Posted on December 18, 2011 by ಸಲೀಂ,ಅಮ್ಚಿನಡ್ಕ,ಪುತ್ತೂರು.
ಪುತ್ತೂರು ರಾಜಕೀಯವಲಯದಲ್ಲಿ ಅಲ್ಲೋಲಕಲ್ಲೋಲವನ್ನುಂಟುಮಾಡಿದ ಜಯಂತ್ ರೈ ಯವರು ಇನ್ನೋಮ್ಮೆ ಸುದ್ದಿಯಾಗಿದ್ದಾರೆ. ಹದಿನೇಳು ವರ್ಷಗಳ ಹಿಂದೆ ಸಂಭವಿಸಿದ ಕೊಲೆ ಪ್ರಕರಣದ ಆರೋಪಿ ಭೂಗತ ಪಾತಕಿ ಫ್ರಾನ್ಸಿಸ್ ಸಿಲ್ವೆಸ್ಟರ್ ಕುಟಿನ್ಹೋನನ್ನು ಪುತ್ತೂರಿನ ತ್ವರಿತಗತಿ ನ್ಯಾಯಾಲಯ ಖುಲಾಸೆಗೊಳಿಸಿದೆ. 1994 ನ. 24 ರಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿ ಬಳಿ ಆಗಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ. ಅಬ್ದುಲ್ಲಾ, ಮೂಸ ಕುಂಞಿ ಮತ್ತು ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಜಯಂತ್ ರೈ ಅವರು ನಿಂತು ಚರ್ಚಿಸುತ್ತಿದ್ದಾಗ ಸುನಿಲ್ ಡಿ’ಸೋಜಾ ಎಂಬಾತ ಬಂದು ಪಿಸ್ತೂಲಿನಿಂದ ಜಯಂತ್ ರೈ ಅವರ ತಲೆಯ ಹಿಂಭಾಗಕ್ಕೆ ಗುಂಡು ಹಾರಿಸಿದ್ದ. ಓಡಿ ತಪ್ಪಿಸಿಕೊಳ್ಳಲೆತ್ನಿಸಿದ್ದ ಸುನಿಲ್ ಡಿ’ಸೋಜಾನನ್ನು ಮೂಸಾ ಕುಂಞಿ ಮತ್ತು ಇತರರು ಸೇರಿ ಹಿಡಿದಿಟ್ಟು ಪೊಲೀಸರಿಗೆ ಒಪ್ಪಿಸಿದ್ದರು. ತೀವ್ರ ಗಾಯಗೊಂಡಿದ್ದ ಜಯಂತ್ ರೈ ಚಿಕಿತ್ಸೆ ಫಲಕಾರಿಯಾಗದೆ ಅದೇ ತಿಂಗಳ 27 ರಂದು ಸಾವನ್ನಪ್ಪಿದ್ದರು. ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಾನಂಭದಲ್ಲಿ ಕೊಲೆ ಯತ್ನ ಮತ್ತು ಬಳಿಕ ಕೊಲೆ ಕೇಸು ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಈ ಹಿಂದೆ ಮಂಗಳೂರಿನಲ್ಲಿ ನಡೆದಿದ್ದ ಅಮರ್ ಆಳ್ವ ಕೊಲೆಗೆ ಪ್ರತೀಕಾರವಾಗಿ ಜಯಂತ್ ರೈ ಕೊಲೆ ನಡೆದಿದೆ ಮತ್ತು ಆರೋಪಿ ಸುನಿಲ್ ಡಿ’ಸೋಜಾ ಭೂಗತ ಪಾತಕಿಗಳಾದ ಫ್ರಾನ್ಸಿಸ್ ಕುಟಿನ್ಹೊ ಮತ್ತು ರಮೇಶ್ ಪೂಜಾರಿ ಸೂಚನೆ ಮೇರೆಗೆ ಈ ಕೃತ್ಯವನ್ನು ಎಸಗಿದ್ದಾನೆ ಎಂಬ ತೀರ್ಮಾನಕ್ಕೆ ಬಂದಿದ್ದರು. ಈ ಹಿನ್ನೆಲೆಯಲ್ಲಿ ಫ್ರಾನ್ಸಿಸ್ ಡಿ’ಸೋಜಾ, ರಮೇಶ್ ಪೂಜಾರಿ ಮತ್ತು ಸುನಿಲ್ ಡಿ’ಸೋಜಾ ಅವರನ್ನು ಆರೋಪಿಗಳನ್ನಾಗಿ ಹೆಸರಿಸಿ ದೋಷಾರೋಪಣ ಪಟ್ಟಿಯನ್ನು ತನಿಖಾಧಿಕಾರಿಯಾಗಿದ್ದ ಡಿ.ವೈ.ಎಸ್.ಪಿ. ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ಮುಂದುವರಿಯುತ್ತಿದ್ದಾಗಲೇ ಸುನಿಲ್ ಡಿ’ಸೋಜಾ ಕೊಲೆಯಾಗಿದ್ದ ಹಾಗೂ ಇತರ ಆರೋಪಿಗಳ ವಿರುದ್ಧದ ಕೇಸು ಖುಲಾಸೆಗೊಂಡಿತ್ತು. ಆದರೆ ಆಗ ತಲೆ ಮರೆಸಿಕೊಂಡಿದ್ದ ಫ್ರಾನ್ಸಿಸ್ ಕುಟಿನ್ಹೋನನ್ನು ಬೇರೆ ಪ್ರಕರಣದಲ್ಲಿ ಉತ್ತರ ಪ್ರದೇಶದಲ್ಲಿ ಬಂಧಿಸಿದ್ದು, ತನಿಖೆಗೆ ಬಾಕಿ ಇದ್ದ ಜಯಂತ್ ರೈ ಪ್ರಕರಣಕ್ಕಾಗಿ ನ್ಯಾಯಾಲಯದ ಬಾಡಿ ವಾರಂಟ್‌ನಲ್ಲಿ ಮಂಗಳೂರಿಗೆ ಕರೆ ತರಲಾಗಿತ್ತು. ಇತ್ತೀಚೆಗೆ ಈ ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರಿನ ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶರಾದ ಶಿವ ಶಂಕರೇ ಗೌಡ ಅವರು ಸಾಕ್ಷಿಗಳ ವಿಚಾರಣೆ ನಡೆಸಿ ಆರೋಪ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಶನ್ ವಿಫಲವಾಗಿದೆ ಎಂಬ ತೀರ್ಮಾನಕ್ಕೆ ಬಂದು ಆರೋಪಿ ಫ್ರಾನ್ಸಿಸ್ ಸಿಲ್ವೆಸ್ಟರ್ ಕುಟಿನ್ಹೋನನ್ನು ಖುಲಾಸೆಗೊಳಿಸಿ ತೀರ್ಪಿತ್ತರು.
No comments:
Post a Comment