Powered By Blogger

Sunday 24 November 2013

ಗಂಡ ಹೆಂಡತಿ ವಿರಸಕ್ಕೆ ಐದು ಕಾರಣಗಳು

ಲಂಡನ್(ಜೂ.01): ಸಾವಿಲ್ಲದ ಮನೆಯಿಂದ ಸಾಸಿವೆ ತರಲು ಸಾಧ್ಯವಿಲ್ಲ ಅಲ್ಲವೇ? ಹಾಗೆಯೇ, ಜಗಳವಾಡದ ದಂಪತಿ ಈ ಪ್ರಪಂಚದಲ್ಲೇ ಇಲ್ಲ. ಹಲವು ವರ್ಷ ಒಟ್ಟಿಗೆ ಬದುಕು ಸವೆಸುವಾಗ ಸಣ್ಣಪುಟ್ಟ ಘರ್ಷಣೆಗಳಾಗುವುದು ತೀರಾ ಸಹಜ. ಮನೆಯ ಕೆಲಸದ ವಿಷಯದಿಂದ ಹಿಡಿದು, ಮಕ್ಕಳು, ಟಿವಿ, ದುಡ್ಡು ಮೊದಲಾದ ವಿಷಯಗಳಿಗೆ ಗಂಡ ಮತ್ತು ಹೆಂಡತಿಯ ಮಧ್ಯೆ ಭಿನ್ನಾಭಿಪ್ರಾಯ ಮತ್ತು ಮುನಿಸು-ಜಗಳಗಳು ನಡೆಯುತ್ತಲೇ ಇರುತ್ತವೆ...

ಸಂಗಾತಿಯ ಯಾವ ಗುಣಗಳು ಇಷ್ಟವಾಗುವುದಿಲ್ಲ ಎಂಬ ಬಗ್ಗೆ ಡಾ| ಬೆಕ್ಮನ್ ಎಂಬುವವರು ಒಂದು ದೊಡ್ಡ ಸಮೀಕ್ಷೆಯನ್ನೇ ಮಾಡಿದ್ದಾರೆ. ಸುಮಾರು 2 ಸಾವಿರ ಜನರ ಅಭಿಪ್ರಾಯ ಕಲೆಹಾಕಿ ಕೆಲವು ಮಹತ್ವದ ವಿಷಯಗಳನ್ನ ಹೊರಗೆಡವಿದ್ದಾರೆ. ಆ ಮಾಹಿತಿ ನಮ್ಮ ಭಾರತೀಯರಿಗೂ ಮಹತ್ವದ್ದೇ ಆಗಿದೆ.

ಮೊದಲಿಗೆ, ಹೆಣ್ಣಿನ ಯಾವ ಗುಣಗಳು ಗಂಡಿಗೆ ಕಿರಿಕಿರಿಯಾಗುತ್ತದೆ ಎಂಬುದನ್ನ ನೋಡೋಣ.....

1) ಚೆನ್ನಾಗೇ ಇದ್ದೀನಿ
ಮಹಿಳೆಯರು ಮುಚ್ಚಿಡುವುದರಲ್ಲಿ ಸಿದ್ಧಹಸ್ತರು... ಮನಸಿಗೆ ಬೇಜಾರಾದಾಗ ಅದು ಅವರ ಮುಖದಲ್ಲಿ ವ್ಯಕ್ತವಾಗುತ್ತಿರುತ್ತದೆ. ಆದರೆ, ಏನು ಸಮಸ್ಯೆ ಎಂದು ಗಂಡ ಕೇಳಿದಾಗ ಆಕೆ, ಏನೂ ಸಮಸ್ಯೆ ಇಲ್ಲ ಎಂದೇ ಉತ್ತರಿಸುತ್ತಾಳೆ. ಇದು, ಗಂಡಿಗೆ ತೀರಾ ಕಿರಿಕಿರಿಯಾಗುತ್ತದೆ.. ಹೆಣ್ಣಿನ ಈ ಗುಣವನ್ನ ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ.40ರಷ್ಟು ಗಂಡಸರು ಇಷ್ಟಪಡುವುದಿಲ್ಲ.

