![](https://blogger.googleusercontent.com/img/b/R29vZ2xl/AVvXsEjmnnzMyAcSQ1oKahvsAyvHwsgThnVFBmvjLA2dOARglCPXX89mq76KGaL0QKuJQC0ty2xECD1Mjh3sxqXyILU2dtSwuSvpk2xNXmnVO9dPAYSg8_y3LVgx79h8AGBDt3KHGDKgfXY7Zjc/s320/ebola-virus31.jpg)
ಕೈಕುಲುಕಿದ್ರೆ ಬರುತ್ತೆ ಜ್ವರ..! 21 ದಿನಗಳಲ್ಲಿ ಸತ್ತೇ ಹೋಗ್ತೀರಾ, ಭಾರತಕ್ಕೆ ಕಾಲಿಟ್ಟಿದೆ ಭಯಾನಕ ರೋಗ
ನವದೆಹಲಿ(ಆಗಸ್ಟ್.09): ಹಂದಿ ಜ್ವರ, ಹಕ್ಕಿ ಜ್ವರ ಭೀತಿ ಬಳಿಕ ಇದೀಗ ವಿಶ್ವಕ್ಕೆ ಮಾರಕ ರೋಗವೊಂದು ವಕ್ಕರಿಸಿದೆ. ಅದೇ ಎಬೋಲಾ. ಈ ಜ್ವರ ಬಂದರೆ ಸಾವೇ ಗತಿ. ಮಾನವ ಕುಲವನ್ನೇ ಸಾಮೂಹಿಕವಾಗಿ ನಾಶ ಮಾಡುವ ಮತ್ತೊಂದು ಸೋಂಕು ಇದಾಗಿದ್ದು, ಜಗತ್ತಿನಾದ್ಯಂತ ಹಬ್ಬತೊಡಗಿದೆ.
ಮಾನವ ಕುಲಕ್ಕೇ ಕಂಟಕವಾಗಿದೆ ಎಬೋಲಾ!: ಹೌದು.. ಕೆಲವು ತಿಂಗಳುಗಳಿಂದ ದಕ್ಷಿಣ ಆಫ್ರಿಕಾದ ಗಿನಿ ಪ್ರದೇಶದಿಂದ ಈ ಹೊಸ ರೋಗ ಎಬೋಲಾದ ಸೂಕ್ಷ್ಮಾಣು ಜೀವಿಗಳು ಹರಡತೊಡಗಿವೆ. ಯಾವ ಚಿಕಿತ್ಸೆಗೂ ಬಗ್ಗದೆ ಜಗತ್ತಿನಾದ್ಯಂತ ತನ್ನ ಪ್ರಾಬಲ್ಯ ಮೆರೆಯತೊಡಗಿದೆ. ಇದರಿಂದ ಇಡೀ ಜಗತ್ತೇ ಕಂಗಾಲಾಗಿ ನಿಂತಿದೆ.
ಎಬೋಲಾ ಅನ್ನೋದು ವೈರಾಣುವಿನಿಂದ ಬರುವ ಮಾರಕ ಜ್ವರ. ಈ ಎಬೋಲಾ ಔಷಧ, ಲಸಿಕೆಯಿಲ್ಲದ ಮಾರಣಾಂತಿಕ ಕಾಯಿಲೆ. ಸೋಂಕು ತಗುಲಿದ 10ರಲ್ಲಿ 9 ರೋಗಿಗಳಿಗೆ ಸಾವು ಖಚಿತ. ರೋಗ ಬಂದ 21 ದಿನದಲ್ಲಿ ರೋಗಿಯೂ ಸಾಯ್ತಾನೆ.
ಎಬೋಲಾ ಲಕ್ಷಣಗಳೇನು?: ಸ್ನಾಯು ಬಿಗಿತ, ಸಿಡಿತ, ತಲೆನೋವು, ತಲೆಸುತ್ತು, ಗಂಟಲು ಬೇನೆ, ಅತಿಸಾರ, ನಿಶ್ಯಕ್ತಿ, ಜ್ವರ ಆರಂಭಿಕ ಲಕ್ಷಣಗಳಾಗಿವೆ. ಅಲ್ಲದೇ, ಜ್ವರ, ಕೈಕಾಲು ನೋವು, ಆಮಶಂಕೆ, ಕರುಳು ಬೇನೆ, ಕಿಡ್ನಿ ವೈಫಲ್ಯ, ದೇಹದ ಒಳಭಾಗ, ಕಿವಿ, ಮೂಗಿನಲ್ಲಿ ರಕ್ತ ಸ್ರಾವ ಉಂಟಾಗುತ್ತೆ.
ಈ ಎಲ್ಲ ಲಕ್ಷಣಗಳ ಜೊತೆಗೆ ಎಬೋಲಾ 2 ದಿನದಿಂದ 2 ವಾರದೊಳಗೆ ವ್ಯಕ್ತಿಯಲ್ಲಿ ಗೋಚರವಾಗುತ್ತದೆ. ಈ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು.
