Powered By Blogger

Saturday 10 September 2011

ಮೂವತ್ತು ಕೋಟಿ ರು. ಬೆಲೆ ಬಾಳುವ ನಟ ದರ್ಶನ್

ನಟ ದರ್ಶನ್ ಈಗ ವಿಚಾರಣಾಧೀರ ಕೈದಿ. ಸದ್ಯಕ್ಕೆ ಅವರು ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆದರೆ ಗಾಂಧಿನಗರದಲ್ಲಿ ದರ್ಶನ್ ಮೇಲೆ ಸುಮಾರು ರು.30 ಕೋಟಿ ಬಂಡವಾಳ ಹೊಡಲಾಗಿದ್ದು, ನಿರ್ಮಾಪಕರು ಅಂಗೈಯಲ್ಲಿ ಜೀವ ಹಿಡಿದು ಓಡಾಡುವಂತಾಗಿದೆ.

ದರ್ಶನ್ ಪರಿಸ್ಥಿತಿ ಹೀಗಾದ ಹಿನ್ನೆಲೆಯಲ್ಲಿ ತೀರಾ ಆತಂಕಕ್ಕೆ ಒಳಗಾಗಿರುವ ನಿರ್ಮಾಪಕ ಎಂದರೆ ಆನಂದ್ ಅಪ್ಪುಗೋಳ್. ಅವರ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದ ಮೇಲೆ ರು.12 ಕೋಟಿ ಬಂಡವಾಳ ಹೂಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಐತಿಹಾಸಿಕ ಚಿತ್ರದ ಚಿತ್ರೀಕರಣ ಶೇ.80ರಷ್ಟು ಮುಗಿದಿದೆ.

'ಚಿಂಗಾರಿ' ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದೆ. ಬಿ ಮಹದೇವ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಹರ್ಷ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಭವಿಷ್ಯವೂ ತೂಗುಯ್ಯಾಲೆಯಲ್ಲಿದೆ. ಸದ್ಯಕ್ಕೆ 'ಚಿಂಗಾರಿ' ಚಿತ್ರೀಕರಣ ಮುಂದೂಡಲ್ಪಟ್ಟಿದೆ.

ಇತ್ತೀಚೆಗೆ ಅದ್ದೂರಿಯಾಗಿ ಸೆಟ್ಟೇರಿದ 'ವಿರಾಟ್' ಚಿತ್ರದ ಕತೆ ಕೇಳುವಂತಿಲ್ಲ. ಇದಿಷ್ಟೇ ಅಲ್ಲದೆ ಇನ್ನೂ ಅನೇಕ ನಿರ್ಮಾಪಕರು ದರ್ಶನ್ ಅವರಿಗೆ ಅಡ್ವಾನ್ಸ್ ಹಣ ನೀಡಿದ್ದಾರೆ. ಅವರೆಲ್ಲಾ ಕೈಯಲ್ಲಿ ಜೀವಹಿಡಿದು ಆಕಾಶ ನೋಡುವಂತಾಗಿದೆ. ಅಡ್ವಾನ್ಸ್ ನೀಡಿದವರಲ್ಲಿ ಮಹೇಶ್ ಸುಖಧರೆ ಹೆಸರು ಪ್ರಮುಖವಾಗಿದೆ.

ಇವರೆಲ್ಲಾ ವಿಲವಿಲ ಒದ್ದಾಡುತ್ತಿದ್ದರೆ ಕೇರ್ ಫ್ರೀಯಾಗಿರುವವರು ಮಾತ್ರ ಎಂಡಿ ಶ್ರೀಧರ್. ಅವರ 'ಬುಲ್ ಬುಲ್' ಚಿತ್ರಕ್ಕೆ ದರ್ಶನ್ ಯಾವುದೇ ಸಂಭಾವನೆ ಪಡೆದಿಲ್ಲವಂತೆ. ಅವರೊಬ್ಬರೇ ಸದ್ಯಕ್ಕೆ ಸೇಫ್. ಇನ್ನು ಸುದೀರ್ಘ ಸಮಯದಿಂದ ಸೆಟ್ಸ್‌ನಲ್ಲೇ ಇದ್ದ ಸಾರಥಿ ಚಿತ್ರಕ್ಕೆ ಬಿಡುಗಡೆ ಮೋಕ್ಷ ಸಿಕ್ಕಿದ್ದು ಅವರ ನಿರ್ಮಾಪಕ ಕೆ ಸಿ ಎನ್ ಚಂದ್ರಶೇಖರ್ ತಲೆಮೇಲಿನ ಭಾರ ಇಳಿದಂತಾಗಿದೆ. (ಏಜೆನ್ಸೀಸ್)


