Powered By Blogger

Monday 19 December 2011

ತಾಯಿ ತಂದೆಯ ಪ್ರೀತಿ ಮಗುವಿಗೆಷ್ಟು ಮುಖ್ಯ?


ತಾಯಿ ತಂದೆಯ ಪ್ರೀತಿ ಮಗುವಿಗೆಷ್ಟು ಮುಖ್ಯ?
ಮಗುವಿಗೆ ತಾಯಿ ತಂದೆ ಅಥವಾ ಪೋಷಕರ ಪ್ರೀತಿ, ಮಮತೆ ಎಷ್ಟು ಮುಖ್ಯ ಎನ್ನುವುದನ್ನು ವಿವರಿಸುವ ಅಗತ್ಯವಿರದು. ಹುಟ್ಟಿದಾಗ ಮಾಂಸದ ಮುದ್ದೆಯಂತಿದ್ದು ನಿರ್ಭಾವ ಜೀವಿಯಾದ ಮಗು ಬೆಳೆದು, ನವರಸ ಭಾವ ತುಂಬಿದ ಮನುಷ್ಯನಾಗ ಬೇಕಾದರೆ ಕೇವಲ ಊಟ ಕೊಟ್ಟರೆ ಸಾಲದು. ಆರೋಗ್ಯ ಸೂಸುವ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಪ್ರೀತಿಯ ಪಾತ್ರ ಅದ್ವಿತೀಯ.
ಪ್ರಾಯೋಗಿಕ ಅಧ್ಯಯನವೊಂದರಲ್ಲಿ ಕಪಿ ಮರಿಗಳನ್ನು ಎರಡು ಗುಂಪುಗಳನ್ನಾಗಿ ಮಾಡಿ ಎರಡು ಗುಂಪಿಗೂ ಸಮಾನ ರೀತಿಯಲ್ಲಿ ಪುಷ್ಟಿಕರ ಆಹಾರ ಮತ್ತಿತರ ಸೌಲಭ್ಯಗಳನ್ನು ಕೊಡಲಾಯಿತು. ಒಂದು ಗುಂಪಿಗೆ ನಿಯಮಿತ ಅವಧಿಯಲ್ಲಿ ತಾಯಿಯೊಂದಿ ಗಿರಲು ಅವಕಾಶ ಕೊಡಲಾಯಿತು. ಇನ್ನೊಂದು ಗುಂಪಿಗೆ ಈ ಅವಕಾಶ ನೀಡಲಿಲ್ಲ. ಕೆಲವು ತಿಂಗಳುಗಳ ನಂತರ ತಾಯಿಯೊಂದಿಗಿರುವ ಅವಕಾಶ ಪಡೆದ ಕಪಿ ಮರಿಗಳು ಆರೋಗ್ಯಪೂರ್ಣವಾಗಿ ಕುಣಿದಾಡುತ್ತಿದ್ದರೆ, ತಾಯಿಯೊಂದಿಗೆ ಇರಲು ಅವಕಾಶವಿರದ ಮರಿಗಳು ಪೌಷ್ಟಿಕ ಆಹಾರವನ್ನು ತಿಂದು ಕೂಡ, ಸೊರಗಿ ಒಣಕಲಾಗಿ, ಮಂಕುಬಡಿದಂತೆ ಮೂಲೆಯಲ್ಲಿ ಕುಳಿತಿರುತ್ತಿದ್ದವು.
