ಬೆಂಗಳೂರು : ಬಹುನಿರೀಕ್ಷಿತ ಮೆಟ್ರೋ ರೈಲಿಗೆ ಕೇಂದ್ರ ನಗರಾಭಿವೃದ್ಧಿ ಸಚಿವ ಕಮಲ್‌ನಾಥ್ ಅವರು ಗುರುವಾರ ಬೆಳಿಗ್ಗೆ 10.30ಕ್ಕೆ ಚಾಲನೆ ನೀಡುವ ಮೂಲಕ ನಗರದ ಜನರ ಬಹುದಿನಗಳ ಕನಸು ಇಂದು ನನಸಾಯಿತು . ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಧರಂ ಸಿಂಗ್, ಕೇಂದ್ರ ರೈಲ್ವೆ ಸಚಿವ ದಿನೇಶ್ ತ್ರಿವೇದಿ , ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಮುನಿಯಪ್ಪ, ಸಂಸದ ಅನಂತ್ ಕುಮಾರ್ , ಅರುಣ್ ಜೈಟ್ಲಿ ಹಾಗೂ ರಾಜ್ಯ ಸಚಿವ ಸಂಪುಟದ ಹಲವು ಪಾಲ್ಗೊಂಡರು.
ಎಂ. ಜಿ ರಸ್ತೆಯಿಂದ ಬೈಯಪ್ಪನ ಹಳ್ಳಿವರೆಗೆ ಗುರುವಾರ ಬೆಳಿಗ್ಗೆ ಹನ್ನೊಂದು ಕಾಲು ಗಂಟೆಗೆ ಮೆಟ್ರೋ ರೈಲು ಸಂಚಾರ ಆರಂಭವಾಯಿತು. ಪ್ರಥಮ ಪ್ರಯಾಣಕ್ಕೆ ರೈಲ್ವೆ ಸಚಿವ ಮುನಿಯಪ್ಪ ತಡವಾಗಿ ಬಂದು ರೈಲ್ ಮಿಸ್ ಮಾಡಿಕೊಂಡರು. ಮುನಿಯಪ್ಪ ಬರುವಾಗ ಕೇಂದ್ರ ಸಚಿವರು ಮತ್ತು ರಾಜ್ಯ ನಾಯಕರು ನಮ್ಮ ಮೆಟ್ರೋ ರೈಲು ಹತ್ತಿ ಟಾಟಾ ಮಾಡಿ ಹೊರಟಾಗಿತ್ತು.
‘ಐಶ್’ ಗೆ ಹರಸಿದ ನಟ ನಟಿಯರು..
ಬಾಲಿವುಡ್ ನಟಿ ಐಶ್ವರ್ಯ ರೈ ಸೀಮಂತ ೧೮ ನೇ ತಾರೀಕಿನಂದು ಮುಂಬೈನ ಬಚ್ಚನ್ ಮನೆಯಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಭವ್ಯ ಸಮಾರಂಭದಲ್ಲಿ ಬಾಲಿವುಡ್ ನ ಅನೇಕ ನಟಿ ಮಣಿಯರು ಪಾಲ್ಗೊಂಡು ಐಶ್ವರ್ಯ ರೈ ಅವರನ್ನು ಹರಸಿದರು. ನಟಿಯರಾದ ಸೊನಾಲಿ ಬೇಂದ್ರೆ,ಉರ್ಮಿಳ, ಬಿಪಾಶಾ ಬಸು, ಸರೂಜ್ ಖಾನ್, ಟ್ವಿಂಕಲ್ ಕಣ್ಣಾ, ಮುಂತಾದ ಪ್ರಮುಖ ನಟ ನಟಿಯರು ಅಮಿತಾಬ್ ಮನೆಯಲ್ಲಿ ನೆರದಿದ್ದರು. ಸುಮಾರು ೫ ಗಂಟೆ ನಡೆದ ಈ ಸಮಾರಂಭದಲ್ಲಿ ಐಶ್ ಅತ್ತೆ ಜಯಾ ಬಚ್ಚನ್,ನಾದಿನಿ ಶ್ವೇತ ಸಮಾರಂಭದಲ್ಲಿ ಪಾಲ್ಗೊಂಡ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಸೋಶಿಯಲ್ ನೆಟ್ ವರ್ಕ್ ಟ್ವಿಟ್ಟರ್ ನಲ್ಲಿ ಅಭಿಷೇಕ್ ಬಚ್ಚನ್ ಕೂಡ ಪಾಲ್ಗೊಂಡ ಎಲ್ಲರಿಗೂ ಧನ್ಯವಾದವನ್ನು ಸಲ್ಲಿಸಿದ್ದಾರೆ.
ಸೆಕೆಂಡ್ ಮ್ಯಾರೇಜ್ ….ಕುಮಾರ ಸ್ವಾಮಿ ವಿರುದ್ದ ಹೈಕೋರ್ಟ್ ನಲ್ಲಿ ದೂರು ದಾಖಲು
ಬೆಂಗಳೂರು : ಕರ್ನಾಟಕ ದ ರಾಜ ಕಾರಣಿಗಳು ಜೈಲಿಗೆ ಹೊರಡಲು ತಾ ಮುಂದು ನಾ ಮುಂದು ಅನ್ನೋ ರೀತಿಯಲ್ಲಿ ನಡೆದು ಕೊಳ್ಳುತ್ತಿದ್ದರೆ ಗಣಿ ಹಗರಣ ಸೇರಿದಂತೆ ಅನೇಕ ಹಗರಣದಲ್ಲಿ ಭಾಗಿಯಾಗಿ ಅನೇಕ ಮಂದಿ ಈಗಾಗಲೇ ಜೈಲು ಸೇರಿದ್ದಾರೆ . ಈ ನಡುವೆ ಮಾಜಿ ಸಿ.ಎಂ ಕುಮಾರ ಸ್ವಾಮಿ ವಿರುದ್ಧ ವಿರುದ್ದ ಮತ್ತೊಂದು ದೂರು ಹೈ ಕೋರ್ಟ್ ನಲ್ಲಿ ದಾಖಲಾಗಿದೆ .
ಶಶಿಧರ ಬೆಳಗುಂಬ ಎಂಬವರು ಹೆಚ್.ಡಿ. ಕುಮಾರಸ್ವಾಮಿ ಸ್ವಾಮಿ ಅವರು ಹಿಂದೂ ವಿವಾಹ ಖಾಯಿದೆಯನ್ನು ಉಲ್ಲಂಘನೆ ಮಾಡಿ ಎರಡು ಹೆಂಡತಿಯರನ್ನು ಹೊಂದಿದ್ದಾರೆ . ಇದು ದಂಡನಾರ್ಹ . ಅದ್ದರಿಂದ ಅವರ ಸಂಸದ ಸ್ಥಾನವನ್ನು ರದ್ದು ಗೊಳಿಸಬೇಕು ಎಂದು ಕೋರಿ ಅವರ ವಿರುದ್ದ ಹೈ ಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ . ಕುಮಾರ ಸ್ವಾಮಿ ಮೊದಲನೇ ಹೆಂಡತಿ ಅನಿತಾ ಕುಮಾರಸ್ವಾಮಿ ಯಾಗಿದ್ದು ಆನಂತರ ಅವರು ನಟಿ ರಾಧಿಕಾ ಅವರನ್ನು ವಿವಾಹವಾಗಿದ್ದಾರೆ. ರಾಧಿಕಾ ಅವರಿಗೆ ಒಂದು ಮಗುವೂ ಇದ್ದು ಆಕೆ ತಾನು ಕುಮಾರ ಸ್ವಾಮಿಯನ್ನು ವಿವಾಹವಾಗಿರುವುದಾಗಿ ಪತ್ರಿಕೆಗಳಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಎಂದು ದೂರುದಾರ ದೂರಿನಲ್ಲಿ ತಿಳಿಸಿದ್ದಾರೆ.
ಪಡುಬಿದ್ರೆ : ತೆಂಕ ಎರ್ಮಾಳ್ ಬಳಿ ಬಸ್ ಇನೋವಾ ಡಿಕ್ಕಿ – ನಾಲ್ವರಿಗೆ ಗಾಯ
ಪಡುಬಿದ್ರೆ : ಇಲ್ಲಿನ ತೆಂಕ ಎರ್ಮಾಳ್ ಕೆನರಾ ಬ್ಯಾಂಕ್ ಬಳಿ ಇನೋವಾ ಕಾರು ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ನಾಲ್ವರು ಗಾಯಗೊಂಡ ಘಟನೆ ನಡೆದಿದೆ. ಗಾಯಗೊಂಡವರನ್ನು ಇನೋವಾ ಕಾರಿನ ಚಾಲಕ ಸುಧೀರ್ (೪೦) , ಕಾರಿನಲ್ಲಿದ್ದ ಮೈಮುನಾಬಿ (೫೯) ಮತ್ತು ಅವರ ಸಂಬಂಧಿಕರಾದ ಫಯಾಜ್ ಮತ್ತು ಶಬೀರ್ ಎಂದು ಗುರುತಿಸಲಾಗಿದೆ. ಪಡುಬಿದ್ರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ .
ಗ್ರಹಸ್ಥಾಶ್ರಮಕ್ಕೆ ಕಾಲಿಡಲಿರುವ ಗೌತಮ್ ಗಂಭೀರ್..
ಭಾರತೀಯ ತಂಡದ ಆರಂಭಿಕ ಆಟಗಾರ, ಕಲ್ಕತ್ತಾ ನೈಟ್ ರೈಡರ್ಸ್ ನಾಯಕ ಗೌತಮ್ ಗಂಭೀರ್ ಇದೇ ೨೮ ಕ್ಕೆ ಗ್ರಹಸ್ಥಾಶ್ರಮಕ್ಕೆ ಕಾಲಿಡಲಿದ್ದಾರೆ. ನವದೆಹಲಿ ಮೂಲದ ನತಾಶ ಜೈನ್ ಎಂಬವಳನ್ನು ತನ್ನ ಬಾಳ ಸಂಗಾತಿಯನ್ನಾಗಿ ಸ್ವೀಕರಿಸಲಿದ್ದಾರೆ. ಗಂಬೀರ್ ಮದುವೆ ಕಳೆದ ಸೆಪ್ಟೆಂಬರ್ ತಿಂಗಳಲ್ಲೇ ದಿನಾಂಕವನ್ನು ನಿಗದಿಪಡಿಸಿತ್ತು.