ಜನಾರ್ದನ ರೆಡ್ಡಿ ಬಂಗಾರವನ್ನು ಅಡಗಿಸಿಟ್ಟಿದ್ದೆಲ್ಲಿ ಗೊತ್ತೆ?

ಬಳ್ಳಾರಿ, ಸೆ. 7 : ಸಿಬಿಐನಿಂದ ಬಂಧನಕ್ಕೊಳಗಾಗಿ ಆಂಧ್ರದ ಚಂಚಲಗುಡ ಜೈಲಿನಲ್ಲಿ ಸಾಮಾನ್ಯ ಕೈದಿಯಂತೆ ದಿನತಳ್ಳುತ್ತಿರುವ ಎಂಎಲ್ಸಿ ಜಿ. ಜನಾರ್ದನ ರೆಡ್ಡಿಯ ಮನೆಯಲ್ಲಿ ಸಿಬಿಐ ಮತ್ತು ಆದಾಯ ತೆರಿಗೆ ಅಧಿಕಾರಿಗಳು ಬುಧವಾರ ಕೂಡ ಶೋಧ ಮುಂದುವರೆಸಿದ್ದಾರೆ. ಬುಧವಾರ ಮೆಟಲ್ ಡಿಟೆಕ್ಟರ್‌ಗಳನ್ನು ಬಳಕೆ ಮಾಡಿ ಬಂಗಾರ, ಪ್ಲಾಟಿನಂ ಮತ್ತು ಬೆಳ್ಳಿಯ ಶೋಧ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಅಧಿಕೃತ ಮೂಲಗಳ ಪ್ರಕಾರ, ಸಿಬಿಐ ಅಧಿಕಾರಿಗಳು ರೆಡ್ಡಿಯ ಮನೆಯ ನೆಲಮಾಳಿಗೆಯಲ್ಲಿ ಅಪಾರ ಪ್ರಮಾಣದ ಬಂಗಾರ, ನಗದು ಹಣ ಹಾಗೂ ಇನ್ನಿತರೆ ಮಾಹಿತಿಗಳನ್ನು ಅಡಗಿಸಿ ಇಡಲಾಗಿದೆ ಎನ್ನುವ ಮಾಹಿತಿಯನ್ನು ಆಧರಿಸಿ ಮಂಗಳವಾರ ನಡೆಸಿದ ಶೋಧ ಯಾವುದೇ ಫಲವನ್ನು ನೀಡಿರಲಿಲ್ಲ. ಆದ್ದರಿಂದ ಬುಧವಾರಕ್ಕೆ ಮೆಟಲ್ ಡಿಟೆಕ್ಟರ್ ಮೂಲಕವೇ ಮನೆಯಲ್ಲಿ ಶೋಧ ನಡೆಸಿದ್ದಾರೆ.
ಐಷಾರಾಮಿ ಬದುಕನ್ನು ಅತಿಯಾಗಿ ಪ್ರೀತಿಸುತ್ತಿದ್ದ ಮತ್ತು ಸಕಲೈಶ್ವರ್ಯಗನ್ನು ಅನುಭವಿಸಿದ ಜನಾರ್ದನ ರೆಡ್ಡಿ, ವಾಸವಿರುವ ಮನೆಯಲ್ಲಿ ನೆಲಮಾಳಿಗೆ ಸಾಮಾನ್ಯರ ಕಣ್ಣಿಗೆ ಕಾಣುತ್ತಿಲ್ಲ. ಆದರೂ ಸಿಬಿಐ ಅಧಿಕಾರಿಗಳು ತಮಗೆ ದೊರೆತ ಮಾಹಿತಿಯನ್ನು ಆಧರಿಸಿ ತನಿಖೆಯನ್ನು ನಡೆಸಿ ಬಂಗಾರದ ಶೋಧ ನಡೆಸಿದ್ದರು.

