Powered By Blogger

Saturday, 10 September 2011

ಕನ್ನಡ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿಗೆ

ಧರ್ಮಪತ್ನಿ ವಿಜಯಲಕ್ಷ್ಮಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಆಕೆಯನ್ನು ಮತ್ತು ಅವರಿಬ್ಬರ ಮಗ ವಿನೀಶ್ ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಬಂಧನಕ್ಕೊಳಗಾಗಿರುವ ಚಾಲೇಂಜಿಂಗ್ ಸ್ಟಾರ್ ದರ್ಶನ್ ತೂಗದೀಪ್ ಅವರಿಗೆ 1ನೇ ಎಸಿಎಂಎಂ ವೆಂಕಟೇಶ್ ಹುಲಗಿ ಜಾಮೀನು ನಿರಾಕರಿಸಿದ್ದು, 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಂದರೆ ಜೈಲು.

ಸಂಜೆಯ ಹೊತ್ತಿನಲ್ಲಿ ನ್ಯಾಯಾಧೀಶರು ಕೋರ್ಟಿನಲ್ಲಿ ಇಲ್ಲದ ಕಾರಣ ಕೋರಮಂಗಲದ ನ್ಯಾಷನಲ್ ಗೇಮ್ಸ್ ವಿಲೇಜ್ ನ ಜ್ಯುಡಿಶಿಯಲ್ ಬ್ಲಾಕ್ ನಲ್ಲಿರುವ ಅವರ ನಿವಾಸದಲ್ಲಿ ದರ್ಶನ್ ಮತ್ತು ವಿಜಯಲಕ್ಷ್ಮಿ ದಂಪತಿಗಳು ಹಾಜರಾದರು. ದರ್ಶನ್ ಅವರನ್ನು ವಕೀಲರಾದ ಕೃಷ್ಣೇಗೌಡ ಮತ್ತು ರಾಘವೇಂದ್ರ ರೆಡ್ಡಿ ಪ್ರತಿನಿಧಿಸಿದ್ದರು.

ಚಿತ್ರನಟ ಅಂಬರೀಷ್ ಅವರ ಮುಖಾಂತರ ಮಾಡಲಾಗಿದ್ದ ಸಂಧಾನ ಸೂತ್ರದ ಪತ್ರವನ್ನು ನ್ಯಾಯಾಧೀಶರಿಗೆ ನೀಡಲಾಗಿದ್ದರೂ, ದರ್ಶನ್ ಮೇಲೆ ಮಾಡಿರುವ ಆರೋಪ ಜಾಮೀನುರಹಿತ ಅಪರಾಧವಾಗಿದ್ದರಿಂದ ಮತ್ತು ಸರಕಾರಿ ವಕೀಲರು ಉಪಸ್ಥಿತರಿಲ್ಲದಿದ್ದರಿಂದ ಜಾಮೀನು ನೀಡಲು ನ್ಯಾಯಾಧೀಶರು ನಿರಾಕರಿಸಿದರು.

ಜಾಮೀನು ಅರ್ಜಿಗೆ ಸರಕಾರಿ ವಕೀಲರು ಪ್ರತ್ಯುತ್ತರ ಕೊಡಬೇಕಾಗಿರುವುದರಿಂದ ಸೋಮವಾರ ಮತ್ತೆ ಅರ್ಜಿ ಸಲ್ಲಿಸಲು ನ್ಯಾಯಾಧೀಶರು ದರ್ಶನ್ ಪರ ವಕೀಲರಿಗೆ ಹೇಳಿದ್ದಾರೆ. ಆದ್ದರಿಂದ ಸೋಮವಾರದವರೆಗೆ ದರ್ಶನ್ ಪರಪ್ಪನ ಅಗ್ರಹಾರದ ಜೈಲಿನ ದರ್ಶನ ಮಾಡಲೇಬೇಕಾಗಿದೆ.

ಹಲ್ಲೆ ಕಥಗೆ ಹೊಸ ತಿರುವು : ದರ್ಶನ್ ಪತ್ನಿಗೆ ದೈಹಿಕ ಹಲ್ಲೆ ಮಾಡಿದ ಕಥೆ ಮ್ಯಾಜಿಸ್ಟ್ರೇಟ್ ಅವರ ಮನೆ ಪ್ರವೇಶಿಸುವ ಹೊತ್ತಿಗೆ ಸಂಪೂರ್ಣ ಬದಲಾಗಿದೆ. ನ್ಯಾಯಾಧೀಶರ ಮುಂದೆ ವಿಜಯಲಕ್ಷ್ಮಿ ಅವರು ದೈಹಿಕ ಹಲ್ಲೆ ಮಾಡಿದ, ಕೊಲೆ ಬೆದರಿಕೆ ಹಾಕಿದ ಘಟನೆ ನಡೆದೇ ಇಲ್ಲ. ತಾವು ಸ್ನಾನದ ಕೋಣೆಯಲ್ಲಿ ಕಾಲುಜಾರಿ ಬಿದ್ದಿದ್ದರಿಂದ ತಲೆಗೆ ಮತ್ತು ಮೈಗೆ ಪೆಟ್ಟಾಗಿದೆ ಎಂದು ತಿಳಿಸಿದ್ದಾರೆ.

ದರ್ಶನ್ ಅವರ ವಕೀಲರ ಪ್ರಕಾರ, ಪೊಲೀಸರ ಮುಂದೆ ನೀಡಿದ ಹೇಳಿಕೆಯನ್ನು ಸಾಕ್ಷಿಯೆಂದು ಪರಿಗಣಿಸಲು ಆಗುವುದಿಲ್ಲ. ನ್ಯಾಯಾಧೀಶರ ಮುಂದೆ ನೀಡಿದ ಹೇಳಿಕೆಯನ್ನು ಮಾತ್ರ ಸತ್ಯವೆಂದು ಪರಿಗಣಿಸಲಾಗುವುದು. ತಮ್ಮಿಬ್ಬರ ನಡುವೆ ಏನೇ ಕಲಹಗಳಿದ್ದರೂ ಪರಸ್ಪರ ಬಗೆಹರಿಸಿಕೊಂಡು ಜೀವನ ಸಾಗಿಸುವುದಾಗಿ ಅವರು ಹೇಳಿದ್ದಾರೆ. ಪೊಲೀಸರ ಮುಂದೆ ಹೇಳಿಕೆ ನೀಡುವಾಗ ತಾವು ಮಾನಸಿಕವಾಗಿ ಒತ್ತಡಕ್ಕೊಳಗಾಗಿದ್ದಾಗಿಯೂ ವಿಜಯಲಕ್ಷ್ಮಿ ತಿಳಿಸಿದ್ದಾರೆ.


No comments:

Post a Comment