ಮದುವೆ ಸಮಾರಂಭ ಬಹಳ ಸರಳವಾಗಿ ನಡೆಯಲಿದ್ದು, ಸ್ನೇಹಿತರಿಗೆ ಮತ್ತು ಆತ್ಮೀಯರಿಗೆ ಮಾತ್ರ ಆಹ್ವಾನ ನೀಡಲಾಗುವುದು ಎಂದು ಗಂಭೀರ್ ಕುಟುಂಬ ತಿಳಿಸಿವೆ. ಪ್ರಸ್ತುತ ಇಂಗ್ಲೆಂಡ್ ವಿರುದ್ದದ ಸರಣಿಯಲ್ಲಿ ತೊಡಗಿಕೊಂಡಿರುವ ಗೌತಮ್ ಮದುವೆ ನಿಮಿತ್ತ ಏಕೈಕ ಟ್ವೆ-೨೦ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ.
ಪುಕ್ಕಟೆ ಮನರಂಜನೆ ಕೊಡುವ ಕಾನೂನು ಉಲ್ಲಂಘನೆಗಳು
ಇತ್ತೀಚಿಗಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿಗಳು ಸೇರಿ ಇನ್ನು ಹಲವಾರು ಮಂತ್ರಿವರ್ಗ ತಾವು ಮಾಡಿದ ಅಧಿಕಾರ ದುರ್ಬಳಕೆ, ಕಾನೂನು ಉಲ್ಲಂಘನೆ ಆರೋಪಕ್ಕೆ ಒಳಗಾಗಿ ಲೋಕಾಯುಕ್ತ ನ್ಯಾಯಾಲಯ ಮತ್ತು ರಾಜ್ಯದ ಉಚ್ಚ ನ್ಯಾಯಾಲಯದ ತೀರ್ಪಿನಿಂದಾಗಿ ಜೈಲು ಸೇರುವುದನ್ನು ನಾವು ನೋಡುತ್ತಿದ್ದೇವೆ.
ರಾಜ್ಯದ ಆಸ್ತಿಯನ್ನು ತಮ್ಮ ಕುಟುಂಬದವರಿಗೆ ಡಿನೋಟಿಫಿಕೆಶನ್ ಮಾಡಿ ಸಾವಿರಾರು ಕೋಟಿ ನಷ್ಟವನ್ನುಂಟು ಮಾಡಿರುವುದರಿಂದ ಈ ತರಹದ ನಾಟಕಗಳನ್ನು ನಟಿಸುವ ಅನಿವಾರ್ಯತೆ ಎದುರಾಗಿರುವುದು ಹಾಸ್ಯಾಸ್ಪದ ಅಲ್ಲವೇ ?
ರಾಜಕಾರಣಿಗಳು ಜೈಲು ಸೇರಿದ ಕೂಡಲೇ ದೇಹಕ್ಕೆ ಅವರ ಜೀವನದಲ್ಲಿ ಇಲ್ಲಿಯವರೆಗೆ ಅಂಟಿ ಕೊಳ್ಳದ ರೋಗಗಳು ಅದರಲ್ಲೂ ಬಿ.ಪಿ, ಎದೆ ನೋವು, ವಾಂತಿ, ಬೆನ್ನುನೋವು, ಸಕ್ಕರೆ ಕಾಯಿಲೆಗಳಂತಹ ರೋಗಗಳು ಕಾಣಿಸಿಕೊಳ್ಳುವುದು.
ಖಾಕಿ ಪಡೆ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಸೇರಿ ಯಡಿಯೂರಪ್ಪನವರನ್ನು ಹೊದಿಕೆ ಬಟ್ಟೆಯಿಂದ ಮರೆಮಾಚುವ ಹಿಂದಿರುವ ಗುಟ್ಟೇನು ? ಈ ರೀತಿ ಕಾನೂನುಗಳನ್ನು ಗಾಳಿಗೆ ತೂರುವುದನ್ನು ಇಡೀ ರಾಜ್ಯದ ಜನತೆ ಕ್ಷಮಿಸಿಯಾರೆ ? ಆಶ್ಚರ್ಯ ಸಂಗತಿ ಎಂದರೆ ಈ ರೀತಿ ನೆಪವೊಡ್ಡಿ ಆಸ್ಪತ್ರೆ ವಾಸವನ್ನು ದುರ್ಬಳಕೆ ಮಾಡುತ್ತಿರುವುದು ನಾಟಕ ಅಲ್ಲವೇ ?
ರೇಣುಕಾಚಾರ್ಯರಂತಹ ಸಚಿವರುಗಳು ಮಾದ್ಯಮದವರಿಗೆ ಹೇಳುತ್ತಾರೆ ಪರಪ್ಪನ ಅಗ್ರಹಾರ ಜೈಲಿನಿಂದ ಯಡಿಯೂರಪ್ಪನವರನ್ನು ವಿಕ್ಟೋರಿಯ ಆಸ್ಪತ್ರೆಗೆ ವರ್ಗಾಯಿಸುವ ಮದ್ಯೆ ಹೊದಿಕೆ ಬಟ್ಟೆಯಿಂದ ಮರೆ ಮಾಡಿದ್ದು ಪೊಲೀಸರು ಎಂದು ಹೇಳಿ ಕೈ ತೊಳೆದುಕೊಂಡರು. ಇಲ್ಲಿ ರಾಜ್ಯದ ಜನತೆಗೆ ಕಾಡುತ್ತಿರುವ ದೊಡ್ಡ ಪ್ರಶ್ನೆ ಒಂದು ಮಾಜಿ ಮುಖ್ಯಮಂತ್ರಿ ಮತ್ತು ಸಾಮಾನ್ಯ ಕೈದಿಗಳಿಗೆ ಸಮಾನ ಕಾನೂನು ಯಾಕೆ ಪಾಲನೆ ಆಗುತ್ತಿಲ್ಲ ? ಇದಕ್ಕೆ ಕಾನೂನು ತಜ್ಞರು ಉತ್ತರಿಸಬೇಕಾಗಿದೆ.
ಪರಪ್ಪನ ಅಗ್ರಹಾರಕ್ಕೆ ಬೇಟಿ ಕೊಟ್ಟು ಆರೋಗ್ಯ ವಿಚಾರಿಸುತ್ತಿರುವ ಸಚಿವ ಸಹೊದ್ಯೋಗಿಗಳು ಒಂದು ಕಡೆಯಾದರೆ ಮತ್ತೊಂದು ಕಡೆ ಸತ್ಯಾವಸ್ಥೆ ಏನೆಂದು ತಿಳಿಯದ ಒಂದಿಷ್ಟು ಬೆಂಬಲಿಗರು, ಹಲವಾರು ಆರೋಪಕ್ಕೆ ಬಲಿಯಾಗಿ ಜೈಲು ಸೇರಿದ ಮೇಲೂ ಅದೇ ಪಕ್ಷದ ಉಳಿದ ನಾಯಕರುಗಳು ಜೈಲು ಸೇರಿದಾಕ್ಷಣ ಅವರು ಆರೋಪಿಗಳು, ಅಪರಾಧಿಗಳಲ್ಲ ಎಂಬ ಸಮರ್ಥನೆ ನೀಡುವ ಮೂಲಕ ಜನರ ವಿಶ್ವಾಸವನ್ನು ಮರು ಸ್ಥಾಪಿಸುವ ಪ್ರಯತ್ನ ಕಾಣಸಿಗುತ್ತದೆ.
ಹಲವಾರು ರೀತಿಯ ಹೋರಾಟದಿಂದ ಬಂದಂತಹ ಯಡಿಯೂರಪ್ಪನವರು ಕರ್ನಾಟದ ಜನರಿಗೆ ಒಂದು ಒಳ್ಳೆಯ ಆಡಳಿತ ಕೊಡುವ ನಿರೀಕ್ಷೆಯನ್ನು ಮಣ್ಣುಪಾಲು ಮಾಡಿ ಬಿಟ್ಟರಲ್ಲ ಎಂಬ ನೋವು ಕನ್ನಡಿಗರಿಗೆ ನಾಟಿದೆ ಎಂದು ಭಾವಿಸುತ್ತೇನೆ. ಇಷ್ಟೊಂದು ಉನ್ನತ ಸ್ಥಾನವನ್ನು ಅಲಂಕರಿಸಿದ ರಾಜಕಾರಿಣಿಗಳು ಇಂತಹ ಪ್ರವೃತ್ತಿಯನ್ನು ಕರ್ನಾಟಕದ ಜನತೆಗೆ ತೋರಿಸುವ ಮೂಲಕ ಕರ್ನಾಟಕದ ಸುಸಂಸ್ಕೃತ ಕನ್ನಡಿಗರನ್ನು ಹಾಗೂ ಒಳ್ಳೆಯ ರಾಜಕೀಯ ಇತಿಹಾಸದ ಹಿನ್ನಲೆಯನ್ನು ಈ ಒಂದು ಆಡಳಿತದ ದುರ್ಬಳಕೆ ಮಾಡುವ ಮೂಲಕ ಬಿಹಾರ ರಾಜ್ಯದಂತೆ ದಬ್ಬಾಳಿಕೆ ನಡೆಸಿ ಬುಡಮೇಲು ಮಾಡಿ ಕರ್ನಾಟಕವನ್ನು ದೇಶದ ಬೇರೆ ರಾಜ್ಯಗಳ ಜನತೆಯಿಂದ ಅಗೌರವದಿಂದ ಕಾಣುವ ಹಾಗೆ ಮಾಡಿದ್ದು ವಿಷಾದನೀಯ ಎಂಬುವುದನ್ನು ಕನ್ನಡಿಗರಾದ ನಾವು ಗಂಭೀರವಾಗಿ ಚಿಂತಿಸುವ ಅನಿವಾರ್ಯತೆ ಎದುರಾಗಿದೆ.