ಇದೇ ರೀತಿ ತಂದೆ-ತಾಯಿ ಇಲ್ಲದೆಯೋ ಅಥವಾ ದೂರದಲ್ಲಿದ್ದು, ಅವರ ಪ್ರೀತಿಯಿಂದ ವಂಚಿತರಾದ ಮಕ್ಕಳನ್ನು ಮತ್ತು ತಂದೆ, ತಾಯಿಗಳಿದ್ದೂ ಅವರ ಪ್ರೀತಿ ಸಿಗದ ಮಕ್ಕಳನ್ನು ಸತತವಾಗಿ ಅಧ್ಯಯನ ಮಾಡಿದ ಬೌಲ್ಟಿ ಅವರಂತಹ ಅನೇಕ ಮನೋವಿಜ್ಞಾನಿಗಳು, ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಪ್ರೀತಿ, ಮಮತೆ, ಆಸರೆಗಳ ಆವಶ್ಯಕತೆಯನ್ನು ಸ್ಪಷ್ಟವಾಗಿ ತೋರಿಸಿಕೊಟ್ಟಿದ್ದಾರೆ. ಹೆತ್ತವರ/ಪೋಷಕರ ಪ್ರೀತಿ ಸಿಗದ ಮಕ್ಕಳ ಬೌದ್ಧಿಕ ಬೆಳವಣಿಗೆ ಕೂಡ ಕುಂಠಿತ ವಾಗುವುದಲ್ಲದೆ, ಈ ಮಕ್ಕಳ ವ್ಯಕ್ತಿತ್ವ ದೋಷಪೂರ್ಣ ವಾಗುತ್ತದೆ.
ಇಂಥ ಮಕ್ಕಳು ಸಮಾಜದೊಂದಿಗೆ ಹೊಂದಿ ಕೊಂಡು ಬಾಳಲು ಬೇಕಾದ ಕೌಶಲ-ಚತುರತೆಗಳನ್ನು ಕಲಿಯುವುದಿಲ್ಲ. ಅದರ ಬದಲು ಸುಳ್ಳು ಹೇಳುವುದು, ಕಳ್ಳತನ ಮಾಡುವುದು, ಸ್ವಾರ್ಥ ಹಾಗೂ ಸ್ವಸಂತೋಷಕ್ಕೋಸ್ಕರ ಇತರರನ್ನು, ವ್ಯಭಿಚಾರ ಮುಂತಾದ ಲೈಂಗಿಕ ಅಪರಾಧಗಳನ್ನು ಮಾಡುವುದು ಇತ್ಯಾದಿ ಸಮಾಜ ವಿರೋಧಿ ಕಾರ್ಯಗಳಲ್ಲಿ ತೊಡಗಿರುವ ಸಂಭವವೇ ಹೆಚ್ಚು.ಅನೇಕ ಅಪರಾಧಿಗಳ ಪೂರ್ವ ಚರಿತ್ರೆಯನ್ನು ಅವಲೋಕಿಸಿದಾಗ, ಈ ವಾದಕ್ಕೆ ಸಾಕಷ್ಟು ಪುರಾವೆ ದೊರೆಯುತ್ತದೆ. ಇವರಲ್ಲಿ ಅನೇಕ ಮಂದಿ ಚಿಕ್ಕಂದಿನಲ್ಲಿ ಪ್ರೀತಿ, ಮಮತೆಯಿಂದ ವಂಚಿತರಾಗಿದ್ದುದು ಕಂಡುಬರುತ್ತದೆ. ಪ್ರೀತಿ, ಮಮತೆ ಜೀವನದ ಎಲ್ಲ ಹಂತಗಳಲ್ಲಿ ಆವಶ್ಯಕವಾದರೂ, ವ್ಯಕ್ತಿಯ ಜೀವನದ ಮೊದಲ ನಾಲ್ಕೈದು ವರ್ಷಗಳಲ್ಲಿ ಇವುಗಳ ಕೊರತೆ ಯುಂಟಾದರೆ, ಅದರ ಪರಿಣಾಮ ಶಾಶ್ವತ ಹಾಗೂ ವ್ಯಕ್ತಿಯ ಇಡೀ ಜೀವಮಾನದುದ್ದಕ್ಕೂ ಅದರ ಕರಾಳ ಛಾಯೆ ಪಸರಿಸುತ್ತದೆ ಎಂದು ಮನೋವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.