Powered By Blogger

Saturday, 10 September 2011

ಜನಾರ್ದನ ರೆಡ್ಡಿ ಬಂಗಾರವನ್ನು ಅಡಗಿಸಿಟ್ಟಿದ್ದೆಲ್ಲಿ ಗೊತ್ತೆ?

ಬಳ್ಳಾರಿ, ಸೆ. 7 : ಸಿಬಿಐನಿಂದ ಬಂಧನಕ್ಕೊಳಗಾಗಿ ಆಂಧ್ರದ ಚಂಚಲಗುಡ ಜೈಲಿನಲ್ಲಿ ಸಾಮಾನ್ಯ ಕೈದಿಯಂತೆ ದಿನತಳ್ಳುತ್ತಿರುವ ಎಂಎಲ್ಸಿ ಜಿ. ಜನಾರ್ದನ ರೆಡ್ಡಿಯ ಮನೆಯಲ್ಲಿ ಸಿಬಿಐ ಮತ್ತು ಆದಾಯ ತೆರಿಗೆ ಅಧಿಕಾರಿಗಳು ಬುಧವಾರ ಕೂಡ ಶೋಧ ಮುಂದುವರೆಸಿದ್ದಾರೆ. ಬುಧವಾರ ಮೆಟಲ್ ಡಿಟೆಕ್ಟರ್‌ಗಳನ್ನು ಬಳಕೆ ಮಾಡಿ ಬಂಗಾರ, ಪ್ಲಾಟಿನಂ ಮತ್ತು ಬೆಳ್ಳಿಯ ಶೋಧ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಅಧಿಕೃತ ಮೂಲಗಳ ಪ್ರಕಾರ, ಸಿಬಿಐ ಅಧಿಕಾರಿಗಳು ರೆಡ್ಡಿಯ ಮನೆಯ ನೆಲಮಾಳಿಗೆಯಲ್ಲಿ ಅಪಾರ ಪ್ರಮಾಣದ ಬಂಗಾರ, ನಗದು ಹಣ ಹಾಗೂ ಇನ್ನಿತರೆ ಮಾಹಿತಿಗಳನ್ನು ಅಡಗಿಸಿ ಇಡಲಾಗಿದೆ ಎನ್ನುವ ಮಾಹಿತಿಯನ್ನು ಆಧರಿಸಿ ಮಂಗಳವಾರ ನಡೆಸಿದ ಶೋಧ ಯಾವುದೇ ಫಲವನ್ನು ನೀಡಿರಲಿಲ್ಲ. ಆದ್ದರಿಂದ ಬುಧವಾರಕ್ಕೆ ಮೆಟಲ್ ಡಿಟೆಕ್ಟರ್ ಮೂಲಕವೇ ಮನೆಯಲ್ಲಿ ಶೋಧ ನಡೆಸಿದ್ದಾರೆ.
ಐಷಾರಾಮಿ ಬದುಕನ್ನು ಅತಿಯಾಗಿ ಪ್ರೀತಿಸುತ್ತಿದ್ದ ಮತ್ತು ಸಕಲೈಶ್ವರ್ಯಗನ್ನು ಅನುಭವಿಸಿದ ಜನಾರ್ದನ ರೆಡ್ಡಿ, ವಾಸವಿರುವ ಮನೆಯಲ್ಲಿ ನೆಲಮಾಳಿಗೆ ಸಾಮಾನ್ಯರ ಕಣ್ಣಿಗೆ ಕಾಣುತ್ತಿಲ್ಲ. ಆದರೂ ಸಿಬಿಐ ಅಧಿಕಾರಿಗಳು ತಮಗೆ ದೊರೆತ ಮಾಹಿತಿಯನ್ನು ಆಧರಿಸಿ ತನಿಖೆಯನ್ನು ನಡೆಸಿ ಬಂಗಾರದ ಶೋಧ ನಡೆಸಿದ್ದರು.

ಆಗ, ಮೆಟಲ್ ಡಿಟೆಕ್ಟರ್ ಶೌಚಾಲಯ, ಸ್ನಾನದಗೃಹಗಳತ್ತ ಹೋದಾಗ ಬಂಗಾರ ಇರುವುದು ಪತ್ತೆ ಮಾಡಿತು. ಕೂಡಲೇ ಚುರುಕಾದ ಅಧಿಕಾರಿಗಳ ತಂಡ ಮನೆಯ ಸದಸ್ಯರನ್ನು ಸ್ಥಳಕ್ಕೆ ಕರೆಯಿಸಿ ಬಂಗಾರವನ್ನು ಅಡಗಿಸಿ ಇರಿಸಿರುವ ಕುರಿತು ಮಾಹಿತಿ ಪಡೆದರು. ಅಲ್ಲದೇ, ಸ್ನಾನದಗೃಹದಲ್ಲಿ ಅಲಂಕಾರಕ್ಕಾಗಿ, ಶೌಚಾಲಯದಲ್ಲಿ ಭದ್ರತೆಗಾಗಿ ಇರಿಸಿರುವ ಬಂಗಾರದ ಮಾಹಿತಿ ತಿಳಿದು ದಂಗಾದರು.

