Powered By Blogger

Saturday 15 October 2011

ಕಳ್ಳನಿಗೊಂದು ಪಿಳ್ಳೆ ನೆವ-ಎಡ್ಡಿ ಮನೆ ಬಾಗಿಲಲ್ಲಿ ಪೊಲೀಸರು

ಕಳ್ಳನಿಗೊಂದು ಪಿಳ್ಳೆ ನೆವ ಎನ್ನುವ ಗಾದೆಯಂತೆ, ಲೋಕಾಯುಕ್ತರು ಸಲ್ಲಿಸಿದ ಅಕ್ರಮ ಗಣಿಗಾರಿಕೆಯ ಕುರಿತ ವರದಿಯನ್ನು ತಿರಸ್ಕರಿಸುವುದಕ್ಕೆ ಸಾವಿರ ನೆವನಗಳನ್ನು ಹುಡುಕುತ್ತಿದೆ ಸರಕಾರ. ಇದರ ಭಾಗವಾಗಿ, ವರದಿಯಲ್ಲಿನ ಕೆಲವು ಅಂಶಗಳ ಬಗ್ಗೆ ಅದು ಆಕ್ಷೇಪಗಳನ್ನು ಎತ್ತಿದೆ. ಮೇಲ್ನೋಟಕ್ಕೆ, ಸಲಹೆ ನೀಡಿ ಎಂದು ವರದಿಯನ್ನು ಲೋಕಾಯುಕ್ತಕ್ಕೆ ಮರಳಿಸಿದೆಯಾದರೂ, ಲೋಕಾಯುಕ್ತಕ್ಕೆ ಸರಕಾರ ನೀಡಿರುವ ಶೋಕಾಸ್ ನೋಟಿಸ್ ಇದು. ಇವರ ವರದಿಯನ್ನು ಯಾಕೆ ತಿರಸ್ಕರಿಸಬಾರದು ಎನ್ನುವುದಕ್ಕೆ ಸರಕಾರ ಹಾಕಿದ ಪೀಠಿಕೆ. ಗಟ್ಟಿಯಾದರೆ ರೊಟ್ಟಿ, ತೆಳುವಾದರೆ ದೋಸೆ ಎಂಬಂತೆ, ಸರಕಾರ ಸಣ್ಣದಾಗಿ ಲೋಕಾಯುಕ್ತವನ್ನು ಚಿವುಟಿ ನೋಡುತ್ತಿದೆ. ತೀವ್ರ ಪ್ರತಿಕ್ರಿಯೆ ಬಂದರೆ ಸುಮ್ಮಗಾಗಿ ಬಿಡುವುದು, ಯಾವುದೇ ಪ್ರತಿಕ್ರಿಯೆ ಬರಲಿಲ್ಲವೆಂದಾದರೆ ವರದಿಯನ್ನು ತಿರಸ್ಕರಿಸಿ ಬಿಡುವುದು, ಇದು ಸರಕಾರ ಹಾಕಿಕೊಂಡಿರುವ ಕಾರ್ಯತಂತ್ರ.
ಸಂಪುಟ ಇಂತಹದೊಂದು ನಿರ್ಧಾರವನ್ನು ಯಾಕೆ ತಳೆಯಿತು ಎನ್ನುವುದು ನಾಡಿಗೆ ಚೆನ್ನಾಗಿ ಗೊತ್ತಿದೆ. ತನ್ನನ್ನು ತಾನು ರಕ್ಷಿಸಿಕೊಳ್ಳಬೇಕಾದರೆ ಗಣಿ ವರದಿಯನ್ನು ತಿರಸ್ಕರಿಸದೆ ಬೇರೆ ದಾರಿ ಸರಕಾರಕ್ಕಿಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ, ಅಕ್ರಮ ಗಣಿ ವರದಿಯಲ್ಲಿ ಸಿಕ್ಕು ಒದ್ದಾಡುತ್ತಿರುವ ನಾಯಕ ಮಣಿಗಳು ಮತ್ತೆ ಸಾರ್ವಜನಿಕವಾಗಿ ನೆಮ್ಮದಿಯ ಉಸಿರು ಬಿಡಬೇಕಾದರೆ ಲೋಕಾಯುಕ್ತರ ಗಣಿ ವರದಿ ತಿರಸ್ಕಾರವಾಗಲೇಬೇಕು.