ರಾಜ್ಯದಲ್ಲಿ ಕಾಡುತ್ತಿರುವ ವಿದ್ಯುತ್ ಸಮಸ್ಯೆ, ಬರ ಪೀಡಿತ ಹಾಗೂ ಅನಾರೋಗ್ಯ ಪೀಡಿತ ಪ್ರದೇಶಗಳ ಸಮಸ್ಯೆಗಳು ಇಂತಹ ಕೀಳು ಮಟ್ಟದ ಆಡಳಿತದಿಂದಾಗಿ ಈ ಸಮಸ್ಯೆಗಳು ಬಿಗಡಾಯಿಸುವುದರಲ್ಲಿ ಎರಡು ಮಾತಿಲ್ಲ, ರಾಜ್ಯದ ಜನತೆ ಮತ ಕೊಟ್ಟು ಆಯ್ಕೆ ಮಾಡಿರುವ ಶಾಸಕರು, ಸಚಿವರುಗಳು ಈ ಪ್ರದೇಶಗಳ ಬೇಟಿಯ ಗೋಜಿಗೆ ಹೋಗದಿರುವುದು ಅತ್ಯಂತ ದುಃಖಕರ ಎಂದು ನನ್ನ ಭಾವನೆ.
ದೆಹಲಿ ಮಟ್ಟದ ರಾಜಕಾರಣಿಗಳು ತಿಹಾರ್ ಜೈಲು ಸೇರಿದರೆ ಇಲ್ಲಿ ರಾಜ್ಯದ ರಾಜಕಾರಣಿಗಳು ಪರಪ್ಪನ ಅಗ್ರಹಾರಕ್ಕೆ ರಾಜಾರೋಷವಾಗಿ ಸೇರುತ್ತಿರುವುದು ದೇಶದ ಜನತೆಗೆ ಒಂದಷ್ಟು ಮನರಂಜನೆ ಸಿಗುವುತ್ತದೆ. ಒಂದಂತು ಸತ್ಯ ಇಡೀ ದೇಶದ ಜನತೆ ಇದನ್ನೆಲ್ಲಾ ದೃಶ್ಯ ಮಾದ್ಯಮದ ಮೂಲಕ ಕಣ್ಣಾರೆ ಕಂಡು ಇಂತಹ ರಾಜಕಾರಣಿಗಳ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ ತಕ್ಕ ಪಾಠ ಕಲಿಸಿಯಾರು ಎಂದು ಭಾವಿಸುತ್ತೇನೆ.
ಮೂಡಬಿದರೆ : ಆಳ್ವಾಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ಆತ್ಮಹತ್ಯೆ
ಮೂಡಬಿದರೆ : ರಾಷ್ಟ್ರೀಯ ಮಟ್ಟದ ಅಥ್ಲೀಟ್ ಪೃಥ್ವಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮರೆಯಾಗುವ ಮುನ್ನವೇ ಇಲ್ಲಿನ ಆಳ್ವಾಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತ ವಿದ್ಯಾರ್ಥಿನಿಯ ಹೆಸರು ಸಹ ಪೃಥ್ವಿ ಆಗಿದ್ದು ಈಕೆ ಹೊಸಕೋಟೆ ತಾಲ್ಲೂಕಿನ ಮಾಕನಹಳ್ಳಿ ಗ್ರಾಮದ ನಿವಾಸಿಯಾಗಿದ್ದಾಳೆ .
ಈಕೆಯ ರೂಮಿನಲ್ಲಿದ್ದ ಸಹಪಾಠಿಗಳು ಕಾಲೇಜಿಗೆ ಹೋಗಿದ್ದು ಮರಳಿ ಬರುವಾಗ ಈಕೆಯ ಹಾಸ್ಟೆಲ್ ಕೊಠಡಿ ಚಿಲಕ ಹಾಕಲಾಗಿತ್ತು. ಕಿಟಕಿಯಿಂದ ನೋಡಿದಾಗ ಪೃಥ್ವಿ ನೇಣಿಗೆ ಶರಣಾಗಿರುವುದು ಕಂಡು ಬಂತು. ಆತ್ಮಹತ್ಯೆಗೆ ಮಧ್ಯ ವಾರ್ಷಿಕ ಪರೀಕ್ಷೆಯಲ್ಲಿ ಕಳಪೆ ನಿರ್ವಹಣೆಯೇ ಕಾರಣ ಎಂದು ಸಂಶಯಿಸಲಾಗಿದೆ. ಮೂಡಬಿದರೆ ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ಕೈಗೊಂಡಿದ್ದಾರೆ.
ಖಾಕಿ ಖದರ್‌ಗೆ ಬಲಿಯಾಯಿತೇ ಬಡ ಜೀವ ?
ಬ್ಯಾಡಗಿ, ಅ.೨೦ : ಸೊಸೆಯಂದಿರ ನಿಶ್ಚಿತಾರ್ಥವನ್ನು ಸಂಭ್ರಮದಿಂದ ಮುಗಿಸಿ ಅದೇ ಸಂಭ್ರಮದಲ್ಲಿ ನಮಾಜ್ ಮಾಡಲು ತನ್ನ ಮಗಳ ಜೊತೆ ಅವಸರವಾಗಿ ಸಾಗುತ್ತಿದ್ದ ಬಡವ್ಯಕ್ತಿಯೊಬ್ಬ ಅನುಮಾನದ ಸುಳಿಗೆ ಸಿಕ್ಕು ಜನತೆಯಿಂದ ಥಳಿತಕ್ಕೊಳಗಾಗಿ ನಂತರ ಪೋಲಿಸರ ಥಳಿತಕ್ಕೊಳಗಾಗಿ ಇಹಲೋಕವನ್ನು ತ್ಯಜಿಸಿದ ಧಾರುಣ ಘಟನೆ ಮಂಗಳವಾರ ಸಂಜೆ ದಾವಣಗೇರಿ ಜಿಲ್ಲೆಯ ಹರಿಹರದಲ್ಲಿ ನಡೆದಿದೆ.
ಆನಂದ ಸಾಗರದಲ್ಲಿ ಕಷ್ಟದ ಸಂಸಾರ…
ಪಟ್ಟಣದ ಮಕಾನಗಲ್ಲಿಯ ನಿವಾಸಿ ಶಫಿಅಹ್ಮದ್ ಹುಣೀಸಿಮರದ (೩೨) ಎಂಬ ಯುವಕನು ಕಳೆದ ೬ ವರ್ಷದ ಹಿಂದೆ ಹರಿಹರ ಪಟ್ಟಣದ ತೆಗ್ಗಿನಕೇರಿಯ ಸತ್ತಾರಸಾಬ್ ಹರಿಹರ ಎಂಬುವವರ ಪುತ್ರಿ ಸರತಾಜ್‌ಬಾನು ಎಂಬ ಯುವತಿಯನ್ನು ನಿಖಾಃ ಮಾಡಿಕೊಂಡಿದ್ದ. ಇಲ್ಲಿನ ಛಾವಡಿ ರಸ್ತೆಯಲ್ಲಿ ಸಣ್ಣ ಮಳಿಗೆಯನ್ನು ಬಾಡಿಗೆ ಪಡೆದು ಹೊಲಿಗೆ ಯಂತ್ರವೊಂದನ್ನು ಇಟ್ಟುಕೊಂಡು ಟೈಲರಿಂಗ್ ಮಾಡಿಕೊಂಡು ಸಂಸಾರದ ಬಂಡಿಯನ್ನು ಸಾಗಿಸುತ್ತಿದ್ದ. ಈ ಕುಟುಂಬಕ್ಕೆ ಶಾಹಿನ್‌ಸುಲ್ತಾನಾ (೫), ಮುಬಾರಕ್(೩) ಎಂಬ ಮುದ್ದಾದ ಇಬ್ಬರು ಮಕ್ಕಳು ಕಷ್ಟದಲ್ಲಿಯೂ ನಲಿವು ಮೂಡಿಸಿದವು. ಯಾವುದೇ ಅಡ್ಡಿ ಆತಂಕಗಳಿಲ್ಲದೇ ಆನಂದವಾಗಿ ನಡೆಯುತ್ತಿದ್ದ ಸಂಸಾರದ ನೊಗವನ್ನು ಹೊತ್ತು ಜನತೆಯ ಪ್ರೀತಿಗೆ ಪಾತ್ರವಾಗಿದ್ದ ಶಫಿಅಹ್ಮದ್.