ಎಬೋಲಾ ಹೇಗೆ ಹರಡುತ್ತೆ..? :ಎಬೋಲಾ ಪೀಡಿತರ ಕಣ್ಣೀರು, ಬೆವರು, ರಕ್ತ, ವಾಂತಿ ಮತ್ತು ಲೈಂಗಿಕ ಸಂಪರ್ಕದಿಂದ ಬಹುಬೇಗ ಹರಡುತ್ತೆ. ಕೋತಿ ಬಾವಲಿಯ ರಕ್ತದ ಸೋಂಕು ತಗುಲಿದರೂ ಈ ರೋಗ ಹರಡುತ್ತೆ. ಶೇಕ್ ಹ್ಯಾಂಡ್ನಿಂದಲೂ ಬೆವರು ತಾಕುವ ಸಾಧ್ಯತೆ ಇದೆ. ಅಲ್ಲದೆ, ಗಾಳಿ, ನೀರು, ರಕ್ತದ ಮೂಲಕವೂ ಈ ವೈರಸ್ ಹರಡಬಲ್ಲದು. ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರದ ವೇಳೆಯೂ ವೈರಸ್ ಹರಡುವ ಸಾಧ್ಯತೆ ಇದೆ.
ಆಫ್ರಿಕಾದಲ್ಲಿ ತೀವ್ರಗೊಂಡಿದೆ ಎಬೋಲಾ!: ಇಲ್ಲಿಯವರೆಗೂ ವಿವಿಧ ದೇಶಗಳಲ್ಲಿ ಅದರಲ್ಲೂ ಹೆಚ್ಚಾಗಿ ದಕ್ಷಿಣ ಆಫ್ರಿಕಾದ ರಾಜ್ಯಗಳಲ್ಲಿ ಈ ಮಾರಕ ರೋಗ ತೀವ್ರವಾಗಿ ಹಬ್ಬತೊಡಗಿದೆ. ಇಲ್ಲಿಯವರೆಗೆ ಎಬೋಲಾಕ್ಕೆ 900ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಆಫ್ರಿಕಾ ದೇಶಗಳಿಂದ ವಿವಿಧ ದೇಶಗಳಿಗೆ ತೆರಳುವ ಮಂದಿಯ ಮೂಲಕ ವೈರಸ್ ಹರಡಲು ಕಾರಣವಾಗಿದೆ. ದಕ್ಷಿಣ ಆಫ್ರಿಕಾದ ಲಿಬೆರಿಯಾ, ಗಿನಿಯಾ ಮತ್ತು ಸಿಯೆರ್ರಾ ಲಿಯೊನ್ ಗಳಲ್ಲಿ ಎಬೋಲಾ ತನ್ನ ಕೆನ್ನಾಲಿಗೆ ಚಾಚಿದೆ. ಸದ್ಯ ಅಮೆರಿಕ ಮತ್ತು ಬ್ರಿಟನ್‌ನಲ್ಲೂ ಎಬೋಲಾದ ಕೆಲ ಪ್ರಕರಣಗಳು ಪತ್ತೆಯಾಗಿವೆ. ಇನ್ನೂ ಆತಂಕದ ವಿಷ್ಯ ಅಂದ್ರೆ ಸದ್ಯ ಎಬೋಲಾದಿಂದ ತತ್ತರಿಸಿರುವ ದೇಶಗಳಲ್ಲಿ 45 ಸಾವಿರಕ್ಕೂ ಹೆಚ್ಚು ಮಂದಿ ಭಾರತೀಯರಿದ್ದಾರೆ.
ಈ ರೋಗಕ್ಕೆ ಔಷಧಿಯೇ ಇಲ್ಲ..! : ಇನ್ನೂ ಆತಂಕದ ವಿಷ್ಯ ಅಂದ್ರೆ ಈ ಮಾರಣಾಂತಿಕ ಎಬೋಲಾ ಜ್ವರಕ್ಕೆ ಸೂಕ್ತ ಔಷಧಿಯೇ ಇಲ್ಲ. ರೋಗ ಲಕ್ಷಣವನ್ನು ಗಮನಿಸಿ, ಸಾಮಾನ್ಯ ಚಿಕಿತ್ಸಾ ಕ್ರಮವನ್ನೇ ಅನುಸರಿಸಲಾಗುತ್ತಿದೆ. ಆದರೆ, ದಿನೇ ದಿನೇ ವೈರಾಣು ವ್ಯಾಪಕವಾಗಿ ಹಬ್ಬುತ್ತಿರುವುದು ಚಿಂತೆಗೀಡುಮಾಡಿದೆ.
ಭಾರತದಲ್ಲಿ ಹೈ ಅಲರ್ಟ್ ಘೋಷಣೆ: ಭೀಕರ ಎಬೋಲಾ ಎಲ್ಲೆಡೆ ಹರಡುವ ಭೀತಿ ಇರುವುದರಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಪಶ್ಚಿಮ ಆಫ್ರಿಕಾ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಇನ್ನು ಈ ಸಂಬಂಧ ಅಮೆರಿಕ ಮತ್ತು ಬ್ರಿಟನ್‌ಗಳ ವಿಮಾನ ನಿಲ್ದಾಣಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ದೆಹಲಿಯ ಮೂವರಲ್ಲಿ ಈ ಸೋಂಕು ಇರುವುದು ದೃಢಪಟ್ಟಿದ್ದು, ಭಾರತದಲ್ಲೂ ಆತಂಕ ಹೆಚ್ಚುವಂತೆ ಮಾಡಿದೆ.