ.)
ಬಾ ಬಾರೋ ರಣಧೀರ. ನೀ ಬಂದರೆ ದಿಗ್ವಿಜಯದ ಹಾರ.
ಅವನು: (ಒಳ್ಳೆ ಕಾಗೆ ಕಿರುಚ್ದಂಗಾಗ್ತಿದೆ.. ಗಾರ್ದಭ ಕಂಠ ಅಹಾ.. ಇದನ್ನು ಏನಾದ್ರೂ ರವಿಚಂದ್ರನ್ ಕೇಳಿದ್ದರೆ ಪಿಚ್ಚರ್ ತೆಗೆಯೋದೆ ಬಿಟ್ಟಿರೋನು) ಅಯ್ಯೋ! ದೇವ್ರೇ ನನ್ನ ಕಾಪಾಡಪ್ಪ!
ನೀನು ಇಷ್ಟೊಂದು  ಚೆನ್ನಾಗಿ ಹಾಡ್ತೀಯಾ ನಂಗೆ ಗೊತ್ತೇ ಇರಲಿಲ್ಲ...!

ಅವಳು: ಮತ್ತೆ ಗುನುಗ್ತಾಳೆ.

ಅವನು: ಇನ್ನೊಂದು ಹಾಡು ಹೇಳೆ ಪ್ಲೀಸ್...

ಅವಳು: ಇಷ್ಟೊತ್ತು ಏನು ಕಥೆನಾ ಹೇಳ್ತಿದ್ದೆ. ಹಹಹಹ ಇಲ್ಲಿ ಎಲ್ರೂ ಮಲಗಿದ್ದಾರೆ ಕಣೋ...ನಾನು ಹಾಡೋಕೆ ಶುರು ಮಾಡಿದ್ರೆ ಎಲ್ರೂ ಭೂಕಂಪ ಆಗಿದೆ ಅಂತ ಎದ್ಬಿಡ್ತಾರೆ...

ಅವನು:(ಅದೇನೋ ನಿಜ..ಭೂಕಂಪ ಅಲ್ಲ ಯಾವುದೋ ಭೂತ ಬಂದಿದೆ ಅಂತಾ ಓಡಿ ಹೋಗ್ತಾರೆ...) ಪ್ಲೀಸ್

ಅವಳು: ಪೀಡಿಸ್ಬೇಡ್ವೋ...ನಂಗೆ ಅಷ್ಟು ಚೆನ್ನಾಗಿ ಹಾಡು ಹೇಳೋಕೆ ಬರಲ್ಲ..

ಅವನು: (ಅದು ನನಗೂ ಗೊತ್ತು ಗೊತ್ತು ಬಿಡು... ) ಇಲ್ಲಾ ನೀ ತುಂಬಾ ಚೆನ್ನಾಗಿ ಹೇಳ್ತೀಯ.

ಪ್ಲೀಸ್ ಹೇಳೇ...

ಅವಳು: ಇಲ್ಲಾ ಕಣೋ ನಂಗೆ ಒಂಥರಾ ಆಗುತ್ತೆ

ಅವನು: (ನಿನ್ನನ್ನೇನೂ ಹಂಸಲೇಖನ ಹತ್ತಿರ ಕರೆದುಕೊಂಡು ಹೋಗಲ್ಲ, ಬೇಗ ಒದರಲೇ......)ಹಾಗೇನಿಲ್ವೆ...ಹೇಳೇ ಪ್ಲೀಸ್
 ಈಗೇನು ನೀನು ಹಾಡ್ತೀಯೋ ಇಲ್ವೋ? ನಿಮ್ಮಪ್ಪನ ಮೇಲೆ ಆಣೆ.

ಅವಳು: ಯಾಕ್ ಹೀಗೆ ತೊಂದ್ರೆ ಕೊಡ್ತೀಯ? ನಂಗೆ ಅಂಥ ಒಳ್ಳೇ ಕಂಠ ಇಲ್ಲ ಕಣೋ.........
 ನೀನಿಷ್ಟು ಹಠ ಮಾಡ್ತಿದೀಯ...ಬರೀ ಒಂದೇ ಒಂದು ಪ್ಯಾರಾ ಹೇಳ್ತೀನಿ ಸರೀನಾ?

ಅವನು: (ಅದನ್ನೇ ಒದರು. ಬೇಕಿತ್ತಾ ಇದು ನನಗೆ. ಮಲಗೋ ಟೈಮಲ್ಲಿ, ಬೆಸೀಟ್್ಲ್ಲಿ ಜಿರಲೆ ಬಿಟ್ಕಂಡಂಗೆ ಆಯ್ತು. ಇನ್ನು ಏನೇನು ಸಹಿಸಿಕೋಬೇಕಪ್ಪ ಶಿವನೇ?)