ಅವಸರವೇ ಮುಳುವಾಯಿತು…
ಕಳೆದ ಸೋಮವಾರ ತನ್ನ ಹೆಂಡತಿಯ ತವರು ಮನೆಯಲ್ಲಿ ತನ್ನ ನಾದಿನಿಯರ ನಿಶ್ಚಿತಾರ್ಥವನ್ನು ಸಂಭ್ರಮದಿಂದ ಮುಗಿಸಿ ಬುಧವಾರ ವಾಪಸ್ಸು ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ಊರಿಗೆ ಬರುವ ಸಂಪೂರ್ಣ ತಯಾರಿಯನ್ನು ಮಂಗಳವಾರ ಮಧ್ಯಾಹ್ನದಿಂದಲೇ ಪ್ರಾರಂಬಿಸಿದ್ದರು. ನಂತರ ಸಂಜೆಯಾಗುತ್ತಿದ್ದ ಹಾಗೆ ಪ್ರತಿ ದಿನದ ರೂಢಿಯಂತೆ ನಮಾಜಿಗೆ ಹೋಗಲು ಅಣಿಯಾದ. ಆದರೆ ತಾನೊಬ್ಬನೇ ಹೋಗುವದಕ್ಕಿಂತ ತನ್ನ ಮಗಳನ್ನು ಸಹ ಕರೆದುಕೊಂಡು ಹೋಗುತ್ತಿದ್ದ. ಆದರೆ ಸಮಯದ ಅಭಾವದ ಕಾರಣ ಅವಸರದಲ್ಲಿ ಸಾಗುತ್ತಿದ್ದಾಗ ಈತನ ವೇಗವನ್ನು ಅನುಸರಿಸಲಾಗದೇ ಮಗಳು ರಸ್ತೆ ಮಧ್ಯದಲ್ಲಿಯೇ ಅಳಲು ಪ್ರಾರಂಭಿಸಿದಳು. ಆದರೇ ಶಫಿಅಹ್ಮದ್‌ನಿಗೆ ಇತ್ತ ನಮಾಜ್ ಮಾಡಲೇಬೇಕು. ಆದರೇ ವೇಳೆಯ ಅಭಾವ. ಅತ್ತ ಮಗಳು ಅಳು. ಏನು ಮಾಡಬೇಕು ಎಂದು ತಿಳಿಯದೇ ಕಂಗಾಲಾಗತೊಡಗಿದ. ಇದನ್ನು ಗಮನಿಸುತ್ತಿದ್ದ ಅಲ್ಲಿನ ಜನತೆಗೆ ಅನುಮಾನವುಂಟಾಗಿದ್ದು ಅವರು ಈತನನ್ನು ಮಕ್ಕಳ ಕಳ್ಳನೆಂದು ಭಾವಿಸತೊಡಗಿದರು. ಮಗಳ ಅಳು, ನಮಾಜಿಗೆ ವೇಳೆಯ ಅಭಾವಗಳು ಆತನಲ್ಲಿ ಸಹಜ ಕೋಪ, ತಾಪವನ್ನುಂಟು ಮಾಡಿದ್ದು ಮಗಳಿಗೆ ಸಹಜ ಒತ್ತಾಯ ಪೂರ್ವಕವಾಗಿ ಕೈ ಹಿಡಿದು ಕರೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಕಂಡ ಜನತೆಯಲ್ಲಿ ಅನುಮಾನವನ್ನು ಗಟ್ಟಿಗೊಳಿಸಿದೆ. ತಡ ಮಾಡದೇ ಜನತೆಯು ಈತನ ಮೇಲೆ ದಾಳಿಗೆ ಇಳಿದಿದ್ದು ಮಾತನಾಡಲು ಸಹ ಅವಕಾಶ ನೀಡದೇ ಥಳಿಸುವದಕ್ಕೆ ಪ್ರಾರಂಭಿಸಿದ್ದಾರೆ. ಇದನ್ನು ಬಹಳ ಅನಿರೀಕ್ಷಿತವಾಗಿ ತನ್ನ ತಂದೆ ಮೇಲೆ ನಡೆಯುತ್ತಿರುವ ಜನತೆಯ ದಾಳಿಯನ್ನು ವಿರೋಧಿಸಲಾಗದೇ ಅಥವಾ ಈತ ತನ್ನ ತಂದೆ ಎಂದು ಹೇಳಲಾಗದೇ ಆ ಮಗು ಇನ್ನೂ ಜೋರಾಗಿ ಅಳಲು ಪ್ರಾರಂಭಿಸಿತು. ಮಗು ಅಳವುದನ್ನು ಕಂಡ ಜನತೆ ಇನ್ನೂ ಬಲವಾಗಿ ಶಫೀಯ ಮೇಲೆ ದಾಳಿ ಮಾಡಲು ಪ್ರಾರಂಬಿಸಿತು, ನಂತರ ಆತನನ್ನು ಸ್ಥಳಿಯ ಪೋಲಿಸ್ ಠಾಣೆಗೆ ಕರೆ ತಂದಾಗ.
ವಿಚಾರಿಸಲೇ ಇಲ್ಲವಂತೆ ಪೋಲಿಸರು…
ಜನತೆ ಏನೋ ಮಕ್ಕಳ ಕಳ್ಳನೆಂದು ಅನುಮಾನಗೊಂಡು ಶಫೀಅಹ್ಮದ್‌ನನ್ನು ಪೋಲಿಸ್ ಠಾಣೆಗೆ ಕರೆ ತಂದಿದ್ದು ಆ ವೇಳೆ ಪೋಲಿಸರು ಮಾನವೀಯ ದೃಷ್ಠಿಯಿಂದ ಜನತೆಯನ್ನು ಸಮಾಧಾನಪಡಿಸಿ ನಂತರ ಆರೋಪಿಯನ್ನು ವಿಚಾರಿಸುವುದು ಸಹಜ. ಆದರೇ ಹರಿಹರದ ಪೋಲಿಸ್ ಠಾಣೆಯಲ್ಲಿ ಮಾತ್ರ ಕರ್ತವ್ಯದ ಮೇಲಿದ್ದ ಪೋಲಿಸರು ಶಫೀಅಹ್ಮದ್‌ನಿಗೆ ಮಾತನಾಡಲು ಅವಕಾಶ ನೀಡದೇ ಥಳಿಸಿದ್ದಾರೆ, ಮೊದಲೇ ಜನತೆಯ ಗುಸ್ಸಾಕ್ಕೆ ಹಣ್ಣಾಗಿದ್ದ ಶಫೀಅಹ್ಮದ್ ಪೋಲಿಸರ್ ಹೊಡೆತಕ್ಕೆ ತತ್ತರಿಸಿದ್ದಾನೆ. ಮಾನಸಿಕವಾಗಿ, ದೈಹಿಕವಾಗಿ ತೀವ್ರ ಅಸ್ವಸ್ಥನಾದ ಶಫೀಅಹ್ಮದ್ ಪೋಲಿಸ್ ಠಾಣೆಯಲ್ಲಿ ಕುಸಿದು ಬಿದ್ದಿದ್ದಾನೆ. ನಂತರ ಪೋಲಿಸರು ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದಾಗ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾನೆ. ಇಲ್ಲಿ ಪೋಲಿಸರು ಸ್ವಲ್ಪ ಮಾತನಾಡಲು ಅವಕಾಶವನ್ನು ನೀಡಿದ್ದರೇ ಅಥವಾ ಸಮಾಧಾನದ ಸಮಯವನ್ನು ಪಾಲಿಸಿದ್ದರೇ ಇಂದು ಬಡ ಜೀವ ಉಳಿಯಬಹುದಾಗಿತ್ತು ಎನ್ನುವುದು ಆತನ ಸಂಬಂಧಿಕರ ಅಳಲಾಗಿದೆ.
ಆನಾಥವಾದ ಬಡ ಕುಟುಂಬ…
ನಮಾಜಿಗೆ ಹೋಗಿ ಬರುವೆನೆಂದು ಹೇಳಿ ಬಾರದ ಲೋಕಕ್ಕೆ ಹೋಗಿರುವ ಶಫೀ ಅಹ್ಮದ್‌ನ ಕುಟುಂಬ ಅಕ್ಷರಶಃ ಅನಾಥವಾಗಿದ್ದು ಮುದ್ದಿನ ಎರಡು ಮಕ್ಕಳು ತಂದೆ ಅಗಲಿಕೆಗೆ ರೋಧನಪಡುತ್ತಿರುವ ದೃಶ್ಯ ಎಂತಹ ಕಲ್ಲು ಹೃದಯವನ್ನು ಕರಗಿಸುವಂತೆ ಇದೆ. ಸಂಬಂಧಿಕರಿಗೆ ಸಿಡಿಲೇ ಎರಗಿದ ಅನುಭವವಾಗಿದೆ. ಈತನ ಅಸಹಜ ಸಾವಿಗೆ ಜಾತಿ ಮತ ಧರ್ಮ ಭೇದವಿಲ್ಲದೇ ಪಟ್ಟಣದ ಜನತೆ ತಪ್ಪಿತಸ್ಥರ ಮೇಲೆ ಉಗ್ರ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನೆ ನಡೆಸಿದ ಘಟನೆಯು ಸಹ ಜರುಗಿದೆ.
ಇಂದು ಮೂರನೇ ಏಕದಿನ – ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
ಮೊಹಾಲಿ : ಪ್ರವಾಸಿ ಇಂಗ್ಲಂಡ್ ತಂಡದ ವಿರುದ್ದದ ಐದು ಏಕದಿನ ಪಂದ್ಯಗಳ ಸರಣಿಯ ಮೂರನೇ ಪಂದ್ಯವು ಇಂದು ಅದೃಷ್ಟದ ತಾಣ ಮೊಹಾಲಿಯ ಕ್ರಿಕೆಟ್ ಅಂಗಳದಲ್ಲಿ ನಡೆಯಲಿದೆ. ಈ ಪಂದ್ಯವನ್ನು ದೋನಿ ಬಳಗ ಗೆದ್ದುಬಿಟ್ಟರೆ ಸರಣಿ ಭಾರತಕ್ಕೆ ದೊರಕಲಿದೆ.
ಕಳೆದ ಎರಡು ಪಂದ್ಯಗಳಲ್ಲಿ ಆಡಿದ ತಂಡವೇ ಇಲ್ಲಿಯೂ ಕಣಕ್ಕಿಳಿಯುವುದು ಬಹುತೇಕ ಖಚಿತ. ಆದರೆ ಇಂಗ್ಲೆಂಡ್‌ನ ಅಲಿಸ್ಟರ್ ಕುಕ್ ಬಳಗದಲ್ಲಿ ಕೆಲವು ಬದಲಾವಣೆಯ ನಿರೀಕ್ಷೆ ಇದೆ. ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಲು ಇಯಾನ್ ಬೆಲ್ ಸ್ಥಾನ ಪಡೆಯುವ ನಿರೀಕ್ಷೆಯಿದೆ.
ಭಾರತವು ಕಳೆದ ಎರಡು ಪಂದ್ಯಗಳನ್ನು ಗೆದ್ದು ಕೊಂಡರೂ ಉತ್ತಮ ಆರಂಭದ ಸಮಸ್ಯೆಯನ್ನು ಎದುರಿಸುತ್ತಿದೆ. ವಿಶ್ವಕಪ್ ನಂತರ ತವರು ನೆಲದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಸರಣಿಯನ್ನು ಬುಟ್ಟಿಗೆ ಹಾಕಿಕೊಳ್ಳಲು ದೋನಿ ಬಳಗ ಕಠಿಣ ಅಭ್ಯಾಸದಲ್ಲಿ ತೊಡಗಿದೆ. ಇಂಗ್ಲೆಂಡ್ ತಂದ ಕೂಡ ಸರಣಿ ಸೋಲು ತಡೆಯುವ ತಂತ್ರ ಹೆಣೆಯುತ್ತಿದೆ. ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 2.30. ರಿಂದ ಆರಂಭವಾಗಲಿದೆ.