ಸದಾನಂದ ಗೌಡ ಮತ್ತು ಅವರ ಬಳಗ ಯಡಿಯೂರಪ್ಪನವರ ಋಣವನ್ನು ತೀರಿಸುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಬಂದಿದೆ. ನಮ್ಮ ಸರಕಾರಕ್ಕೆ ಮುಖ್ಯ ಸಮಸ್ಯೆಯಿರುವುದೇ ಅಕ್ರಮ ಗಣಿಗಾರಿಕೆಯಲ್ಲಿ ರಾಜಕಾರಣಿಗಳ ಅದರಲ್ಲೂ ಶಾಸಕರ ಮತ್ತು ಸಚಿವರ ಹೆಸರುಗಳನ್ನು ಉಲ್ಲೇಖಿಸಿರುವುದು. ಅವರ ಹೆಸರುಗಳು ಇಲ್ಲದೇ ಇದ್ದಲ್ಲಿ ವರದಿಯನ್ನು ಅದು ಅಂಗೀಕರಿಸಿಯೇ ಬಿಡುತ್ತಿತ್ತೋ ಏನೋ? ಶಾಸಕರು ಮತ್ತು ಸಚಿವರು ಲೋಕಾಯುಕ್ತದ ವ್ಯಾಪ್ತಿಯಲ್ಲಿ ಬರುತ್ತಾರೆಯೇ ಎನ್ನುವುದು ನಮ್ಮ ಸರಕಾರದ ಸಮಸ್ಯೆ.
ಅಕ್ರಮ ಗಣಿಗಾರಿಕೆಯಲ್ಲಿ ಅವರು ಆರೋಪಿಗಳಾಗಿ ನಿಂತಿರುವುದು ಸರಕಾರಕ್ಕೆ ನಾಚಿಕೆಯೆನಿಸಿಲ್ಲ. ಅದಕ್ಕಾಗಿ ಒಂದಿಷ್ಟು ಪಶ್ಚಾತ್ತಾಪವೂ ಇಲ್ಲ. ‘‘ಕಳ್ಳರನ್ನು ಹುಡುಕುವುದು ನಿಮ್ಮ ಕೆಲಸವಲ್ಲ, ಮಾಮೂಲಿ ತಾಲೂಕು ಕಚೇರಿ ಅಧಿಕಾರಿಗಳನ್ನಷ್ಟೇ ದಬಾಯಿಸುವುದು ನಿಮ್ಮ ಕೆಲಸ’’ ಎಂದು ಲೋಕಾಯುಕ್ತಕ್ಕೆ ಮನವರಿಕೆ ಮಾಡಲು ಹೊರಟಿದೆ ಸರಕಾರ. ಅಷ್ಟೇ ಅಲ್ಲ, ಲೋಕಾಯುಕ್ತ ವರದಿಯ ಅಂಗೀಕಾರವನ್ನು ಆದಷ್ಟು ಮುಂದೆ ಎಳೆದೊಯ್ಯುವುದು, ಚುನಾವಣೆಯವರೆಗೂ ಕಣ್ಣಾ ಮುಚ್ಚಾಲೆಯಾಡುತ್ತಾ ದಿನ ದೂಡುವುದು ಸರಕಾರದ ಉದ್ದೇಶ. ಆದುದರಿಂದ, ಕಳ್ಳರನ್ನು ಸೆರಗಿನಲ್ಲಿ ಬಚ್ಚಿಟ್ಟು, ಲೋಕಾಯುಕ್ತದ ತಲೆಯ ಮೇಲೆ ಗೂಬೆ ಕೂರಿಸಲು ಹೊರಟಿದೆ.