ಅವಳು: ಸರಿ, ಯಾವ ಹಾಡು ಹೇಳಲಿ ಹೇಳು?

ಅವನು: (ನಿಮ್ಮಜ್ಜಿ ಪಿಂಡ. ನೀನೇನಾದ್ರೂ ಹಾಡ್ಕೋ..ನಂಗಂತೂ ಇವತ್ತು ನಿದ್ದೆ ಹಾಳು..) ನಾನು ಕೋಳಿಕೆ ರಂಗಾ.............

ಅವಳು: ಹಾಡೇನೋ ಚೆನ್ನಾಗಿದೆ..ಆದ್ರೆ ಸಾಹಿತ್ಯ ನೆನಪಿಲ್ವಲ್ಲ...

ಆವನು: (ನಿನ್ ಟೆಕ್ಸ್ಟ್ ಬುಕ್ ಬಿಟ್ರೆ ಇನ್ನೇನ್ ಗೊತ್ತು ನಿಂಗೆ ಹೇಳು... ನನ್ನ ನಿದ್ದೆ ಹಾಳಾಗಿ ಹೋಯ್ತು) ಸರಿ ಯಾವುದೋ ಹೇಳು ಚಿನ್ನ 

(ಅವಳು ಗಂಟಲು ಸರಿ ಮಾಡ್ಕಂಡು, ಒಂದು ಸಾಲು ಗುನುಗ್ತಾಳೆ)

ಅವಳು: ಇಲ್ಲಾ ಕಣೋ. ನಂಗೆ ನಾಚ್ಕೆಯಾಗುತ್ತೆ.

ಅವನು: (ಇದಕ್ಕೆ ನಾಚಿಕೆ ಬೇರೆ ಕೇಡು) ಹೇಳೇ ಪರ್ವಾಗಿಲ್ಲ...ನಿನ್ನ ಕಂಚಿನ ಕಂಠದ ದನಿಯ ಕಡಲಲ್ಲಿ ಮುಳುಗ್ಬೇಕು ಅಂತಿದ್ದೀನಿ...

 ಅವಳು : ನಾಳೆ ಹೇಳ್ತೀನಿ

ಅವನು: (ಅಮ್ಮಾಡಾ.......ಸಧ್ಯ...ಬದುಕಿದೆಯಾ ಬಡ ಜೀವವೇ?) ಸರೀನಮ್ಮ ನಿಂಗೆ ಹೇಗನ್ಸುತ್ತೋ ಹಾಗೇ ಮಾಡು.
ಗುಡ್ ನೈಟ್

ಮತ್ತೆ ಸ್ವಲ್ಪ ಹೊತ್ತಾದ ಮೇಲೆ ಮತ್ತೆ ಕಾಲ್ ಮಾಡ್ತಾಳೆ(ಸಾರಿ...ಅವಳು ಯಾವತ್ತೂ ಕಾಲ್ ಮಾಡಲ್ಲ. ಅವಳೇನಿದ್ರೂ ಮಿಸ್ ಕಾಲಷ್ಟೇ ಕೊಡೋದು),,,,

ಅವಳು: ಹಾಯ್.. ಮಲಕ್ಕೋಂಡು ಬಿಟ್ಯಾ?

ಅವನು: (ಇಲ್ಲಾ ನನ್ ತಾಯಿ..ದೆವ್ವಗಳ ಜೊತೆ ಗೋಲಿ ಆಡ್ತಾ ಇದೀನಿ) ಇಲ್ಲಾ ಕಣೇ..

ಅವಳು: ಮತ್ತೇನ್ ಮಾಡ್ತಿದೀಯಾ?

ಅವನು: (ರಾತ್ರಿ ಹೊತ್ತಲ್ಲಿ ಇನ್ನೇನು ಗಿಲ್ಲಿ ದಾಂಡೂನಾ ಆಡ್ತಾರೆ...)ಮಲಗಕ್ಕೆ ಅಂತಾ ರೆಡಿಯಾಗ್ತಾ ಇದ್ದೆ.
 ಹೇ..ಪರ್ವಾಗಿಲ್ಲ...ಹೇಳು

ಅವಳು: ನಾನ್ ಹಾಡ್ಲಿಲ್ಲಾ ಅಂತ ನಿಂಗೆ ಬೇಜಾರಾಯ್ತ?