ಹಾವುಗಳನ್ನು ಹಿಡಿದು ಅವುಗಳಿಗೆ ಜೀವದಾನ ನೀಡುತ್ತಿರುವ ಶಾಂತಿ
Posted on October 20, 2011 by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.
ಚನ್ನಪಟ್ಟಣ, ಅ.೨೦ : ವಿಷಜಂತುಗಳನ್ನು ಕಂಡಾಗ ಅವುಗಳನ್ನು ಕೊಲ್ಲುವ ಅಥವಾ ಕೊಲ್ಲಿಸುವ ಮಂದಿಯೇ ಹೆಚ್ಚಿರುವ ಸಮಾಜದಲ್ಲಿ ಇದಕ್ಕೆ ಅಪವಾದವೆಂಬಂತಹ ವ್ಯಕ್ತಿಯೊಬ್ಬರು ಪಟ್ಟಣದಲ್ಲಿದ್ದಾರೆ. ಅವರೆ ಶಾಂತಕುಮಾರ್ ಉರುಫ್ ಶಾಂತಿ.
ಕಲ್ಲುನಾಗರ ಕಂಡರೆ ಹಾಲನೆರೆ, ದಿಟದ ನಾಗರ ಕಂಡರೆ ಕೊಲ್ಲೆಂಬುವವರ ನಡುವೆ ವಿಭಿನ್ನವಾಗಿ ಕಾಣಿಸುವ ಶಾಂತಿ, ಯಾರ ಮನೆಗೆ ಯಾವರೀತಿಯ ಹಾವೇ ಹೊಕ್ಕಿರಲಿ ಅದನ್ನು ಹಿಡಿದು ಜೋಪಾನದಿಂದ ಕಾಡಿಗೆ ಬಿಡುವ ಸೇವೆಯನ್ನು ಕಳೆದ ಎರಡು ವರ್ಷಗಳಿಂದ ಮಾಡುತ್ತಿದ್ದಾರೆ.
ಪಟ್ಟಣದ ಕೋಟೆಯ ಕೋಟೆ ಮಾರಮ್ಮನ ದೇವಸ್ಥಾನದ ಪಕ್ಕದ ಮನೆಯಲ್ಲಿರುವ ಈತ ಬಾರ್‌ಬೆಂಡಿಂಗ್ ಕಾಯಕಮಾಡುತ್ತಿದ್ದು, ಇದರ ಜೊತೆ ಜೊತೆಗೆ ಹಾವು ಹಿಡಿಯುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ.
ಹಾವುಗಳನ್ನು ಹೊಡೆದು ಸಾಯಿಸುವ ಬದಲು ಅವುಗಳಿಗೆ ಜೀವದಾನ ನೀಡಿ ದೂರದ ಕಾಡುಗಳಿಗೋ, ದೂರದ ಪ್ರದೇಶಗಳಿಗೋ ಸಾಗಿಸುವ ಈತ, ಎಂತಹ ಹಾವೇ ಆಗಿರಲಿ ಕ್ಷಣಾರ್ಧದಲ್ಲಿ ನೀರುಕುಡಿದಂತೆ ಹಿಡಿಯುತ್ತಾರೆ. ಯಾರೇ ಆಗಲಿ ಎಷ್ಟೊತ್ತಿನಲ್ಲೇ ಆಗಲಿ ತಮ್ಮ ಮನೆಗೆ ಹಾಗೂ ಹೊಕ್ಕಿರುವ ವಿಷಯ ತಿಳಿಸಿದರೆ ಈತ ಅಲ್ಲಿ ಹಾಜರ್ ಜೊತೆಗೆ ತಾನಿಲ್ಲದಿದ್ದರೂ ತನ್ನ ಶಿಷ್ಯನೊಬ್ಬನನ್ನು ತಯಾರು ಮಾಡಿಟ್ಟುಕೊಂಡಿದ್ದಾರೆ.
ಈಗಾಗಲೇ ನೂರಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟಿರುವ ಶಾಂತಿ, ನಾಗರಹಾವು, ಮಿಡಿನಾಗರ, ಕೇರೆಹಾವು, ಉರಗಮಂಡಲ, ದಾಸg ಮಂಡಲ ಸೇರಿದಂತೆ ಎಲ್ಲಾ ಜಾತಿಯ
ಹಾವುಗಳನ್ನು ಹಿಡಿದಿದ್ದಾರಂತೆ. ನಾಗರ ಹಾವೆಂದರೆ ನೀರು ಕುಡಿದ ಹಾಗೆ ಹಿಡಿಯಬಹುದು, ಆದರೆ ಕೆರೆ ಹಾವು ಹಿಡಿಯುವುದೇ ಕಷ್ಟ ಎನ್ನುವುದು ಇವರ ಕಾಮೆಂಟು.
ಒಮ್ಮೆ ನಮ್ಮ ಮನೆಗೆ ನಾಗರಹಾವೊಂದು ನುಗ್ಗಿತ್ತು. ಆಗ ಅದನ್ನು ಹೊಡೆಯುವ ಬದಲು ಧೈರ್ಯಮಾಡಿ ಹಿಡಿದೆ, ಅದನ್ನು ದೂರದ ಪ್ರದೇಶದಲ್ಲಿ ಬಿಟ್ಟು ಬಂದೆ, ಅದು ಹಾಗೆಯೇ ಮುಂದುವರೆಯುತ್ತಿದೆ. ಪಟ್ಟಣದಲ್ಲೇ ಅಲ್ಲದೆ ಹಳ್ಳಿಗಳಲ್ಲೆಲ್ಲಾ ಹಾವುಗಳನ್ನು ಹಿಡಿದಿದ್ದೇನೆ. ಅವುಗಳನ್ನೆಲ್ಲಾ ಕೂರಣಗೆರೆ ಬೆಟ್ಟ ಅಥವಾ ಮಹದೇಶ್ವರ ದೇವಸ್ಥಾನದ ಆಚೆಗೆ ಬಿಟ್ಟಿದ್ದೇನೆ ಎನ್ನುತ್ತಾರೆ ಶಾಂತಿ.
ತಾನು ಮಾಡುವುದು ಪ್ರವೃತ್ತಿಯಾದರೂ ಬೇರೆಯವರ ಮನೆಯಲ್ಲಿ ಹಾವು ಹಿಡಿದಾಗ ಅವರು ಅಲ್ಪಸ್ವಲ್ಪ ಹಣಕೊಡುತ್ತಾರೆ, ಆದರೆ ನಾನಂತೂ ಯಾರ ಬಳಿಯೂ ಹಣಕ್ಕಾಗಿ ಈ ಕಾರ್ಯಮಾಡಿಲ್ಲ ಎನ್ನುವ ಶಾಂತಿ, ಹಾವುಗಳು ತಮ್ಮ ಮನೆಗೆ ನುಗ್ಗಿದಾಗ ಎಷ್ಟೊತ್ತಿನಲ್ಲಾದರೂ ನನ್ನ ಮೊಬೈಲ್‌ಗೆ ಕರೆ ಮಾಡಿದರೆ ಬರುವುದಾಗಿ ತಿಳಿಸುತ್ತಾರೆ. ಶಾಂತಿ ಅವರ ದೂರವಾಣಿ ಸಂಖ್ಯೆ 9980460174 ಆಗಿದ್ದು, ಸಾರ್ವಜನಿಕರು ಇವರ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ.
ಭೂಹಗರಣ – ಈಗ ಗ್ರಹ ಸಚಿವರ ಸರದಿ
ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವಶಪಡಿಸಿಕೊಂಡಿದ್ದ ಭೂಮಿಯನ್ನು ಕಾನೂನುಬಾಹಿರವಾಗಿ ಖರೀದಿಸಿ, ನಂತರ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ ಆರೋಪಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರ್.ಅಶೋಕ ವಿರುದ್ಧ ಜಯಕುಮಾರ್ ಹಿರೇಮಠ ಎಂಬುವರು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಬುಧವಾರ ಖಾಸಗಿ ದೂರು ಸಲ್ಲಿಸಿದ್ದಾರೆ.
ಪ್ರಕರಣಗಳಿಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಖಾಸಗಿ ದೂರಿನ ಬಗ್ಗೆ ಲೋಕಾಯುಕ್ತ ನ್ಯಾಯಾಲಯ ಗುರುವಾರ ತನ್ನ ತೀರ್ಪು ನೀಡಲಿದೆ. ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ. ಸುಧೀಂದ್ರ ರಾವ್ ಅವರು ಬುಧವಾರ ವಾದ ಆಲಿಕೆಯ ಬಳಿಕ ಆದೇಶಕ್ಕಾಗಿ ಗುರುವಾರಕ್ಕೆ ದಿನ ನಿಗದಿಗೊಳಿಸಿದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಹಗರಣ ನಡೆದಿದೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ ಹೀಗಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದಾರೆ.
ಕರಜಗಿ ರೈಲ್ವೇ ಸ್ಟೇಷನ್ ಬಳಿ ಅಕ್ರಮ ಸಾರಾಯಿ ಮಾರಾಟ ತಡೆಯಲು ಮುಂದಾದ ಮಹಿಳೆಯರ ಮೇಲೆ ಮಾರಾಟಗಾರರಿಂದ ಹಲ್ಲೆ
ಹಾವೇರಿ : ಇಲ್ಲಿಗೆ ಸಮೀಪದ ಕರಜಗಿ ರೈಲ್ವೇ ನಿಲ್ದಾಣದ ಬಳಿ ಇರುವ ಕೋಳುರು ಗ್ರಾಮದಲ್ಲಿ ಬುಧವರಾ ರಾತ್ರಿ ಅಕ್ರಮ ಸಾರಾಯಿ ಮಾರಾಟವನ್ನು ತಡೆಯಲು ಮುಂದಾದ ಹತ್ತಾರು ಮಹಿಳೆಯರ ಮೇಲೆ ಮಾರಾಟಗಾರರು ಹಲ್ಲೆ ಮಾಡಿದ ಘಟನೆ ನಡೆದಿದೆ.