ಹೆಂಗಸರಿಗೆ ತಮ್ಮ ಭಾವನೆಗಳನ್ನ ನೇರಾನೇರವಾಗಿ ಹೊರಹಾಕಲು ಕಷ್ಟಸಾಧ್ಯ. ಹೀಗಾಗಿ, ಅವರು ಇಂಥ ನಿರ್ಲಕ್ಷ ಧೋರಣೆಯನ್ನ ಅನುಸರಿಸುತ್ತಾರಂತೆ. ಅಷ್ಟೇ ಅಲ್ಲ, ತನ್ನ ಸಂಗಾತಿಯು ಅವರಾಗೇ ಮನಸನ್ನ ಅರಿತುಕೊಳ್ಳಲಿ ಎಂದು ಹೆಣ್ಣು ಬಯಸುತ್ತಾಳೆ. ಹೀಗಾಗಿ, ಅವಳು ನೇರವಾಗಿ ತನ್ನ ಭಾವನೆಯನ್ನ ವ್ಯಕ್ತಪಡಿಸುವುದಿಲ್ಲ ಎಂದನ್ನುತ್ತಾರೆ ಮನಃಶಾಸ್ತ್ರಜ್ಞೆ ಕೋರಿನ್ ಸ್ವೀಟ್....

2) ಮಾತು, ಮಾತು, ಮಾತು...
ನಮ್ಮಲ್ಲಿ ಎಲ್ಲರೂ ಅಂದುಕೊಂಡಿರುವುದು ಹೆಂಗಸರು ಹೆಚ್ಚು ಮಾತಾಡುತ್ತಾರೆ, ಗಂಡಸರು ಕಡಿಮೆ ಮಾತಾಡುತ್ತಾರೆ ಎಂದು. ಗಂಡ ಮತ್ತು ಹೆಂಡತಿಯ ನಡುವಿನ ಸಂವಾದದಲ್ಲಿ ಹೆಂಡತಿಯ ಮಾತೇ ಹೆಚ್ಚು ಎಂಬುದನ್ನ ಒಪ್ಪಲೇ ಬೇಕು. ಹೆಂಡತಿ ಹೆಚ್ಚು ಮಾತಾಡುತ್ತಾಳೆ, ಗಂಟೆಗಟ್ಟಲೆ ತಲೆಕೊರೆಯುತ್ತಾಳೆ ಎಂಬುದು ಬಹುತೇಕ ಎಲ್ಲಾ ಗಂಡಂದಿರ ಅಭಿಪ್ರಾಯವಾಗಿದೆ...

ಹೆಂಗಸರಷ್ಟೇ ಮಾತಾಡುವುದಿಲ್ಲ: ಹೆಂಗಸರೇ ಹೆಚ್ಚು ಮಾತಾಡುತ್ತಾರೆ ಎಂಬುದು ವಾಸ್ತವದಲ್ಲಿ ಸತ್ಯ ಅಲ್ಲವಂತೆ. ಮಾತಿನಲ್ಲಿ ಹೆಂಗಸಿಗಿಂತ ಗಂಡಸೇನೂ ಕಡಿಮೆ ಇಲ್ಲ. ವ್ಯತ್ಯಾಸ ಇರುವುದು ಇಬ್ಬರ ಮಾತಿನ ವಿಷಯದಲ್ಲೇ... ಗಂಡಸರು ಕ್ರಿಕೆಟು, ಬ್ಯುಸಿನೆಸ್ಸು, ಕೆಲಸ ಹೀಗೆ ಇಂಥ ವಿಷಯಗಳ ಬಗ್ಗೆ ಹೆಚ್ಚು ಆಸಕ್ತಿಯಿಂದ ಮಾತನಾಡುತ್ತಾರೆ. ಅದೇ, ಹೆಂಗಸರಾದರೆ ಗಾಸಿಪ್ಪು, ಮನೆ, ಮಕ್ಕಳು, ಭಾವನೆ ಇತ್ಯಾದಿ ವಿಷಯಗಳ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಹೀಗಾಗಿ, ಹೆಂಡತಿ ಮಾತನಾಡುವ ವಿಷಯ ಗಂಡನಿಗೆ ಇಷ್ಟವಾಗದೇ ಇರುವುದರಿಂದ ಪತ್ನಿಯ ಮಾತು ಅತಿಯಾಯಿತು ಎಂದನಿಸುತ್ತದಂತೆ...