ಆಗ, ಮೆಟಲ್ ಡಿಟೆಕ್ಟರ್ ಶೌಚಾಲಯ, ಸ್ನಾನದಗೃಹಗಳತ್ತ ಹೋದಾಗ ಬಂಗಾರ ಇರುವುದು ಪತ್ತೆ ಮಾಡಿತು. ಕೂಡಲೇ ಚುರುಕಾದ ಅಧಿಕಾರಿಗಳ ತಂಡ ಮನೆಯ ಸದಸ್ಯರನ್ನು ಸ್ಥಳಕ್ಕೆ ಕರೆಯಿಸಿ ಬಂಗಾರವನ್ನು ಅಡಗಿಸಿ ಇರಿಸಿರುವ ಕುರಿತು ಮಾಹಿತಿ ಪಡೆದರು. ಅಲ್ಲದೇ, ಸ್ನಾನದಗೃಹದಲ್ಲಿ ಅಲಂಕಾರಕ್ಕಾಗಿ, ಶೌಚಾಲಯದಲ್ಲಿ ಭದ್ರತೆಗಾಗಿ ಇರಿಸಿರುವ ಬಂಗಾರದ ಮಾಹಿತಿ ತಿಳಿದು ದಂಗಾದರು.

ಬುಧವಾರ ಮಧ್ಯಾಹ್ನದ ವೇಳೆಗೆ ಈ ಮಾಹಿತಿ ಖಚಿತವಾಗುತ್ತಿದ್ದಂತೆಯೇ ಸಿಬಿಐ ಅಧಿಕಾರಿಗಳು ಆದಾಯ ತೆರಿಗೆ ಅಧಿಕಾರಿಗಳನ್ನು ಕರೆಯಿಸಿ ಅವರ ಸಮ್ಮುಖದಲ್ಲೇ ಬಂಗಾರವನ್ನು ಹೊರ ತೆಗೆಯಲು ಮುಂದಾದರು. ಆಗ, ಒಟ್ಟು ಕನಿಷ್ಟ 30 ಕೆಜಿ ಬಂಗಾರ ಸಿಬಿಐ ಅಧಿಕಾರಿಗಳಿಗೆ ಸಿಕ್ಕಿದೆ ಎಂದು ಮೂಲಗಳು ಖಚಿತಪಡಿಸಿವೆ.

ವಿದೇಶಿ ವಸ್ತುಗಳ ಮೂಲಕವೇ ಜನಾರ್ದನರೆಡ್ಡಿ ಅವರ ಸ್ನಾನಗೃಹ ಮತ್ತು ಶೌಚಾಲಯ ನಿರ್ಮಾಣವಾಗಿದ್ದು ಇವುಗಳ ಒಟ್ಟು ವೆಚ್ಚವೇ ಕೆಲ ಕೋಟಿಗಳನ್ನು ಮೀರಿಸುವಂಥಹದ್ದು. ಕುಟುಂಬದ ಸದಸ್ಯರು ಮತ್ತು ಮನೆಯ ವಿಶ್ವಾಸಾರ್ಹ - ನಂಬಿಕೆಸ್ಥ ನೌಕರರು ಮಾತ್ರ ಈ ಕೋಣೆಗಳ ಪ್ರವೇಶಕ್ಕೆ ಅರ್ಹರು.

ಸಿಬಿಐ ಅಧಿಕಾರಿಗಳ ಶೋಧ ಕಾರ್ಯ ಬುಧವಾರ ರಾತ್ರಿ 8 ಗಂಟೆ ನಂತರವೂ ಮುಂದುವರೆದಿದೆ. ಸಿಬಿಐ ತಂಡದ ಜೊತೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಇದ್ದು ಸಿಕ್ಕ ಬಂಗಾರದ ಮೌಲ್ಯ ನಿಗದಿ ಮಾಡುವ, ಆದಾಯ ತೆರಿಗೆ ಪಾವತಿಸುವ ಪಟ್ಟಿಯಲ್ಲಿ ಸಿಕ್ಕಿರುವ ಬಂಗಾರಕ್ಕೆ ತೆರಿಗೆ ಪಾವತಿ ಆಗಿರುವ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.