ಲೋಕಾಯುಕ್ತ ಕಾರ್ಯವ್ಯಾಪ್ತಿಯ ಬಗ್ಗೆ ಈಗ ಏಕಾಏಕಿ ಅನುಮಾನು ಹುಟ್ಟಿಕೊಳ್ಳುವುದಕ್ಕೆ ಕಾರಣವಾದರೂ ಏನು? ಅಕ್ರಮ ಗಣಿಗಾರಿಕೆಯಲ್ಲಿ ರಾಜಕಾರಣಿಗಳ ಪಾತ್ರವಿರುವುದರಿಂದ ಸಿಬಿಐ ತನಿಖೆಗೆ ಒತ್ತಾಯ ಹೇರಲಾಗಿತ್ತು. ಸಿಬಿಐಯ ಮೇಲೆ ತನಗೆ ನಂಬಿಕೆಯಿಲ್ಲ, ಲೋಕಾಯುಕ್ತಕ್ಕೆ ಒಪ್ಪಿಸುತ್ತೇನೆ ಎಂದು ಹೇಳಿದ್ದೂ ಇದೇ ಸರಕಾರ. ಅದರರ್ಥ ಲೋಕಾಯುಕ್ತದ ಮೇಲೆ ತನಗೆ ನಂಬಿಕೆ ಇದೆ ಎಂದು ತಾನೇ?
ಇದೀಗ ಯಾಕೆ ಲೋಕಾಯುಕ್ತದ ಕಾರ್ಯವೈಖರಿಯ ಕುರಿತಂತೆ ಅಸಮಾಧಾನ ವ್ಯಕ್ತಪಡಿಸುತ್ತಿದೆ? ಅಂದರೆ, ರಾಜಕಾರಣಿಗಳನ್ನು ಮುಟ್ಟದೆ ಕೇವಲ ಅಧಿಕಾರಿಗಳನ್ನಷ್ಟೇ ಆರೋಪಿಗಳನ್ನಾಗಿ ಮಾಡಬೇಕು ಎನ್ನುವುದು ಅಂದಿನ ಸರಕಾರದ ಇಂಗಿತವಾಗಿತ್ತೇ? ಒಂದು ವೇಳೆ ರಾಜಕಾರಣಿಗಳನ್ನು ಆರೋಪಿಗಳನ್ನಾಗಿಸುವ ಅಧಿಕಾರ ಲೋಕಾಯುಕ್ತಕ್ಕೆ ಇಲ್ಲವಾದರೆ ಇಡೀ ತನಿಖೆಗೆ ಅರ್ಥವಾದರೂ ಏನಿದೆ? ಕಾಲಹರಣ ಮಾಡುವುದಕ್ಕಾಗಿ ಹಾಗೂ ಜನರ ಕಣ್ಣಿಗೆ ಮಣ್ಣೆರಚುವುದಕ್ಕಾಗಿ ಲೋಕಾಯುಕ್ತ ಅಕ್ರಮ ಗಣಿಗಾರಿಕೆಯ ಕುರಿತು ತನಿಖೆ ಮಾಡಬೇಕಾಗಿತ್ತೇ?
ಅಕ್ರಮ ಗಣಿಗಾರಿಕೆಗೆ ಸಂಬಂಧ ಪಟ್ಟಂತೆ ತಾನು ತನ್ನ ಮಿತಿಯಲ್ಲೇ ಕೆಲಸ ಮಾಡಿದ್ದೇನೆ ಮತ್ತು ಪ್ರಾಮಾಣಿಕವಾಗಿ ಪಕ್ಷಾತೀತವಾಗಿ ಕೆಲಸ ಮಾಡಿದ್ದೇನೆ ಎನ್ನುವುದನ್ನು ಸಂತೋಷ್ ಹೆಗ್ಡೆ ಪದೇ ಪದೇ ಹೇಳುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲ, ಒಂದು ವೇಳೆ ತಾನು ಕಾನೂನು ಮೀರಿ ವರದಿ ನೀಡಿದ್ದೇ ಆಗಿದ್ದರೆ ಅದನ್ನು ತಿರಸ್ಕರಿಸಿ ಎಂದೂ ಸವಾಲು ಹಾಕಿದ್ದಾರೆ. ಆದರೆ ಎರಡನ್ನೂ ಸ್ವೀಕರಿಸುವ ಸ್ಥಿತಿಯಲ್ಲಿಲ್ಲ ಸರಕಾರ. ಒಂದು ವೇಳೆ ಲೋಕಾಯುಕ್ತ ಕಾನೂನು ವ್ಯಾಪ್ತಿಯನ್ನು ಮೀರಿ ವರದಿ ನೀಡಿದ್ದರೆ, ಧನಂಜಯ ಕುಮಾರ್ ಮತ್ತು ಅವರ ಬಳಗ ಸಂತೋಷ್ ಹೆಗ್ಡೆಯವರ ಬಳಿ ಯಾಕೆ ಓಲೈಸಲು ಹೋಗಬೇಕಾಗಿತ್ತು.