ಈ ನಿಟ್ಟಿನಲ್ಲಿ ಮನಃಶಾಸ್ತ್ರಜ್ಞರು ಹೆಂಗಸರಿಗೆ ಒಂದು ಪರಿಹಾರ ನೀಡುತ್ತಾರೆ. ಹೆಣ್ಣು ತನಗಿಷ್ಟವಾದ ವಿಷಯಗಳ ಬಗ್ಗೆ ತನ್ನ ಸ್ನೇಹಿತೆಯರೊಂದಿಗೆ ಸಂಪೂರ್ಣವಾಗಿ ಹಂಚಿಕೊಂಡು, ಬಳಿಕ ಅದರ ಸಾರಾಂಶವನ್ನಷ್ಟೇ ಗಂಡನಿಗೆ ತಿಳಿಸುವುದನ್ನ ಅಭ್ಯಾಸ ಮಾಡಿಕೊಳ್ಳಬೇಕಂತೆ....

3) ನಿಮ್ಮ ಮನಸ್ಸಲ್ಲೇನಿದೆ?
ಈ ಪ್ರಶ್ನೆಯನ್ನ ಪತ್ನಿ ತನ್ನ ಗಂಡನಿಗೆ ಪದೇ ಪದೇ ಕೇಳುತ್ತಲೇ ಇರುತ್ತಾಳೆ. "ನಿಮಗೆ ಏನನಿಸುತ್ತೆ", "ನಾನು ಹೀಗೆ ಮಾಡಿದ್ರೆ ಚೆನ್ನಾಗಿ ಕಾಣುತ್ತೀನಾ", "ಯಾರ ಬಗ್ಗೆ ಯೋಚನೆ ಮಾಡುತ್ತಿದ್ದೀರಿ"... ಹೀಗೆ ನಾನಾ ಥರದಲ್ಲಿ ಗಂಡನ ಮನಸಲ್ಲಿ ಏನಿದೆ ಎಂದು ತಿಳಿದುಕೊಳ್ಳಲು ಕೆದಕುತ್ತಲೇ ಇರುತ್ತಾಳೆ... ಆಕೆಗೆ ಇದೊಂದು ಚಾಳಿ. ಗಂಡನಿಗೋ ಅದು ಕಿರಿಕಿರಿ...

ಹೆಂಗಸರ ಈ ಗುಣ ಆಕೆಯ ದೌರ್ಬಲ್ಯ... ತನ್ನ ಬಗ್ಗೆ ಸ್ವಲ್ಪಮಟ್ಟಿಗೆ ಇರುವ ಕೀಳರಿಮೆಯಿಂದ ಆಕೆ ಈ ರೀತಿ ವರ್ತಿಸುತ್ತಾಳಂತೆ. ಬೇರೆಯವರು ತನ್ನ ಬಗ್ಗೆ ಏನು ಯೋಚಿಸುತ್ತಿದ್ದಾರೆ ಎಂಬುದನ್ನ ತಿಳಿದುಕೊಳ್ಳುವ ಆಸಕ್ತಿ ಹೆಣ್ಣಿನದ್ದು. ಹೀಗಾಗಿ, ತನ್ನ ಸಂಗಾತಿಯ ಮನಸನ್ನ ಅರಿಯಲು ಯಾವಾಗಲು ಪ್ರಯತ್ನಿಸುತ್ತಿರುತ್ತಾಳೆ...