ಬುಧವಾರ ಮಧ್ಯಾಹ್ನದ ವೇಳೆಗೆ ಈ ಮಾಹಿತಿ ಖಚಿತವಾಗುತ್ತಿದ್ದಂತೆಯೇ ಸಿಬಿಐ ಅಧಿಕಾರಿಗಳು ಆದಾಯ ತೆರಿಗೆ ಅಧಿಕಾರಿಗಳನ್ನು ಕರೆಯಿಸಿ ಅವರ ಸಮ್ಮುಖದಲ್ಲೇ ಬಂಗಾರವನ್ನು ಹೊರ ತೆಗೆಯಲು ಮುಂದಾದರು. ಆಗ, ಒಟ್ಟು ಕನಿಷ್ಟ 30 ಕೆಜಿ ಬಂಗಾರ ಸಿಬಿಐ ಅಧಿಕಾರಿಗಳಿಗೆ ಸಿಕ್ಕಿದೆ ಎಂದು ಮೂಲಗಳು ಖಚಿತಪಡಿಸಿವೆ.

ವಿದೇಶಿ ವಸ್ತುಗಳ ಮೂಲಕವೇ ಜನಾರ್ದನರೆಡ್ಡಿ ಅವರ ಸ್ನಾನಗೃಹ ಮತ್ತು ಶೌಚಾಲಯ ನಿರ್ಮಾಣವಾಗಿದ್ದು ಇವುಗಳ ಒಟ್ಟು ವೆಚ್ಚವೇ ಕೆಲ ಕೋಟಿಗಳನ್ನು ಮೀರಿಸುವಂಥಹದ್ದು. ಕುಟುಂಬದ ಸದಸ್ಯರು ಮತ್ತು ಮನೆಯ ವಿಶ್ವಾಸಾರ್ಹ - ನಂಬಿಕೆಸ್ಥ ನೌಕರರು ಮಾತ್ರ ಈ ಕೋಣೆಗಳ ಪ್ರವೇಶಕ್ಕೆ ಅರ್ಹರು.

ಸಿಬಿಐ ಅಧಿಕಾರಿಗಳ ಶೋಧ ಕಾರ್ಯ ಬುಧವಾರ ರಾತ್ರಿ 8 ಗಂಟೆ ನಂತರವೂ ಮುಂದುವರೆದಿದೆ. ಸಿಬಿಐ ತಂಡದ ಜೊತೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಇದ್ದು ಸಿಕ್ಕ ಬಂಗಾರದ ಮೌಲ್ಯ ನಿಗದಿ ಮಾಡುವ, ಆದಾಯ ತೆರಿಗೆ ಪಾವತಿಸುವ ಪಟ್ಟಿಯಲ್ಲಿ ಸಿಕ್ಕಿರುವ ಬಂಗಾರಕ್ಕೆ ತೆರಿಗೆ ಪಾವತಿ ಆಗಿರುವ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.

ರೆಡ್ಡಿ ಪತ್ನಿಯ ಬಂಧನ? : ಜನಾರ್ದನರೆಡ್ಡಿಯ ಪತ್ನಿ ಲಕ್ಷ್ಮಿ ಅರುಣ ಅವರನ್ನು ಸಿಬಿಐ ಅಧಿಕಾರಿಗಳು ಯಾವುದೇ ಕ್ಷಣದಲ್ಲಿ ಬಂಧಿಸಿ, ಹೈದರಾಬಾದ್‌ನ ಸಿಬಿಐ ಕೋರ್ಟ್‌ಗೆ ಒಪ್ಪಿಸಲಿದ್ದಾರೆ ಎನ್ನುವ ದಟ್ಟವಾದ ವದಂತಿಗಳು ಇರುವ ಹಿನ್ನೆಲೆಯಲ್ಲಿ ರೆಡ್ಡಿಯ ಮನೆಯ ಮುಂದೆ ಮಾಧ್ಯಮ ಪ್ರತಿನಿಧಿಗಳು ಬುಧವಾರ ಬೆಳಗ್ಗೆಯಿಂದಲೇ ಕಾದು ಕುಳಿತಿದ್ದಾರೆ.

No comments:

Post a Comment