ರೈಲ್ವೇ ನಿಲ್ದಾಣಕ್ಕೆ ಹೊಂದಿಕೊಂಡಂತೆ ಪುಟ್ಟ ಗ್ರಾಮವಿದ್ದು, ಇಲ್ಲಿ ಅನಧೀಕೃತವಾಗಿ ಐವರು ಸಾರಾಯಿ ಮಾರಾಟ ಮಾಡುತ್ತಿದ್ದು, ತಮ್ಮ ಗ್ರಾಮವನ್ನು ಸಾರಾಯಿ ಮುಕ್ತವಾಗಿರಿಸಲು ನಾಲ್ಕಾರು ದಿನಗಳ ಹಿಂದೆ ಗ್ರಾಮದ ಪ್ರಮುಖರು ಮತ್ತು ಮಹಿಳೆಯರು ಡಂಗುರ ಸಾರಿಸಿದ್ದರು. ಮೂರ‍್ನಾಲ್ಕು ದಿನ ಸಾರಾಯಿ ಮಾರಾಟ ನಿಲ್ಲಿಸಲಾಗಿತ್ತು.
ಗ್ರಾಮಸ್ಥರ ಎಚ್ಚರಿಕೆ ನಡುವೆಯೂ ನೂರಸಾಬ ಮುಲ್ಲಾ, ಫಕ್ಕೀರೇಶ ಕಿತ್ತೂರ, ಲಕ್ಷ್ಮವ್ವ ಎನ್ನುವವರು ಕೆಲವರ ಕುಮ್ಮಕ್ಕಿನಿಂದ ಸಾರಾಯಿ ಮಾರಾಟ ಮುಂದುವರೆಸಿದ್ದು, ಮತ್ತೆ ತಮ್ಮ ಗ್ರಾಮದಲ್ಲಿ ಕುಡುಕರು ಕುಡಿದು ತೂರಾಡುವುದನ್ನು ಕಂಡು ಬುಧವಾರ ರಾತ್ರಿ ಮಹಿಳೆಯರು ಸಾರಾಯಿ ಮಾರಾಟ ಮಾಡುತ್ತಿದ್ದವರ ಮನೆಗಳು, ಅಂಗಡಿಗಳ ಮೇಲೆ ದಾಳಿ ಮಾಡಿ, ಅಕ್ರಮವಾಗಿ ಮಾರಾಟಕ್ಕೆಂದು ಸಂಗ್ರಹಿಸಿಟ್ಟ ಸಾರಾಯಿ ಬಾಟಲಿಗಳನ್ನು ವಶಕ್ಕೆ ತೆಗೆದುಕೊಳ್ಳಲು ಮುಂದಾದಾಗ ಸಾರಾಯಿ ಮಾರಾಟಗಾರರು ಈ ಮಹಿಳೆಯರನ್ನು ದೂಡಾಡಿ ಅವಾಚ್ಯ ಶಬ್ದಗಳಿಂದ ನಿಂಧಿಸಿ ಹಲ್ಲೆ ಮಾಡಿದ್ದಾರೆ.
ಮಹಿಳೆಯರು ಪ್ರಶ್ನಿಸಿದ್ದಕ್ಕೆ ನಾವು ಮಾರಿಯೇ ತೀರುತ್ತೇವೆ. ನೀವು ಏನು ಮಾಡುತ್ತೀರಿ ಎಂದು ಧಮ್ಕಿ ಹಾಕಿದ್ದರಂತೆ ರಾತ್ರಿ ೧೦ ಗಂಟೆ ಸುಮಾರಿಗೆ ಸಾರಾಯಿ ಮಾರಾಟಗಾರರಿಂದ ಹಲ್ಲೆಗೊಳಗಾದ ಹತ್ತಾರು ಮಹಿಳೆಯರು ಗ್ರಾಮೀಣ ಪೊಲೀಸ್ ಠಾಣೆಗೆ ಆಗಮಿಸಿ ತಮ್ಮ ದೂರು ನೀಡಿದರು.ಪಿಎಸ್‌ಐ ಇಂಗಳೆ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಪತ್ರಿಕೆಗೆ ತಿಳಿಸಿದ್ದಾರೆ.
ಜನಪ್ರತಿನಿಧಿಗಳು, ಅಧಿಕಾರಿಗಳು ಪಿಡಿಓಗಳ ಜೊತೆ ಸೌಹಾರ್ದಯುತವಾಗಿ ವರ್ತಿಸಿ ಅವರಿಗೆ ಕೆಲಸಮಾಡಲು ಧೈರ್ಯ ತುಂಬಬೇಕು – ಜಗದೀಶ್‌ಶೆಟ್ಟರ್
ರಾಮನಗರ, ಅ.೨೦ : ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಓ) ನೀಡಿರುವ ಸಾಮೂಹಿಕ ರಾಜೀನಾಮೆಯನ್ನು ವಾಪಸ್ಸು ಪಡೆಯಬೇಕೆಂದು ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ್‌ಶೆಟ್ಟರ್ ಮನವಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭಾವನಾತ್ಮಕವಾಗಿ ಪಿಡಿಓಗಳು ರಾಜಿನಾಮೆ ಸಲ್ಲಿಸಿದ್ದಾರೆ. ಗುಲ್ಬರ್ಗಾ ಹಾಗೂ ಬೀದರ್‌ನಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಗುಲ್ಬರ್ಗಾದಲ್ಲಿ ಆತ್ಮಹತ್ಯೆ ಮಾಡಿಕೊಂಡ ಪಿಡಿಓ ಮಂದಾಕಿನಿ ಯಾಕ್ಲೂರ್ ಅವರ ಕುಟುಂಬಕ್ಕೆ ಎರಡು ಲಕ್ಷ ರೂ. ಪರಿಹಾರವನ್ನು ಸರ್ಕಾರ ನೀಡಿದೆ. ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ಕಲ್ಪಿಸಲಾಗುವುದೆಂದು ಅವರು ತಿಳಿಸಿದರು.
ಪಿಡಿಓಗಳಿಗೆ ಕಿರುಕುಳ ನೀಡುವ ಗ್ರಾ.ಪಂ ಸದಸ್ಯರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಷ್ಟೇ ಅಲ್ಲ ಸದಸ್ಯತ್ವವನ್ನು ರದ್ದುಪಡಿಸುವ ಕಠಿಣ ನಿರ್ಧಾರವನ್ನು ಕೈಗೊಳ್ಳಲಾಗುವುದು. ಹಾವೇರಿಯ ಹಿರೇಕೆರೂರು ಗ್ರಾ.ಪಂ.ನಲ್ಲಿ ಅಸಭ್ಯವಾಗಿ ವರ್ತಿಸಿದ ಗ್ರಾ.ಪಂ. ಸದಸ್ಯನ ಸದಸ್ಯತ್ವನ್ನು ರದ್ದುಪಡಿಸಲಾಗಿದೆ ಎಂದರು.
ಕಳೆದ ವಾರ ವಿಧಾನಸೌಧದಲ್ಲಿ ಗ್ರಾ.ಪಂ ಕಾರ್ಯದರ್ಶಿ ಹಾಗೂ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ, ಸದಸ್ಯರು ಹಾಗೂ ತಾಲ್ಲೂಕಿಗೆ ಇಬ್ಬರಂತೆ ಪಿಡಿಓಗಳನ್ನು ಕರೆದು ಸಮನ್ವಯ ಸಭೆ ನಡೆಸಲಾಯಿತು. ಅದೇ ರೀತಿ ಜಿಲ್ಲಾ ಮಟ್ಟದಲ್ಲಿ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಗ್ರಾಮಗಳ ಸಂಪೂರ್ಣ ಅಭಿವೃದ್ಧಿಗಾಗಿ ದೇಶದಲ್ಲಿ ಪ್ರಥಮವಾಗಿ ಪಿಡಿಓಗಳ ನೇಮಕ ಮಾಡಿಕೊಳ್ಳಲಾಯಿತು. ಈ ವ್ಯವಸ್ಥೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಇತರೆ ರಾಜ್ಯಗಳು ಪಿಡಿಓಗಳಲ್ಲಿ ನೇಮಕಾತಿ ಬಗ್ಗೆ ಚಿಂತಿಸುತ್ತಿವೆ ಎಂದರು.
ಸ್ಥಳೀಯ ಸಾಂಸ್ಥಿಕ ಘಟಕ ವಾದ ಗ್ರಾಮ ಪಂಚಾಯ್ತಿಗೆ ಹೆಚ್ಚಿನ ಅಧಿಕಾರ ನೀಡಿ, ಗ್ರಾಮೀಣ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ಟ್ಟಿನಲ್ಲಿ ಪಿಡಿಓಗಳ ನೇಮಕವನ್ನು ಸರ್ಕಾರ ನೇಮಿಸಿದೆ. ಈ ವ್ಯವಸ್ಥೆ ನೂತನವಾಗಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ಪಿಡಿಓಗಳ ಜೊತೆ ಸೌಹಾರ್ದಯುತವಾಗಿ ವರ್ತಿಸಿ ಅವರಿಗೆ ಕೆಲಸಮಾಡಲು ಧೈರ್ಯ ತುಂಬಬೇಕು ಎಂದು ಅವರು ತಿಳಿಸಿದರು. ಪಿಡಿಓಗಳು ಇಂತಹ ಘಟನೆಗಳಿಂದ ವಿಚಲಿತರಾಗದೆ ಕಾರ್ಯ ನಿರ್ವಹಿಸಿ. ನಿಮಗೆ ಸರ್ಕಾರ ಎಲ್ಲಾ ರೀತಿಯ ರಕ್ಷಣೆ ಹಾಗೂ ನೆರವು ನೀಡುತ್ತದೆ ಎಂದು ಸಚಿವರು ಭರವಸೆ ನೀಡಿದರು.
೧೩೫೦ ಪಿಡಿಓಗಳ ನೇಮಕ : ಸರ್ಕಾರ ಈಗಾಗಲೇ ಮೊದಲ ಹಂತದಲ್ಲಿ ೨೫೦೦ ಪಿಡಿಓಗಳನ್ನು ನೇಮಕಮಾಡಿಕೊಂಡಿದೆ. ೧೩೫೦ ಪಿಡಿಓಗಳ ನೇಮಕಾತಿ ಬಗ್ಗೆ ಸುಪ್ರಿಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಅರ್ಜಿ ವಜಾಗೊಂಡಿದೆ. ಈ ನೇಮಕಾತಿ ಪ್ರಕ್ರಿಯೆಗೆ ಇನ್ನೊಂದು ವಾರದಲ್ಲಿ ಚಾಲನೆ ನೀಡಲಾಗುವುದು ಎಂದರು.