4) ಅಳು, ಅಳು, ಅಳು... ಕಣ್ಣೀರು
ಮಾತುಮಾತಿಗೂ ಹೆಂಗಸರು ಅಳುವುದನ್ನ ಕಂಡರೆ ಗಂಡಸರಿಗೆ ಅಸಾಧ್ಯ ಕಿರಿಕಿರಿ... ಏನಾದರೂ ಸ್ವಲ್ಪ ಮನಸ್ತಾಪವಾದರೂ ಸಾಕು ಹೆಂಗಸರ ಅಳುವಿನಲ್ಲಿ ಅದು ಸಮಾಪ್ತಿಯಾಗುತ್ತದೆ. ಕೆಲ ಹೆಂಗಸರು ತಮ್ಮ ಭಾವನೆಗಳಿಗೆ ಧಕ್ಕೆಯಾದರೆ ಅತ್ತುಬಿಡುತ್ತಾರೆ. ಅದು ಸಹಜವೇ... ಆದರೆ, ಇನ್ನೂ ಕೆಲ ಹೆಂಗಸರು ಬೇಕಂತಲೇ ಕಣ್ಣೀರು ಸುರಿಸಿ ಜಗಳದ ಜಯವನ್ನ ತಮ್ಮದಾಗಿಸಿಕೊಳ್ಳುತ್ತಾರೆ. ಹೆಣ್ಣಿನ ಕಣ್ಣೀರು ಗಂಡಸನ್ನ ಹತಾಶೆಗೊಳಿಸುತ್ತದೆ. ವಿಧಿಯಿಲ್ಲದೇ, ಬಲವಂತವಾಗಿ ಸೋಲೊಪ್ಪಿಕೊಳ್ಳುತ್ತಾನೆ. ಹೆಣ್ಣು ಕಣ್ಣೀರು ಹಾಕಿ ಗೆಲ್ಲುತ್ತಾಳೆ...

5) ಮಾತು ಕೇಳಿಸಿಕೊಳ್ಳೋದೇ ಇಲ್ಲ....
ಇದು, ಗಂಡಸರ ವಿರುದ್ಧ ಹೆಂಗಸರು ಮಾಡುವ ಪ್ರಮುಖ ಕಂಪ್ಲೇಂಟು... ಹೆಂಡತಿ ಮಾತಾನಾಡುತ್ತಲೇ ಇದ್ದರೂ ಗಂಡ ಅನ್ಯಮನಸ್ಕನಾಗಿ ಕೇಳಿಸಿಕೊಳ್ಳುತ್ತಿರುತ್ತಾನೆ. ಹೀಗಾಗಿ, ಹೆಂಡತಿಗೆ ನೀರಿನ ಮೇಲೆ ಹೋಮ ಮಾಡಿದ ಅನುಭವವಾಗುತ್ತದೆ. ಇದಕ್ಕೆ ಪ್ರಮುಖ ಕಾರಣವೇನೆಂದರೆ, ಹೆಂಗಸರಂತೆ ಗಂಡಸರು ಬಹುಕಾರ್ಯಗಳನ್ನ ಮಾಡಲು ಸಾಧ್ಯವಿಲ್ಲ. ಹೆಂಗಸರು ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಕೆಲಸ ಮಾಡಬಲ್ಲರು. ಟಿವಿ ನೋಡುತ್ತಿರುವಾಗಲೇ ಅಡುಗೆ ಮಾಡಬಲ್ಲರು, ಓದಬಲ್ಲರು, ಮಾತನಾಡಬಲ್ಲರು... ಆದರೆ, ಗಂಡಸರು ಹಾಗಲ್ಲ, ಅವರು ಏಕಕಾಲದಲ್ಲಿ ಒಂದೇ ಕೆಲಸ ಮಾಡಬಲ್ಲರು. ಆಸಕ್ತಿಯಿಂದ ಟಿವಿ ನೋಡುವಾಗ ಯಾರೊಂದಿಗೂ ಮಾತನಾಡಲು ಆಗುವುದಿಲ್ಲವಂತೆ. ಹೀಗಾಗಿ, ಗಂಡಸರೊಂದಿಗೆ ಮಾತನಾಡುವ ಮುಂಚೆ ಆತ ಮಾಡುತ್ತಿರುವ ಕೆಲಸ ಮುಗಿಯುವವರೆಗೂ ಕಾಯುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು....