Posted on November 2, 2011 by ವಿಶ್ವ ಕನ್ನಡಿಗ ನ್ಯೂಸ್
ಮಂಗಳೂರು : ೨೦೦೯ ರ ಮೇ ೨೮ ರಂದು ಮಂಗಳೂರಿನ ಜೆಪ್ಪು ಮಾರ್ನಮಿಕಟ್ಟೆಯಲ್ಲಿರುವ ತನ್ನ ಅಂಗಡಿಯಲ್ಲಿ ಮಾರಣಾಂತಿಕವಾಗಿ ತಲವಾರಿನಿಂದ ಹಲ್ಲೆಗೊಳಗಾಗಿ ಮೃತಪಟ್ಟ ಹಿಂದೂ ಜಾಗರಣ ವೇದಿಕೆಯ ಸದಸ್ಯ ಚೇತನ್ ಶೆಟ್ಟಿ ಆಲಿಯಾಸ್ ಚೇತು (೨೯) ಕೊಲೆ ಪ್ರಕರಣದ ಐವರು ಆರೋಪಿಗಳನ್ನು ಖುಲಾಸೆಗೊಳಿಸಿ ದಕ್ಷಿಣ ಕನ್ನಡ ಸೆಷನ್ಸ್ ಕೋರ್ಟ್ ಆದೇಶ ನೀಡಿದೆ. ಮಾರ್ನಮಿಕಟ್ಟೆಯಲ್ಲಿ ಪೂರ್ಣೆಶ್ ಸ್ಟೋರ್ ಎಂಬ ಅಂಗಡಿ ಹೊಂದಿದ್ದ ಚೇತುವಿನ ಅಂಗಡಿ ಎದುರು ಚೇತುವಿನ ಹತ್ಯೆ ನಡೆಯುವ ಕೆಲ ದಿನ ಮುಂಚೆ ಮಹಮ್ಮದ್ ಅಶ್ರಫ್ ಎಂಬುವವನ ಮೇಲೆ ಗುಂಪೊಂದು ಹಲ್ಲೆ ನಡೆಸಿತ್ತು. ಗಾಯಗೊಂಡ ಸ್ಥಿತಿಯಲ್ಲಿ ಅಶ್ರಫ್ ಆಸ್ಪತ್ರೆಗೆ ದಾಖಲಾಗಿದ್ದ . ಆದರೆ ಆತ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ದಿನವೇ ರಾತ್ರಿ ಹತ್ತು ಗಂಟೆಗೆ ಚೇತುವಿನ ಅಂಗಡಿಗೆ ಬಂದ ಹಂತಕರು ಆತನನ್ನು ಕೊಚ್ಚಿ ಕೊಂದಿದ್ದರು.
ನಗರದಲ್ಲಿ ಈ ಪ್ರಕರಣ ಸ್ವಲ್ಪ ಮಟ್ಟಿಗಿನ ಉದ್ವಿಗ್ನ ಪರಿಸ್ಥಿತಿಯನ್ನೂ ಉಂಟುಮಾಡಿತ್ತು. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಮುಸ್ತಫಾ , ಹಮೀದ್ ಸರ್ಫಾನ್ , ಮೊಹಮ್ಮದ್ ಅಜರುದ್ದೀನ್ , ಅಲ್ತಾಫ್ ಹಾಗೂ ಮಹಮ್ಮದ್ ಅಶ್ರಫ್ ಎಂಬ ಆರೋಪಿಗಳನ್ನು ಬಂಧಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಆರ್.ಎಂ. ಶೆಟ್ಟರ್ ಚೇತನ್ ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಮೇಲೆ ಹೊರಿಸಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂಬ ಕಾರಣ ನೀಡಿ ಅವರನ್ನು ಖುಲಾಸೆಗೊಳಿಸಿದ್ದಾರೆ . ಪ್ರಕರಣದ ಇನ್ನೊಬ್ಬ ಆರೋಪಿ ಮಹಮ್ಮದ್ ಫಾರೂಕ್ ಎಂಬಾತ ತಲೆ ಮರೆಸಿಕೊಂಡಿದ್ದು ಇದುವರೆಗೂ ಪೊಲೀಸರಿಗೆ ಸಿಕ್ಕಿಲ್ಲ. ಆತ ವಿದೇಶಕ್ಕೆ ಪಾಲಾಯನ ಮಾಡಿರಬಹುದು ಎಂಬ ಶಂಕೆಯನ್ನು ಪೋಲಿಸ್ ಮೂಲಗಳು ವ್ಯಕ್ತಪಡಿಸಿದ್ದವು.
No comments:
Post a Comment