ವರದಿ ಸಲ್ಲಿಸಿದ ಬೆನ್ನಿಗೇ ಅದನ್ನು ತಿರಸ್ಕರಿಸಬಹುದಿತ್ತಲ್ಲ? ಅವರು ವರದಿ ಸಲ್ಲಿಸಿದ ಬೆನ್ನಿಗೇ ಸರಕಾರ ಹೇಳಿಕೆಯನ್ನೂ ನೀಡಬಹುದಿತ್ತು. ಆದರೆ ವರದಿಯಲ್ಲಿ ಸಿಲುಕಿಕೊಂಡಿರುವ ನಮ್ಮ ನಾಯಕರು ಹೊರ ಬರುವುದು ದುಸ್ಸಾಧ್ಯ ಎಂದಾಗ ವರದಿಯನ್ನು ತಿರಸ್ಕರಿಸುವ ಯೋಜನೆಯನ್ನು ಹಾಕಿಕೊಂಡಿದೆ. ಇದು ಅಕ್ಷಮ್ಯ ಮಾತ್ರವಲ್ಲ, ನಾಡಿನ ಜನತೆಗೆ ಬಗೆಯುತ್ತಿರುವ ದ್ರೋಹ ಕೂಡ.
ಇಂದು ಸರಕಾರ ಮಾಡಬೇಕಾಗಿರುವುದು, ಲೋಕಾಯುಕ್ತಕ್ಕೆ ಇನ್ನಷ್ಟು ಶಕ್ತಿಯನ್ನು ನೀಡುವ ಕೆಲಸ. ಅಕ್ರಮ ಗಣಿಗಾರಿಕೆಯ ತನಿಖೆಯಲ್ಲಿ ಲೋಕಾಯುಕ್ತ ನಿರ್ವಹಿಸಿದ ಪಾತ್ರವನ್ನು ಗಮನಿಸಿ, ಅದಕ್ಕೆ ಇನ್ನಷ್ಟು ಅಧಿಕಾರವನ್ನು ನೀಡಬೇಕು. ಲೋಕಾಯುಕ್ತದ ಮಿತಿಯ ಲಾಭವನ್ನು ಪಡೆದುಕೊಳ್ಳುವ ಬದಲು, ಆ ಮಿತಿಯನ್ನು ತೆಗೆದು ಹಾಕಿ ಇನ್ನಷ್ಟು ಶಕ್ತಿಯನ್ನು ತುಂಬಬೇಕು. ಇಂದು ನಾಡಿನ ಜನತೆ ಸರಕಾರದಿಂದ ನಿರೀಕ್ಷಿಸುತ್ತಿರುವುದು ಇದು. ಆದರೆ ವಿಪರ್ಯಾಸವೆಂಬಂತೆ, ಅಪರಾಧಿಗಳನ್ನು ಶಿಕ್ಷಿಸುವ ಬದಲು, ಆರೋಪಿಗಳನ್ನು ತೋರಿಸಿಕೊಟ್ಟ ಲೋಕಾಯುಕ್ತವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಸರಕಾರ ಹೊರಟಿದೆ. ಇದು ಖಂಡನಾರ್ಹ. ಸಮಯ ಮುಂದೂಡದೆ ವರದಿಯನ್ನು ಅಂಗೀಕರಿಸಿ ಅಪರಾಧಿಗಳು ಜೈಲು ಸೇರುವುದಕ್ಕೆ ಸರಕಾರ ಸಹಕರಿಸಬೇಕು. ಸರಕಾರಕ್ಕೂ, ನಾಡಿಗೂ ಇದರಿಂದ ಒಳಿತಿದೆ.

No comments:

Post a Comment