ರೆಡ್ಡಿ ಪತ್ನಿಯ ಬಂಧನ? : ಜನಾರ್ದನರೆಡ್ಡಿಯ ಪತ್ನಿ ಲಕ್ಷ್ಮಿ ಅರುಣ ಅವರನ್ನು ಸಿಬಿಐ ಅಧಿಕಾರಿಗಳು ಯಾವುದೇ ಕ್ಷಣದಲ್ಲಿ ಬಂಧಿಸಿ, ಹೈದರಾಬಾದ್‌ನ ಸಿಬಿಐ ಕೋರ್ಟ್‌ಗೆ ಒಪ್ಪಿಸಲಿದ್ದಾರೆ ಎನ್ನುವ ದಟ್ಟವಾದ ವದಂತಿಗಳು ಇರುವ ಹಿನ್ನೆಲೆಯಲ್ಲಿ ರೆಡ್ಡಿಯ ಮನೆಯ ಮುಂದೆ ಮಾಧ್ಯಮ ಪ್ರತಿನಿಧಿಗಳು ಬುಧವಾರ ಬೆಳಗ್ಗೆಯಿಂದಲೇ ಕಾದು ಕುಳಿತಿದ್ದಾರೆ.

ಕನ್ನಡ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿಗೆ

ಧರ್ಮಪತ್ನಿ ವಿಜಯಲಕ್ಷ್ಮಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಆಕೆಯನ್ನು ಮತ್ತು ಅವರಿಬ್ಬರ ಮಗ ವಿನೀಶ್ ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಬಂಧನಕ್ಕೊಳಗಾಗಿರುವ ಚಾಲೇಂಜಿಂಗ್ ಸ್ಟಾರ್ ದರ್ಶನ್ ತೂಗದೀಪ್ ಅವರಿಗೆ 1ನೇ ಎಸಿಎಂಎಂ ವೆಂಕಟೇಶ್ ಹುಲಗಿ ಜಾಮೀನು ನಿರಾಕರಿಸಿದ್ದು, 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಂದರೆ ಜೈಲು.

ಸಂಜೆಯ ಹೊತ್ತಿನಲ್ಲಿ ನ್ಯಾಯಾಧೀಶರು ಕೋರ್ಟಿನಲ್ಲಿ ಇಲ್ಲದ ಕಾರಣ ಕೋರಮಂಗಲದ ನ್ಯಾಷನಲ್ ಗೇಮ್ಸ್ ವಿಲೇಜ್ ನ ಜ್ಯುಡಿಶಿಯಲ್ ಬ್ಲಾಕ್ ನಲ್ಲಿರುವ ಅವರ ನಿವಾಸದಲ್ಲಿ ದರ್ಶನ್ ಮತ್ತು ವಿಜಯಲಕ್ಷ್ಮಿ ದಂಪತಿಗಳು ಹಾಜರಾದರು. ದರ್ಶನ್ ಅವರನ್ನು ವಕೀಲರಾದ ಕೃಷ್ಣೇಗೌಡ ಮತ್ತು ರಾಘವೇಂದ್ರ ರೆಡ್ಡಿ ಪ್ರತಿನಿಧಿಸಿದ್ದರು.

ಚಿತ್ರನಟ ಅಂಬರೀಷ್ ಅವರ ಮುಖಾಂತರ ಮಾಡಲಾಗಿದ್ದ ಸಂಧಾನ ಸೂತ್ರದ ಪತ್ರವನ್ನು ನ್ಯಾಯಾಧೀಶರಿಗೆ ನೀಡಲಾಗಿದ್ದರೂ, ದರ್ಶನ್ ಮೇಲೆ ಮಾಡಿರುವ ಆರೋಪ ಜಾಮೀನುರಹಿತ ಅಪರಾಧವಾಗಿದ್ದರಿಂದ ಮತ್ತು ಸರಕಾರಿ ವಕೀಲರು ಉಪಸ್ಥಿತರಿಲ್ಲದಿದ್ದರಿಂದ ಜಾಮೀನು ನೀಡಲು ನ್ಯಾಯಾಧೀಶರು ನಿರಾಕರಿಸಿದರು.