ಜಿ.ಪಂ ಸದಸ್ಯರ ಆಕ್ಷೇಪ : ದರೋಡೆಕೋರರ ರೀತಿ ಜನಪ್ರತಿ ನಿಧಿಗಳನ್ನು ಬಿಂಬಿಸಲಾಗುತ್ತಿದೆ. ಪಿಡಿಓ ಅಧಿಕಾರಿಗಳು ಜನಪ್ರತಿ ನಿಧಿಗಳ ಜೊತೆ ಸೌಹಾರ್ದಯುತವಾಗಿ ವರ್ತಿಸುತ್ತಿಲ್ಲ ಎಂದು ಈ ಮುನ್ನ ನಡೆದ ಜಿಲ್ಲಾ ಪಂಚಾಯ್ತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿ.ಪಂ. ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಜಗದೀಶ್ ಶೆಟ್ಟರ್ ಪಿಡಿಓಗಳು ಸಂಪೂರ್ಣ ಹೊಸಬರಾಗಿದ್ದು ಅವರೊಂದಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಸೌಹಾರ್ದಯುತವಾಗಿ ವರ್ತಿಸಬೇಕು. ಅವರ ಮೇಲೆ ಅತಿಯಾದ ರಾಜಕೀಯ ಒತ್ತಡ, ಮತ್ತಿತರ ತೊಂದರೆ ನೀಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಜಿಲ್ಲಾಮಟ್ಟದಲ್ಲಿ ಸಮನ್ವಯ ಸಭೆಗಳನ್ನು ನಡೆಸುವ ಮೂಲಕ ಪರಸ್ಪರ ಸೌಹಾರ್ದತೆ ಕಾಯ್ದುಕೊಳ್ಳಬೇಕೆಂದು ಅವರು ಪುನುರುಚ್ಛರಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಅನುಭವದ ಕೊರತೆ ಇರುವುದರಿಂದ ಗ್ರಾಮ ಪಂಚಾಯಿತಿ ಸದಸ್ಯರು, ಕಾರ್ಯನಿರ್ವಾಹಕ ಅಧಿಕಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸಲಹೆ-ಸೂಚನೆ ನೀಡಿ ಸೂಕ್ತ ಮಾರ್ಗದಲ್ಲಿ ಕೆಲಸ ನಿರ್ವಹಿಸಲು ಸಹಕರಿಸಬೇಕು ಎಂದರು.
ಪಡುಬಿದ್ರಿ – ಕಾರ್ಕಳ ರಸ್ತೆ ಕಾಯಕಲ್ಪಕ್ಕೆ 25 ಲಕ್ಷ : ಡಾ|ವಿ ಎಸ್ ಆಚಾರ್ಯ
ಪಡುಬಿದ್ರಿಯಿಂದ ಕಾರ್ಕಳಕ್ಕೆ ಹೋಗುವ ರಸ್ತೆಯ ಕೆಲವೊಂದು ಕಡೆಗಳಲ್ಲಿ ರಸ್ತೆಗೆ ಹಾಕಿದ ಜಲ್ಲಿ ಕಲ್ಲುಗಳು ಎದ್ದು ಕಾಣುತಿದ್ದು ಸಂಚಾರ ಕಷ್ಟಕರವಾಗಿತ್ತು. ಈ ರಸ್ತೆಯ ಕಾಯಕಲ್ಪಕ್ಕೆ ೨೫ ಲಕ್ಷ ಬಿಡುಗಡೆಯಾಗಿದ್ದು ಅಕ್ಟೋಬರ್ ೧೯ರಿಂದ ದುರಸ್ತಿಯ ಕಾರ್ಯ ಆರಂಭವಾಗಲಿದೆ ಎಂದು ಡಾ| ವಿ.ಎಸ್ ಆಚಾರ್ಯ ತಿಳಿಸಿದರು.
ಅಂತೆಯೇ ಉಡುಪಿ – ಕಾರ್ಕಳ ರಸ್ತೆಯು ಹದಗೆಟ್ಟಿದ್ದು ಅದರ ಕಾಮಗಾರಿಯನ್ನು ಆದಷ್ಟು ಬೇಗನೆ ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
“ಲೈಫ್ ಇಷ್ಟೇನೇ ” ನಿರ್ಮಾಪಕನ ಲೈಫ್ ಕಷ್ಟದಲ್ಲಿ..
ಯುವ ಪ್ರತಿಭೆಗಳ ಸಂಗಮವಾದ ‘ಲೈಫ್ ಇಷ್ಟೇನೇ’ ಚಿತ್ರ ತಕ್ಕ ಮಟ್ಟಿಗೆ ಯಶಸ್ಸು ಕಂಡ ಚಿತ್ರ. ಆ ಚಿತ್ರ ತಕ್ಕ ಮಟ್ಟಿಗೆ ನಿರ್ಮಾಪಕರ ಜೇಬು ತುಂಬಿಸಿತು, ಆದರೆ ಈಗ ಆಗಿರೋ ಸಮಸ್ಯೆ ಹಣ ದ ವಿಚಾರ ಅಲ್ಲ ನಿರ್ಮಾಪಕರ ವಿರುದ್ದ ಸೆನ್ಸಾರ್ ಮಂಡಳಿ ಪೋಲಿಸ್ ಠಾಣೆಯ ಮೆಟ್ಟಿಲು ಹತ್ತಿದ್ದಾರೆ.
ತಮಗೆ ಅರಿವಿಲ್ಲದಂತೆ ಕೆಲವು ದೃಶ್ಯಗಳನ್ನು ಚಿತ್ರದಲ್ಲಿ ಸೇರಿಸಲಾಗಿದೆ ಎಂದು ಸೆನ್ಸಾರ್ ಮಂಡಳಿ ಅಧಿಕಾರಿ ನಾಗರಾಜ್ ಉಪ್ಪಾರ ಪೇಟೆ ಠಾಣೆಯಲ್ಲಿ ನಿರ್ಮಾಪಕರಾದ ಸಯ್ಯದ್ ಸಲಾಂ,ಮಂಜುನಾಥ್ ಹಾಗೂ ಉಪೇಂದ್ರ ಶೆಟ್ಟಿ ವಿರುದ್ದ ದೂರು ನೀಡಿದ್ದಾರೆ. ದೂರಿನಲ್ಲಿ ‘ಲೈಫ್ ಇಷ್ಟೇನೇ’ ಚಿತ್ರದ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಲಾಗಿತ್ತು ಆದರೂ ಸಿನಿಮಾ ಬಿಡುಗಡೆ ನಂತರ ಆ ಕತ್ತರಿಸಿದ ಸನ್ನಿವೇಶಗಳು ಸೆನ್ಸಾರ್ ಮಂಡಳಿಯ ಗಮನಕ್ಕೆ ಬಾರದೇ ಚಿತ್ರ ಮಂದಿರದಲ್ಲಿ ಪ್ರದರ್ಶನಗೊಂಡವು ಎಂದು ನಿರ್ಮಾಪಕರ ವಿರುದ್ದ ದೂರು ನೀಡಲಾಗಿದೆ.
ಸಕಲೇಶಪುರ: ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಅಚರಿಸಲು ತೀರ್ಮಾನ
ಸಕಲೇಶಪುರ : ಪಟ್ಟಣದ ಮಿನಿವಿಧಾನ ಸೌಧದಲ್ಲಿ ಶಾಸಕ ಎಚ್.ಕೆ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಭೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಅದ್ಧೂರಿಯಾಗಿ ಆಚರಿಸಲು ತಿರ್ಮಾನಿಸಲಾಯಿತು.ಸಭೆಯಲ್ಲಿ ತಹಸಿಲ್ದಾರ್ ಚಂದ್ರಮ್ಮ, ತಾ.ಪಂ. ಅಧ್ಯಕ್ಷೆ ವೇದಾವತಿ,ಜಿ.ಪಂ. ಸದಸ್ಯೆ ಮಂಜಮ್ಮ ತಿಪ್ಪೆಸ್ವಾಮಿ, ಸುಲೋಚನ ರಾಮಕೃಷ್ಣ, ಕ.ಸಾ.ಪ. ಅಧ್ಯಕ್ಷ ಪ್ರಸಾದ್ ರಕ್ಷಿದಿ ,ತಾ.ಪಂ. ಕಾರ್ಯ ನಿರ್ವಾಹಣಾಧಿಕಾರಿ ಸಿದ್ದರಾಜು ಪಾಲ್ಗೊಂಡರು .
ತಬೂಕ್ : ಹೃದಯಾಘಾತದಿಂದ ಮೃತಪಟ್ಟ ಫರಂಗಿಪೇಟೆಯ ನಿವಾಸಿ ಫೈಸಲ್ ಅವರ ಅಂತ್ಯಕ್ರಿಯೆ
ತಬೂಕ್ ( ಸೌದಿ ಅರೇಬಿಯಾ) : ಭಾನುವಾರ ಹೃದಯಾಘಾತದಿಂದ ಸೌದಿ ಅರೇಬಿಯಾದ ತಬೂಕ್ ನಗರದಲ್ಲಿ ಮೃತಪಟ್ಟ ಬಂಟ್ವಾಳ ತಾಲ್ಲೂಕಿನ ಫರಂಗಿಪೇಟೆಯ ನಿವಾಸಿ ಫೈಸಲ್ (೩೦) ಅವರ ಅಂತ್ಯಕ್ರಿಯೆ ಇಂದು ಬುಧವಾರ ಸಂಜೆ ತಬೂಕ್ ಖಬರ್ ಸ್ಥಾನದಲ್ಲಿ ನಡೆಯಿತು.
ಅಸರ್ ನಮಾಜ್ ನಂತರ ಇಲ್ಲಿನ ಮಸ್ಜಿದ್ ಭಾಝಿಯಲ್ಲಿ ನಡೆದ ಮೃತರ ಮಯ್ಯತ್ ( ಜನಾಝ) ನಮಾಜ್ ನಲ್ಲಿ ಭಾರತೀಯರು , ಸೌದಿ ಪ್ರಜೆಗಳು ಸೇರಿದಂತೆ ವಿವಿಧ ದೇಶಗಳ ನೂರಾರು ಮಂದಿ ಪಾಲ್ಗೊಂಡರು.
ಆನಂತರ ವಾಹನದ ಮೂಲಕ ಮೃತದೇಹವನ್ನು ಖಬರ್ ಸ್ಥಾನಕ್ಕೆ ಕೊಂಡೊಯ್ದು ಅಲ್ಲಿ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು .
ಬಿಹಾರ : ಪೋಲಿಸ್ ಲಾಠಿಚಾರ್ಜ್ , ಮೂವರ ಬಲಿ , ಹಲವು ಮಂದಿಗೆ ಗಾಯ
ಸಿವಾನ್ ( ಬಿಹಾರ ) : ಇಲ್ಲಿನ ಬಸಂತಪುರ ಪೋಲಿಸ್ ಠಾಣಾ ವ್ಯಾಪ್ತಿಯ ಮದರ್ ಬಜಾರ್ ಎಂಬಲ್ಲಿ ಪೊಲೀಸರು ನಡೆಸಿದ ಲಾಠಿಚಾರ್ಜ್ ನಲ್ಲಿ ಮೂವರು ಮೃತಪಟ್ಟು ಹಲವು ಮಂದಿ ಗಾಯಗೊಂಡ ಘಟನೆ ನಡೆದಿದೆ. ಇಲ್ಲಿ ಮಕ್ಕಳ ಅಪಹರಣದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳನ್ನು ಹಿಡಿದು ಆಕೆಯನ್ನು ಗ್ರಾಮಸ್ಥರು ಥಳಿಸುತ್ತಿದ್ದ ಸುದ್ದಿ ಕೇಳಿ ಸ್ಥಳಕ್ಕೆ ಬಂದ ಪೋಲೀಸರ ಮೇಲೆ ಗ್ರಾಮಸ್ಥರು ಕಲ್ಲು ಹಾಗೂ ದೊಣ್ಣೆಗಳಿಂದ ಹಲ್ಲೆ ನಡೆಸಿದರು ಎನ್ನಲಾಗಿದೆ.
ಇದಕ್ಕೆ ಪ್ರತಿಯಾಗಿ ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದಾಗ ಮೂವರು ಮೃತಪಟ್ಟು ಹದಿನೆಂಟು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಹದಿನಾಲ್ಕು ಮಂದಿ ಪೋಲಿಸರಾಗಿದ್ದಾರೆ. ಮೃತರನ್ನು ಕಪಿಲ್ ಪ್ರಸಾದ್ (೭೦) , ದೇವು ರಾಮ್ (೭೦) ಮತ್ತು ಅಜಯ್ ಕುಮಾರ್ (೧೫) ಎಂದು ಗುರುತಿಸಲಾಗಿದೆ. ಪ್ರದೇಶದಲ್ಲಿ ಉದ್ವಿಗ್ನತೆ ಇನ್ನೂ ಇದ್ದರೂ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಸಿವಾನ್ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಯುಎಇ : ಮೂರು ವರ್ಷದ ಶಾಲಾ ಬಾಲಕಿ ಸ್ಕೂಲ್ ಬಸ್ಸಿನಡಿ ಬಿದ್ದು ಮೃತ್ಯು
ಫುಜೈರಾ (ಯುಎಇ) : ಇಲ್ಲಿನ ಮೂರು ವರ್ಷದ ಶಾಲಾ ಬಾಲಕಿಯೊಬ್ಬಳು ಶಾಲೆಯಿಂದ ತನ್ನ ಮನೆಗೆ ಬಂದು ಶಾಲಾ ಬಸ್ಸಿನಿಂದ ಇಳಿದ ಕೂಡಲೇ ತನ್ನ ಸಹೋದರಿಯನ್ನು ನೋಡಿ ಆಕೆಯ ಬಳಿಗೆ ಓಡಿದಾಗ ಅದೇ ಬಸ್ಸಿನಡಿಗೆ ಬಿದ್ದು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಇಲ್ಲಿನ ಫುಜೈರಾ ದಲ್ಲಿ ನಡೆದಿದೆ. ಮೃತ ಬಾಲಕಿ ಇಲ್ಲಿನ ಸ್ವದೇಶೀ ನಿವಾಸಿಯಾಗಿದ್ದಾಳೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಹುಡುಗಿ ಬಸ್ಸಿನಿಂದ ಇಳಿದ ಕೂಡಲೇ ಬಸ್ ಅನ್ನು ತಿರುಗಿಸಲು ಚಾಲಕ ಖಾಲಿ ಪ್ರದೇಶವಿರುವ ಕಡೆ ರಿವರ್ಸ್ ತೆಗೆದಿದ್ದು ಆ ಸಮಯದಲ್ಲಿ ಅಲ್ಲಿದ್ದ ಬಾಲಕಿಯನ್ನು ಗಮನಿಸಿಲ್ಲ ಎನ್ನಲಾಗಿದೆ. ಬಸ್ಸಿನ ಚಕ್ರದಡಿ ಸಿಲುಕಿದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ .ಬಸ್ ಚಾಲಕನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಸೌದಿ ಅರೇಬಿಯಾ : ಇಂದು ಸಂಜೆ ಅಸರ್ ನಮಾಜ್ ಬಳಿಕ ತಬೂಕಿನಲ್ಲಿ ಮೃತಪಟ್ಟ ಫರಂಗಿಪೇಟೆಯ ಯುವಕ ಫೈಸಲ್ ಅವರ ಅಂತ್ಯಕ್ರಿಯೆ
ತಬೂಕ್ : ಭಾನುವಾರ ಹೃದಯಾಘಾತದಿಂದ ಸೌದಿ ಅರೇಬಿಯಾದ ತಬೂಕ್ ನಗರದಲ್ಲಿ ಮೃತಪಟ್ಟ ಬಂಟ್ವಾಳ ತಾಲ್ಲೂಕಿನ ಫರಂಗಿಪೇಟೆಯ ಯುವಕ ಫೈಸಲ್ (೩೦) ಅವರ ಅಂತ್ಯಕ್ರಿಯೆ ಇಂದು ಬುಧವಾರ ಸಂಜೆ ಅಸರ್ ನಮಾಜ್ ಬಳಿಕ ನಡೆಯಲಿದೆ. ಸಂಜೆ 3.35 ರ ಅಸರ್ ನಮಾಜ್ ನಂತರ ಇಲ್ಲಿನ ಮಸ್ಜಿದ್ ಭಾಝಿಯಲ್ಲಿ ಮೃತರ ಮಯ್ಯತ್ ( ಜನಾಝ) ನಮಾಜ್ ನಡೆಯಲಿದ್ದು ಆನಂತರ ಇಲ್ಲಿನ ಖಬರುಸ್ಥಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ತಬೂಕಿನಲ್ಲಿ ಅಂಗಡಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಫೈಸಲ್ ಭಾನುವಾರ ಮಧ್ಯಾಹ್ನ ಊಟಕ್ಕೆ ಕುಳಿತಾಗ ಕಾಣಿಸಿಕೊಂಡ ಎದೆ ನೋವಿನ ಕಾರಣ ಆಸ್ಪತ್ರೆಗೆ ಸಾಗಿಸಲ್ಪಟ್ಟು ಅಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು . ಮೃತರು ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು ಅಗಲಿದ್ದಾರೆ.
ಕಿಡ್ನಿ ವೈಫಲ್ಯಕ್ಕೊಳಗಾದ ಯೂಸುಫ್ ರಿಗೆ ಆರ್ಥಿಕ ನೆರವು ನೀಡಿದ ಎಸ್.ಎಫ್.ಸಿ (ಸಂಪ್ಯ) ದುಬೈ ಘಟಕ
ಪುತ್ತೂರು ;ಇಲ್ಲಿನ ಸಂಪ್ಯ ಸುನ್ನಿ ಫ್ರೆಂಡ್ಸ್ ಕೌನ್ಸಿಲ್(ಎಸ್ ಎಫ್ ಸಿ ) ಇದರ ದುಬೈ ಘಟಕವು ಹಲವು ವರುಷಗಳಿಂದ ಕಾರ್ಯಚರಿಸುತ್ತಿದ್ದು ಬಡ ಕುಟುಂಬದವರಿಗೆ ಸಹಾಯ ಹಸ್ತ,ಅನಾರೋಗ್ಯದಿಂದ ಬಳಳುತಿದ್ದವರಿಗೆ ಸಹಾಯ ಮಾಡುವುದರಲ್ಲಿ ಎತ್ತಿದ ಕೈ.ಇತ್ತೀಚಿಗೆ ದುಬೈ ಘಟಕದ ಪದಾಧಿಕಾರಿಗಳು ತನ್ನ ಮಾತೃ ಘಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ಕಿಡ್ನಿ ವೈಫಲ್ಯಕ್ಕೊಳಗಾದ ಯೂಸುಫ್ (ಈಚು )ಎಂಬವರಿಗೆ ಆರ್ಥಿಕ ಸಹಾಯ ನೀಡುವುದರ ಮೂಲಕ ಎಸ್ ಎಫ್ ಸಿ ಯು ಮತ್ತೊಂದು ಗುರಿ ಸಾಧಿಸಿತು. ಈ ಸಂದರ್ಭದಲ್ಲಿ ಎಸ್.ಎಫ್. ಸಿ ಸಂಪ್ಯ ಘಟಕದ ಸಂಚಾಲಕರಾದ ಎಸ್. ಎ ಜ್ಹಕರಿಯ ಸಂಪ್ಯ,ಕಾರ್ಯದರ್ಶಿ ಅಬ್ದುಲ್ ಜಲೀಲ್ ಸಂಪ್ಯ,ಸಾದಿಕ್ ಅಲಿ ಸಂಪ್ಯ ಹಾಗೂ ನೌಫಾಲ್ ಬಿ ಕೆ ಯವರು ಉಪಸ್ಥಿತಿರಿದ್ದರು.
No comments:
Post a Comment