(ಇದು ಯಾಕೋ ಟ್ರಿಕಿ ಪ್ರಶ್ನೆ ಅನ್ನಿಸಿದ್ರಿಂದ ಸ್ವಲ್ಪ ಹೊತ್ತು ಯೋಚಿಸ್ದ)
ಅವನು: (ಬೇಜಾರ್ ಮಾಡ್ಕೊಳ್ಳೋದಾ? ನಮ್ಮ ತಾಯಾಣೆಗೂ ಇಲ್ಲ. ನೀನು ಹಾಡ್ದೇ ಇದ್ರೆ ನನ್ ಜೀವಮಾನದಲ್ಲೇ ಅತ್ಯಂತ ಅದೃಷ್ಟದ ದಿನ..:- ) ಹಾಗೇನೂ ಇಲ್ಲ..ನೀನು ಹಾಡಲಿಲ್ವಲ್ಲ......ನೀನೇ ಹೇಳ್ದೆ ನಾನು ನಾಳೆ ಹಾಡ್ತೀನಂತ...ಅದಕ್ಕೆ, ನಾನು ಬಕಪಕ್ಷಿ ತರಾ ಕಾಯ್ತಿದ್ದೀನಿ...(ನಾನು ಬಚಾವಾದೆ ಅಂತ ಅನ್ಕೊಂಡಿದ್ನಲ್ಲಪ್ಪ...ಥತ್ ತೇರಿಕಿ:-()

ಅವಳು ಹಾಡೋಕೆ ಶುರು ಮಾಡ್ತಾಳೆ
'ಮಳೆ ನಿಂತು ಹೋದ ಮೇಲೆ...'

ಅವನು: ವ್ಹಾ ವ್ಹಾ..ಸಖತ್ತಾಗಿದೆ

ಅವಳು: ಸುಳ್ಳ...ನಂಗೊತ್ತು ನನ್ ಧ್ವನಿ ಅಷ್ಟು ಚೆನ್ನಾಗಿಲ್ಲ ಅಂತ

ಅವನು :(ಮಳೆ ಈಗ ಶುರು, ಸಧ್ಯ...ಈಗ್ಲಾದ್ರೂ self realization hai... ... ) ಇಲ್ಲ ಡಾರ್ಲಿಂಗ್ ನೀನು ನಿಜಕ್ಕೂ ಚೆನ್ನಾಗಿ ಹಾಡ್ತೀಯ

ಅವಳು: ಇಲ್ಲ, ನಂಗೊತ್ತು ನೀನು ಹೀಗೇ ಹೇಳ್ತಿಯಾ ಅಂತ

ಅವನು: (ಯಾರಾದ್ರೂ ಕಾಪಾಡ್ರೋ , ಈ ಪಾಪಿನಾ. ಅಬ್ಬಾ ಅಂತೂ, ಕಡೆಗೂ ನಿಂಗೆ ಗೊತ್ತಾಯ್ತಲ್ಲ...)ನಿನ್ ಧ್ವನಿ ಅಷ್ಟು ಕೆಟ್ದಾಗಿದ್ದಿದ್ರೆ ನಾನು ಇಷ್ಟೊತ್ತು ಕೇಳ್ತಾನೆ ಇರ್ಲಿಲ್ಲ.

ಅವಳು: ಸರಿ..ನೀನು ಮಲಕ್ಕೋ..ಗುಡ್ ನೈಟ್

ಅವನು:(ನಿನ್ ಹಾಡು ಕೇಳಿದ್ಮೇಲೂ ನಂಗೆ ನಿದ್ದೆ ಎಲ್ಲಿಂದ ಬರುತ್ತೆ...) ಗುಡ್ ನೈಟ್
ಮತ್ತೆ ಎರಡು ನಿಮಿಷ ಬಿಟ್ಟು ಮಿಸ್ ಕಾಲ್ ಕೊಟ್ಟಳು

ಅವನು: (ಅಯ್ಯೋ! ದೇವ್ರೆ..ಯಾಕೋ ಇವತ್ತು ಇವಳು ಬಿಡೋ ಹಗೆ ಕಾಣಿಸ್ತಿಲ್ವಲ್ಲಪ್ಪ, ಹುಡುಗಿಯರಿಂದ ಟಾರ್ಚರ್ ಅಂದ್ರೆ ಇದೇನಾ)...ಏನ್ ಸ್ವೀಟಿ?

ಅವಳು: ನಿಜ ಹೇಳೋ..ನನ್ ದನಿ ನಿಜಕ್ಕೂ ಚೆನ್ನಾಗಿದೀಯಾ...

ಅವನು: (ನಿನ್ ಧ್ವನೀನಾ ರೆಕಾರ್ಡ್ ಮಾಡ್ಕೊಂಡು ನೀನೇ ಯಾಕೆ ಒಂದ್ಸಲ ಕೇಳ್ಬಾರ್ದು)

Of course....ನಿಜವಾಗ್ಲೂ..

ಅವಳು: ನೀನ್ ಹೇಳ್ತಿದೀಯಾ ಅಂದ್ಮೇಲೆ ಅದು ನಿಜಾನೇ ಇರ್ಬೇಕು.. ಗುಡ್ ನೈಟ್

No comments:

Post a Comment