ಜಾಮೀನು ಅರ್ಜಿಗೆ ಸರಕಾರಿ ವಕೀಲರು ಪ್ರತ್ಯುತ್ತರ ಕೊಡಬೇಕಾಗಿರುವುದರಿಂದ ಸೋಮವಾರ ಮತ್ತೆ ಅರ್ಜಿ ಸಲ್ಲಿಸಲು ನ್ಯಾಯಾಧೀಶರು ದರ್ಶನ್ ಪರ ವಕೀಲರಿಗೆ ಹೇಳಿದ್ದಾರೆ. ಆದ್ದರಿಂದ ಸೋಮವಾರದವರೆಗೆ ದರ್ಶನ್ ಪರಪ್ಪನ ಅಗ್ರಹಾರದ ಜೈಲಿನ ದರ್ಶನ ಮಾಡಲೇಬೇಕಾಗಿದೆ.

ಹಲ್ಲೆ ಕಥಗೆ ಹೊಸ ತಿರುವು : ದರ್ಶನ್ ಪತ್ನಿಗೆ ದೈಹಿಕ ಹಲ್ಲೆ ಮಾಡಿದ ಕಥೆ ಮ್ಯಾಜಿಸ್ಟ್ರೇಟ್ ಅವರ ಮನೆ ಪ್ರವೇಶಿಸುವ ಹೊತ್ತಿಗೆ ಸಂಪೂರ್ಣ ಬದಲಾಗಿದೆ. ನ್ಯಾಯಾಧೀಶರ ಮುಂದೆ ವಿಜಯಲಕ್ಷ್ಮಿ ಅವರು ದೈಹಿಕ ಹಲ್ಲೆ ಮಾಡಿದ, ಕೊಲೆ ಬೆದರಿಕೆ ಹಾಕಿದ ಘಟನೆ ನಡೆದೇ ಇಲ್ಲ. ತಾವು ಸ್ನಾನದ ಕೋಣೆಯಲ್ಲಿ ಕಾಲುಜಾರಿ ಬಿದ್ದಿದ್ದರಿಂದ ತಲೆಗೆ ಮತ್ತು ಮೈಗೆ ಪೆಟ್ಟಾಗಿದೆ ಎಂದು ತಿಳಿಸಿದ್ದಾರೆ.

ದರ್ಶನ್ ಅವರ ವಕೀಲರ ಪ್ರಕಾರ, ಪೊಲೀಸರ ಮುಂದೆ ನೀಡಿದ ಹೇಳಿಕೆಯನ್ನು ಸಾಕ್ಷಿಯೆಂದು ಪರಿಗಣಿಸಲು ಆಗುವುದಿಲ್ಲ. ನ್ಯಾಯಾಧೀಶರ ಮುಂದೆ ನೀಡಿದ ಹೇಳಿಕೆಯನ್ನು ಮಾತ್ರ ಸತ್ಯವೆಂದು ಪರಿಗಣಿಸಲಾಗುವುದು. ತಮ್ಮಿಬ್ಬರ ನಡುವೆ ಏನೇ ಕಲಹಗಳಿದ್ದರೂ ಪರಸ್ಪರ ಬಗೆಹರಿಸಿಕೊಂಡು ಜೀವನ ಸಾಗಿಸುವುದಾಗಿ ಅವರು ಹೇಳಿದ್ದಾರೆ. ಪೊಲೀಸರ ಮುಂದೆ ಹೇಳಿಕೆ ನೀಡುವಾಗ ತಾವು ಮಾನಸಿಕವಾಗಿ ಒತ್ತಡಕ್ಕೊಳಗಾಗಿದ್ದಾಗಿಯೂ ವಿಜಯಲಕ್ಷ್ಮಿ ತಿಳಿಸಿದ್ದಾರೆ.